ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ : ಅನು ಬೆಳ್ಳೆ

ದೈನಂದಿನ ಕಾದಂಬರಿ : ಭಾಗ - 20
ಇಂದ್ರಸೇನ್, ವಾಣಿಶ್ರೀ ದಂಪತಿಗಳಿಗೆ ಮಗನ ಮೇಲೆ ಬಹಳಷ್ಟು ಅಭಿಮಾನವಿತ್ತು. ತನ್ನಂತೆ ಮಗ ಸರಕಾರದ ಕೆಲಸಕ್ಕೆ ಕಾಯದೆ ತನ್ನದೇ ಒಂದು ವ್ಯವಹಾರವನ್ನು ಹಂಚಿಕೊಂಡಿದ್ದು ಅವರಿಗೆ ಬಹಳ ಮೆಚ್ಚುಗೆಯಾಗಿತ್ತು. ಎಂಬಿಎ ನಲ್ಲೂ ರ್ಯಾಂಕ್ ತೆಗೆದು ನೇರವಾಗಿ ಇಳಿದಿದ್ದು ವ್ಯವಹಾರಕ್ಕೆ. ಯಾರಿಂದ ಆತ ಅಂತಹ ಮೇಧಾವಿತನವನ್ನು ಪಡೆದ? ಅಜ್ಜ ನರಹರಿರಾಯರು ಇಪ್ಪತ್ತು ಕಂಡಿಗೆ ಅಡಿಕೆ ಬೆಳೆಯುತ್ತಿದ್ದ ಅಸಾಮಿ. ಆಗಿನ ಕಾಲಕ್ಕೆ ಅಡಿಕೆಗೆ ಮಾರುಕಟ್ಟೆ ದೊರಕಿದ್ದೆ ಉತ್ತರ ಭಾರತದಲ್ಲಿ.


ಸುಗಂಧಯುಕ್ತ ಸುಪಾರಿ ಅಡಿಕೆಗಳು ಪ್ರಸಿದ್ದಿ ಪಡೆದು ಅವರಿಗೆ ಎಲ್ಲೂ ನಷ್ಟವಾಗದೆ ಕೈತುಂಬಾ ಹಣ ಸೇರಿತ್ತು. ಮುಂದೊಂದು ದಿನ ತನ್ನ ಮೊಮ್ಮಗ ತನ್ನಂತೆ ವ್ಯವಹಾರಸ್ಥನಾಗುತ್ತಾನೆನ್ನುವುದನ್ನು ಅವರು ತಿಳಿದಿರಲಾರರು. ಆದರೂ ಇಂದ್ರಸೇನ್ರು ಇದನ್ನೆಲ್ಲಾ ಮಗನ ಮುಂದೆ ಎತ್ತಲಾರರು. ಆಗಿನ ಕಾಲವೇ ಬೇರೆ... ಈಗಿನದೇ ಬೇರೆ. ಇಲ್ಲಿ ವ್ಯವಹಾರವೆಂದರೆ ರಿಸ್ಕ್ ಜಾಸ್ತಿ. ಅದಲ್ಲದೆ ಕಾಂಪಿಟೀಷನ್, ರೈವಲ್ಸ್, ಹೊಟ್ಟೆಕಿಚ್ಚು ಪಡುವವರು ಹೆಚ್ಚೇ. ಇಲ್ಲಿ ಆ ಫೀಲ್ಡ್ನಲ್ಲಿ ಬದುಕಿ ಉಳಿಯುವುದೇ ಜಾಣತನ.

ನಿಖಿಲ್ ಕೂಡ ಅಷ್ಟೆ. ವ್ಯವಹಾರಿಕ ವಿಷಯಗಳನ್ನು ಮನೆಯವರೆಗೂ ತರಲಾರ. ಆದರೆ ಆತನಿಗಿದ್ದ ವಿಶೇಷ ಆಸ್ಥೆ ಮನಸ್ವಿತಾಳ ಬಗ್ಗೆ ತಂದೆಯ ಎದುರಿಗಲ್ಲದಿದ್ದರೂ ತಾಯಿಯ ಮುಂದೆ ಬಿಚ್ಚಿಡದಿರಲಾರ. ಅವರೂ ಅಷ್ಟೆ. ಕಿಚನ್ನ ವಿಷಯದಲ್ಲಿ ಮುಳುಗಿದ್ದರೂ ಅವನನ್ನು ಒಮ್ಮೆಯಾದರೂ ಮನಸ್ವಿತಾಳ ಬಗ್ಗೆ ಕೇಳದಿರಲಾರರು.

ಶೀ ಈಸ್ ಆನ್ ಅಸೆಟ್ ಟು ದ ನಿಖಿಲ್ ಎಂಟರ್ಪ್ರೈಸಸ್ ಅವಳನ್ನು ಉತ್ಪೇಕ್ಷೇ ಮಾಡುವಾಗ ಅವನನ್ನು ತಿದ್ದುವಂತೆ, ಶಿ ಈಸ್ ಆನ್ ಅಸೆಟ್ ಟು ನಿಖಿಲ್ ಅನ್ನುತ್ತಿದ್ದರು. ಆಗ ಅವರಿಬ್ಬರ ನಗು ಇಂದ್ರಸೇನ್ರನ್ನು ಅಲ್ಲಿಯವರೆಗೆ ಕರೆಸಿತು.
ಏನಂತಾನೆ ಮಗ? ವ್ಯವಹಾರದ ಗಂಧ ಗಾಳಿ ನಮಗಿಬ್ಬರಿಗೂ ಇಲ್ಲ... ಆ ವಿಷಯ ಮಾತನಾಡಲಾರ. ಇಷ್ಟೊಂದು ಮುಕ್ತವಾಗಿ ನಗಬೇಕಾದರೆ ಏನಾದರೊಂದು ವಿಷಯ ಇರಲೇಬೇಕಲ್ಲ?

ಆತನ ಮುಖದಲ್ಲಿ ರಂಗು ತುಂಬಿರುವುದನ್ನು ಬಲ್ಲರು. ಮಡದಿಯ ಮುಖವನ್ನು ನೋಡಿದವರೇ ಉತ್ತರಕ್ಕಾಗಿ ಕಾದರು.
ಅವನ ವ್ಯವಹಾರ ಬಗ್ಗೆ ತಿಳಿದುಕೊಂಡು ನಾವೇನು ಮಾಡಬೇಕು ಹೇಳಿ. ಎಲ್ಲೊ ಓದಿದ್ದ, ನೋಡಿದ ಕೆಲವೊಂದು ಜೋಕ್ಸ್ಗಳನ್ನು ಹೇಳ್ತಾನೆ ಅಷ್ಟೆ
ಅಂದ್ರೆ ಆ ಜೋಕ್ಸ್ಗಳನ್ನು ನನ್ನ ಮುಂದೆ ಹೇಳಬಾರದೂಂತ ಏನಾದ್ರೂ... ಮಡದಿಯ ಕಡೆಯಿಂದ ಅವನತ್ತ ನೋಡಿದರು. ಮುಖ ಗಂಭೀರವಾಗಿರಲಿಲ್ಲ ನಗುವಿತ್ತು.

ಛೇ! ಛೇ ಹಾಗೆನಿಲ್ಲ. ಇವತ್ತು ನನ್ನ ಪ್ರೆಂಡ್ ನವ್ಯಕುಮಾರ್ ಮೇಲ್ ಕಳುಹಿಸಿದ್ದ
ಅಂದ್ರೆ... ಆ ಡ್ರೈಪ್ರುಟ್ಸ್ನ ಋಷಿ
ಮೂವರು ನಕ್ಕರು.
ಎಸ್ ಡ್ಯಾಡ್, ಇನ್ನು ಮುಂದೆ ಎಲ್ಲಾ ಡ್ರೈಪ್ರುಟ್ಸ್ಗಳನ್ನು ನಮ್ಮ ಕಂಪೆನಿಯಿಂದಲೇ ಆಮದು ಮಾಡಿಕೊಳ್ತಾನಂತೆ. ಅದಕ್ಕೆ ನಮ್ಮಲ್ಲಿ ತಾಲೀಮು ನಡೆಸೊ ಅಗತ್ಯವಿತ್ತು ಅವನ ಮಾತಿನಲ್ಲಿ ಹೆಮ್ಮೆಯಿತ್ತು.
ಖಂಡಿತಾ, ಅದನ್ನು ಉಳಿಸಿಕೊಳ್ಳೊ ಜವಾಬ್ದಾರಿ ನಿನ್ನ ಮೇಲಿವೆ. ನಿನ್ನ ಕೊಲಿಗ್ಸ್ ಅಂತು ನಿನ್ನ ಹೆಗಲಿಗೆ ಹೆಗಲು ಕೋಡೊದಿಕ್ಕೆ ಸಿದ್ಧರಾಗಿರುವಾಗ ಒಂದು ಹೆಜ್ಜೆ ಮುಂದೆ ಹೋಗಬಹುದು. ನಮ್ಮಗಳ ಹಾರೈಕೆ ಸದಾ ನಿನಗಿದೆ ಅಭಿಮಾನ ಉಕ್ಕಿದಂತೆ ನುಡಿದರು. ವಾಣಿಶ್ರೀಯವರಿಗೂ ಮಗನ ಬಗ್ಗೆ ಹೆಮ್ಮೆಯೆನಿಸಿತು.

ಮನಸ್ವಿತಾಳ ಬಗ್ಗೆ ಗಂಡನ ಇದಿರು ಪ್ರಸ್ತಾಪಿಸಲಾರರು. ಅದು ಒಂದು ನಿರ್ಧಾರಕ್ಕೆ ಬಂದ ನಂತರವೇ ತಿಳಿದುಕೊಳ್ಳುವ ವಿಷಯವೆಂದು ಸುಮ್ಮನಿದ್ದರು.
ಆ ದಿನ ಅಡುಗೆಯವರ ಕೈಯಿಂದ ಸಿಹಿ ಮಾಡಿಸಿ ಮಗನಿಗೆ ತಾವೇ ಬಡಿಸಿದ ವಾಣಿಶ್ರೀಯವರು ಗಂಡನಿಗೆ, ನೀವು ಇನ್ನು ಸ್ವಲ್ಪ ಸಿಹಿ ತಿನ್ನೋದನ್ನು ಕಡಿಮೆ ಮಾಡೋದು ಒಳ್ಳೆಯದಲ್ವೆ? ಅಂದಾಗ ಅವರು ತಲೆಯೆತ್ತಿ ಮಡದಿಯತ್ತ ನೋಡಿದರು.

ನೀನು ಪ್ರಸ್ತಾಪಿಸಿರೋ ವಿಷಯ ಈಗ ಸ್ಪಷ್ಟವಾಯಿತು ನೋಡು. ಮನೆಗೆ ಸೊಸೆ ಬರುವ ಲಕ್ಷಣಗಳು ಕಾಣಿಸ್ತಾ ಇವೆ. ಈಗಿಂದೀಗ್ಲೆ ನನ್ನ ಊಟ ತಿಂಡಿಗೆ ಕಡಿವಾಣ ಹಾಕಿಕೊಂಡು ಅಜ್ಜ ಆಗ್ಬೇಕೂಂತ ತಾನೇ ಹೇಳ್ತಾ ಇರೋದು
ನಿಖಿಲ್ ನಕ್ಕು ತಾಯಿಯ ಮುಖ ನೋಡಿದರೆ ವಾಣಿಶ್ರೀಯವರು ಮನಸಾರೆ ನಕ್ಕು,ಅಯ್ಯೊ! ನಾನಿನ್ನು ಗಟ್ಟಿಮುಟ್ಟಾಗಿದ್ದೇನ್ರಿ. ನಿಮ್ಮ ಊಟ ತಿಂಡಿಗೆ ಏನೂ ಸಂಚಕಾರ ಬರಲಾರದು. ವಯಸ್ಸು ಅರುವತ್ತಾಯಿತ್ತಲ್ಲ... ಸ್ವಲ್ಪ ಜಾಗ್ರತೆ ವಹಿಸೋದು ಒಳ್ಳೆಯದಲ್ವಾ ಅಂದಾಗ ಇಂದ್ರಸೇನರು ನಕ್ಕು ಟಿವಿಯ ಮುಂದೆ ಕುಳಿತರು.

....ಮುಂದುವರಿಯುವುದು...


0 comments:

Post a Comment