ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ : ಡಾ. ಮೋಹನ ಕುಂಟಾರ್
ಭಾಗ - 1

ಕನ್ನಡ ಮಲಯಾಳಂ ಅಂತರ್ ಸಂಬಂಧವನ್ನು ಕುರಿತು ಮಾತನಾಡುವಾಗ ಈ ಎರಡೂ ಭಾಷಾ ಪ್ರದೇಶಗಳ ಭೌಗೋಳಿಕ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿಕೊಳ್ಳುವುದು ಮುಖ್ಯವಾಗಿದೆ. ಕನ್ನಡ-ತಮಿಳು, ಕನ್ನಡ-ತೆಲುಗು, ಕನ್ನಡ-ಮರಾಠಿ ಈ ಸಾಂಸ್ಕೃತಿಕ ಅಂತರ್ಸಂಬಂಧಗಳು ಕನ್ನಡದ ಸಂದರ್ಭದಲ್ಲಿ ಅತ್ಯಂತ ಸ್ಪಷ್ಟವಾಗಿದೆ. ಭೌಗೋಳಿಕವಾಗಿಯೂ ಈ ಭಾಷಿಕ ಪ್ರದೇಶಗಳ ಜೊತೆಗೆ ಕರ್ನಾಟಕವು ನೇರವಾದ ಸಂಬಂಧವನ್ನು ಹೊಂದಿದೆ. ಈ ಕಾರಣಕ್ಕಾಗಿ ಕನ್ನಡ, ತಮಿಳು, ತೆಲುಗು ಮತ್ತು ಮರಾಠಿ ಸಂಸ್ಕೃತಿಗಳ ಜೊತೆಗಿನ ಸಂಬಂಧ ಗಾಢವಾಗಿದೆ. ಆದರೆ ಕನ್ನಡ-ಮಲಯಾಳಂ ಸಂಬಂಧಗಳ ನಡುವೆ ಇದಕ್ಕಿಂತ ಭಿನ್ನವಾದ ಭೌಗೋಳಿಕ ಸಾಂಸ್ಕೃತಿಕ ಸನ್ನಿವೇಶವನ್ನು ಕಾಣಬಹುದು. ಕರ್ನಾಟಕ ಹಾಗೂ ಕೇರಳದ ರಾಜಕೀಯ ಗಡಿಗಳು ಪರಸ್ಪರ ಸಂಬಂಧವನ್ನು ಹೊಂದಿವೆ. ಈ ಸಂಬಂಧ ಸಾಂಸ್ಕೃತಿಕವಾಗಿ ಹರಿದು ಬರುವಲ್ಲಿ ಒದಗಿಬಂದಿರುವ ಸಾಂಸ್ಕೃತಿಕ ಗೋಡೆಗಳನ್ನು ಮುಖ್ಯವಾಗಿ ಗುರುತಿಸಬೇಕಾಗುತ್ತದೆ.


ಕೇರಳದ ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳು ಕರ್ನಾಟಕದ ಮೈಸೂರು, ಕೊಡಗು, ದಕ್ಷಿಣಕನ್ನಡ ಜಿಲ್ಲೆಗಳ ಜೊತೆ ನೇರ ಸಂಬಂಧ ಹೊಂದಿವೆ. ವಯನಾಡು ಜಿಲ್ಲೆಯ ಗಡಿಭಾಗವು ಬೆಟ್ಟ ಕಾಡುಗಳಿಂದ ಕೂಡಿದ ಜನವಸತಿ ಕಡಿಮೆಯಿರುವ ಪ್ರದೇಶವಾಗಿದೆ. ಇದಕ್ಕೆ ಆತುಕೊಂಡಿರುವ ಮೈಸೂರು ಸಾಂಸ್ಕೃತಿಕವಾಗಿ ಅಚ್ಚಗನ್ನಡದ ಶ್ರೀಮಂತ ನೆಲ. ಹಾಗಾಗಿ ಪರಸ್ಪರ ಕೊಡು-ಕೊಳುಗೆಯ ಸಂಬಂಧಗಳು ಈ ಪ್ರದೇಶದಲ್ಲಿ ನಡೆದಿಲ್ಲ. ಆದರೆ ಕೊಡಗಿನ ವಿರಾಜಪೇಟೆ, ಕುಶಾಲನಗರ ಪ್ರದೇಶಗಳು ಕೇರಳಕ್ಕೆ ತಾಗಿಕೊಂಡಿದ್ದರೂ ಇಲ್ಲಿನ ಪ್ರಾದೇಶಿಕ ಕೊಡವ ಸಂಸ್ಕೃತಿ ಹೆಚ್ಚು ಶಕ್ತಿಯುತವಾಗಿದೆ.

ಹಾಗೆಯೇ ದಕ್ಷಿಣಕನ್ನಡ-ಕಾಸರಗೋಡು ಗಡಿ ಪ್ರದೇಶಗಳಲ್ಲಿ ತುಳು ಸಂಸ್ಕೃತಿಯೂ ಅಷ್ಟೇ ಪ್ರಬಲವಾಗಿವೆ. ಕರ್ನಾಟಕ ಮತ್ತು ಕೇರಳಗಳ ಸಾಹಿತ್ಯ, ಸಂಸ್ಕೃತಿಗಳು ಕೊಡವ, ತುಳು ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿವೆ. ಹಾಗಾಗಿ ರಾಜಕೀಯವಾಗಿ ಕನರ್ಾಟಕ ಕೇರಳಗಳು ಅಕ್ಕಪಕ್ಕದಲ್ಲಿದ್ದರೂ ತುಳು-ಕೊಡವ ಸಂಸ್ಕೃತಿಗಳ ಮೂಲಕ ಪರಸ್ಪರ ಸಂಬಂಧವನ್ನು ಹೊಂದಬೇಕಾದ ಸ್ಥಿತಿ ಇದೆ. ಮಲಯಾಳಂ-ಕನ್ನಡ ಸಂಬಂಧದಿಂದ ತುಳು-ಕೊಡವ ಸಂಸ್ಕೃತಿಗಳು ವೈಶಿಷ್ಟ್ಯವನ್ನು ಪಡೆದಿವೆ. ಕನ್ನಡ-ಮಲಯಾಳಂಗಳು ಪರಸ್ಪರ ಸಂಬಂಧ ಹೊಂದುವಲ್ಲಿ ಕೊಡವ ಹಾಗೂ ತುಳು ಭಾಷೆಗಳ ಸಾಂಸ್ಕೃತಿಕ ಗೋಡೆಯನ್ನು ದಾಟಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದಾಗಿ ಈ ಎರಡೂ ಸಂಸ್ಕೃತಿಗಳ ನಡುವೆ ನೇರ ಸಂಬಂಧ ಏರ್ಪಟ್ಟಿಲ್ಲ.

ಭಾಷಿಕವಾಗಿ ಒಂದೇ ಮೂಲದವಾದ್ದರಿಂದ ಕನ್ನಡ-ಮಲಯಾಳಂನ ಕೆಲವೊಂದು ಪದಗಳೂ ಎರಡೂ ಭಾಷೆಗಳ ಜನಪದ ಸಾಹಿತ್ಯ ಕಲೆಗಳ ಸಂದರ್ಭದಲ್ಲಿ ಬಳಕೆಯಾಗುವುದಿದೆ. 'ಲಿಲಾತಿಲಕಂ' ಎಂಬ ಹದಿನೈದನೆಯ ಶತಮಾನದ ಮಲಯಾಳಂ ಸಾಹಿತ್ಯದ ಮಣಿಪ್ರವಾಳ ಅಲಂಕಾರ ಗ್ರಂಥಕ್ಕೆ 'ಕರ್ಣಾಟಕ ಭಾಷಾ ಭೂಷಣಂ' ಕೃತಿಯ ಪ್ರಭಾವವಿದೆ ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕನ್ನಡ ವ್ಯಾಕರಣವನ್ನು ಕುರಿತಂತೆ ಸಂಸ್ಕೃತದಲ್ಲಿ ನಾಗವರ್ಮನು ಬರೆದ 'ಕರ್ನಾಟಕ ಭಾಷಾಭೂಷಣಂ' ಕೃತಿಯನ್ನು ಲೀಲಾತಿಲಕಕಾರ ಗಮನಿಸಿರಬಹುದು. ಆದರೆ ಕನ್ನಡದಲ್ಲಿನ ವ್ಯಾಕರಣ ಗ್ರಂಥಗಳನ್ನಾಗಲಿ, ಕಾವ್ಯಗಳನ್ನಾಗಲಿ ಗಮನಿಸಿಲ್ಲ ಎಂಬುದೂ ಸ್ಪಷ್ಟವಿದೆ.

ಸಾಂಸ್ಕೃತಿಕ
ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಅರಸರ ದಿಗ್ವಿಜಯ ಸಂದರ್ಭಗಳಲ್ಲಿ ಭೌಗೋಳಿಕವಾಗಿ ಕೇರಳವನ್ನು ಹೆಸರಿಸಿದ್ದರೂ ಸಾಂಸ್ಕೃತಿಕವಾಗಿ ಸಂಬಂಧಗಳನ್ನು ಹೊಂದಿದಂತಿಲ್ಲ. ಪಂಪನು 'ಕೇರಳ ನಟೀಕಟೀ ಸೂತ್ರಾರುಣಮಣಿ' ಎಂದು ಕೇರಳದ ಸಾಂಸ್ಕೃತಿಕ ಕಲೆ ಹಾಗೂ ಅದರಲ್ಲಿ ಭಾಗವಹಿಸುವ ಸ್ತ್ರೀಯರನ್ನು ಹಿನ್ನೆಲೆಯಾಗಿರಿಸಿಕೊಂಡೇ ಹೇಳಿದಂತಿದೆ. ಕೇರಳದ ಜನರು ಶೌರ್ಯ, ಸಾಹಸ, ಕಲಾಪ್ರಿಯತೆ, ಸೌಂದರ್ಯ ಪ್ರಜ್ಞೆ ಅಲ್ಲದೆ ಮಾಟ-ಮಂತ್ರ ಮೊದಲಾದ ವಾಮಾಚಾರ ಪ್ರವೃತ್ತಿಗಳಲ್ಲಿಯೂ ಪ್ರವೀಣರೆಂದು ಕನ್ನಡನಾಡಿನ ಜನ ತಿಳಿದಿದ್ದರು. ಇದಕ್ಕೆ ಕನ್ನಡ ಸಾಹಿತ್ಯ ಹಾಗೂ ಬದುಕಿನ ಸಂದರ್ಭದಿಂದ ಆಧಾರಗಳನ್ನು ಒದಗಿಸಬಹುದು.

ಅಂದರೆ ಹಿಂದಿನಿಂದಲೂ ಭಾಷಾ ಗಡಿ ಪ್ರದೇಶಗಳಲ್ಲಿನ ಜನಜೀವನದಲ್ಲಿ ಸಾಂಸ್ಕೃತಿಕ ಕೊಡು-ಕೊಳೆಗಳು ನಡೆದುದನ್ನು ಅತ್ಯಂತ ಢಾಳಾಗಿಯೇ ಗುರುತಿಸಬಹುದು. ಆಚಾರ-ವಿಚಾರಗಳಲ್ಲಾಗಲಿ, ಜನಜೀವನದಲ್ಲಾಗಲಿ ಈ ಕೊಡು-ಕೊಳೆಗಳು ಆಯಾ ಪ್ರದೇಶದ ಜನರ ಬದುಕಿನಲ್ಲಿ ಪ್ರಭಾವವನ್ನು ಬೀರಿವೆ. ಆ ಮೂಲಕ ಆ ಪ್ರದೇಶದ ಜನರು ರಾಜ್ಯದ ಮುಖ್ಯವಾಹಿನಿಗಿಂತ ಭಿನ್ನವಾದ ಸಾಂಸ್ಕೃತಿಕ ಬದುಕನ್ನು ರೂಢಿಸಿ ಕೊಂಡಿರುವುದನ್ನು ಕಾಣಬಹುದು.
ಕೇರಳದ ವ್ಯಾಪಾರಿಗಳು ಕರ್ನಾಟಕದಲ್ಲಿ ದಾನದತ್ತಿಗಳನ್ನು ನೀಡಿದ ಬಗೆಗೆ ಚಾಲುಕ್ಯರ ಶಾಸನಗಳು ತಿಳಿಸುತ್ತವೆ. ಚಾಲುಕ್ಯರ ಶಾಸನಗಳಲ್ಲಿ ಮಲಯಾಳಂ ಪಂಡಿತರ ಉಲ್ಲೇಖಗಳಿವೆ. ಈ ಮಲಯಾಳಂ ಪಂಡಿತರು ಕಾಳಾಮುಖಮುನಿ ಪರಂಪರೆಯವರು. ಇವರಿಗೂ ಮಲೆಯಾಳಂಗೂ ಸಂಬಂಧವಿದೆಯೆ? ಹಾಗೆಯೇ ಗೋಲಿಕೆಮಠದ ಮಲಯಾಳ ಸ್ವಾಮಿಗಳಿಗೂ ಮಲಯಾಳಂಗೂ ಸಂಬಂಧವಿದೆಯೆ? ಇವುಗಳ ಹಿನ್ನೆಲೆಯನ್ನು ಶೋಧೀಸಿದರೆ ಮಲಯಾಳಂ ಜೊತೆಗಿನ ಸಾಂಸ್ಕೃತಿಕ ಸಂಬಂಧಕ್ಕೆ ಹೊಸ ಮಾಹಿತಿ ದೊರೆಯಬಹುದು.

ಕೇರಳದ ಪ್ರಸಿದ್ಧ ಕಲೆಯಾದ 'ಕಥಕಳಿ' ಹಾಗೂ ಜನಪದ ಕಲೆಯಾದ 'ತುಳ್ಳಲ್' ಮತ್ತು ಕರ್ನಾಟಕದ ಯಕ್ಷಗಾನಗಳ ನಡುವೆ ಪರಸ್ಪರ ಪ್ರಭಾವ ಆಗಿರವುದಂತೂ ಸ್ಪಷ್ಟವಿದೆ. ಯಕ್ಷಗಾನದ ತೆಂಕುತಿಟ್ಟಿನ ಪ್ರಭೇದವು ಎರಡು ರಾಜ್ಯಗಳ ಗಡಿಭಾಗದ ದ್ವಿಭಾಷಿಕ ಪ್ರದೇಶಗಳಲ್ಲಿ ಹುಟ್ಟಿ ಬೆಳೆಯಿತು. ಆದ್ದರಿಂದ ಎರಡೂ ರಾಜ್ಯಗಳ ಸಂಸ್ಕೃತಿಯನ್ನು ಮೈಗೂಡಿಸಿಕೊಂಡೇ ಈ ಕಲೆ ಪ್ರವರ್ಧಮಾನಕ್ಕೆ ಬಂದಿದೆ. ಆ ಕಾರಣಕ್ಕಾಗಿಯೇ ಯಕ್ಷಗಾನದ ಮೇಲೆ ಕಥಕಳಿಯ ಪ್ರಭಾವವಿದೆಯೆಂದು ಕೆಲವು ಮಂದಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಕಥಕಳಿಯೇ ಯಕ್ಷಗಾನದಿಂದ ಸಾಕಷ್ಟು ಪಡೆದಿದೆ ಎಂಬ ಅಭಿಪ್ರಾಯವೂ ಇದೆ. ಎರಡೂ ಸಂಸ್ಕೃತಿಗಳ ಮಿಲನದ ಪ್ರದೇಶಗಳು ಮಾತ್ರ ಯಾವತ್ತೂ ಇಂತಹ ಜಿಜ್ಞಾಸೆಗಳನ್ನು ಉಳಿಸಿಕೊಳ್ಳುತ್ತವೆ. ಎರಡೂ ಸಂಸ್ಕೃತಿಗಳ ಪರಸ್ಪರ ಕೊಡು-ಕೊಳೆಗಳ ಸಂಬಂಧಗಳ ಕುರಿತು ಖಚಿತವಾದ ಪಟ್ಟಿಯನ್ನು ಮಾಡುವುದು ಕೂಡಾ ಅಸಾಧ್ಯವೇ.

ಕೇರಳದ 'ತೆಯ್ಯಂಕೆಟ್ಟ್' ಮತ್ತು ಕನ್ನಡದ 'ದೈವಕೋಲ'ಗಳಲ್ಲಿ ಪರಸ್ಪರ ಸಾದೃಶ್ಯವುಳ್ಳ ಅನೇಕ ವಿಚಾರಗಳಿವೆ. ತೆಯ್ಯಂನ ತೋಟ್ಟಂಗಳಲ್ಲೂ ಕೋಲಗಳ ಪಾರ್ತನಗಳಲ್ಲೂ, ದಕ್ಷಿಣಕನ್ನಡದ ಅನೇಕ ಸ್ಥಳನಾಮಗಳೂ ಬರುತ್ತವೆ. ಇದರಿಂದ ಸಾಂಸ್ಕೃತಿಕವಾಗಿಯೂ ತೆಯ್ಯಂ ಸಂದರ್ಭದಲ್ಲಿ ಕರ್ನಾಟಕದ ಪ್ರದೇಶಗಳು ಮುಖ್ಯ ಪಾತ್ರವಹಿಸುತ್ತವೆ ಎಂಬುದನ್ನು ತಿಳಿಯಬಹುದು. ಕೇರಳದಲ್ಲಿ ಕಳರಿಪಯಟ್ ಎಂಬ ಯುದ್ಧಕಲೆ ತುಳುನಾಡಿನ ಕಲೆಯೆಂದೇ ಪ್ರಸಿದ್ಧ, ಆದರೆ ತುಳುಪ್ರದೇಶಗಳಲ್ಲಿ ಇದರ ವ್ಯವಸ್ಥಿತವಾದ ಬೆಳವಣಿಗೆ ಆಗಿಲ್ಲ.

(ಮುಂದುವರಿಯುವುದು...)
(ಲೇಖಕರು ಕೇರಳದ ಕಾಸರಗೋಡು ಜಿಲ್ಲೆಯ ಕುಂಟಾರಿನವರು. ಪ್ರಸ್ತುತ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯಲ್ಲಿ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.)


0 comments:

Post a Comment