ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ : ಅನು ಬೆಳ್ಳೆ

ದೈನಂದಿನ ಕಾದಂಬರಿ : ಭಾಗ - 21 :ಅಧ್ಯಾಯ 7

ಮನಸ್ವಿತಾ ಮನೆಯಲ್ಲಿ ಮಾತು ಬಿಟ್ಟ ನಂತರ ಶ್ರೀನಿವಾಸರಾಗಲಿ, ಭಾಮಿನಿಯವರಾಗಲಿ ಅವಳನ್ನು ಯಾವುದಕ್ಕೂ ಕೇಳುತ್ತಿರಲಿಲ್ಲ. ಯಾಂತ್ರಿಕವಾಗಿ ಕೆಲಸಗಳು ಸಾಗುತ್ತಿದ್ದವು. ಕೆಲವೊಮ್ಮೆ ತಾವೇ ಕೆದಕಿ ಮಾತಿಗೆ ನಿಂತರೂ ಅವಳು ಮೌನವಾಗಿಯೇ ಇದ್ದು ಬಿಡುತ್ತಿದ್ದಳು.
ಎಂದಿನಂತೆ ನರಸಿಂಹ ವಾರದ ಕೊನೆಗೆ ಬಂದವನು ಸುಖ, ಕಷ್ಟ ಮಾತನಾಡಿದ ಮೇಲೆ ಒಂದು ಸಂಬಂಧದ ವಿಷಯವನ್ನು ಮೆಲ್ಲನೆ ಭಾಮಿನಿಯವರ ಮುಂದೆ ಬಿಚ್ಚಿಟ್ಟ. ಅವರಾದರೂ ಅವನಿಗೆ ಸಮ್ಮತಿಸಲೂ ಆಗದೆ, ಸುಮ್ಮನೆಯೂ ಇರಲಾರದೆ ಚಡಪಡಿಸಿದರು.


ಹುಡುಗ ಒಳ್ಳೆ ವಿದ್ಯಾವಂತನೆ. ಅಮೆರಿಕಾದಲ್ಲಿಯೇ ಸೆಟಲ್ ಆಗಿಬಿಟ್ಟಿದ್ದಾನೆ. ಮದುವೆಯಾಗೋ ಹುಡುಗಿಗೂ ಅಲ್ಲೇ ನೆಲಸುವ ಉದ್ದೇಶವಿದ್ದರೆ ಮಾತ್ರ ಪ್ರಪೋಸಲ್ ನೋಡಿ ಅಂದಿದ್ದಾನೆ. ನಮ್ಮ ಮನಸ್ವಿತಾ ಒಳ್ಳೆಯ ಉದ್ಯೋಗದಲ್ಲಿ ಬೇರೆ ಇದ್ದಾಳೆ. ರೂಪದಲ್ಲಿಯೂ ಯಾರಿಗಿಂತಲೂ ಕಡಿಮೆಯಿಲ್ಲ. ಈ ಸಂಬಂಧ ನೂರಕ್ಕೆ ನೂರು ಶೇಕಡಾ ಕುದುರುತ್ತೆ. ಒಮ್ಮೆ ಪ್ರಯತ್ನಿಸಬಹುದಲ್ವಾ?
ನರಸಿಂಹ ಜೋಳಿಗೆಗೆ ಕೈ ತೂರಿಸಿ ಕನ್ನಡಕ ತೆಗೆದು ಅತ್ತಿತ್ತ ಕಳ್ಳನೋಟ ಬೀರಿ ಮನಸ್ವಿತಾಳೇನಾದರೂ ಈ ವಿಷಯ ಕೇಳಿಕೊಂಡಳೇ ಅನ್ನುವ ಅನುಮಾನದಿಂದ ನೋಡಿದ.

ನೀವು ಹೇಳೋದೇನೋ ಸರಿ. ಆದ್ರೆ ಅವಳಿಗೆ ಯಾವ ಸಂಬಂಧನೂ ಇಷ್ಟವಾಗೋದಿಲ್ವೆ. ಸ್ವಲ್ಪ ಹೊತ್ತು ಆಲೋಚಿಸಿದವರೆ, ಆಗ್ಲಿ, ಇವರು ಏನು ಹೇಳ್ತಾರೊ ನೋಡೋಣ. ನೀವು ಹೀಗೆ ಜಗಜ್ಜಾಹೀರಾಗಿ ಸಂಬಂಧಗಳ ಬಗ್ಗೆ ಮಾತಾಡಿದ್ರೆ ಅವಳು ಸುಮ್ನಿರೋದಿಲ್ಲ. ನಿಮಗೆ ಅವಳ ಸ್ವಭಾವ ಗೊತ್ತೆ ಇದೆಯಲ್ವಾ? ಅಂದಾಗ ನರಸಿಂಹ ಮತ್ತೊಮ್ಮೆ ಬಾಗಿಲಿನ ಕಡೆಗೆ ನೋಡಿದ.

ಮನಸ್ವಿತಾ ಅದೇ ಹೊತ್ತಿಗೆ ಹೆರಳು ಬಿಡಿಸಿಕೊಂಡು ಅಲ್ಲಿಗೆ ಬಂದು ನಿಂತಳು. ನರಸಿಂಹನನ್ನು ನೋಡುತ್ತಲೇ, ಏನು ಶಾಸ್ತ್ರಿಗಳೇ ಇತ್ತ ಕಡೆಗೆ ಬಂದಿರುವಿರಿ? ಸಹಜವಾಗಿತ್ತು ಅವಳ ಪ್ರಶ್ನೆ. ನರಸಿಂಹ ಮುಖದ ಮೇಲೊಡೆದ ಬೆವರ ಹನಿಗಳನ್ನು ಕೈಯಲ್ಲಿದ್ದ ಶಾಲ್ನಿಂದ ಒರೆಸಿಕೊಂಡು ನಕ್ಕ.
ಹೀಗೆ ಪೇಟೆಗೆ ಹೋಗಿದ್ದೋನು ಬಂದೆ. ನಿಮ್ಮಪ್ಪ ಏನಾದ್ರೂ ಬೇಗನೆ ಮನೆಗೆ ಬಂದಿದ್ದಾನೊ ಅಂದುಕೊಂಡೆ. ಅವನು ಸಮಯ ಪ್ರಜ್ಞೆ ಅಂದ್ರೆ ಸಮಯ ಪ್ರಜ್ಞೆ. ಐದು ನಿಮಿಷ ಲೇಟ್ ಅಥವಾ ಬೇಗ ಅಂಗಡಿಗೆ ಬಾಗಿಲು ಹಾಕಲಾರ. ಅವನನ್ನು ಕಂಡು ತುಂಬಾ ದಿನ ಆಗೋಯ್ತು. ಮಾತಾಡಿಸಿಕೊಂಡು ಹೋಗ್ತೀನಿ ಅಂದವನೇ ಎದ್ದು ನಿಂತಾಗ ಮನಸ್ವಿತಾ ತಡೆದಳು.

ಅದೇನು ಅಷ್ಟು ಆತುರ? ಕಾಫಿನೊ, ಚಾನೊ ಏನಾದರೂ ಮುಗಿಸಿಕೊಂಡು ಹೋಗಿ ಅಂದು ಭಾಮಿನಿಯವರ ಮುಖ ನೋಡಿದಾಗ ಅವರು ಎದ್ದು ಅಡುಗೆ ಮನೆಗೆ ಹೊರಟವರೆ, ಶಾಸ್ತ್ರಿಗಳೇ ಕೂತಿರಿ. ಒಂದೈದು ನಿಮಿಷದಲ್ಲಿ ಬರ್ತೀನಿ ಎಂದು ಹೊರಟರು.
ಮಗಳು ತನ್ನ ಬಳಿ ಚಕಾರವೆತ್ತದೆ ಬಂದ ಅತಿಥಿಗಳನ್ನು ಬಾಯ್ತುಂಬ ಮಾತನಾಡಿಸುವುದು ಅವರಿಗೆ ಸಂತಸವಾದರೂ ಅವಳಿಗೆ ತಮ್ಮ ಮೇಲಿನ ಕೋಪಕ್ಕೆ ಸರಿಯಾದ ಕಾರಣ ತಿಳಿಯದೆ ಬೇಸರ ಪಟ್ಟಿದ್ದರು.

ಈ ಹಿಂದೆ ಇದೇ ನರಸಿಂಹನನ್ನು ಚೆನ್ನಾಗಿ ಬೈದು, ಸಂಬಂಧಗಳ ಬಗ್ಗೆ ಮಾತನಾಡಬಾರದಂತೆ ತಾಕೀತು ಕೂಡ ಮಾಡಿದ್ದಳು. ನರಸಿಂಹ ನಿರಾಕರಿಸಲಾರದೆ ಎದ್ದು ಹೊರಟವನು ಹಾಗೆಯೇ ಬಂದು ಕುರ್ಚಿಯ ಮೇಲೆ ಕುಳಿತ. ಅವಳ ಆಫೀಸಿನ ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣವೆಂದರೆ ಅವಳ ಸ್ವಭಾವದ ಕಹಿ ಅನುಭವವಾಗಿದ್ದವನು ಸಂಕೋಚದಿಂದಲೇ ಕುಳಿತಿದ್ದ.
ಹೇಗಿದೆ ವ್ಯವಹಾರ, ಮತ್ತೇನಾದರೂ ಸಂಬಂಧಗಳು ಕುದುರಿದವೆ? ಅವನನ್ನು ಮಾತನಾಡಿಸಲಾರದೆ ಕುಹಕದ ಮಾತುಗಳನ್ನು ಆಡಿದಾಗ ಅವನಿಗೆ ಸ್ಪಷ್ಟವಾಗಿತ್ತು. ಏನೂ ಉತ್ತರಿಸಲಾರದೆ 'ಹೆ... ಹೆ... ಹಿ... ಅಂದು ಹಲ್ಲುಗಳನ್ನು ಪ್ರದರ್ಶಿಸಿ ಕುತ್ತಿಗೆ ಕೆಳಗಿಳಿಸಿದ.

ಅಲ್ಲ ಶಾಸ್ತ್ರಿಗಳೆ, ಇದರಲ್ಲಿ ನಗೋದೇನು ಬಂತು? ನಿಮ್ಮ ವ್ಯವಹಾರ ಹೇಗಿದೆ ಅಂದೆ ಅಂದಾಗ ಆತನ ಮುಖ ಗಂಭೀರವಾಗಿ, ಇದೆ ನಡಿತಾ ಇದೆ ಅಂದ.
ತಾನು ಹೊತ್ತು ತಂದ ಅಮೆರಿಕಾದ ಹುಡುಗನ ವಿಷಯ ಹೇಳಲೊ, ಬೇಡವೊ ಅನ್ನುವ ಜಿಜ್ಞಾಸೆಯೂ ಇತ್ತು. ಆದರೆ ಕೋಲು ಕೊಟ್ಟು ಪೆಟ್ಟು ತಿನ್ನುವುದು ರುಚಿಯಲ್ಲವೆಂದುಕೊಂಡು ಸುಮ್ಮನಾದ.
ಭಾಮಿನಿಯವರು ಎರಡು ಲೋಟಗಳಲ್ಲಿ ಚಹಾ ತಂದು ಟೀಪಾಯಿಯ ಮೇಲೆ ಇಟ್ಟಾಗ ಮನಸ್ವಿತಾಳೇ, ತಗೊಳ್ಳಿ ಅಂದಳು. ಆತ ಅದನ್ನು ಅಳುಕಿನಿಂದಲೇ ತೆಗೆದುಕೊಂಡ.

ಶಾಸ್ತ್ರಿಗಳೇ, ಆ ದಿನ ನಾನೇನೊ ಅಂದು ಬಿಟ್ಟೇಂತ ನೀವು ಊರಿಡೀ ಏನೇನೊ ಹೇಳಿಕೊಂಡು ಬಂದ್ರಿ. ಒಂದು ಹೆಣ್ಣು ತಲೆ ಎತ್ತದ ಹಾಗೆ ಮಾಡೊದಿಕ್ಕೂ ನಿಮಗೆ ಕಮಿಷನ್ ಸಿಗುತ್ತಾ ಹೇಗೆ?
ಬಿಸಿ ಚಹಾ ನರಸಿಂಹರ ನಾಲಗೆಯನ್ನು ಸುಟ್ಟಿತು. ಭಾಮಿನಿಯವರು ಅಲ್ಲಿ ನಿಲ್ಲಲಾರದೆ ಖಾಲಿ ತಟ್ಟೆಯನ್ನು ಹಿಡಿದುಕೊಂಡು ಹಿಂದಕ್ಕೆ ತಿರುಗಿದರು.
ಯಾವ... ಯಾವ... ವಿಷಯ? ತೊದಲಿದ ನರಸಿಂಹ ಬಿಸಿ ಲೋಟವನ್ನು ಹಾಗೆಯೇ ಟಿಪಾಯಿಯ ಮೇಲಿಟ್ಟ.

ಬಿಸಿ ಜೋರಾಗಿದೆಯಾ. ಇನ್ನೊಂದು ಲೋಟ ಬೇಕೇನು? ಅವನನ್ನು ಗಮನಿಸಿದವಳೇ ಅಂದಾಗ ನರಸಿಂಹ ಬೇಡವೆನ್ನುವಂತೆ ತಲೆಯಾಡಿಸಿ ಮತ್ತೆ ಬಿಸಿ ಲೋಟವನ್ನು ತೆಗೆದುಕೊಂಡ.
ನಿಮ್ಮ ದೃಷ್ಟಿಯಲ್ಲಿ ಒಂದು ಹೆಣ್ಣು ಹೊರಗೆ ಹೋಗಿ ದುಡಿದ್ರೆ... ಅವಳನ್ನು ನೀವು ಅರ್ಥೈಸಿಕೊಳ್ಳುವ ರೀತಿಯೇ ಬೇರೆ. ನೀವು ತಂದ ಸಂಬಂಧವನ್ನು ನಿರಾಕರಿಸ್ದೇಂತ ನೀವು ನನಗೆ ಆಫೀಸಿನಲ್ಲಿ ಯಾರದೋ ಜೊತೆಗೆ ಸಂಬಂಧವಿದೇಂತ ಢಂಗುರ ಸಾರಿಸಿಕೊಂಡು ಬಂದ್ರಿ. ಇದ್ರಿಂದ ನಂಗೇನು ನಷ್ಟ ಆಗ್ಲಿಲ್ಲ. ಮತ್ತು ನಾನದನ್ನು ಕ್ಯಾರ್ ಮಾಡುವವಳು ಅಲ್ಲ. ಯಾಕೆ ಗೊತ್ತಾ? ನಾನು ಏನು ಅನ್ನುವುದು ನನಗೆ ಗೊತ್ತು. ಕಾಲ ಹಿಂದಿನ ಹಾಗೆ ಇಲ್ಲ. ನಾವು ಹೆಣ್ಣುಗಳು ಸ್ವತಂತ್ರವಾಗಿರೋದಕ್ಕೆ ಬಯಸ್ತೇವೆ.

ಇಂತಹ ಕ್ಷುಲಕ ವಿಷಯಗಳನ್ನು ಹರಡೋದ್ರಿಂದ ನಿಮಗೇನು ಲಾಭ ಇಲ್ಲ. ಸರಿ, ಈಗ ನೀವು ಏನೇನೊ ಹೇಳಿಕೊಂಡು ಬಂದ್ರಲ್ಲಾ... ನಿಮಗೇನು ಲಾಭ ಆಯ್ತು ಅದರಿಂದ?
ಅವಳ ಮುಖದಲ್ಲಿ ನೋವಿನ ಛಾಯೆ ದೃಷ್ಟಿಸಿದವನು ತಪ್ಪಿತಸ್ಥನಂತೆ ಚಾಹದ ಲೋಟ ಹಿಡಿದು ಕುಳಿತಿದ್ದ. ಅದೆಷ್ಟೊ ಕನ್ಯಾಮಣಿಗಳಿಗೆ ಗಂಡು ನೋಡಿ ಮದುವೆ ಮಾಡಿಸಿದ ಪುಣ್ಯ ತನಗಿತ್ತಲ್ಲ ಅಂದುಕೊಂಡಿದ್ದವನ ಪುಣ್ಯಗಳೆಲ್ಲಾ ನೀರಲ್ಲಿ ಹೋಮ ಮಾಡಿದಂತೆ ಆಗಿತ್ತು.

... ಮುಂದುವರಿಯುತ್ತಿದೆ...

0 comments:

Post a Comment