ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ : ಡಾ.ಮೋಹನ ಕುಂಟಾರು

ಸಾಹಿತ್ಯಕ
ಮೌಖಿಕವಾಗಿ ಸಾಂಸ್ಕೃತಿಕ ಸಂವಹನ ನಡೆಯುತ್ತಾ ಇನ್ನೊಂದೆಡೆ ಸ್ವತಂತ್ರವಾಗಿ ಕನ್ನಡ ಮತ್ತು ಮಲಯಾಳಂ ಸಾಹಿತ್ಯ ರಚನೆಗಳಾಗುತ್ತಿದ್ದವು. ಸುಮಾರು 17ನೆಯ ಶತಮಾನದವರೆಗೂ ಕನ್ನಡ-ಮಲಯಾಳಂ ಸಾಹಿತ್ಯಗಳು ಪರಸ್ಪರ ಪ್ರಭಾವಕ್ಕೆ ಒಳಗಾಗಲಿಲ್ಲ. ಆದರೆ 17ನೆಯ ಶತಮಾನದಲ್ಲಿ ಈ ಎರಡೂ ಭಾಷಾ ಸಾಹಿತ್ಯಗಳ ನಡುವೆ ಬೆಳೆದ ಸಂಬಂಧ ಮಾತ್ರ ಅತ್ಯಂತ ಕುತೂಹಲಕರವಾಗಿದೆ. ಪಾರ್ತಿಸುಬ್ಬ ವಿರಚಿತ ಯಕ್ಷಗಾನ ರಾಮಾಯಣ ಪ್ರಸಂಗ ಮತ್ತು ಕೊಟ್ಟಾರಕರ ಮಹಾರಾಜ ಬರೆದ ಕಥಕಳಿ ರಾಮಾಯಣ ಕೃತಿಗಳ ಜೊತೆಗೆ ಪರಸ್ಪರ ಸಾದೃಶ್ಯಗಳಿವೆ. ಇವುಗಳಲ್ಲಿ ಎಷ್ಟೋ ಪದ್ಯಗಳು ಸಮಾನ ಆಶಯ ಹಾಗೂ ವೃತ್ತ ಬಂಧಗಳಿಂದ ಎರಡೂ ಕೃತಿಗಳಲ್ಲಿ ದಾಖಲಾಗಿವೆ. ಕೆಲವೊಂದು ವೃತ್ತಗಳು ಯಥಾಪ್ರಕಾರ ಅನುವಾದ ರೂಪದಲ್ಲಿ ಬಂದಿವೆ. ಎರಡೂ ಕಾವ್ಯಗಳ ಆರಂಭದ ಸುತ್ತಿ ಪದ್ಯಗಳು ಸಮಾನವಾಗಿವೆ.


ಉದಾಹಣೆಗಾಗಿ,
(ಕಥಕಳಿ ಖರವಧಂ)
ರಾತ್ರಿಂಚರನಾಥ ನಾಯೊರುತ್ತನುಂಡವನ್ ತನ್ನೆ
ಹಸ್ತಂಗಳಿರುವದುಂಡು ಪೋಲ್ - ಅತ್ರಯುಮಲ್ಲ
ಮಸ್ತಕಂಗಳುಂ ಪತ್ತುಂಡು ಪೋಲ್ ಅವನ್ ಸ್ತ್ರೀಕ್ಕಳೆ
ಅತ್ತಲ್ ವರುತ್ತುನ್ನು ಪೋಲ್ - ಸದಾ ಈ ವಿಪಿನೇ
ಆವಾಸಂ ದುಷ್ಕರಂ ಪರ

(ಯಕ್ಷಗಾನ)
ರಾತ್ರಿಂಚರನಾಥನಾಗಿ ಮತ್ತೊಬ್ಬ ಖಳನಿರುವನಂತೆ
ಮಸ್ತಕಂಗಳು ಹತ್ತುಂಟಂತೆ - ಅಷ್ಟಲ್ಲದವಗೆ
ಹಸ್ತಂಗಳಿಪ್ಪತ್ತು ಉಂಟಂತೆ - ಹೆಣ್ಣುಗಳೆಂಬ
ಪಿತ್ತ ತಲೆಗೇರಿಹುದಂತೆ - ಈ ವಿಪಿನದೊ
ಳಿರುವುದು ಕಷ್ಟರಾಘವ


ಹೀಗೆ ನೂರಾರು ಪದ್ಯಗಳಲ್ಲಿ ಹೋಲಿಕೆಗಳನ್ನು ಗುರುತಿಸಬಹುದು. ಕನ್ನಡಕ್ಕೆ ಸಹಜವಲ್ಲದ ವೃತ್ತಗಳನ್ನು ಪಾರ್ತಿಸುಬ್ಬನು ಮಲಯಾಳಂ ಪ್ರಭಾವದಿಂದ ಬರೆದಿದ್ದಾನೆ. ಮಲಯಾಳಂನ ಪುತ್ರಕಾಮೇಷ್ಠಿಯ ವೃತ್ತವೊಂದನ್ನು ಕನ್ನಡದ ಪುತ್ರಕಾಮೇಷ್ಠಿಯ ವೃತ್ತದಲ್ಲೂ ಬಳಸಿ ಅನುವಾದಿಸಿದ್ದಾನೆ.
(ಕಥಕಳಿ)
ದಶರಥ ನರಪಾಲನ್ ತಾಣ್ ಚೊನ್ನದ್ ಕೇಟ್ಟ ಶೇಷಂ
ವಿಚಲಿತ ತರುಶೈಲಾಂತಂ ಲೋಲ ಭೂಮಂಡಲಂ ತ್
ಅರುಣ ವದನ ರಶ್ಮಿಯುತಂ ಪ್ರೋಜ್ವಲದ್ವಹ್ನಿ ಸ್ವರೂಪಂ
ಕುಶೀಕ ಸುತ ಮುನೀಶನೇವಂ ಕೋಪಮುಂ ಪೊಂಡುಚೊನ್ನಾನ್ ||
(ಯಕ್ಷಗಾನ)
ದಶರಥನರಪಾಲನ ಪೇಳ್ದುದಂ ಕೇಳುವಾಗ
ಎಸೆವರುಣಮುಖೀ ಕಾಂತೆ ತತ್ಸಭಾಮಧ್ಯದೊಳಗೆ
ಉಸಿರಿಡುತಂ ಭುಗಿಭುಗಿಲೆನುತಾಚಾರ್ಯನನ್ನೀಕ್ಷಿಸುತ್ತ
ಕುಶಿಕ ಜನತಿಕೋಪಾರೂಢಂ ತಾನಾಗಿದ್ದು ಪೇಳ್ದಂ ||

ಇಂತಹ ವೃತ್ತಗಳು ಮೂಲದ್ರಾವಿಡ ಛಂದಸ್ಸಿನಲ್ಲಿ ಇವೆ. ಅಲ್ಲಿ ಅವಕ್ಕೆ 'ಅರುಶೀರಡಿಯ ಅಶರಿಯವಿರುತ್ತ'ಗಳೆಂದು ಹೆಸರು, ತಮಿಳು ಕಂಬ ರಾಮಾಯಣದಲ್ಲಿದ್ದಂತಹ ಈ ವೃತ್ತಗಳನ್ನು ಗಣನಿಯಮಗಳನ್ನು ಒಂದಷ್ಟು ಸಡಿಲಗೊಳಿಸಿ ಮಲಯಾಳಂ ಕವಿ ಕಥಕಳಿ ಪ್ರಸಂಗದಲ್ಲಿ ಬರೆದಿದ್ದಾನೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇವು ಮಲಯಾಳಂನ ಕೇಕೆಯ ವೃತ್ತಕ್ಕೆ ಸಮೀಪವಾಗುತ್ತದೆಂಬುದು ಅವರ ಅಭಿಪ್ರಾಯ. ಪಾರ್ತಿಸುಬ್ಬನೂ ಈ ವೃತ್ತಗಳನ್ನು ಸಭಾಲಕ್ಷಣದಲ್ಲಿ ಬಳಸಿದ್ದಾನೆ. ಮಲಯಾಳಂ ಕಾವ್ಯದಿಂದ ಪ್ರೇರಣೆ ಪಡೆದ ಪಾರ್ತಿಸುಬ್ಬ ತನ್ನ ರಾಮಾಯಣ ಭಾಷೆಯ ಸಾಹಿತ್ಯ ಕೃತಿಗಳ ನಡುವೆ ನೇರ ಪ್ರಭಾವ ಪಡೆದ ಸಂದರ್ಭವನ್ನು ಬಿಟ್ಟರೆ ಬೇರೆ ಇಂತಹ ಸನ್ನಿವೇಶ ಇದ್ದಂತಿಲ್ಲ.

ಕವಿ ಪಾರ್ತಿಸುಬ್ಬನು ಕೇರಳ ಕರ್ನಾಟಕದ ಗಡಿಪ್ರದೇಶವಾದ ಕಾಸರಗೋಡಿನ ಕುಂಬಳೆಯವನು. ಅವನು ಕೇರಳದಲ್ಲೆಡೆ ಸಂಚರಿಸಿದ್ದರಿಂದ ಈ ತೆರನ ಪ್ರೇರಣೆ ಕವಿಗೆ ಸಹಜವಾದುದಾಗಿತ್ತು. ಆ ನಂತರದ ದಿನಗಳಲ್ಲಿ ಕಾಸರಗೋಡಿನ ಕನ್ನಡ ಕವಿಗಳ ಮೇಲೆ ಮಲಯಾಳಂ ಕೃತಿಗಳ ಪ್ರಭಾವವನ್ನು ಗುರುತಿಸಲು ಬರುವುದಿಲ್ಲ. ಗೋವಿಂದ ಪೈಗಳ 'ಗೊಲ್ಗೊಥಾ', 'ವೈಶಾಖೀ' ಮೊದಲಾದ ಖಂಡಕಾವ್ಯಗಳ ಮೇಲೆ ಮಲಯಾಳಂನ ಕುಮಾರನ್ ಆಶಾನ್ ಮತ್ತು ವಳ್ಳತ್ತೋಳ್ ನಾರಾಯಣ ಮೇನೋನರ ಕೃತಿಗಳ ಛಾಯೆಯನ್ನು ಗುರುತಿಸಬಹುದು.

ಪೈಗಳ 'ಗೊಲ್ಗೊಥಾ' ಮತ್ತು ವಳ್ಳತ್ತೋಳರ 'ಮಗ್ದಲದಮರಿಯಳು' ಬೈಬಲ್ನ ಸಂದರ್ಭವನ್ನಾಧರಿಸಿವೆ. ಹಾಗೆಯೇ ಪೈಗಳ 'ವೈಶಾಖಿ', 'ವಾಸದವತ್ತೆ', 'ಮಾತಂಗಿ' ಎಂಬೀ ಕವಿತೆಗಳ ಹಾಗೂ ಆಶಾನರ 'ಕರುಣ', 'ಚಂಡಾಲ ಭಿಕ್ಷುಕಿ'ಯ ವಸ್ತುಗಳು ಒಂದೇ ಆಗಿವೆ. ಪಾಂಡೇಶ್ವರ ಗಣಪತಿರಾಯರ ಯೇಸುವಿನ ಕುರಿತ ಕವಿತೆ ಗೊಲ್ಗೋಥಾಗೆ ಪ್ರೇರಣೆಯಾದರೂ ಪೈಗಳ ವಸ್ತುವಿನ ಆಯ್ಕೆ ಹಾಗೂ ಕಾವ್ಯದ ಶೈಲಿಯಲ್ಲಿ ಮಲಯಾಳಂ ಕೃತಿಗಳೊಂದಿಗೆ ಸಾದೃಶ್ಯ ಮೇಲ್ನೋಟಕ್ಕೆ ಗೋಚರವಾಗುತ್ತಿರುವುದು ಸಂಶೋಧನೆಗೆ ಅರ್ಹವಾದ ವಿಷಯ. ಕಾಸರಗೋಡು ಪ್ರದೇಶದ ಬರಹಗಾರರ ಕತೆಗಳಲ್ಲಿ ಸಂಭಾಷಣೆಗಳ ನಡುವೆ ಮಲಯಾಳಂ ಮಾತುಗಳು ಬರುತ್ತವೆ. ಇವಿಷ್ಟನ್ನು ಬಿಟ್ಟರೆ ಹೇಳಿಕೊಳ್ಳುವ ನೇರವಾದ ಸಂಬಂಧಗಳು ಬೇರೆ ಗೋಚರಿಸುವುದಿಲ್ಲ. ಸಾಮಾಜಿಕವಾಗಿ ಸೃಜನಶೀಲ ಲೇಖಕರನ್ನು ಮಲಯಾಳಂ ಗಾಢವಾಗಿ ಮೂಡಿಸಿದ ಪರಿಣಾಮವೆಂದು ಇದನ್ನು ಗುರುತಿಸ ಬಹುದು. ಸಾಮಾಜಿಕವಾಗಿ ಕನ್ನಡ ಮಲಯಾಳಂ ಸಂದರ್ಭದ ಅಂತರ್ ಸಂಬಂಧವನ್ನು ಮುಂದೆ ಪರಿಶೀಲಿಸಬಹುದು.

........ ಮುಂದುವರೆಯುವುದು.....

0 comments:

Post a Comment