ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:51 AM

ಓ...ಬಾಲ್ಯವೇ...

Posted by ekanasu

ಕಾರಿಡಾರ್

ಓ ಬಾಲ್ಯವೇ ಎಲ್ಲರ ಮನೆಯ ಬಾಗಿಲನ್ನೂ ಸ್ವಚ್ಚಂದವಾಗಿ ತಟ್ಟುವೆಯಾ??

ಬಾಲ್ಯವೆಂದರೆ ಹಾಗೆ ಮನದ ಮೂಲೆಯಲ್ಲಿದ್ದ ಚೊಕ್ಕದಾದ ಬೆಚ್ಚಗಿನ ನೆನಪನ್ನು ಮರುಕಳಿಸಿಬಿಡುತ್ತದೆ.. ಎಷ್ಟೋ ವರುಷಗಳು ಕಳೆದರೂ ಆ ಸವಿಯಾದ ನೆನಪು ಮಾತ್ರ ಶಾಶ್ವತ ವಾಗಿರುತ್ತದೆ.ಅಮ್ಮನ ಹತ್ತಿರ ಊಟ ಬೇಡವೆಂದು ಹಠ ಮಾಡಿದಾಗ ಚಿನ್ನ ರನ್ನ ಎಂದು ಚಂದಿರನಿಗಿಂತಲೂ ನೀನೇ ಸುಂದರ ಎನ್ನುತ್ತಾ ಊಟಮಾಡಿಸಿದ ಅಮ್ಮನ ಕೈತುತ್ತಿನಲ್ಲಿ ಆ ಮುಗ್ಧ ಬಾಲ್ಯ ಅದೆಷ್ಟು ಪಾತ್ರವನ್ನು ಗಳಿಸಿಬಿಡುತ್ತದೆ. ಅಪ್ಪನ ಪ್ರೀತಿಯ ಪುಟ್ಟ ಏಟಿಗೆ ಕಣ್ಣೀರ ಧಾರೆ ಹರಿದು ಸಿಟ್ಟಿನಿಂದ ಬೈದ ನೆನಪೆಂದಾದರೂ ಮಾಸುವುದುಂಟೇ..?

ಅಕ್ಕ ಪಕ್ಕದ ಮನೆಯ ಮಕ್ಕಳೊಡಗೂಡಿ ಬೆಳಿಗ್ಗೆ ಮಧ್ಯಾಹ್ಯ ಎಂದು, ಬಿಸಿಲು ಮಳೆಯ ಪರಿವೆಯಿಲ್ಲದೆ ಆಡಿದ ನೆನಪುಗಳೇ ಮಧುರ, ಒಂದನೇ ಕ್ಲಾಸಿನ ಮೊದಲ ಚೆಂಚಿನಲ್ಲಿ ಕುಳಿತಿರುತ್ತಿದ್ದ ಗೆಳತಿಯ ಚಿತ್ರವಿನ್ನೂ ಅವಳೆಷ್ಟೇ ದೊಡ್ಡವಳಾಗಿ ಬೆಳೆದಿದ್ದರೂ ಕಣ್ಣ ಮುಂದೆ ಕಟ್ಟಿಹಾಕಿಬಿಡುತ್ತದೆ.
ಬಾಲ್ಯವೆಂದರೆ ಅದೊಂದು ಮುಗ್ಧ ಭಾವನೆ, ಕನಸುಗಳು ನಿಲುಕಲಾಗದ ಪ್ರಶ್ನೆಗಳಿಗೆ ಉತ್ತರ ಕೊಟ್ಟುಬಿಡುತ್ತೇವೆ. ಅರ್ಥವಿಲ್ಲದ ಪ್ರಶ್ನೆಗಳು, ಕಲ್ಪನೆಗೂ ನಿಲುಕದ ಕನಸುಗಳು, ಹಕ್ಕಿಯಂತೇ ಹಾರಾಡುವ ಕನಸೊಂದಿದ್ದರೆ , ಬಸ್ಸಿನ ಡ್ರೈವರ ಆಗುವ ಕನಸುಗಳೂ ಈ ಮುಗ್ಧ ಬಾಲ್ಯದ ನೆನಪನ್ನು ಮರುಕಳಿಸಿಬಿಡುತ್ತವೆ.

ಗಂಡು ಹೆಣ್ಣೆಂಬ ತಾರತಮ್ಯವಿಲ್ಲದೆ ಸ್ವಚ್ಚಂದವಾಗಿ ಹಾರಾಡಿಕೊಂಡಿದ್ದ ಪ್ರಪಂಚವದು. ಜಾತ್ರೆಯ ತೊಟ್ಟಿಲಿನಲ್ಲಿ ಎರಡೆರಡು ಬಾರಿ ಸುಮ್ಮನೆ ಕುಳಿತ ಖುಷಿಯು ಈಗಲೂ ಎಲ್ಲೆ ಮೀರಿ ಬಾಲ್ಯವೇ ಆಗಿ ಬಿಡಲಿ ಎಂದೆನಿಸುತ್ತದೆ.
ನಮ್ಮೆಲ್ಲರ ಜೀವನದಲ್ಲಿ ಬಾಲ್ಯ ಅದೆಷ್ಟು ನೆನಪನ್ನು, ಕನಸನ್ನು, ಖುಷಿಯನ್ನು ತಂದು ಕೊಟ್ಟಿದೆ. ಆದರೆ ಎಲ್ಲರ ಬಾಳಿನಲ್ಲೂ ಈ ಬಾಲ್ಯವು ಬಣ್ಣದ ರೆಕ್ಕೆಯಾಗಿ ಉಳಿದಿದೆಯೇ???

ಎಷ್ಟೋ ಮುಗ್ಧ ಬಾಲೆಯರು ಈ ಜಗದ ಕ್ರೂರ ಆಹುತಿಗೆ ಬಲಿಯಾದವರು ಅದೆಷ್ಟೋ.. ಅವರ ಜೀವನದ ಬಾಲ್ಯವೆಂದರೆ ನರಕವೇ ಸರಿ. ನಾವೆಷ್ಟು ಖುಷಿಯಿಂದ ಬಾಲ್ಯವನ್ನು ಹೊಗಳುತ್ತಿದ್ದರೆ, ಕೆಲವು ಜನರಿಗೆ ಎಂದೂ ಅಳಿಸಿ ಹಾಕಲಾಗದಂತಹ ಬರೆಯನ್ನು ಬಾಲ್ಯವು ಹಾಕಿಬಿಡುತ್ತದೆ. ಇನ್ನೂ ದೌರ್ಜನ್ಯಗಳು, ಶೋಷಣೆಗಳು ನಡೆಯುತ್ತಲೇ ಇದೆ. ಅದೆಷ್ಟೋ ಮಂದಿ ಇನ್ನೂ ಶಾಲೆಯ ಮುಖವನ್ನೇ ಕಾಣದೇ ಬೆಟ್ಟದಡವಿಯಲ್ಲಿ ಮರೆಯಾಗಿ ಬದುಕುತ್ತಿದ್ದಾರೆ.

ಅದೆಷ್ಟೋ ಹುಡುಗರು ಅಪ್ರಾಪ್ತ ವಯಸ್ಸಿನಲ್ಲಿಯೇ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅಪ್ಪ ಅಮ್ಮಂದಿರ ಪ್ರೀತಿಯನ್ನೇ ಕಾಣದ ಹುಡುಗರು ಇದ್ದಾರೆ ಎಂದರೆ ನಂಬಲಸಾಧ್ಯವೇನೋ..
ಎರಡು ಹೊತ್ತಿನ ತಮ್ಮ ಊಟವನ್ನು ತಾವೇ ದುಡಿದುಕೊಳ್ಳುವವರು ಎಷ್ಟೋ ಮಂದಿಯಿದ್ದಾರೆ. ಬಾಲ್ಯವೆಂದರೆ ಬಣ್ಣದ ಕನಸು, ಕಾಮನಬಿಲ್ಲಾದರೆ, ಇನ್ನು ಕಷ್ಟ ಪಟ್ಟು ದುಡಿಯುತ್ತಿರುವವರಿಗೆ, ಶೋಷಣೆಯಿಂದ ಬಳಲುತ್ತಿದ್ದವರು ಬಹುಶಃ ಬೇಡಿಕೊಳ್ಳುವರೇನೋ ಈ ಬಾಲ್ಯವನ್ನು ಯಾಕೆ ಕೊಟ್ಟೆ ದೇವರೇ... ಎಂದು.
ಆದರೂ ನನ್ನದೊಂದು ಪುಟ್ಟ ಕಳಕಳಿಯೆಂದರೆ ಈ ಬಾಲ್ಯದ ಸೊಬಗನ್ನು ಪ್ರತಿಯೊಬ್ಬರೂ ಸವಿಯುವಂತಾಗಬೇಕು ಜೀವನದ ಪ್ರತೀ ಹಂತವನ್ನು ಎಲ್ಲರೂ ಸವಿದಾಗ ಮಾತ್ರ ಆ ಹಂತಕ್ಕೊಂದು ಶೋಭೆ...

ಬರಹ: ಪದ್ಮಾ ಭಟ್
ಎಸ್.ಡಿ.ಎಂ ಕಾಲೇಜ್ ಉಜಿರೆ

1 comments:

Aradhaka said...

ಸುಂದರ ಆ ಬಾಲ್ಯದ ದಿನಗಳು :)
ಮರೆಯಾಗದಿರಲಿ ಆ ಸಂತಸ ಯಾರ ಬದುಕಿನಿಂದಲೂ
ನಿಮ್ಮ ಸದಾಶಯ ಆಳುವವರ ಮನಸ್ಸಿಗೂ ತಾಗಲಿ

Post a Comment