ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಗ್ರ ಲೇಖನ


ನಾವು ಸ್ವತಂತ್ರರೇ... ಮೊಟ್ಟಮೊದಲು ಈ ಪ್ರಶ್ನೆಯನ್ನು ನಮಗೆ ನಾವು ಹಾಕಿಕೊಳ್ಳೋಣ.ಯಾವ ರೀತಿಯಿಂದ ನೋಡಿದರೆ ನಾವು ಸರ್ವ ತಂತ್ರ ಸ್ವತಂತ್ರರು...? ಇಲ್ಲ...ಖಂಡಿತವಾಗಿಯೂ ನಾವ್ಯಾರೂ ಸ್ವತಂತ್ರರಲ್ಲ... ನಮ್ಮ ದೇಶ ಇಂದಿಗೂ ಸ್ವತಂತ್ರವಾಗಿಲ್ಲ...ಸ್ವಾತಂತ್ರ್ಯವನ್ನು ಪಡೆದುಕೊಂಡಿಲ್ಲ.


ಬ್ರಿಟಿಷರಿಂದ ಮುಕ್ತವಾಗಿದೆಯಾದರೂ ಇನ್ನೂ ನಾವು ಪರಕೀಯರ ದಾಸ್ಯದಲ್ಲಿದ್ದೇವೆ. ಸ್ವತಂತ್ರರಾಗಲು ದೇಶವನ್ನಾಳುವ ಕೆಟ್ಟ ರಾಜಕಾರಣಿಗಳು, ಕೆಟ್ಟ ಶಿಷ್ಟಾಚಾರಗಳು, ಕೆಟ್ಟ ಪಟ್ಟಭದ್ರ ಹಿತಾಸಕ್ತಿಗಳು ಬಿಡುತ್ತಿಲ್ಲ. ಆ ಕಾರಣಕ್ಕಾಗಿಯೇ ನಾವು ಈ ಉತ್ಸವವನ್ನು ಸಂಭ್ರಮದಿಂದ ಆಚರಿಸುವುದರಲ್ಲಿ ಅರ್ಥವೇ ಇಲ್ಲ.
ದೇಶದ ಪ್ರಧಾನಿ ಗುಂಡುನಿರೋಧಕ ಗಾಜಿನ ಗೂಡಿನೊಳಗೆ ನಿಂತು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾರೆ. ಅರ್ಥಾತ್ ಭಯ ಅವರನ್ನು ಬಿಟ್ಟಿಲ್ಲ. ಭದ್ರತೆಯ ದೃಷ್ಠಿಯಿಂದ ಆ ರೀತಿ ಬೇಕೆಂದು ಹೇಳಲಾಗುತ್ತಿದೆ. ಸ್ವತಂತ್ರ ದೇಶದಲ್ಲಿ ಸ್ವಾತಂತ್ರ್ಯೋತ್ಸವದ ದಿನವಾದರೂ ದೇಶವನ್ನು ಪ್ರತಿನಿಧಿಸುವ ಪ್ರಧಾನಿಗಳು ನಿರ್ಭಯದಿಂದ ಮಾತನಾಡುವಂತಾದರೆ ಅದಕ್ಕೊಂದು ಅರ್ಥವಿದೆ.

ಇಂದು ದೇಶ ಬ್ರಿಟಿಷ್ ರಿಂದ ಮುಕ್ತವಾಗಿದೆಯೇನೋ ನಿಜ. ಆದರೆ ದೇಶದೊಳಗೇ ಇರುವ ಬ್ರಿಟಿಷ್ ರನ್ನೂ ಮೀರಿಸುವ ರಾಜಕೀಯ ವ್ಯಕ್ತಿಗಳು, ದೇಶವನ್ನೇ ಕೊಳ್ಳೆಹೊಡೆಯುವ ವಿವಿಧ ಪಕ್ಷಗಳನ್ನು ಪ್ರತಿನಿಧಿಸುವ ದೊಡ್ಡ ದೊಡ್ಡ ದರೋಡೆಕೋರರು, ಕುರ್ಚಿಗಾಗಿ , ಹುದ್ದೆಗಾಗಿ ದುಂಬಾಲು ಬೀಳುವ , ಎಂತಹ ಹೀನ ಕೃತ್ಯಕ್ಕೂ ಹೇಸದ ಮಂದಿಗಳು ಇರುವ ಭಾರತದಲ್ಲಿ ಸ್ವಾತಂತ್ರ್ಯ ಎಲ್ಲಿಂದ ಬಂತು?

ಯಾವ ಸರ್ಕಾರಿ ಕೆಲಸಗಳೇ ಬೇಕೆಂದರೂ ಅಲ್ಲಿ ಹಣ, ರಾಜಕೀಯ ಕೃಪಾಕಟಾಕ್ಷ, ಅಲ್ಲಿ ಯಾವುದೇ ಪ್ರತಿಭೆಗೆ ಬೆಲೆಯಿಲ್ಲ... ಪ್ರಶಸ್ತಿಗಳಿಗೂ ಲಾಭಿ, ಪ್ರತೀ ಕೆಲಸಕ್ಕೂ ಲಾಭಿ, ಹೀಗೆ ಪ್ರತಿಯೊಂದೂ ಈ ದೇಶದಲ್ಲಿ ದುಡ್ಡು, ಲಾಭಿಗಳಲ್ಲಿ ರೂಪುಗೊಂಡಿದೆ ಎಂದಾದಾಗ ಇನ್ನು ಸ್ವಾತಂತ್ರ್ಯವೆಲ್ಲಿ ಉಳಿದುಹೋಗಿದೆ...?

ಭಾರತದ ಸನಾತನ ಸಂಸ್ಕೃತಿಗೆ ಬೆಲೆ ಇಂದು ಉಳಿದಿಲ್ಲ... ಸಂಸ್ಕೃತಿಯ ಉಳಿವು, ಬೆಳೆಸುವ ಕಾರ್ಯ ಇಂದು ಕೇವಲ ಕೆಲವು ಬೆರಳೆಣಿಕೆಯ ಮಂದಿಗಷ್ಟೇ ಬೇಕಾಗಿದೆ... ಭಾರತೀಯ ಸಂಸ್ಕೃತಿ, ಇಲ್ಲಿನ ಭಾಷೆ, ಇಲ್ಲಿನ ಕಲೆ, ಇಲ್ಲಿನ ಆಹಾರ, ಒಟ್ಟಾರೆಯಾಗಿ ದೇಶದ ಉದಾತ್ತ ಸಂಸ್ಕಾರ ಸಂಸ್ಕೃತಿಗಳು ನಮಗೆ ಬೇಡ...ಬದಲಾಗಿ ವಿದೇಶೀ ವ್ಯಾಮೋಹದಲ್ಲಿ ಆ ಮೋಜಿನಲ್ಲಿ ತೇಲಾಡುವ ಸಂದರ್ಭದಲ್ಲಿ ಇಂದು ದೇಶದ ಜನ ಮುಳುಗಿಹೋಗಿದ್ದಾರೆ. ಈ ಸಂದರ್ಭದಲ್ಲಿ ಯಾವ ಪುರುಷಾರ್ಥಕ್ಕಾಗಿ ಸ್ವಾತಂತ್ರ್ಯೋತ್ಸವದ ಸಂಭ್ರಮದ ಆಚರಣೆ ಸರಿಯಾಗಿದೆ...?

ಸ್ವಾತಂತ್ರ್ಯೋತ್ಸವದ ಆಚರಣೆ ಎಂದರೆ ಬೆಳಗ್ಗೆ ಬಂದು ತ್ರಿವರ್ಣ ಧ್ವಜ ಹಾರಿಸಿ , ಧ್ವಜವಂದನೆ ಸಲ್ಲಿಸಿ ರಾಷ್ಟ್ರಗೀತೆ ಹಾಡಿ ಸಿಹಿತಿಂದು ಹೋದರೆ ಮುಗಿಯುವುದಿಲ್ಲ. ದೇಶದ ವಾಸ್ತವ ಸ್ಥಿತಿ - ಗತಿಯ ವಿಚಾರವೂ ಭವಿಷ್ಯದ ಚಿಂತನೆ ಮಾಡುವುದರೊಂದಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಮಹತ್ಕಾರ್ಯ ಮಾಡಬೇಕಾಗಿದೆ. ಈ ಸತ್ಯವನ್ನು ನಾವೆಲ್ಲರೂ ಅರಿಯಬೇಕಾಗಿದೆ.

- ಎಚ್.ಕೆ.

1 comments:

Anonymous said...

nimma articale channagide

venkatesh.t.malhar.yadgir

Post a Comment