ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ವಿದ್ಯಾಗಿರಿ ವರದಿ

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳಸಾಹಿತ್ಯ ಸಂಗಮದ ಆಶ್ರಯದಲ್ಲಿ 19ನೇ ವರುಷದ ಮಕ್ಕಳ ಧ್ವನಿ - 2012 ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ಸೆಪ್ಟಂಬರ್ 1 ಮತ್ತು 2 ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷೆ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮೀ ಉಪ್ಪಿನ ಕುದ್ರು ಅವರೊಂದಿಗೆ ನಡೆಸಿದ ಮಾತುಕತೆ.

ದುಂಡುಮುಖ,ಅರಳು ಹುರಿದಂತೆ ಮಾತಾಡುವ ಛಾತಿ, ಏನೇ ಪ್ರಶ್ನೆ ಕೇಳಿದರೂ ಎದುರಿಗಿದ್ದವರನ್ನು ದಂಗು ಪಡಿಸುವಂತೆ ಉತ್ತರ ನೀಡುವ ಪರಿ; ಚುರುಕಿನ ವ್ಯಕ್ತಿತ್ವ.ಇದು ಈ ಬಾರಿಯ "ಮಕ್ಕಳ ಧ್ವನಿ" ಜಿಲ್ಲಾ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ "ಮಕ್ಕಳ ಧ್ವನಿ - 2012"ರ ಸರ್ವಾಧ್ಯಕ್ಷತೆ ವಹಿಸಿಕೊಂಡ ಆಳ್ವಾಸ್ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಮಹಾಲಕ್ಷ್ಮಿ ಉಪ್ಪಿನಕುದ್ರು ಅವರ ಚಿಕ್ಕ ಪರಿಚಯ. ಸಮ್ಮೇಳನಕ್ಕೆ ಮೊದಲು " ಈ ಕನಸು.ಕಾಂ"ಗಾಗಿ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

1. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ.ಈ ಬಗ್ಗೆ ಏನನಿಸುತ್ತಿದೆ?
ತುಂಬಾ ಖಷಿಯಾಗುತ್ತಿದೆ. ಅಪೇಕ್ಷೆ ಪಟ್ಟಿರಲಿಲ್ಲ.ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಬಯಕೆಯಿದೆ.
2. ಆಯ್ಕೆಯ ಪ್ರಕ್ರಿಯೆ ಹೇಗಿತ್ತು?
ಆಯ್ಕೆಯ ಪ್ರಕ್ರಿಯೆ ವಿದ್ಯಾರ್ಥಿಗಳ ಜ್ಞಾನ- ಕೌಶಲ್ಯವನ್ನು ಪರೀಕ್ಷಿಸುವುದಾಗಿತ್ತು. ಪ್ರಕ್ರಿಯೆಯು ಮುಖ್ಯವಾಗಿ ರಸಪ್ರಶ್ನೆ, ಆಶುಭಾಷಣ, ವೈಯಕ್ತಿಕ ಸಂದರ್ಶನಗಳನ್ನು ಒಳಗೊಂಡಿತ್ತು.
3. ಈ ಅವಕಾಶ ಸಿಕ್ಕ ನಂತರ ಎಲ್ಲರೂ ನಿಮ್ಮನ್ನು ಹೇಗೆ ಗುರುತಿಸುತ್ತಿದ್ದಾರೆ?
ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ನನ್ನ ಒಳ್ಳೆಯ ಶಿಕ್ಷಕರು.
4. ನೀವು ಈಗ ಹತ್ತನೇ ತರಗತಿಯಲ್ಲಿದ್ದೀರಿ. ಈ ಜವಾಬ್ದಾರಿಯು ಹೊರೆಯೆನಿಸಿದೆಯೇ?
ನಾನೆಂದೂ ಆ ತರಹ ಅಭಿಪ್ರಾಯ ಪಟ್ಟಿಲ್ಲ. ಯಾವಾಗ ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡಾಗ ಕೌಶಲ್ಯ ಹೆಚ್ಚುತ್ತದೆ.ಈ ರೀತಿಯ ಚಿಂತನೆ ನನ್ನದು.
5.ನಿಮಗೆ ಸಾಹಿತ್ಯದ ರುಚಿ ಹುಟ್ಟಿಸಿದ್ದು ಯಾರು?
ಸಾಹಿತ್ಯದ ರುಚಿ ಹುಟ್ಟಿದ್ದು ನನ್ನ ತಾಯಿಯಿಂದ. ಅದೇ ರೀತಿ ತಂದೆ ಹಾಗೂ ಅಣ್ಣ ಈ ಅಭಿರುಚಿಯ ಬೆಳವಣಿಗೆಗೆ ಕಾರಣರಾದರು.

6.ನೀವು ಈಗಾಗಲೇ ಕೃತಿರಚನೆ ಮಾಡಿದ್ದೀರಿ, ಅದರ ಬಗ್ಗೆ ಏನು ಹೇಳಲು ಇಷ್ಟಪಡುವಿರಿ?
ನಾನು ಬರೆದ ಕೃತಿ "ಚಿಂತನ ಮಂಥನ". ಅದರಲ್ಲಿ ನನ್ನ ಲೇಖನಗಳ ಸಂಗ್ರಹವಿದೆ. ಪ್ರಸ್ತುತಸ ಮಸ್ಯೆಗಳು,ರಾಜಕೀಯ, ಬಾಲ್ಯಕ್ಕೆ ಸಂಬಂಧಿಸಿದ ನೆನಹುಗಳು, ಸ್ತ್ರೀಯರ ಸಮಸ್ಯೆಗಳ ಬಗ್ಗೆ ಅಲ್ಲಿ ಪ್ರಸ್ತಾಪಿಸಿದ್ದೇನೆ.
7. ನಿಮ್ಮ ಅಧ್ಯಕ್ಷೀಯ ಭಾಷಣದ ಮುಖ್ಯ ಅಂಶಗಳಾವವು?
ಕನ್ನಡದ ವಸ್ತುಸ್ಥಿತಿ ಹಾಗೂ ಸಾಮಾಜಿಕ ವರ್ತಮಾನ.
8.ಸಮ್ಮೇಳನದ ಬಗ್ಗೆ ನಿಮ್ಮ ಅನಿಸಿಕೆ...
ಆತ್ಮವಿಶ್ವಾಸವಿದೆ. ಜೊತೆಗೆ ದೈವಕೃಪೆ , ಹಿರಿಯರ ಆಶೀರ್ವಾದಗಳಿರುವುದರಿಂದ ಚೆನ್ನಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆಂಬ ನಂಬಿಕೆಯಿದೆ.
9. ಇಂದಿನ ಪಠ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈಗಿನ ಪಠ್ಯಕ್ರಮದಲ್ಲಿನ ಅಂಶಗಳು ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ. ಓದುತ್ತಿದ್ದರೆ ರಸಾನುಭವವಾಗುವಂತಿರಬೇಕು. ಆದರೆ ಈ ಸರ್ಕಾರ ಯಾಂತ್ರಿಕವಾದ ಅಂಶಗಳನ್ನು ಅಳವಡಿಸಿದ್ದಾರೆ. ಮಕ್ಕಳಿಗೆ ಚಿಕ್ಕ ಕಥೆಗಳು, ಕವನಗಳಿರುವಂತೆ ಪಾಠಗಳಿರಬೇಕು. ಎಲ್ಲಕ್ಕೂ ಮುಖ್ಯವಾಗಿ ನೈತಿಕ ಆಂಶಗಳನ್ನು ಒಳಗೊಂಡಿರಬೇಕು.
10. ನೀವು ಕನ್ನಡ ಸಾಹಿತ್ಯದಲ್ಲಿ ಕೆಲಸ ಮಾಡುತ್ತಿರುವವರು. ಇಂಗ್ಲೀಷ್ ಸಾಹಿತ್ಯದ ಬಗ್ಗೆ ಎಂತಹ ಒಲವಿದೆ?
ಎಲ್ಲ ಸಾಹಿತ್ಯಗಳೂ ಒಂದೇ. ಅದರಲ್ಲಿ ತಾರತಮ್ಯ ಬೇಡ. ಆದರೆ ಎಲ್ಲವನ್ನೂ ಸಮಾನ ದೃಷ್ಠಿಯಿಂದ ಕಾಣಬೇಕು.ಸಾಹಿತ್ಯ ರಸವವನ್ನು ತಿಳಿಯುವ ಪ್ರಯತ್ನ ಮಾಡಬೇಕು.
11.ಸಿನಿಮಾ ಸಾಹಿತ್ಯದ ಬಗ್ಗೆ ನಿಮ್ಮ ವಿಚಾರಗಳು ?
ಈಗಿನ ಸಾಹಿತ್ಯವನ್ನು ವಿರೋಧಿಸುವ ಹಂತಕ್ಕೆ ಹೋಗುವುದಿಲ್ಲ. ಆದರೆ ಅದು ಜನರ ಹೃದಯವನ್ನು ತಲುಪುವಂತಾಗಿದ್ದು, ಸಂದೇಶವನ್ನು ಹೊಂದಿರಬೇಕು.ಅದೇ ರೀತಿ ಇವತ್ತಿನ ಟ್ರೆಂಡ್. ಸಾಹಿತ್ಯವನ್ನು ಒಪ್ಪಿಕೊಳ್ಳುವ ರೀತಿ ಬದಲಾಗಬೇಕು. ಸಾಹಿತ್ಯವನ್ನು ಅಭಿವೃದ್ಧಿ ಮಾಡುವ ಒಳ್ಳೆಯ ಹಿರಿಯ ವ್ಯಕ್ತಿತ್ವಗಳು ಬೇಕಿದೆ.
12.ಪ್ರಸ್ತುತವಾಗಿ ಕನ್ನಡ ಮೀಡಿಯಂ ಮತ್ತು ಇಂಗ್ಲೀಷ್ ಮೀಡಿಯಂ ಕುರಿತಾಗಿ ಬಹಳ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕನ್ನಡ ಮೀಡಿಯಂ ಬೇಕೇ ಬೇಕು. ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಬೇಕು. ಯಾವ ವ್ಯಕ್ತಿ ತನ್ನ ಭಾಷೆಯ ಬಗ್ಗೆ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲವೋ ಅಂತಹ ವ್ಯಕ್ತಿ ಬೇರೆ ಯಾವ ಭಾಷೆಯ ಬಗ್ಗೆ , ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಆದ್ದರಿಂದ ಕನ್ನಡಿಗರು ಮೊದಲು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅಪ್ಪಿಕೊಳ್ಳಬೇಕು - ಒಪ್ಪಿಕೊಳ್ಳಬೇಕು. ಹಾಗಾದಾಗ ಮಾತ್ರ ಅಭಿವೃದ್ಧಿ ಸಾಧ್ಯ.
13.ಭವಿಷ್ಯದಲ್ಲಿ ಏನು ಕನಸಿದೆ?
ಉತ್ತಮ ಶಿಕ್ಷಕಿಯಾಗಬೇಕೆಂಬುದು ನನ್ನ ಬಯಕೆ


ಹೀಗೆ ಮೊಗೆದಷ್ಟೂ ಬರುವ ನೀರಿನ ಸೆಲೆಯಂತೆ ಮಹಾಲಕ್ಷ್ಮಿ ವಿದ್ಯಾಲಕ್ಷ್ಮಿಯಾಗಿ ಕಂಗೊಳಿಸುತ್ತಾಳೆ.ಭವಿಷ್ಯದ ಸಾಹಿತ್ಯ ಚೇತನದಂತಿರುವ ಈ ಪುಟ್ಟ ಹುಡುಗಿಗೆ ಶುಭ ಹಾರೈಕೆಗಳು.

ಸಂದರ್ಶನ :ಶ್ರೀಗೌರಿ ಜೋಶಿ, ಕೀರ್ತನಾ ಬೋಪಣ್ಣ, ಪ್ರಣಮ್ಯ ಭಟ್

0 comments:

Post a Comment