ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್ ಅಹಮದ್ ಈ ಬಾರಿಯ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರು. ಈ ಮಹೋನ್ನತ ಅವಕಾಶ ಅವರನ್ನರಸಿ ಬಂದಿದೆ. ಈ ಸಂದರ್ಭದಲ್ಲಿ ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್ ಅವರ ಕುರಿತಾದ ಕಿರು ಪರಿಚಯ ಈ ಕನಸು.ಕಾಂ ಓದುಗರಿಗಾಗಿ...



ಕೆ.ಎಸ್.ನಿಸಾರ್ ಅಹಮದ್ ಸರಳ ಸಜ್ಜನ ವ್ಯಕ್ತಿತ್ವದ ಕನ್ನಡದ ಮೇರು ಸಾಹಿತಿ. ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು. ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ

೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ ಸುಮಾರು ೫ ದಶಕಗಳಿಂದ ೨೫ ಕೃತಿಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.


೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು,ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು.


ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ),ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
ಅಹಮದ್ ರವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್


'ಮನಸು ಗಾಂಧಿಬಜಾರು'
'ನಿತ್ಯೋತ್ಸವ'
'ನೆನದವರ ಮನದಲ್ಲಿ'
'ನಾನೆಂಬ ಪರಕೀಯ'
'ಅನಾಮಿಕ ಆಂಗ್ಲರು'
'ಸುಮಹೂರ್ತ'
'ಸಂಜೆ ಐದರ ಮಳೆ'
'ಸ್ವಯಂ ಸೇವೆಯ ಗಿಳಿಗಳು'ಇವರ ಕವನ ಸಂಕಲನಗಳಾಗಿವೆ.

ಇವರ ಗದ್ಯ ಸಾಹಿತ್ಯಗಳೂ ಬಹು ಜನಪ್ರಿಯತೆಯನ್ನು ಪಡೆದುಕೊಂಡಿದೆ.
'ಅಚ್ಚುಮೆಚ್ಚು'
'ಇದು ಬರಿ ಬೆಡಗಲ್ಲೊ ಅಣ್ಣ'
'ಷೇಕ್ಸ್ ಪಿಯರ್‍ನ 'ಒಥೆಲ್ಲೊ' ಹಾಗೂ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಮುಂಬೈನಲ್ಲಿ ಆಹ್ವಾನಿತ ಭಾಷಣಕಾರರಾಗಿಯೂ ಈ ಕವಿ ಖ್ಯಾತಿ ಹೊಂದಿದ್ದಾರೆ.

ಮುಂಬೈನಲ್ಲಿ ಪ್ರತಿವರ್ಷವೂ, 'ಮುಂಬೈ ವಿಶ್ವವಿಧ್ಯಾಲಯ,' ಹಾಗೂ 'ಮೈಸೂರ್ ಆಸೋಸಿಯೇಷನ್' ಜಂಟಿಯಾಗಿ ಈ ಉಪನ್ಯಾಸ ಮಾಲಿಕೆಯನ್ನು ಆಯೋಜಿಸುತ್ತಾ ಬಂದಿವೆ. ಸನ್, ೨೦೧೧ ರ ಸಾಲಿನ, 'ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಕಾರ್ಯಕ್ರಮ'ದಲ್ಲಿ ಡಾ.'ಕೆ.ಎಸ್.ನಿಸಾರ್ ಅಹಮದ್' ರವರು, ಆಹ್ವಾನಿತ ಭಾಷಣಕಾರರಾಗಿ ಆಗಮಿಸಿ, ತಮ್ಮ ಪ್ರತಿಭಾನ್ವಿತ ಮಾತುಗಳಿಂದ ಮುಂಬೈ ಕನ್ನಡಿಗರ ಮನಸ್ಸನ್ನು ಸೂರೆಗೊಂಡರು. ಈ ಕಾರ್ಯಕ್ರಮ, ಜನವರಿ, ೨೯, ಶನಿವಾರ, ಹಾಗೂ ೩೦, ರವಿವಾರ, ದಂದು, ಆಯೋಜಿಸಲ್ಪಟ್ಟಿತ್ತು.

ನಿಸಾರ್ ಅಹಮದ್ ಅವರ ಸಾಹಿತ್ಯ ಕೃಷಿಗೆ ಹತ್ತು ಹಲವು ಪ್ರಶಸ್ತಿಗಳು ಅವರನ್ನರಸಿಕೊಂಡು ಬಂದಿವೆ.
೨೦೦೬ ರ ಮಾಸ್ತಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ
೧೯೮೧ ರ ರಾಜ್ಯೋತ್ಸವ ಪ್ರಶಸ್ತಿ
೨೦೦೩ ರ ನಾಡೋಜ ಪ್ರಶಸ್ತಿ
೨೦೦೬ ರ ಅರಸು ಪ್ರಶಸ್ತಿ
೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ,'೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿ ಆಯ್ಕೆಯಾಗಿದ್ದರು.ಇದೀಗ ನವೆಂಬರ್ 16,17 ಮತ್ತು 18ರಂದು ಮೂಡಬಿದಿರೆಯಲ್ಲಿ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಸಾರ್ ಅಹಮದ್ ಕಾಣಿಸಿಕೊಳ್ಳಲಿದ್ದಾರೆ.

- ಟೀಂ ಈ ಕನಸು.

0 comments:

Post a Comment