ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ : ಡಾ.ಮೋಹನ ಕುಂಟಾರು

ಸಾಂಸ್ಕೃತಿಕ ಕೊಡುಕೊಳುಗೆಯ ಸಂಧರ್ಭದಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಯೊಂದಿದೆ. ಪ್ರಾಚೀನ ಕೇರಳದ ದೇವಾಲಯಗಳಲ್ಲಿ ಹಾಗೂ ಅರಮನೆಗಳಲ್ಲಿ ಕನ್ನಡ ನಾಡಿನ ಅನೇಕ ಬ್ರಾಹ್ಮಣರನ್ನು ಪೌರೋಹಿತ್ಯ ಹಾಗೂ ಅಧ್ಯಾಪನಕ್ಕಾಗಿ ಕರೆಸಿಕೊಂಡ ಬಗೆಗೆ ಉಲ್ಲೇಖಗಳಿವೆ. ತಿರುವನಂತಪುರಂದ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿಯನ್ನು ಇವತ್ತಿಗೂ ಕನ್ನಡ ಬ್ರಾಹ್ಮಣರು ಉಳಿಸಿಕೊಂಡು ಬಂದಿದ್ದಾರೆ. ತುಳುವಿನಲ್ಲಿರುವ 'ಮೂಕಾಂಬಿಕ ಗುಳಿಗ' ಪಾರ್ತನದಲ್ಲಿ ಕೊಲ್ಲೂರಿನ ವಾಸುಭಟ್ಟರು ಶಾಂತಿಪೂಜೆಗಾಗಿ ಕೇರಳಕ್ಕೆ ಹೋದ ಬಗೆಗೆ ಪ್ರಸ್ತಾಪವಿದೆ(ವೆಂಕಟರಾಜ ಪುಣಿಂಚತ್ತಾಯ: 1987).


ಮಲಯಾಳಂನ ಆದಿಕಾಲದ ಸಾಹಿತ್ಯವನ್ನು ಪಾಟು ಸಾಹಿತ್ಯವೆಂದು ಕರೆಯಲಾಗುತ್ತದೆ. ಸುಮಾರು ಕ್ರಿ.ಶ. 7 ಹಾಗೂ 8ನೆಯ ಶತಮಾನದ ಅವಧಿಯಲ್ಲಿ ಈ ಪಾಟ್ಟು ಸಾಹಿತ್ಯ ಪ್ರಚಲಿತದಲ್ಲಿತ್ತು. ಇದರಲ್ಲಿ ಬಳಕೆಯಾದ ಭಾಷೆಯು ತಮಿಳು ಭಾಷೆಯ ದಟ್ಟವಾದ ಪ್ರಭಾವಕ್ಕೊಳಗಾಗಿತ್ತು. ಇಂದು ಮಲಯಾಳಂನಲ್ಲಿ ಬಳಸಲಾಗುವ ಎಲ್ಲಾ ಅಕ್ಷರಗಳನ್ನು ಅಲ್ಲಿ ಬಳಸಿಲ್ಲ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಈ ಪಾಟ್ಟು ಸಾಹಿತ್ಯದ ಜೊತೆಗೆ ಅನೇಕ ಸಂಸ್ಕೃತ ಪದಗಳ ಮಿಶ್ರಣ ಮಾಡಿ ಮಣಿಪ್ರವಾಳ ಎಂಬ ಶೈಲಿಯ ಸೃಷ್ಟಿಗೆ ಕಾರಣರಾದವರು ಈ ಮೇಲೆ ಉಲ್ಲೇಖಿಸಿದ ಪುರೋಹಿತ ವರ್ಗದವರು.

ಸ್ಥಳೀಯ ನಂಬೂದಿರಿಗಳು ಹಾಗೂ ದಕ್ಷಿಣಕನ್ನಡದಿಂದ ಕೇರಳಕ್ಕೆ ಹೋದ ಎಂಬಾಂದ್ರಿ ಎಂಬೀ ಜನರು ಮಣಿಪ್ರವಾಳ ಶೈಲಿಯ ಉಗಮಕ್ಕೆ ಕಾರಣರಾದರು ಎಂಬುದು ವಿದ್ವಾಂಸರ ಅಭಿಮತ. ದಕ್ಷಿಣಕನ್ನಡದಿಂದ ಹೋದ ತುಳು ಬ್ರಾಹ್ಮಣರನ್ನು ಎಂಬಾಂದ್ರಿಗಳು, ತುಳು ನಂಬಿಗಳು ಎಂದು ಕೇರಳದಲ್ಲಿ ಕರೆಯಲಾಗುತ್ತದೆ.
ಮಲಯಾಳಂನ ವಿಶಿಷ್ಟ ಸಾಹಿತ್ಯ ಪ್ರಕಾರವಾದ ತುಳ್ಳಲ್ ಕತೆಗಳನ್ನು ಬರೆದ ಕುಂಜನ್ ನಂಬಿಯಾರ್ಗೆ(ಕ್ರಿ.ಶ. 1705) ಉಣ್ಣಿರವಿ ಕುರುಪ್ ಮತ್ತು ದ್ರೋಣಂಪಳ್ಳಿ ಆಚಾರ್ಯರು ಉಡುಪಿ ತಾಲೂಕಿನವರೆಂದೂ ಮಾತ್ತೂರ್ ಪಣಿಕ್ಕರನಿಂದಾಗಿ ಕೇರಳಕ್ಕೆ ಬಂದರೆಂದೂ, ಬಳಿಕ ಅವರು ಕುಂಜನ್ ನಂಬಿಯಾರರ ಗುರುಗಳಾದರೆಂದೂ ತಿಳಿಸುವ ಒಂದು ಕತೆಯಿದೆ. ಪಿ.ಕೆ.ನಾರಾಯಣ ಪಿಳ್ಳೆ ಅವರು ಪ್ರಕಟಿಸಿದ 'ಅರುವದು ತುಳ್ಳಲ್ ಕಥಗಳ್' ಕೃತಿಯಲ್ಲಿರುವ ಕತೆ ಹೀಗಿದೆ:

ಪ್ರಾಚೀನ ಕಾಲದಲ್ಲಿ ಶಸ್ತ್ರ ವಿದ್ಯಾಭ್ಯಾಸಕ್ಕಾಗಿ ಅಂಬಲಪುಳ, ತೆಕ್ಕುಂಕೂರ್, ಚಂಬಕಶ್ಯೇರಿ ಮೊದಲಾದ ರಾಜ್ಯಗಳಿಂದ ಅನೇಕ ಯೋಧರು ಉಡುಪಿಗೆ ಹೋಗುವ ಸಂಪ್ರದಾಯವಿತ್ತು. ಉಡುಪಿ ತಾಲೂಕಿನಲ್ಲಿದ್ದ ದ್ರೋಣಂಪಳ್ಳಿ(ಓಣಂ ಪಳ್ಳಿ) ಆಚಾರ್ಯರಿಂದ ವಿದ್ಯಾಭ್ಯಾಸವನ್ನು ಪಡೆದು ವೀರಯೋಧರೂ ಕಲಾಕೋವಿದರೂ ಆಗಿ ತಮ್ಮ ರಾಜ್ಯಗಳಿಗೆ ಹಿಂದಿರುಗುತ್ತಿದ್ದರು. ಹೀಗೆ ಉಡುಪಿಗೆ ಬಂದು ದ್ರೋಣಂಪಳ್ಳಿ ಆಚಾರ್ಯರರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಒಂದು ಗುಂಪಿನಲ್ಲಿ ಒಬ್ಬ ಪಣಿಕ್ಕರನಿದ್ದ. ಉಡುಪಿಯವರೆಗೇನೋ ಹೋದ. ಆದರೆ ಶಸ್ತ್ರಾಭ್ಯಾಸದಲ್ಲಿ ಅನಾಸಕ್ತನಾದ. ಗುರುಗಳ ಮನೆಗೆಲಸವನ್ನೆಲ್ಲ ಅತ್ಯಂತ ಶ್ರದ್ಧೆಯಿಂದ ಮಾಡಿಕೊಂಡು ನಿಶ್ಚಿಂತನಾಗಿದ್ದ. ಶಿಷ್ಯರೆಲ್ಲರೂ ವಿದ್ಯಾಭ್ಯಾಸ ಮುಗಿಸಿ ಹಿಂತಿರುಗಬೇಕಾಯಿತು. ಅಲ್ಲಿಯವರೆಗೆ ಅತ್ಯಂತ ಶ್ರದ್ಧೆ ಮತ್ತು ಭಕ್ತಿಗಳಿಂದ ಮನೆಗೆಲಸವನ್ನು ನೋಡಿಕೊಂಡು ಹೋಗುತ್ತಿದ್ದ ಪಣಿಕ್ಕರನನ್ನು ಕಂಡು ದ್ರೋಣಂಪಳ್ಳಿ ಆಚಾರ್ಯರ ಪತ್ನಿಗೆ ಕನಿಕರವುಂಟಾಯಿತು.

ಆಕೆ ಆಚಾರ್ಯರಿಗೆ ತಿಳಿಯದಂತೆ ಆಚಾರ್ಯರ ಕುಲದೇವತೆಯಾದ ಭಗವತಿಯ ಪ್ರತಿಮೆಯನ್ನು ಪಣಿಕ್ಕರನಿಗೆ ಕೊಟ್ಟು ಭಕ್ತಿಯಿಂದ ಇದನ್ನು ಪೂಜಿಸು, ನಿನಗೆ ಎಲ್ಲ ವಿದ್ಯೆಗಳೂ ಸಿದ್ಧಿಸುತ್ತವೆ ಎಂದು ಹರಸಿ ಕಳುಹಿಸಿಕೊಟ್ಟಳು., ಪಣಿಕ್ಕರ ತನ್ನ ಊರಿಗೆ ಹಿಂತಿರುಗಿದ. ಆಚಾರ್ಯರು ಕುಲದೇವತೆಯ ಪ್ರತಿಮೆಯನ್ನು ಕಾಣದೆ ಕೊರಗುತ್ತಿದ್ದಾಗ, ಪತ್ನಿ ತಾನು ಮಾಡಿದ ತಪ್ಪನ್ನು ತಿಳಿಸಿ ಕ್ಷಮೆಯಾಚಿಸಿದಳು. ತಮ್ಮ ಇಷ್ಟದೈವವನ್ನು ಮರಳಿ ಪಡೆಯುವುದಕ್ಕಾಗಿ ಆಚಾರ್ಯರು ಪಣಿಕ್ಕರನನ್ನು ಹುಡುಕಿಕೊಂಡು ಕೇರಳಕ್ಕೆ ಹೊರಟರು. ಅಂಬಲಪುಳವನ್ನು ತಲುಪಿದಾಗ, ಚಂಬಕಶ್ಯೇರಿ ರಾಜನಿಗೆ ದ್ರೋಣ ವಂಶಜರಾದ ದ್ರೋಣಂಪಳ್ಳಿ ಆಚಾರ್ಯರು ಉಡುಪಿಯಿಂದ ತನ್ನ ರಾಜಧಾನಿಗೆ ಆಗಮಿಸಿರುವ ಸುದ್ದಿ ತಿಳಿಯಿತು. ಅವರನ್ನು ರಾಜ ಮರ್ಯಾದೆಗಳಿಂದ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡನು. ರಾಜನ ಆದರ ಸತ್ಕಾರಗಳಿಂದ ಆಚಾರ್ಯರಿಗೆ ಪಣಿಕ್ಕರನ ಮೇಲಿದ್ದ ಸಿಟ್ಟೆಲ್ಲಾ ಇಳಿಯಿತು. ಶಿಷ್ಯ ಮಾಡಿದ ತಪ್ಪನ್ನು ಸಹಾನೂಭೂತಿಯಿಂದ ಕ್ಷಮಿಸಿ, ಆಚಾರ್ಯರು ಅಲ್ಲಿಯೇ ನೆಲೆಸಿದರು. 'ಮಾತ್ತೂರ್' ಎನ್ನುವ ಸ್ಥಳದಲ್ಲಿ ಭಗವತಿಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಆ ಸ್ಥಳಕ್ಕೆ 'ಮಾತ್ತೂರ್ ಭಗವತಿ ಕ್ಷೇತ್ರ' ಎನ್ನುವ ಹೆಸರು ಬಂತಂತೆ.

ಇದರಿಂದ ತಿಳಿಯುವ ಒಂದು ಮುಖ್ಯ ವಿಚಾರವೆಂದರೆ, ದಕ್ಷಿಣ ಕರ್ನಾಟಕದಿಂದ ಬ್ರಾಹ್ಮಣರು ಕೇರಳಕ್ಕೆ ಪೌರೋಹಿತ್ಯ ಹಾಗೂ ಅಧ್ಯಾಪನಗಳಿಗಾಗಿ ಹೋಗುತ್ತಿದ್ದರು ಎಂಬುದು. ಅಲ್ಲದೆ ಕೇರಳದ ಕ್ಷತ್ರಿಯರೂ ಶಸ್ತ್ರಾಸ್ತ್ರಗಳ ಪರಿಣತಿಯನ್ನು ಪಡೆಯಲು ದಕ್ಷಿಣ ಕರ್ನಾಟಕದ ಪ್ರದೇಶಕ್ಕೆ ಬರುತ್ತಿದ್ದರು. ಕೇರಳದ ನಂಬೂದಿರಿ ಬ್ರಾಹ್ಮಣರು ಶೂದ್ರ, ನಾಯರ್ ಸ್ತ್ರೀಯರನ್ನು ಮದುವೆಯಾಗಿ ವರ್ಣಸಂಕರ ಏರ್ಪಡುತ್ತಿದ್ದುದರಿಂದ ಕರ್ನಾಟಕ ಬ್ರಾಹ್ಮಣರು ಕೇರಳದ ದೇವಸ್ಥಾನಗಳಲ್ಲಿ ಪೂಜಾವಿಧಿಗಳನ್ನು ನೆರವೇರಿಸಲು ಆಮದಾಗುತ್ತಿದ್ದರು. ಹೀಗೆ ಅವರನ್ನು ದೇವಾಲಯಗಳಿಗೆ, ಅರಮನೆಗಳಿಗೆ ಕರೆಸಿಕೊಂಡು ಆಶ್ರಯ ನೀಡಲಾಗುತ್ತಿತ್ತು. ಹೀಗೆ ಹೋದ ಬ್ರಾಹ್ಮಣರಲ್ಲಿ ಕೆಲವರು ಕೇರಳದಲ್ಲಿಯೇ ನೆಲೆ ನಿಂತಿದ್ದು, ಇನ್ನು ಕೆಲವರು ಹೋಗಿ ಬರುವ ಮೂಲಕ ತಮ್ಮ ತಾಯ್ನಾಡಿನ ಜೊತೆ ಸಂಪರ್ಕ ಉಳಿಸಿಕೊಂಡಿದ್ದರು.

ಕೇರಳದ ಅನೇಕ ರಾಜರು ಕರ್ನಾಟಕದ ಸಾಂಸ್ಕೃತಿಕ ಕಲೆಗಳ ಬಗೆಗೆ ಆಸಕ್ತಿಯುಳ್ಳವರಾಗಿದ್ದು, ಸಾಕಷ್ಟು ಪ್ರೋತ್ಸಾಹವನ್ನು ನೀಡಿದ ಬಗೆಗೆ ಚರಿತ್ರೆಯ ಉಲ್ಲೇಖಗಳಿವೆ. ಸಂಗೀತಪ್ರಿಯನೂ ಸಾಹಿತಿಯೂ ಆದ ಸ್ವಾಮಿ ತಿರುನಾಳ್(1813-46) ಕರ್ನಾಟಕದ ಅನೇಕ ಸಂಗೀತಗಾರರನ್ನು ಸನ್ಮಾನಿಸಿದನು. ಈತ ಸ್ವತಃ ಕನ್ನಡ ಭಾಷೆ, ಸಾಹಿತ್ಯಗಳ ಬಗೆಗೆ ಪ್ರೀತಿಯನ್ನು ಬೆಳೆಸಿ ಕೊಂಡಿದ್ದನೆಂದೂ 'ರಾಜೀವಾಕ್ಷ ಬಾರೋ... ಎಂದು ಆರಂಭವಾಗುವ ಕೀರ್ತನೆಯೊಂದನ್ನು ಕನ್ನಡದಲ್ಲಿ ಬರೆದಿದ್ದನೆಂದೂ ತಿಳಿಯುತ್ತದೆ.

ಕೇರಳದ ಅನೇಕ ಕಡೆ ರಾಜಾಶ್ರಯಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಮಾಡಿಕೊಡಲಾಗುತ್ತಿತ್ತು. ಈ ವಿದ್ಯಾರ್ಜನೆಯ ಸಲುವಾಗಿ ಕರ್ನಾಟಕದಿಂದಲೂ ಬ್ರಾಹ್ಮಣರು ಹೋಗುತ್ತಿದ್ದ ಬಗೆಗೆ ತಿಳಿದುಬರುತ್ತದೆ. ಹೀಗೆ ವಿದ್ಯಾಭ್ಯಾಸವನ್ನು ಪಡೆಯಲು ನೆರವು ನೀಡಿದ ಅರಸುಮನೆತನಗಳಲ್ಲಿ ನೀಲೇಶ್ವರ ಅರಸುಮನೆತವೂ ಒಂದು. ಇವರು ನಡೆಸುತ್ತಿದ್ದ ರಾಜಾಸ್ ಹೈಸ್ಕೂಲಿನಲ್ಲಿ ಕನ್ನಡದ ಕಾದಂಬರಿಕಾರಿಕಾರರಾದ ನಿರಂಜನರು ವಿದ್ಯಾರ್ಜನೆ ಮಾಡಿದ್ದರು. ಅವರು ಬರೆದ 'ಚಿರಸ್ಮರಣೆ' ಕಾದಂಬರಿಯಲ್ಲಿ ಕಯ್ಯೂರಿನ ರೈತ ದಂಗೆಯನ್ನು ಮತ್ತು ತಾವು ಪಡೆದ ಪ್ರತ್ಯಕ್ಷ ಅನುಭವವನ್ನು ದಾಖಲಿಸಿದ್ದಾರೆ. ನಿರಂಜನರಂತೆ ಬರವಣಿಗೆಯ ಮೂಲಕ ಸಾಂಸ್ಕೃತಿಕ ಸಂವಹನವನ್ನು ಎಲ್ಲರೂ ಮಾಡದಿರಬಹುದು. ಮೌಖಿಕವಾಗಿ ಸಾಂಸ್ಕೃತಿಕ ಸಂವಹನ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

... ಮುಂದಿನ ಸಂಚಿಕೆಗೆ...

0 comments:

Post a Comment