ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ: ಶ್ರೀಗೌರಿ ಶ್ರೀಪಾದ ಜೋಶಿ
"ಏಕದಂತಾಯ ವಕ್ರತುಂಡಾಯ
ಗೌರಿತನಯಾಯ ಧೀಮಹೀ...."
ಹೌದು. ಗಣಪತಿಯ ಮಹಿಮೆಯೇ ಅಂತಹುದು. ಸರ್ವ ಗಣಗಳ ನಾಯಕನಾದ ಗಣೇಶನಿಗೆ ನಮ್ಮ ಪೂಜಾಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಎಲ್ಲಾ ಪೂಜಾ ಕೈಂಕರ್ಯಗಳಿಗಿಂತ ಮೊದಲು, ಶುಭಕಾರ್ಯಗಳ ಪೂರ್ವದಲ್ಲಿ ಗಣಪತಿ ಆರಾಧನೆ ನಡೆದೇ ನಡೆಯುತ್ತದೆ. ಆದರೆ ಗಣಪತಿಗೆಂದೇ ವಿಶೇಷ ಆಚರಣೆಯೊಂದಿದ್ದರೆ ಅದು "ಗಣೇಶ ಚತುರ್ಥಿ". ಪ್ರತಿ ಭಾದ್ರಪದ ಮಾಸದ, ಶುಕ್ಲಪಕ್ಷದ ಚತುರ್ಥಿಯಂದು ಗಣೇಶ ಕೈಲಾಸದಿಂದ ಭೂಮಿಗೆ ಬರುತ್ತಾನೆಂಬುದು ನಮ್ಮ ಪುರಾಣಗಳ ನಂಬಿಕೆ.


ಈ ಗಣೇಶ ಚತುರ್ಥಿಯನ್ನು ಅಧಿಕೃತವಾಗಿ, ಸಾಮಾಜಿಕ ಆಚರಣೆಯಾಗಿ ಪ್ರಚುರಗೊಳಿಸಿದವರು ಲೋಕಮಾನ್ಯ ತಿಲಕರು. ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಭಾರತೀಯರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಗಣೇಶಚತುರ್ಥಿ ಮತ್ತು ಶಿವಾಜಿ ಜಯಂತಿಯನ್ನು ಆಚರಣೆಗಳಾಗಿ ಬಳಸಿಕೊಂಡರು.
ಗಣೇಶನ ಹಬ್ಬವೆಂದರೆ ಅಬಾಲವೃದ್ಧರಾದಿಯಾಗಿ ಯಾವುದೇ ಜಾತಿಭೇದವಿಲ್ಲದೇ ಎಲ್ಲರೂ ಒಂದಾಗುತ್ತಾರೆ. ಮನೆಮನೆಯಲ್ಲಿ ಮಾತ್ರವಲ್ಲದೇ ಬೀದಿಬೀದಿಯಲ್ಲಿ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.

ಸ್ಪರ್ಧೆಗಳನ್ನು ಆಯೋಜಿಸಿ ಸಂಭ್ರಮಿಸುತ್ತಾರೆ. ಬಗೆಬಗೆಯ ತಿಂಡಿತಿನಿಸುಗಳು, ಪಟಾಕಿಗಳು ಗಣೇಶನ ಹಬ್ಬದ ಪ್ರಮುಖ ಆಕರ್ಷಣೆಗಳು. ನಮ್ಮ ನೆರೆರಾಜ್ಯ ಮಹಾರಾಷ್ಟ್ರ ವಿನಾಯಕ ಚತುರ್ಥಿಯ ಆಚರಣೆಗೆ ಪ್ರಸಿದ್ಧವಾಗಿದೆ. ದೇಶಾದ್ಯಂತದಿಂದ ಈ ಆಚರಣೆಗೆ ಜನ ಸೇರುತ್ತಾರೆ. ಅತಿ ದೊಡ್ಡ ವಿಗ್ರಹಗಳು, ಸುಂದರ ಮೂರ್ತಿಗಳ ನಡುವಿನ ಸ್ಪರ್ಧೆ ಜನಾಕರ್ಷಣೆಯ ಕೇಂದ್ರಬಿಂದುವಾಗುತ್ತವೆ.
ಆದರೆ ಇಂದು ಈ ಗಣೇಶಚತುರ್ಥಿಯ ಆಚರಣೆ ಎತ್ತ ಸಾಗುತ್ತಿದೆ?ಕೇವಲ ಫ್ಯಾಷನ್ ಸಂಸ್ಕೃತಿ, ಶೋಕಿಲಾಲರ ಆಚರಣೆಯಾಗಿ ಮಾರ್ಪಾಡಾಗುತ್ತಿದೆಯೇ? ಗಣೇಶೋತ್ಸವದ ಸಾಮಾಜಿಕ ಮೌಲ್ಯಗಳು ಕಳೆದು ಹೋಗುತ್ತಿವೆಯೇ? ಯುವಪೀಳಿಗೆ ಈ ಮಹತ್ವದ ಹಬ್ಬವನ್ನು ಹಗುರವಾಗಿ ಪರಿಗಣಿಸಿದೆಯೇ? ಬಹಳ ದಿನಗಳಿಂದ ಈ ಪ್ರಶ್ನೆಗಳು ವಿಚಾರವಂತರನ್ನು ಕಾಡುತ್ತಿವೆ. ದುರದೃಷ್ಟವಶಾತ್, ಈ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಪ್ರಶ್ನೆಗಳ ಗೊಂದಲದ ನಡುವೆಯೇ ಮತ್ತೆ ಗಣಪತಿ ಭೂಮಿಗೆ ಬರುತ್ತಿದ್ದಾನೆ.
ಗಣಪತಿ ಹಬ್ಬದ ಆಚರಣೆ ಶುರುವಾಗುವುದು ಚಂದಾವಸೂಲಿಯಿಂದ. ಪ್ರತಿ ಬೀದಿಯವರು ಹಣ ಸಂಗ್ರಹಣೆಗಾಗಿ ಗುಂಪಾಗಿ ಬರುತ್ತಾರೆ. ಅವರ ಬೇಡಿಕೆ ಆರಂಭವಾಗುವುದು ಕನಿಷ್ಠವೆಂದರೂ ರೂ.150 ರಿಂದ. ದೊಡ್ಡ ದೊಡ್ಡ ಪೆಂಡಾಲ್ಗಳು ತಲೆಯೆತ್ತುತ್ತವೆ. ಎತ್ತರದ ವೇದಿಕೆಯಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಜ್ಜು ಮಾಡಲಾಗುತ್ತದೆ. ಲೌಡ್ಸ್ಪೀಕರ್, ಮೈಕಾಸುರಗಳ ಹಾವಳಿ ಆರಂಭವಾಗುತ್ತದೆ.
ಪ್ರತಿಷ್ಠಾಪನೆಯ ದಿನವಂತೂ ದೊಡ್ಡ ಲಾರಿ, ಟ್ರಾಕ್ಟರ್ಗಳಲ್ಲಿ ಗಣೇಶನ ವಿಗ್ರಹ ಬರಲು ಮುಂದಾಗುತ್ತದೆ. ಆ ವಾಹನದ ಸುತ್ತಲೂ ಪಡ್ಡೆಗಳು ತಮ್ಮ ಬೈಕುಗಳನ್ನೇರಿ ಗುಂಪು ಗುಂಪಾಗಿ ಗಣಪತಿಯ ಬರುತ್ತಾರೆ! ವಾಹನದ ಮುಂದೆ ಪೋಲಿಗಳು, ಪಿಳ್ಳೆಗಳು ಐಟಂಸಾಂಗಿಗೆ ಕುಣಿಯುತ್ತ ಮೆರವಣಿಗೆಯನ್ನು ಮುಂದುವರೆಸುತ್ತವೆ. ಪೂಜಾಸಮಯದಲ್ಲಿ ಶ್ಲೋಕ ಮಂತ್ರಗಳನ್ನು ಪಠಿಸುವ ಲೌಡ್ಸ್ಪೀಕರ್ಗಳು ಅದು ಮುಗಿದೊಡನೆ ಗೋಲ್ಡನ್ಸ್ಟಾರ್ ಗಣೇಶನ ಭಜನೆಯನ್ನು ಶುರು ಮಾಡುತ್ತವೆ.
ಇನ್ನು ಸಂಜೆಯಾದರೆ ಸಾಕು ರಂಗುರಂಗಿನ ಬಟ್ಟೆಗಳನ್ನು ಧರಿಸಿ ಸುಂದರವಾಗಿ ಸಿದ್ಧಗೊಂಡು ಬರುವ ಲಲನಾಮಣಿಯರು. ಅವರು ದೇವರನ್ನು ನೋಡಲು ಬರುತ್ತಾರೆ ಎನ್ನುವುದಕ್ಕಿಂತ ತಮ್ಮನ್ನು ಎಲ್ಲರೂ ನೋಡಲಿ ಎಂಬ ಆಶಯದೊಂದಿಗೆ ಬರುತ್ತಾರೆಂದರೂ ತಪ್ಪಿಲ್ಲ! ಸಾರ್ವಜನಿಕರಿಂದ ದುಡ್ಡು ವಸೂಲಿ ಮಾಡಿರುತ್ತಾರಲ್ಲ, ಅದೇ ಕಾರಣಕ್ಕೇ ಪ್ರಸಾದದ ನೆಪ ಮಾಡಿಕೊಂಡು ಚೂರುಪಾರು ದುಡ್ಡನ್ನು ಆಯೋಜಕರು ಅಲ್ಲಿ ವ್ಯಯಿಸುತ್ತಾರೆ. ಇದೇ ಸಮಯಕ್ಕೇ ಬಿಳಿಬಟ್ಟೆ ಧರಿಸಿ, ಉದ್ದನಾಮವಿಟ್ಟು ತಾವು ಭಾರೀ ದೈವಭಕ್ತರೆಂದು ತೋರಿಸಿಕೊಳ್ಳುವ ತವಕದಲ್ಲಿ ರಾಜಕೀಯ ಪಕ್ಷಗಳ ಪುಢಾರಿಗಳು ಬರುತ್ತಾರೆ. ದೇವರ ದರ್ಶನದ ಹೆರಿನಲ್ಲಿ ಅವರ ಪಕ್ಷದ ಮಾತುಕತೆಯ ಸ್ಥಳವೂ ಈ ಪೆಂಡಾಲ್ ಆಗುತ್ತದೆ.
ರಾತ್ರಿಯಾಗುತ್ತಿದ್ದಂತೇ ಪಾಶ್ಚಾತ್ಯಸಂಗೀತ, ಅಬ್ಬರದಸಂಗೀತದ ಗಾನಬಜಾನ ಆರಂಭವಾಗುತ್ತದೆ. "ಹೊಡಿಮಗ ಹೊಡಿಮಗ .....ಬಿಡಬೇಡ ಅವನ","ವೈ ದಿಸ್ ಕೊಲವೆರಿ ಕೊಲವೆರಿ ಡಿ...." ಎಂಬ ಹಾಡುಗಳು ನಿಜವಾಗಿಯೂ ಗಣೇಶ ಆಸ್ಥಳ ಬಿಟ್ಟು ಓಡಿಹೋಗುವಂತೆ ಮಾಡುತ್ತವೆ. ಈ ಮೈಕಾಸುರನ ಆರ್ಭಟ ಸಾರ್ವಜನಿಕರು ತಲೆ ಚಚ್ಚಿಕೊಳ್ಳುವಂತೆ ಮಾಡುತ್ತವೆ.
ಇನ್ನು ಪಟಾಕಿಗಳು. ಈ ಯುವಜನತೆ ವಿದ್ಯಾವಂತರಾದರೂಆ ವಿದ್ಯೆಯನ್ನು ಅನ್ವಯಗೊಳಿಸುವಲ್ಲಿ ವಿಫಲರಾಗಿದ್ದಾರೆ ಅನಿಸುವುದೇ ಈ ವಿಷಯದಲ್ಲಿ. ಪಟಾಕಿ ಒಡೆರಯುವುದರಿಂದ ಪರಿಸರಕ್ಕೆ ಇತರ ಜೀವಿಗಳಿಗೆ ಹಾನಿಯಾಗುವುದೆಂದು ಗೊತ್ತಿದ್ದರೂ ಸಹ ಈರೀತಿ ಮಾಡುತ್ತಾರೆ. ಹಣವನ್ನು ಹೀಗೆ ಅನರ್ಥವಾಗಿ ಸುಡುವುದರ ಬದಲು ಅವಶ್ಯಕತೆಯಿದ್ದವರಿಗೆ ಹಂಚುವುದು ಉತ್ತಮ ಕೆಲಸ.
ಜಲಮಾಲಿನ್ಯದ ಮುಖ್ಯ ಕಾರಣಗಳಲ್ಲಿ ಗಣಪತಿ ವಿಸರ್ಜನೆಯೂ ಒಂದು. ಗಣಪತಿ ವಿಸರ್ಜನಎಯ ದಿನ ಚಿಕ್ಕ ಗಾತ್ರದ ವಿಗ್ರಹದಿಂದ ಬೃಹದಾಕಾರದ ವಿಗ್ರಹಗಳು ವಿಸರ್ಜನೆಯಾಗುವುದು ಕೊಳ,ನದಿಗಳಲ್ಲಿ. ಗಣಪತಿ ವಿಗ್ರಹದಲ್ಲಿರುವ ಬಣ್ಣಗಳು ರಾಸಾಯನಿಕಗಳನ್ನು ಹೊಂದಿದ್ದು ಮಾಲಿನ್ಯಕ್ಕೆ ಕಾರಣವಾದರೆ ವಿಗ್ರಹದ ಮಣ್ಣು ನೀರಿನ ಆಕರಗಳಲ್ಲಿ ಹೂಳು ತುಂಬಲು ಕಾರಣವಾಗುತ್ತದೆ. ಅಲ್ಲದೇ ದೇವರ ವಿಗ್ರಹ ಭಗ್ನಗೊಳ್ಳುವುದು ಒಳ್ಳೆಯದಲ್ಲ;ವೆಂದು ತಿಳಿದರೂ ಜನ ಇದನ್ನು ಮಾಡುತ್ತಾರೆ.ಬಾವಿಗೆ ವಿಗ್ರಹ ಹಾಕಿದರೆ ಗಣೇಶ ಹೋಗುವುದು ಕೈಲಾಸಕ್ಕಲ್ಲ ಭೂಗರ್ಭಕ್ಕೆ ಎಂಬ ಸಾಮಾನ್ಯ ಪರಿಕಲ್ಪನೆಯೂ ಶ್ರೀಸಾಮಾನ್ಯನಿಗಿಲ್ಲವೇ?
ಇಂತಹ ವಿರೋಧಾಭಾಸಗಳಿಂದ "ಗಣೇಶಚತುರ್ಥಿ" ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ನಿಜವಾದ ಆಚರಣೆಯನ್ನು ಯುವಪೀಳಿಗೆ ತಿಳಿಯಬೇಕಿದೆ. ಗಣೇಶಚತುರ್ಥಿ ಸಾಂಸ್ಕೃತಿಕ, ಧಾರ್ಮಿಕ ಸಾಮರಸ್ಯದ ಸಂಕೇತ. ಹಿರಿತಲೆಗಳು ಈ ಸಂದೇಶವನ್ನು ಕಿರಿಯರಿಗೆ ರವಾನಿಸುವ ಮನಸ್ಸು ಮಾಡಬೇಕಿದೆ. ಅಂತಹ ಕಾರ್ಯ ಕೈಗೂಡಿದಾಗ ಮಾತ್ರ ಈ ಮಹತ್ವದ ಆಚರಣೆಯ ಜೀವಂತಿಕೆಯ ಸೆಲೆ ಉಳಿಯಲು ಸಾಧ್ಯ. ಅಲ್ಲವೇ?

0 comments:

Post a Comment