ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅನಿಸಿಕೆ: ಸಂದೀಪ ಫಡ್ಕೆ, ಮುಂಡಾಜೆ

ಇಂದು ಶಿಕ್ಷಣ ಕೇವಲ ಜ್ಞಾನದ ದಾಹ ತೀರಿಸಲಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜೀವನ ನಿರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ದಿನೇ-ದಿನೇ ಎದುರಾಗುವ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಅಣಿಮಾಡುವ ವಿದ್ಯಾ ಸಂಸ್ಥೆಗಳು ನಮ್ಮಲ್ಲಿವೆ. ಸ್ಪರ್ಧಾ ಮನೋಭಾವವೊಂದಿದ್ದರೆ ಸಾಧನೆಗೆ ಅಡ್ಡಿಯಿಲ್ಲ. ಔದ್ಯೋಗಿಕ ಶಿಕ್ಷಣ ರಂಗ ಈ ನಿಟ್ಟಿನಲ್ಲಿ ಪ್ರಾಬಲ್ಯ ಮೆರೆದಿದೆ. ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ದೇಶ, ರಾಜ್ಯದ ವಿದ್ಯಾರ್ಥಿಗಳಲ್ಲಿ ಇತ್ತ ಕಡೆ ಒಲವು ಮೂಡುವುದು ಸಹಜ. ಪದವಿ ಪೂರ್ವ ಅಥವಾ 12 ನೇ ತರಗತಿ ಮುಗಿಯುವುದನ್ನೇ ಕಾತರಿಸುತ್ತಾರೆ. ಪ್ರವೇಶ ಪರೀಕ್ಷೆಯೆಂಬ ಹುಚ್ಚು ಕುದುರೆಯನ್ನು ತಹಬಂದಿಗೆ ತರಲು ಕಸರತ್ತು ನಡೆಸುತ್ತಾರೆ.


ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಇಂಜಿನೀರಿಂಗ್ ಕಾಲೇಜುಗಳ ಸಂಖ್ಯೆ, ಪ್ರಪ್ರತ್ಯೇಕ ಪ್ರವೇಶ ಪರೀಕ್ಷೆಗಳ ಗೋಜು ದಿಕ್ಕಾಪಾಲಾಗುವಂತೆ ಮಾಡುತ್ತಿವೆ. ಸೀಟು ಹಂಚಿಕೆಯ ವಿಷಯದಲ್ಲೂ ಖಾಸಗಿ ಕಾಲೇಜುಗಳದೇ ಸಿಂಹಪಾಲಾಗಿರುವುದರಿಂದ ಭಾರೀ ಶುಲ್ಕ ಕಟ್ಟುವಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇಂಜಿನೀರಿಂಗ್ ನಂತಹ ವೃತ್ತಿಪರ ಪದವಿಗಳಿಸುವಾಸೆ ವಿವೇಚನೆಯಿಂದ ದೂರಕ್ಕೆ ಹೋದರೆ ಆಶ್ಚರ್ಯವಿಲ್ಲ. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಅನೇಕ ಕಾಲೇಜುಗಳು ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿವೆ. ಇದರಿಂದ ಕಲಿಕಾ ಮಟ್ಟವೂ ಕುಂಠಿತಗೊಳ್ಳುತ್ತಿದೆ. ಇಂತಹ ಆಪಾದನೆ, ದೇಶದ ಪ್ರತಿಷ್ಠಿತ ಐಐಟಿಗಳ ಮೇಲೂ ಇತ್ತೀಚೆಗೆ ಬರತೊಡಗಿದೆ. ಅದೇನೇ ಇರಲಿ, ಕಲಿಯುವ ಮನಸ್ಸೊಂದಿದ್ದರೆ ಯಾವುದೂ ಕಷ್ಟವಲ್ಲ.


ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮುಂದಿಟ್ಟಿರುವ ಐಐಟಿ ಕೌಂನ್ಸಿಲ್ ನ ಪ್ರಸ್ತಾವನೆ ಚರ್ಚೆಗೆ ಗ್ರಾಸವಾಗಿದೆ. ‘ಒಂದು ದೇಶ, ಒಂದು ಪರೀಕ್ಷೆ’ ಎನ್ನುವ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರತಿಷ್ಠಿತ ಐಐಟಿ, ಎನ್ಐಐಟಿ, ಐಐಐಟಿ ಮತ್ತು ಕೇಂದ್ರದ ಸ್ವಾಮ್ಯದಲ್ಲಿರುವ ವಿದ್ಯಾ ಸಂಸ್ಥೆಗಳಿಗೆ ರಾಷ್ಟ್ರ ವ್ಯಾಪಿ ಜೆಇಇ ಮಾದರಿಯ ಒಂದೇ ಪರೀಕ್ಷೆ ನಿಯೋಜಿಸುವ ಯೋಜನೆ ಇದು. ಸುಮಾರು ಎರಡೂವರೆ ವರ್ಷಗಳ ಅಧ್ಯಯನ ಈ ಯೋಜಿತ ಉದ್ದೇಶದ ಹಿಂದಿದೆ.

ಸಮಾಜದ ಒಂದು ವರ್ಗಕ್ಕಷ್ಟೇ ನಿಲುಕುವಂತಿರುವ ಈಗಿನ ಪ್ರವೇಶ ಪರೀಕ್ಷೆ ನಮೂನೆ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ದಕ್ಕುವಂತಿಲ್ಲ. ಕಾರಣ, ಈ ಪರೀಕ್ಷೆಗೂ, ಶಾಲಾ ಪಠ್ಯಕ್ರಮಕ್ಕೂ ಹೆಚ್ಚಿನ ಸಂಬಂಧವಿಲ್ಲ. ಹಾಗಾಗಿ, ಅದಕ್ಕೊಂದು ವಿಶೇಷ ತರಬೇತಿಯ ಅಗತ್ಯವಿದೆ. ಐಐಟಿ ಬಾಂಬೆ 2006ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದಾಖಲಾತಿಯಾದ 476 ವಿದ್ಯಾರ್ಥಿಗಳ ಪೈಕಿ 300 ಮಂದಿ ಕೋಚಿಂಗ್ ಸೆಂಟರ್ ಗಳ ಮೂಲಕ ಬಂದಿರುವುದು ಅರಿವಿಗೆ ಬಂದಿದೆ. ಇಂತಹ ಕೆಲ ನ್ಯೂನತೆಗಳನ್ನು ಸರಿದೂಗಿಸಲು ಉದ್ದೇಶಿತ ಪರೀಕ್ಷೆಯು 40:30:30 ಅನುಪಾತದಲ್ಲಿದ್ದು, ಶೇ.40 ಆದ್ಯತೆಯನ್ನು 12ನೇ ತರಗತಿಗೆ ಮತ್ತು ಕ್ರಮವಾಗಿ ಶೇ.30 ಮುಖ್ಯ ಪರೀಕ್ಷೆಗಳಿಗೆ ನೀಡಲಾಗಿದೆ.

12ನೇ ತರಗತಿಯ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದರಿಂದ ಶಾಲಾ ಶಿಕ್ಷಣದ ಭದ್ರ ಬುನಾದಿ ವಿದ್ಯಾರ್ಥಿಗಳಿಗಿರುತ್ತದೆ ಮತ್ತು ಎಲೆ ಮರೆಯ ಕಾಯಿಯಂತಹ ಪ್ರತಿಭೆಗಳಿಗೆ ಅನುವಾಗಬಹುದೆಂಬ ಆಶಯ ಸ್ವಾಗತಾರ್ಹ. ಅಂತೆಯೇ, ಗಗನ ಕುಸುಮವೆಂದು ನಂಬಿದ್ದ ಐಐಟಿ ಶಿಕ್ಷಣ ಎಲ್ಲರಿಗೂ ತಲುಪಿಸುವ ಪ್ರಯತ್ನ ಕೆಲವರಿಗಾದರೂ ಸದಾವಕಾಶ ದೊರಕಿಸಿಕೊಡಬಹುದು.

ಒಳ್ಳೆಯ ಮುಂದಾಲೋಚನೆಯಾದರೂ, ಕಾರ್ಯರೂಪಕ್ಕೆ ತರುವಲ್ಲಿ ಅನೇಕ ಅಡ್ಡಿ-ಆತಂಕಗಳನ್ನು ಎದುರಿಸುವ ಸಾಧ್ಯತೆಯಿದೆ. ಸುಮಾರು 5000 ಸೀಟುಗಳಿಗಾಗಿ ನಡೆಯುವ ಪರೀಕ್ಷೆಯನ್ನು ಸುಮಾರು 15 ಲಕ್ಷ ಆಕಾಂಕ್ಷಿಗಳು ಎದುರಿಸಬೇಕಾಗುತ್ತದೆ.ಒಟ್ಟು ಮೂರು ಹಂತಗಳಲ್ಲಾಗುವುದರಿಂದ, ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಗೊಂದಲ ಮೂಡುವ ಸಾಧ್ಯತೆ ಹೆಚ್ಚಿದೆ. ರಾಜ್ಯವಾರು ಪಠ್ಯಕ್ರಮಗಳಲ್ಲಿರುವ ವ್ಯತ್ಯಾಸದಿಂದಾಗಿ 12ನೇ ತರಗತಿ ಅಂಕಗಳನ್ನು ಪರಿಗಣಿಸುವ ಸಂಬಂಧ ಐಐಟಿಗಳು ತಕರಾರು ತೆಗೆದಿವೆ. ಇನ್ನು, ಶಾಲೆಯಲ್ಲಿನ ಬೋಧನೆ ಪೂರಕವಾಗಿಲ್ಲ ಎಂದಾಗ ಸಹಾಯಕ್ಕೆ ಕೊಚಿಂಗ್ ಸೆಂಟರ್ ಗಳ ಮೊರೆ ಹೋಗುತ್ತಾರೆ.

ಕೋಚಿಂಗ್ ಸೆಂಟರ್ ಗಳ ಹಾವಳಿಯನ್ನು ಹೊಸ ಪರೀಕ್ಷಾ ವಿಧಾನದ ಮೂಲಕ ತಡೆಗಟ್ಟಬಹುದೆಂಬುದು ದೂರದ ಮಾತು. ಜೆಇಇಯಂತಹ ಪರೀಕ್ಷೆಗಳಿಗೆ ಸಿದ್ಧರಾಗಲು, ಪಠ್ಯಕ್ರಮದಲ್ಲೂ ಬದಲಾವಣೆ ತರುವುದು ಅನಿವಾರ್ಯ. ಆದರೆ, ಈ ಕೆಲಸ ಹಂತ ಹಂತವಾಗಿ ನಡೆಯಬೇಕು. ಏಕಾಏಕಿ ಬದಲಾವಣೆ ಒಡ್ಡುವುದು ವಿದ್ಯಾರ್ಥಿಗಳು, ಹೆತ್ತವರು ಮತ್ತು ಬೋಧಕ ವರ್ಗವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ನಮ್ಮ ರಾಜ್ಯದಲ್ಲಿ ಈ ಬಾರಿ ಪ್ರಥಮ ಪಿಯುಸಿಗೆ ಸಿಬಿಎಸ್ಸಿ ಪಠ್ಯಕ್ರಮ ಜಾರಿಗೊಳಿಸಿದ ಹಿನ್ನೆಲೆ ಅನೇಕ ಪರ-ವಿರೋಧಗಳು ವ್ಯಕ್ತವಾಗಿವೆ.

ಬಹುಶಃ ಇಂತಹ ಮಾರ್ಪಾಡುಗಳು ಪ್ರಾಥಮಿಕ ಹಂತದಲ್ಲೇ ನಡೆದರೆ, ವಿದ್ಯಾರ್ಥಿಗಳು ಪ್ರಯೋಗ ಪಶುಗಳಾಗುವುದನ್ನು ತಪ್ಪಿಸಬಹುದು. ಶಿಕ್ಷಣ ಶಿಕ್ಷೆಯೆಂದನಿಸದು. ಮಾರಾಟದ ಸರಕಿನಂತಾಗಿರುವ ಶಿಕ್ಷಣದ ಘನತೆಯನ್ನು ಕಾಪಾಡುವುದು ಬಹು ಮುಖ್ಯವಾಗಿದೆ. ಅಪವಾದವೆಂಬಂತೆ, ನಾವಿನ್ನೂ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬ ಇತ್ತಂಡ ವಾದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾಗಿಲ್ಲ.

ಹಣ ಮತ್ತು ಜಾತಿಯ ಸಂಕೋಲೆಯಿಂದ ಶಿಕ್ಷಣವನ್ನು ಕಟ್ಟಿ ಹಾಕುತ್ತಿರುವುದು ದುರ್ದೈವವೇ ಸರಿ. ಸರ್ಕಾರಿ ಶಾಲೆಗಳು ಮುಚ್ಚಲು ಕಳಪೆ ಗುಣಮಟ್ಟ, ಭಾಷಾ ಮಾಧ್ಯಮದ ತೊಡಕು ಅಥವಾ ಜನ ಸಾಮಾನ್ಯರ ವಿಚಾರ ಲಹರಿ ಬದಲಾಗಿರುವುದು ಕಾರಣವಾಗಿರಬಹುದು. ಇವೆಲ್ಲವನ್ನು ಪರಿಶೀಲಿಸದೆ ಹೋದರೆ, ಬಡತನ ರೇಖೆಗಿಂತ ಕೆಳಗಿರುವವರು ಶಿಕ್ಷಣದಿಂದ ವಂಚಿತರಾಗಬಹುದು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಜಾಯಮಾನ ಬಿಟ್ಟು ಎಲ್ಲಾ ಆಯಾಮಗಳಿಂದಲೂ ಶಿಕ್ಷಣದ ಉನ್ನತಿಗೆ ಪಣತೊಡಬೇಕಿದೆ.

0 comments:

Post a Comment