ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 19

ಅತೀ ಕಡಿಮೆ ದರದಲ್ಲಿ ಮತ್ತು ಹೆಚ್ಚು ಆದಾಯ ತರಬಲ್ಲ ಒಂದು ಹಣ್ಣು ಪಪ್ಪಾಯಿ ಎಂದು ತಿಳಿಯಿತು. ಇತ್ತೀಚಿಗೆ ಆ ಹಣ್ಣು ಡಯಾಬಿಟಿಸ್ ರೋಗಿಗಳಿಗೂ ಒಳ್ಳೆಯ ಔಷಧ ಅನ್ನುವ ಮಾತು ಕೂಡ ಇತ್ತು. ಇದರಿಂದಾಗಿ ಮಾರುಕಟ್ಟೆಗೆ ಇನ್ನೊಂದು ಹೊಸ ಉತ್ಪಾದನೆಯನ್ನು ಪರಿಚಯಿಸುವ ಉದ್ದೇಶ ಸರಿಯಾದಂತಾಯಿತು.ಇವತ್ತಿನ ಮೀಟಿಂಗ್ನ ಮುಖ್ಯ ಉದ್ದೇಶನೇ ನಾವು ಆದಿತ್ಯ ಗ್ರೂಪ್ ಜೊತೆಗೆ ಹೊಸ ಒಪ್ಪಂದ ಮಾಡಿಕೊಳ್ಳುವ ಸಂಗತಿ. ಮೊದಲು ನಮ್ಮ ಪ್ರಾಡೆಕ್ಟ್ಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಿದ್ಧ ಪಡಿಸಿ ಅವರಿಗೆ ತಲುಪಿಸುವುದು. ನಮ್ಮ ಪ್ರೊಡಕ್ಟ್ಗಳನ್ನು ಪರಿಶೀಲಿಸದೆ ಬ್ಲೈಂಡ್ ಆಗಿ ಆರ್ಡರ್ ಕೊಡುವುದಕ್ಕೆ ಕಂಪನಿ ಸಿದ್ಧವಿಲ್ಲ. ಅದಕ್ಕಾಗಿ ನಾವು ಪೂರ್ವ ತಯಾರಿ ನಡೆಸಿ ಒಂದೆರಡು ತಿಂಗಳುಗಳಲ್ಲಿ ನಮ್ಮ ಪ್ರಾಡಕ್ಟ್ಗಳನ್ನು ಕಳುಹಿಸಬೇಕು.ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಸುವ್ಯವಸ್ಥಿತ ರೀತಿಯಲ್ಲಿ ಮಾಡಬೇಕು. ಈ ಬಗ್ಗೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ನಿಮ್ಮ ನಿಮ್ಮ ಕೆಲಸಗಳನ್ನು ನಿಬಾಯಿಸಬೇಕು. ಮನಸ್ವಿತಾ ನಿಮ್ಮ ಎಲ್ಲಾ ಕಾರ್ಯಗಳಿಗೂ ಬೆನ್ನೆಲುಬಾಗಿದ್ದಾರೆ ಅವಳತ್ತ ಮೆಚ್ಚುಗೆಯ ನೋಟ ಹರಿಸಿದಾಗ ಮನಸ್ವಿತಾಳಿಗೆ ಸಂಕೋಚವೆನಿಸಿದರೂ ಉಳಿದ ಎಕ್ಸಿಕ್ಯೂಟಿವ್ಗಳ ಮುಂದೆ ತಲೆ ತಗ್ಗಿಸದೆ ಆತ್ಮಸ್ಥೆರ್ಯದಿಂದ ನೋಡಿದಳು.

ಮೀಟಿಂಗ್ ಹಾಲ್ ಬರಿದಾಗುತ್ತಿದ್ದಂತೆ ಮನಸ್ವಿತಾ, ಶೀಲಾ ರೆಡಿ ಮಾಡಿದ ಮಿನ್ಯುಟ್ನ್ನು ಓದಿ ನೋಡಿ, ಅದಕ್ಕೊಂದು ಸರಿಯಾದ ರೂಪ ನೀಡಿ ಒಂದು ಪ್ರಿಂಟ್ ತೆಗೆಸಿ ಮೀಟಿಂಗ್ ಫೈಲ್ಗೆ ಸೇರಿಸಲು ಹೇಳಿದಳು.
ನಿಖಲ್ ಎಂಟರ್ಪ್ರೈಸಸ್ ದಿನದಿಂದ ದಿನಕ್ಕೆ ತನ್ನ ವ್ಯಾವಹಾರಿಕ ಪ್ರದೇಶವನ್ನು ವಿಸ್ತೃತಗೊಳಿಸುತ್ತಾ ಬಂದಿರುವುದು ಹೆಮ್ಮೆಯೆನಿಸಿದರೂ ತನ್ನ ವೈಯಕ್ತಿಕ ವಿಷಯಗಳನ್ನು ಆಲೋಚಿಸುವಷ್ಟು ತನಗೆ ಬಿಡುವು ದೊರೆಯದಿರುವುದು ಮನಸ್ವಿತಾಳಿಗೆ ಅಸಮಾಧಾನವಿದ್ದರೂ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡಳು.

ತನ್ನ ವೈದ್ಯೆಯಾಗುವ ಕನಸು ಕಮರಿ ಬಿದ್ದರೂ ಇವತ್ತು ತಾನು ಗಳಿಸಿರುವ ಹುದ್ದೆ, ಹಣ ಎಲ್ಲವೂ ತನ್ನ ಅಸಹಾಯಕತೆಯ ದ್ವೇಷದಂತೆ ಕಂಡಿತು. ಹಲ್ಲುಗಳು ತುಟಿಗಳಲ್ಲಿ ಊರಿ ತನ್ನ ಬಗ್ಗೆ ಹೆಮ್ಮೆ ಮೂಡಿಸಿದವು. ತನ್ನ ಜವಾಬ್ದಾರಿಗಳನ್ನು ಹಂಚಿ, ಅವುಗಳದರ ಎಲ್ಲಾ ರಿಪೋರರ್ಟ್ಗಳನ್ನು ತಾನೇ ಸಿದ್ಧ ಪಡಿಸುವ ನಿರ್ಧಾರ ಮಾಡಿದವಳು ಬಾಕಿ ಉಳಿದಿರುವ ಕೆಲಸಗಳಲ್ಲಿ ತಲ್ಲೀನಳಾದಳು.

ಈ ಯಾಂತ್ರಿಕ ಜೀವನದತ್ತ ಹೊರಳುತ್ತಿರುವ ಸಂದರ್ಭದಲ್ಲಿ ಸಮಾಧಾನ ಮೂಡಿಸಬಲ್ಲ ಒಂದೇ ಒಂದು ಅನೂಹ್ಯ ವಿಷಯವೂ ತಲೆಯನ್ನು ಕೊರೆಯುತ್ತಿದ್ದುದು 'ಅರವಿಂದ' ನೆಂಬ ಒಂದು ಅನಾಮಿಕ ನಾಮ ಮತ್ತು ನಿಗೂಢವಾಗಿ ಉಳಿದಿರುವ ಮನುಷ್ಯ.
ಆತನ ಬಗ್ಗೆ ಕುತೂಹಲ, ತಲ್ಲಣಗಳಿದ್ದರೂ ನಿಗೂಢವಾಗಿ ಉಳಿದಿರುವ ಹಿಂದೆ ಅನುಮಾನ, ಸಂಶಯಗಳು ಗಾಢವಾಗಿದ್ದವು. ಯಾರೇ ಏನೊ ತಮಾಷೆಗಾಗಿಯೂ ಈ ರೀತಿ ಬೇರೆಯವರ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಿ ಮೇಲ್ ಕಳುಹಿಸುತ್ತಿರಬಹುದಲ್ಲವೆ? ಅದೆಷ್ಟೊ ಸೈಬರ್ ಅಪರಾಧಗಳು ನಡೆಯುತ್ತಲೆ ಇರುತ್ತವೆ. ವಾರ್ತಾ ಪತ್ರಿಕೆಗಳು, ಅಂತರ್ಜಾಲ ಮಾಹಿತಿಗಳು ಪ್ರತಿನಿತ್ಯ ಇಂತಹ ನೂತನ ವಿಷಯಗಳನ್ನು ತಿಳಿಸುತ್ತವೆ.

ಹಾಗಾದರೆ ಈ 'ಅರವಿಂದ' ಮಿಥ್ಯ ವ್ಯಕ್ತಿಯೇ! ನಿರಾಶೆ ಆವರಿಸಿಕೊಂಡರೂ ಕುತೂಹಲ ತಣಿಯುವಂತೆ ಕಾಣಿಸಲಿಲ್ಲ. ಕೂಡಲೇ ನೆನಪಿಗೆ ಬಂದವನು ಸಿಸ್ಟಮ್ ಅಡ್ಮಿನ್ ಪ್ರತ್ಯಕ್ಷ. ಈ ರೀತಿಯ ಮೇಲ್ ಕಳುಹಿಸುತ್ತಿರುವುದು ಯಾರು? ಅಥವಾ ಕೊನೆ ಪಕ್ಷ ಇದು ಎಲ್ಲಿಂದ ಬಂದಿದೆಯೆನ್ನುವುದನ್ನಾದರೂ ಕಂಡುಹಿಡಿಯಬಹುದೆ? ಅನ್ನುವ ಜಿಜ್ಞಾಸೆ ಉಳಿಯಿತು. ಆದರೂ ಅಂತಹ ವಿಷಯಕ್ಕೆ ಕೈ ಹಾಕದಿರುವುದೇ ಲೇಸೆನಿಸಿತು. ಅತ್ಯುನತ್ತ ಹುದ್ದೆಯಲ್ಲಿರುವ ತಾನು ಈ ರೀತಿಯಾಗಿ ಹುಡುಕಾಟಕ್ಕೆ ತೊಡಗಿದರೆ ಕಂಪನಿಯಲ್ಲಿ ತನಗಿರುವ ರೆಸ್ಪೆಕ್ಟ್ ಕಡಿಮೆಯಾಗಬಹುದು.

ಪ್ರತ್ಯಕ್ಷ ಇದನ್ನು ಯಾರಿಗೂ ತಿಳಿಸದೆ ತನ್ನಲೇ ಉಳಿಸಿಕೊಂಡರೆ ತಾನು ಮುಂದುವರಿಯಬಹುದು. ಇಲ್ಲವಾದರೆ... ? ಆತಂಕ ತಡೆಯೊಡ್ಡಿ ಒಂದು ಪ್ರಶ್ನಾರ್ಥಕ ಚಿಹ್ನೆ ಮಾತ್ರ ಉಳಿಯಿತು. ಅಂತಹ ಸಾಂತ್ವನ ಅಲ್ಲಿಯೇ ಉಳಿದು ತಾನೇ ಅದನ್ನು ಕಂಡು ಹಿಡಿಯಬೇಕೆನ್ನುವ ಧೃಡ ನಿರ್ಧಾರ ತಳೆದಳು.

ಆದಿನ ಸಂಜೆ ತನ್ನೆಲ್ಲಾ ಕೆಲಸಗಳನ್ನು ಮುಗಿಸಿ ಗೂಗ್ಲ್ ಸರ್ಚ್ಗೆ ಹೋಗಿ `ಅರವಿಂದ' ಎಂದು ಟೈಪ್ ಮಾಡಿ ಸರ್ಚ್ ಕೊಟ್ಟಾಗ ಅರವಿಂದ ಹೆಸರಿನಲ್ಲಿರುವ ಎಲ್ಲಾ ಮಾಹಿತಿಗಳ ಕ್ಯಾಷ್ಚ್ ಐಡಿಗಳೂ ಕಾಣಿಸಿದವು. ಒಂದೊಂದನೇ ತೆರೆದು ನೋಡುತ್ತಿರುವಾಗ ಒಂದು ಗಂಟೆ ವ್ಯರ್ಥವಾದದ್ದು ತಿಳಿಯಲಿಲ್ಲ. ಆ ಸಾಹಸವನ್ನು ಅಲ್ಲಿಯೇ ಬಿಟ್ಟು ತನ್ನ ಮುಂದಿನ ಕೆಲಸವನ್ನು ಮುಂದುವರಿಸಿದಳು.


ನಿಖಿಲ್ ಎಂಟರ್ಪ್ರೈಸಸ್ನ ಕಾರು ಕಂಪೆನಿಯ ಎದುರು ಬಂದು ನಿಂತಾಗ ಹತ್ತಿ ಕುಳಿತ ಮನಸ್ವಿತಾ ಹವಾ ನಿಯಂತ್ರಿತ ಕಾರಿನಲ್ಲಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತಳು. ಅರ್ಧ ಗಂಟೆಯಲ್ಲಿಯೇ ಕಾರು ಮನೆಯ ಮುಂದೆ ನಿಂತಾಗ ಭಾಮಿನಿಯವರು ಬಾಗಿಲಿಗೆ ಬಂದು ನಿಂತರು. ಮಗಳು ಕಾರಿನಿಂದ ಇಳಿದು ಬಂದಾಗ ಹೆಮ್ಮೆಯೆನಿಸಿದರೂ ಸಂಪ್ರದಾಯಗಳ ಬಗ್ಗೆ ಗೌರವವಿಲ್ಲದೆ ಅನಾದಾರ ತೋರುವ ಅವಳ ಮೇಲೆ ಅಸಮಾಧಾನವಿತ್ತು. ಪದೇ ಪದೇ ಅದೇ ವಿಷಯವನ್ನು ಎತ್ತಿ ಮನೆಯಲ್ಲಿ ಕಲಹಕ್ಕೆ ನಾಂದಿ ಹಾಡಲಾರರು. ಒಂದಲ್ಲ ಒಂದು ದಿನ ಅವಳೇ ಆ ವ್ಯವಸ್ಥೆಯನ್ನು ಅರಿತು ತಮ್ಮ ಮುಂದೆ ಪ್ರಸ್ತಾಪಿಸಬಹುದೆನ್ನುವ ಆಶಯ ಅವರಲ್ಲಿತ್ತು.

ಅವಳು ಮುಖ ತೊಳೆದು ಬರುವಷ್ಟರಲ್ಲಿ ಒಂದಷ್ಟು ತಿಂಡಿ, ಕಾಫಿ ತಂದು ಮೇಜಿನ ಮೇಲಿಟ್ಟರು. ಮಾತಿಲ್ಲದೆ ಅವನ್ನೆಲ್ಲಾ ಮುಗಿಸಿ ಎದ್ದವಳು ತನ್ನ ಲ್ಯಾಪ್ ಟಾಪ್ ತೆಗೆದು ಇಂಟರ್ನೆಟ್ಗೆ ಸೇರಿಸುವಾಗ 'ದಿಸ್ ಪೇಜ್ ಈಸ್ ನಾಟ್ ಫೌಂಡ್' ಅನ್ನುವುದು ಕಾಣಿಸಿತು. ಹಾಗೇ ಅದನ್ನು ಮುಚ್ಚಿದಳು.

- ಅನು ಬೆಳ್ಳೆ

0 comments:

Post a Comment