ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

* ಮುಂಗಾರು ಮಳೆ ಸಿನೆಮಾದ ನಂತ್ರ ಎಫ್.ಎಂ ರೇಡಿಯೋದಲ್ಲಿ ಕನ್ನಡ ಚಲನಚಿತ್ರ ಹಾಡುಗಳು ಪ್ರಸಾರವಾಗತೊಡಗಿದೆ. ಆ ನಂತರದ ದಿನಗಳಲ್ಲಿ ಕನ್ನಡ ಚಲನಚಿತ್ರಹಾಡುಗಳು ಎಫ್.ಎಂ ರೇಡಿಯೋಗಳಲ್ಲಿ ಪ್ರಸಾರವಾಗುತ್ತಾ ಹೆಚ್ಚು ಜನಪ್ರಿಯವಾಯಿತು. ತನ್ಮೂಲಕ ಕನ್ನಡ ಸಾಹಿತ್ಯ ಬೆಳೆಯುತ್ತಿದೆ.ಕನ್ನಡ ಹಾಡುಗಳು ಜೀವಂತವಾಗುಳಿಯುವಂತೆ ಆಗಿದೆ.

* ಕನ್ನಡ ಚಲನಚಿತ್ರಕ್ಷೇತ್ರದಲ್ಲಿ " ಸ್ತ್ರೀ ಸೋಲೋ "ಗಳಿಗೆ ಸ್ಥಾನ ಪ್ರಾಪ್ತವಾಗುತ್ತಿಲ್ಲ. ಚಲನಚಿತ್ರ ಕ್ಷೇತ್ರ ಇತ್ತೀಚೆನ ದಿನಗಳಲ್ಲಿ ಮೇಲ್ ಡಾಮಿನೆಂಟ್ ಆಗ್ತಾ ಇದೆ. ಅರ್ಥಾತ್ ಪುರುಷ ಕೇಂದ್ರಿತವಾಗುತ್ತಿದೆ. ಈ ಟ್ರೆಂಡ್ ಬದಲಾಗಲೇ ಬೇಕು.* ಪತ್ರಿಕಾ ರಂಗಕ್ಕೆ ಸಾಹಿತ್ಯ ಎಂಬುದು ಅತ್ಯಂತ ಪ್ರಾಮುಖ್ಯವಾದುದು. ಪತ್ರಿಕೋದ್ಯಮ ಕಾಲೇಜುಗಳಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.

* ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಮಂದಿ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಪ್ರಜೆಯ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದ್ದೇವೆಂಬ ಅಂಶ ಅವರ ಅರಿವಿನಲ್ಲಿರಬೇಕು.

* ಮಾಧ್ಯಮದವರಲ್ಲಿ ಮಾನವೀಯ ಮೌಲ್ಯಗಳಿರಬೇಕು. ಪತ್ರಿಕೆ ಓದುಗರ ಪರವಾಗಿರಬೇಕು.

* ಕೇವಲ ಮಾಹಿತಿ ಅಂಕಿ ಅಂಶಗಳಿಂದ ಏನೇನೂ ಆಗಲಾರದು. ಬದಲಾಗಿ ವಿಷಯಗಳು ಮನಸ್ಸಿನ ಭಾಗವಾಗಿ, ರಕ್ತಗತವಾಗಿ ಅನುಭವಕ್ಕೆ ಬಂದು ಅದು ಬರವಣಿಗೆಯ ರೀತಿಯಲ್ಲಿ ಹೊರಬಂದಾಗ ಅದೊಂದು ಸತ್ವಯುತವಾದಂತಹ ಬರಹವಾಗಬಲ್ಲದು.

* ಶುಷ್ಕ ಮಾಹಿತಿ ಕಲೆ ಹಾಕುವುದರಿಂದ ಏನೇನೂ ಮಾಡಲಾಗುವುದಿಲ್ಲ. ಅದರಿಂದ ಯಾವ ಸಾಹಿತ್ಯವೂ ಹುಟ್ಟುವುದಿಲ್ಲ. ಓರ್ವ ಕಥೆಗಾರ ಕಥಾರಚನೆಯ ಚಿಂತೆಯಲ್ಲಿಯೇ ತೊಡಗಿಕೊಳ್ಳಬೇಕು. ಅದನ್ನು ಜಠಿಲವಾಗಿಸುತ್ತಾ ಸಾಗಿದಾಗ ಮಾತ್ರ ಅಲ್ಲೊಂದು ಉತ್ತಮ ಕಥೆ ಸೃಷ್ಠಿಯಾಗಲು ಸಾಧ್ಯವಿದೆ.ಯಾವುದೇ ಕ್ಷೇತ್ರವಿರಲಿ. ಆ ಕ್ಷೇತ್ರವನ್ನು "ಹಗುರ"ವಾಗಿ ತೆಗೆದುಕೊಂಡಾಗ ಅಲ್ಲಿ "ಶ್ರೇಷ್ಠ"ತೆ ನಾಶವಾಗುತ್ತದೆ. ಬದುಕಿನಲ್ಲಿ ಆಳವಾಗಿ ಅನುಭವಿಸಿದ ಸಂಗತಿಗಳು ಉತ್ತಮ ಕಥೆಯಾಗಿ ರೂಪುಗೊಳ್ಳುತ್ತವೆ.

* ತೀವ್ರವಾಗಿ ಬದುಕುವುದೇ ಭವಿಷ್ಯದ ಜೀವನದ ನಿಜವಾದ ಜೀವಾಳ.ಮಾನವೀಯ ಕಳಕಳಿ, ಆಸಕ್ತಿಗಳು ಬದುಕಿನಲ್ಲಿರಬೇಕು.

* ಪತ್ರಿಕೋದ್ಯಮ ನಿರಹಂಕಾರ ಮಾಧ್ಯಮವಾಗಿ ಪರಿವರ್ತನೆಯಾಗಲಿ.

ಈ ಅಂಶಗಳು ಹೆಸರಾಂತ ಕಥೆಗಾರ ಜಯಂತ ಕಾಯ್ಕಿಣಿ ಅವರ ಅಂತರಾಳದಿಂದ ಹೊರಬಂದವು. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿ, ಕಥೆಗಾರ,ಸಹೃದಯೀ ವ್ಯಕ್ತಿತ್ವದ ಕಾಯ್ಕಿಣಿ ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಮುಕ್ತ ಮಾತುಕತೆ ನಡೆಸಿದರು.
ವಾಸ್ತವ ಜಗತ್ತನ್ನು ವಿದ್ಯಾರ್ಥಿಗಳೆದುರು ತೆರೆದಿಟ್ಟರು. ಮಾಧ್ಯಮ, ಸಿನೆಮಾ ರಂಗಗಳ ರಂಗು ರಂಗಿನ ಮೋಹಕ ನೋಟದ ನೈಜ ಚಿತ್ರಣವನ್ನು ತಿಳಿಹೇಳಿದರು.

ಒಂದು ಗಂಟೆಗಳ ಕಾಲ ಸಿನೆಮಾ, ಮಾಧ್ಯಮ, ಶಿಕ್ಷಣ, ಸಾಹಿತ್ಯ, ಕಥೆ, ಬರವಣಿಗೆ,ಕವನ, ಪ್ರೊಡಕ್ಷನ್, ಹೀಗೆ ಹಲವು ವಿಚಾರಗಳು, ಸ್ಪೂರ್ತಿಯ ಸೆಲೆಗಳು, ಪರಿವರ್ತನೆಯ ಕಾಲಘಟ್ಟದ ನೈಜ ಘಟನಾವಳಿಗಳು, ಯುವಜನತೆಯಲ್ಲಿನ ಕ್ಷಿಪ್ರ ಬದಲಾವಣೆಗಳು ಇವೆಲ್ಲವನ್ನು ಮತ್ತೆ ನೆನಪಿಸುವ ಕಾರ್ಯ ಕಾಯ್ಕಿಣಿಯವರಿಂದಾಯಿತು.

ಮಕ್ಕಳೊಂದಿಗೆ ಮಕ್ಕಳಾದರು. ಪ್ರೀತಿಯ ಕಾಯ್ಕಿಣಿಯವರ ಜೊತೆಗೆ ಒಂದಷ್ಟು ಫೋಟೋ, ಆಟೋಗ್ರಾಫ್ ... ಅವರು ಸಾಧಿಸಿದ್ದು ಊಹೆಗೂ ನಿಲುಕದ್ದು. ಆದರೆ ಆ ಸಾಧಕನಿಗೆ ಅಹಂಕಾರದ ಛಾಯೆಯಿಲ್ಲ. ತುಂಬಿದ ಕೊಡ ತುಳುಕದು ಎಂಬಂತೆ... ಕಾಯ್ಕಿಣಿ ಎಲ್ಲರಿಗೂ ಎಲ್ಲರ ಮನದಲ್ಲೂ ಆಪ್ತರಾಗಿ ಕಾಣಿಸಿಕೊಂಡರು...

ಚಿತ್ರ:ಶ್ರೇಯಸ್

0 comments:

Post a Comment