ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ : ವಿದ್ವಾನ್ ಜಗದೀಶ ಶರ್ಮಾ

ರಾಮಕಥಾ

ಭಾರತೀಯ ಪುರಾಣೇತಿಹಾಸಗಳನ್ನು ಜನಮಾನಸಕ್ಕೆ ತಲುಪಿಸಲು ಕಂಡುಕೊಂಡ ಮಾರ್ಗವೈವಿಧ್ಯ ನಿಜವಾಗಿಯೂ ಅಧ್ಯಯನಯೋಗ್ಯ. ಬದುಕನ್ನು ಬೆಳಗುವ ಸಂದೇಶ ಪುರಾಣೇತಿಹಾಸಗಳಲ್ಲಿ ಘನಿಷ್ಠವಾಗಿದೆ ಎನ್ನುವ ನಮ್ಮ ಪೂರ್ವಜರ ದೃಢ ಅನುಭವಾಧಾರಿತ ವಿಶ್ವಾಸವೇ ಇದಕ್ಕೆ ಕಾರಣ. ಪುರಾಣ ಪ್ರವಚನ; ಗಮಕ ವಾಚನ; ಹರಿಕಥೆ; ಉತ್ತರಭಾರತದ ಕಥಾ ಮುಂತಾದವುಗಳು ನೇರವಾಗಿ ಪುರಾಣೇತಿಹಾಸಗಳನ್ನು ಮತ್ತು ಅವುಗಳನ್ನು ಆಧರಿಸಿದ ಕಾವ್ಯ ಪ್ರಪಂಚವನ್ನು ಸಹೃದಯರ ಮುಂದಿಟ್ಟರೆ; ಗೀತ, ನೃತ್ಯ ಮತ್ತು ಹಲವು ಮುಖದ ಶಾಸ್ತ್ರೀಯದಿಂದಾರಂಭಿಸಿ ಜಾನಪದದವರೆಗೆ ವ್ಯಾಪಿಸಿದ ದೃಶ್ಯ ಕಲೆಗಳು ಪ್ರತ್ಯಕ್ಷವೂ ಪರ್ಯಾಯವೂ ಆದ ಮಾರ್ಗಗಳಿಂದ ಪುರಾಣೇತಿಹಾಸಗಳನ್ನು ಬಿತ್ತರಿಸಿದವು.


ಇವೆಲ್ಲವೂ ಕಾಲ ಮತ್ತು ದೇಶದ ಅಭಿರುಚಿಗೆ ತನ್ನನ್ನು ಮಾರ್ಪಾಟುಗೊಳಿಸಿಕೊಳ್ಳುತ್ತಾ ಮೂಲೋದ್ದೇಶವನ್ನು ಸಾಧಿಸುವಲ್ಲಿ ತತ್ಕಾಲೀನ ಯಶಸ್ಸನ್ನು ಪಡೆಯುತ್ತಾ ಸಾಗಿದವು. ಆದರೆ ಬದಲಾದ ಕಾಲದ ಇಂದಿನ ಮನಸ್ಸುಗಳಿಗೆ ಪುರಾಣೇತಿಹಾಸಗಳನ್ನು ಪರಿಚಯಿಸುವ; ಅದರ ಮೂಲಕ ಇಂದಿನ ಬದುಕನ್ನು ಪ್ರೇರೇಪಿಸುವ ಕಾರ್ಯಕ್ಕೆ ಮುಂದಡಿಯಿಡುವಾಗ ಅದಕ್ಕೊಂದು ಕಾಯಕಲ್ಪ, ವಿನೂತನ ರೂಪ ಅನಿವಾರ್ಯವಾಗಿತ್ತು. ಎಲ್ಲಿಯಾದರೂ ಯಾರಾದರೂ ಇಂತದ್ದೊಂದು ಪ್ರಯತ್ನಕ್ಕೆ ತೊಡಗಿಸಿಕೊಳ್ಳಬೇಕಾದ ಆವಶ್ಯಕತೆ ಆಧುನಿಕದ ಯಶಸ್ಸನ್ನು ಅಪೇಕ್ಷಿಸುವ ಮನಸ್ಸುಗಳನ್ನು ಕಾಡುತ್ತಿತ್ತು.
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪರಿಕಲ್ಪನೆಯ 'ರಾಮಕಥಾ' ಇದಕ್ಕೊಂದು ಪರ್ಯಾಯವನ್ನು ಮೂಡಿಸಿತು ಎನ್ನುವುದು ಗಮನಾರ್ಹ ಮತ್ತು ಉಲ್ಲೇಖನಾರ್ಹ.

'ರಾಮಕಥೆ' ಪರಮಪೂಜ್ಯರೇ ಸ್ವಯಂ ಅನುಗ್ರಹಿಸುವ ರಾಮಕಥೆ ಎಂದಿನ ಅಥವಾ ಎಲ್ಲರ ರಾಮಾಯಣಾಧಾರಿತ ಪ್ರವಚನಕ್ಕಿಂತ ವಿಭಿನ್ನ; ಅಷ್ಟೇ ಅಲ್ಲ ವಿಶಿಷ್ಟ ಕೂಡ. ರಾಮಕಥೆಯಲ್ಲಿ ಪ್ರವಚನವುಂಟು; ಗೀತವುಂಟು; ವಾದ್ಯವುಂಟು; ನೃತ್ಯವುಂಟು, ಚಿತ್ರವುಂಟು, ರೂಪಕವುಂಟು, ಅದ್ಭುತಗಳ ಅನಾವರಣವುಂಟು. ಅಂದರೆ ಅಲ್ಲಿ ಇದೆಲ್ಲದರ ಸಮನ್ವಯವುಂಟು.
ರಾಮಕಥೆಯ ಅನನ್ಯತೆಯೇ ಇದು. ಅದು ಹಲವು ಅಭಿರುಚಿಗಳ ಹಲವು ಮನಸ್ಸುಗಳಿಗೆ ರಸಸಮಾರಾಧನೆ. ಅದರ ಕಿರೀಟಮಣಿಯೇ ಪರಮಪೂಜ್ಯರ ರಾಮಾಯಣದ ವ್ಯಾಖ್ಯಾನ.

ವಾಲ್ಮೀಕಿಗಳ ಹೃದಯವನ್ನು ಪ್ರವೇಶ ಮಾಡಿ ಅವರ ಆಶಯವನ್ನು ಬಿತ್ತರಿಸುವ ಪರಿ ನಿರೂಪಣಾತೀತ. ವಾಲ್ಮೀಕಿಗಳ ಪ್ರತಿ ಶಬ್ದದ ಒಳಹೊರಗನ್ನೂ ತಮ್ಮೊಳು ತುಂಬಿಕೊಂಡವರು ಪೂಜ್ಯರು. ಹಾಗಾಗಿ ಪರಮಪೂಜ್ಯರು ರಾಮಾಯಣವನ್ನು ಮಾತನಾಡುವುದಿಲ್ಲ, ರಾಮಾಯಣವೇ ಆಗಿ ಮಾತನಾಡುತ್ತಾರೆ. ಅಥವಾ ರಾಮಾಯಣವೇ ಅವರನ್ನು ಮಾತನಾಡಿಸುತ್ತದೆ. ಅದು ಬೇರೆಯದೇ ಆದ ಭಾವತರಂಗಗಳನ್ನು ಬಡಿದೆಬ್ಬಿಸುತ್ತದೆ. ಭಾವಿಸುವವನನ್ನು ಭಾವಸಮಾಧಿಗೇರಿಸುತ್ತದೆ.

ರಾಮಕಥೆಯ ಮಾಧುರ್ಯದ ಮಾಧುರ್ಯವೇ ಗೀತ ಮತ್ತು ವಾದ್ಯಗಳ ರಸದೌತಣ. ಶ್ರೀಶ್ರೀಗಳ ವ್ಯಾಖ್ಯಾನದ ನಡುವೆ ಸಂಯೋಜಿಸುವ ಸಂದರ್ಭೋಚಿತವಾದ ಸಾಹಿತ್ಯಗಳಿಗೆ ಜೀವಚೈತನ್ಯ ತುಂಬುವ ಗಾಯನ, ಶ್ರೋತೃಗಳನ್ನು ತನ್ಮಯಗೊಳಿಸುತ್ತದೆ. ಪ್ರಸಿದ್ಧ ಗಾಯಕರ ಸಿರಿಕಂಠದಿಂದ ಹೊರಹೊಮ್ಮುವ; ಕಥೆಯ ಸಂದರ್ಭಕ್ಕಾಗಿಯೇ ಕವಿಗಳಿಂದ ರಚಿಸಲ್ಪಟ್ಟ ಗೀತೆಗಳು ರಾಮಕಥೆಗೆ ವಿಶಿಷ್ಟ ಆಯಾಮ ನೀಡುವಂಥದ್ದು. ಹಾಗೆಯೇ ವಾದ್ಯಮೇಳನದ ವೈಶಿಷ್ಟ್ಯಮೆರೆಯುವ ವಾದಕರ ಪಾತ್ರವಂತೂ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

`ಚಿತ್ರ' ರಾಮಕಥೆಯ ವಿನೂತನತೆಯ ಮೆರಗು. ಸಂದರ್ಭಗಳನ್ನು ಸ್ಥಳದಲ್ಲಿಯೇ ಚಿತ್ರಿಸುವ ವಿಧಾನ ಪ್ರೇಕ್ಷಕರನ್ನು ಕುತೂಹಲದ ತುದಿಯಲ್ಲಿ ನಿಲ್ಲಿಸುತ್ತದೆ. ವೈಚಿತ್ರ್ಯ ಮೂಡಿಸುವ ಚಿತ್ರ ಮತ್ತು ಮರುಳು ಮಾಡುವ ಮರಳು ಚಿತ್ರಗಳು ಪೌರಾಣಿಕ ವ್ಯಕ್ತಿತ್ವ ಮತ್ತು ಅವುಗಳ ಸಂದೇಶವನ್ನು ಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸುತ್ತವೆ.
ರಾಮಕಥೆಯಲ್ಲಿನ ನೃತ್ಯ ಇನ್ನೊಂದು ನಾವೀನ್ಯ. ಕಥಾಮಧ್ಯದ ಗೀತಕ್ಕೆ ಭಾವ ತುಂಬುವ ನೃತ್ಯ, ಕಥೆಯ ಪ್ರತಿಪಾದನೆಯನ್ನು ಪ್ರೇಕ್ಷಕನಲ್ಲಿ ದೃಢವಾಗಿಸುತ್ತದೆ.

ಹೇಳಲೇಬೇಕಾದದ್ದು ರೂಪಕದ ಕುರಿತು. ಪ್ರತಿದಿನದ ಕಥಾನಿರೂಪಣೆಯ ಒಂದು ಘಟ್ಟ ಪೂರ್ಣವಾದ ಮೇಲೆ ಅದನ್ನು ರೂಪಕವಾಗಿ ರಂಗದ ಮೇಲೆ ಪ್ರದರ್ಶಿಸಲಾಗುತ್ತದೆ. ಇದರಲ್ಲಿ ಕೇವಲ ಅಭಿನಯ ಮಾತ್ರ ಪ್ರಧಾನವಲ್ಲ, ವೇದಿಕೆಯನ್ನು ಅದ್ಭುತ ರಮ್ಯವಾಗಿಸಿ, ವೈಕುಂಠವನ್ನೋ, ಕೈಲಾಸವನ್ನೋ, ಯಮಲೋಕವನ್ನೋ, ಲಂಕೆಯನ್ನೋ, ಮಾನಸವನ್ನೋ ತೋರಿಸಲಾಗುತ್ತದೆ. ಅಲ್ಲದೆ, ದೃಶ್ಯರೂಪಗೊಳಿಸುವಾಗ ನಾಟಕ, ನೃತ್ಯರೂಪಕ, ಶ್ಯಾಡೋಪ್ಲೇ, ಯಕ್ಷಗಾನ ಮುಂತಾದ ಕಲಾವೈವಿಧ್ಯವನ್ನು ಅಳವಡಿಸಿಕೊಳ್ಳಲಾಗುತ್ತದೆ.

ರಾಮಕಥೆಯ ವೈಶಿಷ್ಟ್ಯ, ಘಟನೆಗಳನ್ನು ಅಧುನಾತನಗೊಳಿಸುವುದರಲ್ಲಿದೆ. ಉದಾಹರಣೆಗೆ ಶ್ರೀರಾಮಜನ್ಮ. ಶ್ರೀರಾಮನ ಜನ್ಮದ ಘಟನೆಗಳನ್ನು ನಿರೂಪಿಸುವ ದಿನ ಇಡೀ ಸಭಾಂಗಣವೇ ಅಯೋಧ್ಯೆಯಾಗಿ ಪರಿವರ್ತಿತವಾಗುತ್ತದೆ. ಅಯೋಧ್ಯೆಯ ಪುರಜನರ ಪರಿಜನರ ವೇಷಭೂಷಣ ತೊಟ್ಟು ಇದೀಗಿನ್ನೂ ಅಯೋಧ್ಯೆಯಲ್ಲಿ ಶ್ರೀರಾಮ ಹುಟ್ಟಿದನೋ ಎಬಂತೆ ಪ್ರೇಕ್ಷಕಸಮೂಹ ಸ್ವಯಂ ಅನುಭವಿಸುತ್ತದೆ. ಅಲ್ಲದೆ, ರಾಮಜನ್ಮವಾದಾಗ ದೇವತೆಗಳು ಪುಷ್ಪವೃಷ್ಟಿಗೈದರು ಎಂದರೆ ಇಡೀ ಸಭಾಂಗಣದಲ್ಲಿ ಇದ್ದಕ್ಕಿದ್ದಂತೆ ಪುಷ್ಪವೃಷ್ಟಿಯಾಗುತ್ತದೆ. ಇಂತಹ ವೈಶಿಷ್ಟ್ಯಗಳ ಸೃಷ್ಟಿ ನಿರಂತರವಾಗಿ ನಡೆಯುತ್ತಲೇ ಸಾಗುತ್ತದೆಯಾಗಿ ಪ್ರೇಕ್ಷಕ ತನಗರಿವಿಲ್ಲದೆ ರಾಮಾಯಣದೊಳಗೆ ಪ್ರವೇಶಿಸಿರುತ್ತಾನೆ.

ರಾಮಕಥೆಯ ರಮ್ಯತೆಯ ಮೇಲ್ಮೆಯಿರುವುದು ಕಥಾಂತ್ಯದ ಆನಂದನರ್ತನದಲ್ಲಿ. 'ಜೈ ಜೈ ರಾಮಕಥಾ' ಎಂದು ಗಾಯಕರು, ವಾದಕರ ಅದ್ಭುತ ಮೇಳದೊಂದಿಗೆ ಹಾಡತೊಡಗಿದಂತೆ ಇಡೀ ಸಭಾಂಗಣವೇ ನರ್ತಿಸತೊಡಗುತ್ತದೆ. ಎಳೆಯರು ವೃದ್ಧರು ಮುಂತಾದ ಯಾವ ಭೇದವೂ ಇಲ್ಲದೆ ರಾಮಭಕ್ತಿ ಪರವಶತೆ ಕುಣಿಸುತ್ತದೆ, ನಲಿಸುತ್ತದೆ.
ಒಟ್ಟಿನಲ್ಲಿ ಪ್ರೇಕ್ಷಕರನ್ನು ತನ್ಮಯಗೊಳಿಕೊಂಡು, ವಾಲ್ಮೀಕಿಗಳ ಮೂಲ ರಾಮಾಯಣದ ಸೊಗಸನ್ನು ಹಾಗೆಯೇ ಬಿತ್ತರಿಸುತ್ತಾ ಕಥಾವಿಮರ್ಶೆ ಮತ್ತು ಪಾತ್ರ ವಿಮರ್ಶೆಗಳ ಮೂಲಕ ಬದುಕಿಗೆ ಬೇಕಾಗುವ ವಿವೇಕವನ್ನು ಬೋಧಿಸುತ್ತಾ ಸಾಗುವ 'ರಾಮಕಥೆ' ಭಾರತೀಯ ತತ್ತ್ವಸಂಕಥನ ವಿಧಾನದ ಹೊಸ ಮಾರ್ಗವಾಗಿ ನಿಲ್ಲುತ್ತದೆ.

0 comments:

Post a Comment