ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಸಾಹಿತ್ಯ : ಎ.ಎಸ್. ಮಾಕನದಾರ, ಗದಗ

ಅಂದಿನ ಸಾಹಿತ್ಯ ರತ್ನಾಕರವರ್ಣಿಯ ಸಾಹಿತ್ಯದ ಕಾಯಕ ಕೇಂದ್ರ ಜೈನ ಕಾಶಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ. ಆ ಪರಂಪರೆಯ ಕೊಂಡಿ (ಸರಪಳಿ)ಯಾಗಿ ಕನ್ನಡ ನಾಡು ನುಡಿ ಗುಡಿಯ ರಕ್ಷಣೆಗಾಗಿ ಕಂಕಣ ಬದ್ಧವಾಗಿ ಓರ್ವ ವ್ಯಕ್ತಿ ಅಹರ್ನಿಶಿಯಾಗಿ ದುಡಿಯುತ್ತಿರುವುದನ್ನು ಕಂಡು ಕನ್ನಡಮ್ಮ ಅಭಿಮಾನ ಪಡುತ್ತಿದ್ದಾಳೆ. ನಾಡಿಗೆ ನಾಡೇ ಬೆರಗಾಗಿದೆ. ಕನ್ನಡವನ್ನು ಪ್ರೀತಿಸಿ ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವುದರ ಜೊತೆಗೆ ಕಲೆ, ಸಾಹಿತ್ಯ , ಸಂಸ್ಕೃತಿ, ಸಂಗೀತದ ಪುನರುಜ್ಜೀವನಗೊಳಿಸುವಲ್ಲಿ ಪ್ರಾಂಜ್ವಲ ಮನಸ್ಸಿನಿಂದ ಕಾರ್ಯ ಮಾಡುತ್ತಿರುವ ಮಣ್ಣಿನ ಮಗ ಆಯುರ್ವೇದ ವೈದ್ಯ ಕಲಾವಿದ ನೃತ್ಯಪಟು ಶಿಕ್ಷಣ ಪ್ರೇಮಿ ಕ್ರೀಡಾ ಪ್ರೇಮಿ ಹೀಗೆ ಬಹುಮುಖ ವ್ಯಕ್ತಿತ್ವದ ಡಾ.ಮಿಜಾರು ಗುತ್ತು ಮೋಹನ ಆಳ್ವ.
ಆಳ್ವಾಸ್ ನುಡಿಸಿರಿಯನ್ನು ಸ್ಥಳೀಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ನೆಲದಿಂದ ನೆಲೆಯಿಂದ ಆರಂಭಿಸಿ ಕನ್ನಡದ ಮನಸ್ಸುಗಳನ್ನು ಕನ್ನಡಿಗರ ಜೀವನ ಮೌಲ್ಯಗಳನ್ನು ಒಟ್ಟುಗೂಡಿಸುವ ಕನಸು ಕಾಣುತ್ತಿದ್ದಾರೆ.
ಆಳ್ವಾಸ್ ನುಡಿಸಿರಿಗೆ ಬೀಜಾಂಕುರವಾದುದು 2003ರಲ್ಲಿ. ಅದಾಗ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ. ಆ ಸಮ್ಮೇಳನದಲ್ಲಿ ಸ್ವಾಗತ ಸಮಿತಿಯು ದಣಿವರಿಯದ ಕಾರ್ಯಕರ್ತರಾದ ಡಾ.ಎಂ.ಮೋಹನ ಆಳ್ವರ ಕತೃತ್ವಶಕ್ತಿ,ಅವರಲ್ಲಡಗಿದ್ದ ಕನ್ನಡ ಪ್ರೇಮವನ್ನು , ಸಂಘಟನಾ ಚತುರತೆಯನ್ನು, ಪಾದರಸದಂತಹ ವ್ಯಕ್ತಿತ್ವವನ್ನು ಉಪಯೋಗಿಸಿಕೊಂಡಿತು.ಸಮ್ಮೇಳನವನ್ನು ನ ಭೂತೋ ಎಂಬಂತೆ ಯಶಸ್ವಿಗೊಳಿಸಿದ ಡಾ.ಆಳ್ವರು ತಮ್ಮ ಅನುಭವಗಳನ್ನು "ನುಡಿಸಿರಿ"ಗೆ ಎರಕ ಹೊಯ್ದು ಮುನ್ನಡೆಸುತ್ತಿದ್ದಾರೆ. ಸರಕಾರ , ಸಾಹಿತ್ಯ ಪರಿಷತ್ತು, ಅಕಾಡೆಮಿ, ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಜೊತೆಗೆ ಸರಕಾರದ ಆಡಳಿತ ಯಂತ್ರವೇ ಮಂಡೆಯೂರಿ ಸಮ್ಮೇಳನದಲ್ಲಿ ಭಾಗವಹಿಸಿ ದುಡಿದರೂ ಹಲವಾರು ಲೋಪ - ದೋಷಗಳಾಗುತ್ತವೆ; ಅಂತಹದರಲ್ಲಿ ಭಿನ್ನವಾಗಿ ನುಡಿಸಿರಿ ಸಮ್ಮೇಳನ ಯಶಸ್ವಿಯಾಗುತ್ತಿರುವುದು ಹಲವರಿಗೆ ಯಕ್ಷ ಪ್ರಶ್ನೆಯಾಗಿದೆ.

ದೇಶ ವಿದೇಶಗಳಲ್ಲಿ ಹರಿದು ಹಂಚಿ ಹೋಗಿರುವ ಕನ್ನಡಿಗರನ್ನು ಒಂದೇ ವೇದಿಕೆಯ ಅಡಿಯಲ್ಲಿ ಅವರೆಲ್ಲರನ್ನು ಒಟ್ಟು ಗೂಡಿಸಬೇಕೆಂಬುದು ಆಳ್ವರ ಆಶಯ. ಅಂತಹ ಸದಾಶಯದೊಂದಿಗೆ ನಾಡಿನ ಜಿಲ್ಲೆ ಜಿಲ್ಲೆಗಳಲ್ಲಿ ನುಡಿಸಿರಿ ಘಕದ ಸ್ಥಾಪನೆಯ ಉದ್ದೇಶವನ್ನಿಟ್ಟುಕೊಂಡಿದ್ದಾರೆ.

ಇದೀಗ ಗದಗದತ್ತ...
2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆಯಲಿರುವ ವಿಶ್ವ ನುಡಿಸಿರಿಯ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಆಳ್ವಾಸ್ ನುಡಿಸಿರಿಯ ಘಟಕಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಲುದ್ದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ ಗದಗದಲ್ಲಿ ಆಳ್ವಾಸ್ ನುಡಿಸಿರಿ ಘಟಕದ ಉದ್ಘಾಟನೆ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಸೆ.30ರಂದು ಸಂಜೆ 5.30ಕ್ಕೆ ಗದಗದ ಸ್ವಾಮಿ ವಿವೇಕಾನಂದ ಸಭಾಂಗಣ , ಎ.ಪಿ.ಎಂ.ಸಿ. ಇಲ್ಲಿ ನಡೆಯಲಿದೆ.


ಗದಗ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀಮನ್ನಿರಂಜನ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಕಲ್ಲಯ್ಯಜ್ಜನವರು ಸಾನ್ನಿಧ್ಯವಹಿಸಲಿದ್ದಾರೆ . ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸೇರಿದಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಜಿ ಬಂಡಿ, ಶಾಸಕ ಸಿ.ಸಿ.ಪಾಟೀಲ್, ಶಾಸಕ ಶ್ರೀಶೈಲಪ್ಪ ಬಿದರೂರು, ಶಾಸಕ ರಾಮಪ್ಪ ಎಸ್ ಲಮಾಣಿ, ಎ.ಪಿ.ಎಂ.ಸಿ ಅಧ್ಯಕ್ಷ ಡಿ.ಆರ್.ಪಾಟೀಲ್, ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವರಾಜೇಶ್ವರಿ ಪಾಟೀಲ, ಗದಗ ನಗರಸಭಾಧ್ಯಕ್ಷ ಶಿವಣ್ಣ ಮುಳಗುಂದ್, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇದಾವಣಗೆರೆ, ಧಾರಾವಾಡ, ತುಮುಕೂರು, ಮೈಸೂರು, ಚಿಕ್ಕಮಗಳೂರು, ಮಂಡ್ಯ,ತೀರ್ಥಹಳ್ಳಿ,ಮಂಗಳೂರು, ಕುಂದಾಪುರ, ಪುತ್ತೂರು,ಬಂಟ್ವಾಳ, ಬೆಳ್ತಂಗಡಿ, ಭಾಗಗಳಲ್ಲಿ ಘಟಕ ಸ್ಥಾಪಿಸಿ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗಿದೆ.

ಉದ್ಘಾಟನಾ ಸಮಾರಂಭ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿದೆ.ಸಭಾ ಕಾರ್ಯಕ್ರಮದ ನಂತರ 6ಗಂಟೆಗೆ ಸರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಸಾಂಸ್ಕೃತಿಕ ವೈಭವದ ಮೋದಕ
ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ ನೃತ್ಯ, ದೇವ ವೃದ್ಧರು ಎಂಬ ಕಿರು ನಾಟಕ, ಭರತ ನಾಟ್ಯ - ನವಗ್ರಹ, ಮೋಹಿನಿ ಆಟ್ಟಂ, ಕಥಕ್ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಮಹಿಳಾ ಕಂಸಾಳೆ, ಮಿಮಿಕ್ರಿ, ಮಣಿಪುರಿ ಶಾಸ್ತ್ರೀಯ ನೃತ್ಯ 'ರಾಸಲೀಲ' ಮತ್ತು ಜನಪದ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಣಿಪುರಿ ಡೋಲ್ ಚಲಮ್, ಮಣಿಪುರಿ ಮಾರ್ಷಲ್ ಆರ್ಟ್ಸ್ , ಮಹಾರಾಷ್ಟ್ರದ ಲಾವಣಿ ನೃತ್ಯ, ಬಡಗುತಿಟ್ಟು ಯಕ್ಷಗಾನದ - 'ಶೃಂಗಾರ ವೈಭವ', ತೆಂಕುತಿಟ್ಟು ಯಕ್ಷಗಾನದ - ' ಹನುಮ ಒಡ್ಡೋಲಗ ', ಶ್ರೀಲಂಕಾದ ನವಿಲು ನೃತ್ಯ, ಜನಪದ ವಾದ್ಯ ಝೇಂಕಾರ, ಮಾತನಾಡುವ ಗೊಂಬೆ ಮತ್ತು ಶ್ಯಾಡೋ ಪ್ಲೇ ಪ್ರದರ್ಶನಗೊಳ್ಳಲಿದೆ. ಸುಮಾರು ಮೂರೂವರೆ ಗಂಟೆಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ ವೈಭವ ನೋಡುಗರನ್ನು ನಿಬ್ಬೆರಗಾಗಿಸುವುದರಲ್ಲಿ ಸಂದೇಹವಿಲ್ಲ. ಈ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಅಧ್ಯಕ್ಷತೆ ಡಾ.ಕೆ.ಎಸ್ ನಿಸಾರ್ ಅಹಮದ್, ಉದ್ಘಾಟನೆಗೆ ಅನಂತ ಮೂರ್ತಿ
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಒಂಭತ್ತನೇ ವರುಷದ "ಆಳ್ವಾಸ್ ನುಡಿಸಿರಿ -2012 " ಇದರ ಸರ್ವಾಧ್ಯಕ್ಷತೆಗೆ ಕವಿ, ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ಅವರನ್ನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ನುಡಿಸಿರಿ ಸ್ವಾಗತ ಸಮಿತಿ ಒಮ್ಮತದಿಂದ ಈ ಆಯ್ಕೆ ನಡೆಸಿದೆ .
ಉದ್ಘಾಟನೆಯನ್ನು ನಾಡಿನ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ನಡೆಸಿಕೊಡಲಿದ್ದಾರೆ.
ಈ ಬಾರಿಯ ಆಳ್ವಾಸ್ ನುಡಿಸಿರಿ ನವೆಂಬರ್ 16,17 ಮತ್ತು 18 ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಅಷ್ಟೇ ಅರ್ಥಪೂರ್ಣವಾಗಿ, ಶಿಸ್ತುಬದ್ಧ ರೀತಿಯಲ್ಲಿ ನಡೆಯಲಿದೆ .

ವಿಶೇಷ ಪರಿಕಲ್ಪನೆ
" ಕನ್ನಡ ಮನಸ್ಸು : ಜನಪರ ಚಳುವಳಿಗಳು " ಎಂಬ ಪ್ರಮುಖ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಈ ಬಾರಿಯ ಆಳ್ವಾಸ್ ನುಡಿಸಿರಿ ಮೂಡಿಬರಲಿದೆ. ಮೂರು ವಿಶೇಷ ಉಪನ್ಯಾಸಗಳು, ನಾಲ್ಕು ಕಥಾ ಸಮಯ, 9 ಕವಿಸಮಯ ಕವಿನಮನ, 3 ಸಂಸ್ಮರಣಾ ಗೋಷ್ಠಿಗಳು, ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ, ವಿಶೇಷ ಸನ್ಮಾನ ಕಾರ್ಯಕ್ರಮ, ಸಮಾನಾಂತರ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 16ರಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಉದ್ಘಾಟನೆ ನಡೆಯಲಿದೆ.

ಶತಾಯುಷಿಗೆ ವಿಶೇಷ ಗೌರವ
ಕನ್ನಡ ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿರುವ, ವಿದ್ವಾಂಸ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯಾಧ್ಯಯನದಲ್ಲಿ ಸಾಧನೆ ಮೆರೆದ ಶತಾಯುಷಿ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರನ್ನು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ರೀತಿಯಲ್ಲಿ ಗೌರವಿಸಿ ಸನ್ಮಾನಿಸಲಾಗುವುದು. 2007ರಲ್ಲಿ ನಡೆದ ನಾಲ್ಕನೇ ವರುಷದ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷತೆಯನ್ನು ವೆಂಕಟ ಸುಬ್ಬಯ್ಯರವರು ವಹಿಸಿದ್ದರು.

ದಶಕದ ಸಂಭ್ರಮ
ಮುಂದಿನ ವರುಷ ಆಳ್ವಾಸ್ ನುಡಿಸಿರಿಗೆ ದಶಕದ ಸಂಭ್ರಮ. ಈ ಹಿನ್ನಲೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಅತ್ಯಂತ ಮಹತ್ವಪೂರ್ಣವಾಗಿದೆ. ದಶಕದ ಸಂಭ್ರಮದ ನುಡಿಸಿರಿಯನ್ನು ವಿಶ್ವಮಟ್ಟದಲ್ಲಿ ನಡೆಸಲುದ್ದೇಶಿಸಲಾಗಿದ್ದು, ಅದರ ಪೂರ್ವಭಾವಿಯಾಗಿ ಈ ಬಾರಿಯ ನುಡಿಸಿರಿಯಿಂದಲೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕಗಳನ್ನು ರಚಿಸಿ ಆ ಮೂಲಕ ಜನತೆಯಲ್ಲಿ ನುಡಿಸಿರಿಯ ಸ್ಪಷ್ಟ ಕಲ್ಪನೆ ಮೂಡುವಂತಹ ಕಾರ್ಯಕ್ರಮ ರೂಪಿಸಲಾಗಿದೆ.

ಪ್ರತಿನಿಧಿಗಳಾಗಿ ಬನ್ನಿ
ಯುವ ಜನತೆಯಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗೆಗಿನ ಆಸಕ್ತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಈ ಬಾರಿಯೂ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ನಾಡು, ಹೊರನಾಡು, ಹೊರ ರಾಜ್ಯಗಳಿಂದ ಆಳ್ವಾಸ್ ನುಡಿಸಿರಿಗೆ ಪ್ರತಿನಿಧಿಗಳಾಗಿ ಸಾಹಿತ್ಯಾಸಕ್ತರು ಆಗಮಿಸಬೇಕು. ಪ್ರತಿನಿಧಿಗಳಾಗುವವರು ರು.100ನ್ನು ಕಾರ್ಯಾಧ್ಯಕ್ಷರು, ಆಳ್ವಾಸ್ ನುಡಿಸಿರಿ ಹೆಸರಿನಲ್ಲಿ ಎಂ.ಒ, ಡಿ.ಡಿ. ಮೂಲಕ ಸಲ್ಲಿಸಬಹುದು. ಪ್ರತಿನಿಧಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಆಳ್ವಾಸ್ ನುಡಿಸಿರಿಯಲ್ಲಿ ಪ್ರತಿನಿಧಿಗಳಾಗ ಬಯಸುವವರು ದೂರವಾಣಿ ಸಂಖ್ಯೆ 08258 - 238104, 105,106 ಸಂಪರ್ಕಿಸಿ ನುಡಿಸಿರಿ ಕಚೇರಿ ವ್ಯವಸ್ಥಾಪಕರಲ್ಲಿ ನೋಂದಾಯಿಸಬಹುದಾಗಿದೆ.
0 comments:

Post a Comment