ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:33 PM

ತೀರದ ತೆರೆ

Posted by ekanasu

ಸಾಹಿತ್ಯ : ಡಾ.ಧನಂಜಯ ಕುಂಬ್ಳೆ
ರಾಮೇಶ್ವರದ ಕಡಲ ತೀರದಲ್ಲಿ ಒಂದು ಸಂಜೆ. ಉಸಿರು ಮಾತಾಡುವಷ್ಟು ಹತ್ತಿರ ಕುಳಿತು ರಾಮ ಮತ್ತು ಸೀತೆ ಆಕಾಶ ಮತ್ತು ಕಡಲನ್ನು ಕಣ್ದುಂಬಿಕೊಳ್ಳುತ್ತಿದ್ದರು. ತೆರೆಗಳ ನೊರೆ ಅವರಿಬ್ಬರ ಪಾದ ತೊಳೆದು ಖುಷಿಯಿಂದ ಮತ್ತೆ ಕಡಲೊಡಲನ್ನು ಸೇರಿಕೊಳ್ಳುತ್ತಿತ್ತು.
ಸೀತೆಗೆ ಬಾಲ್ಯದ ನೆನಪಾಯಿತು.


ಗೆಳತಿಯರೆಲ್ಲಾ ಜತೆಗೂಡಿ ತೀರದ ಮರಳಲ್ಲಿ, ನೀರ ನೊರೆಯಲ್ಲಿ ಚೆಲ್ಲಾಟವಾಡುತ್ತಿದ್ದ, ಸೂರ್ಯ ಮುಳುಗುವುದನ್ನು ಹಾಗೇ ಆಸ್ವಾದಿಸುತ್ತಾ ಇದ್ದ ನೆನಪು ಒತ್ತರಿಸಿತು. ಉತ್ಸಾಹದಿಂದ ಎದ್ದವಳೇ ಅಲ್ಲೇ ಹತ್ತಿರ ಬಿದ್ದಿದ್ದ ಕೋಲನ್ನು ಎತ್ತಿಕೊಂಡು ಮರಳಿನಲ್ಲಿ 'ಜೈ ಶ್ರೀ ರಾಂ' ಎಂದು ಬರೆದಳು. ಅಬ್ಬರಿಸಿಕೊಂಡು ಬಂದ ನೀರ ತೆರೆ ಅದನ್ನು ಒರೆಸಿತು. ಮತ್ತೆ ಇನ್ನೊಂದಷ್ಟು ಮೇಲೆ ಬರೆದಳು. ತೆರೆ ಹಠವೆಂಬಂತೆ ಮತ್ತೆ ಮರಳನ್ನು ಹೊಸಬರಹಕ್ಕೆ ಅಣಿಗೊಳಿಸಿತು.


ಬಾಲ್ಯದಲ್ಲಿ ಹೀಗಾದಾಗಲೆಲ್ಲಾ ಚಪ್ಪಾಳೆ ತಟ್ಟಿ ಕುಣಿದು ಸಂಭ್ರಮಿಸುತ್ತಿದ್ದ ಸೀತೆಗೆ ಈಗ ಮಾತ್ರ ಸಿಟ್ಟು ಬರತೊಡಗಿತು.
ಕಡಲಿಗೆ ಶ್ರೀರಾಮಚಂದ್ರನ ಬಗೆಗೆ ಅಷ್ಟೂ ಗೌರವ ಬೇಡವೇ? ಮುನಿಸಿಕೊಂಡಳು. ಸಿಟ್ಟಲ್ಲಿ ತನ್ನ ಚಪ್ಪಲಿಯನ್ನು ತೆಗೆದು ಸಮುದ್ರಕ್ಕೆ ಎಸೆದಳು.

ಇದನ್ನೆಲ್ಲಾ ದೂರದ ಮರಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದ ರಾಮ ಎದ್ದವನೇ ನೀರಿಗಿಳಿದು ತೆರೆಗಳಲ್ಲಿ ತೇಲಿಬಂದ ಚಪ್ಪಲಿಯನ್ನು ಹಿಡಿದು ಸೀತೆಯ ಕಾಲ ಬಳಿಯಿಟ್ಟು ನಕ್ಕ.
'ಇದು ಸರಿಯಾ..?' ಸೀತೆ ಮುಖವೂದಿಸುತ್ತಾ ಕೇಳಿದಳು.
'ಯಾವುದು..?'
'ಸಮುದ್ರರಾಜನಿಗೆ ನಿಮ್ಮ ಮೇಲೆ ಒಂದಿಷ್ಟು ಗೌರವವಿಲ್ಲ...?!!'
'ಯಾರೆಂದರು..? ನಾನೇ ಕರಗಿ ಕಡಲಾಗುತ್ತಿದ್ದೇನೆ ಅಷ್ಟೇ. ನೀನೂ ನನ್ನ ಜತೆ ಬಾ' ಎನ್ನುತ್ತಾ ಸೀತೆ ಎಸೆದಿದ್ದ ಕೋಲನ್ನೆತ್ತಿ ರಾಮ ಮರಳಲ್ಲಿ ಬರೆಯತೊಡಗಿದ.
ಸೀತಾ.... ಸೀತಾ...
ತೆರೆ ಮತ್ತಷ್ಟು ಖುಷಿಯಿಂದ ಅದನ್ನು ಒರೆಸಿತು. ಸೀತಾರಾಮರು ಕಣ್ಣಾಕಣ್ಣಿಯಾದರು. ಒಬ್ಬರೊಳಗೆ ಇನ್ನೊಬ್ಬರು ಕರಗಿ ಕಡಲಾದರು.

0 comments:

Post a Comment