ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ: ಶ್ರೇಯಾಂಕ ಎಸ್.ರಾನಡೆ

“A good teacher is like a candle-it consumes itself to light the way for others”.ಎಂದರೆ ಯಾರು ತಮ್ಮ ಬಾಳನ್ನು ಮೇಣದಂತೆ ಕರಗಿಸಿಕೊಂಡು ಮತ್ತೊಬ್ಬರಿಗೆ ಬೆಳಕನ್ನು ನೀಡುತ್ತಾರೋ ಅವರು ನಿಸ್ಸಂಶಯವಾಗಿ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಎನಿಸಿಕೊಳ್ಳುತ್ತಾರೆ. ಶಿಕ್ಷಕರು ತಮ್ಮನ್ನೇ ಸಮರ್ಪಿಸಿಕೊಂಡು ಅದೆಷ್ಟೋ ಅಸಂಖ್ಯಾತ ವಿದ್ಯಾರ್ಥಿಗಳ ಬಾಳನ್ನು ಬೆಳಗುತ್ತಾರೆ. ಇದೊಂದು ಉನ್ನತ ಆದರ್ಶ. ಈ ಮಹತ್ ಕಾರ್ಯ ಸಾಧ್ಯವಾಗುವುದು ಶಿಕ್ಷಕರಿಂದ ಮಾತ್ರ. ಇನ್ನಾರಿಗೂ ಆ ಶಕ್ತಿಯಿಲ್ಲ ಅಥವಾ ಸತ್ವವಿಲ್ಲ. ಅದಕ್ಕೇ ಶಿಕ್ಷಕರಿಗೆ ಅಷ್ಟೊಂದು ಮಹತ್ವವಿರುವುದು. ಪ್ರಾಚೀನ ಕಾಲದಿಂದಲೂ ಶಿಕ್ಷಣ ನೀಡುವ ಗುರುಗಳಿಗೆ ಪೂಜ್ಯನೀಯ ಸ್ಥಾನವಿದೆ. ಅರ್ಥಪೂರ್ಣ ಬದುಕಿನಲ್ಲಿ ಶ್ರೇಯಸ್ಸನ್ನು ಸಾಧಿಸಲು ಮುಂದೆ ಗುರಿ ಎಷ್ಟು ಮುಖ್ಯವೋ, ಹಿಂದೆ ನಿಂತು ಗುರುವೂ ಅಷ್ಟೇ ಮುಖ್ಯ.


ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರ ಪಾತ್ರ ಅಪಾರ. ಮನುಷ್ಯರ ವ್ಯಕ್ತಿತ್ವ ನಿರ್ಮಾಣದ ನಿಜವಾದ ಶಿಲ್ಪಿಗಳು ಎಂದರೆ, ಆ ಮೂಲಕ ಅವರು ದೇಶದ ಭವಿಷ್ಯದ ನಿಜವಾದ ರುವಾರಿಗಳೂ ಅವರೆ. ಜಗತ್ತಿನಲ್ಲಿ ಕೆಟ್ಟ ವಿದ್ಯಾರ್ಥಿಗಳಿರಬಹುದು, ಆದರೆ ಕೆಟ್ಟ ಶಿಕ್ಷಕರಿರುವುದಿಲ್ಲ. ಹಾಗೊಂದು ವೇಳೆ ಕೆಟ್ಟ ಶಿಕ್ಷಕರಿದ್ದಲ್ಲಿ ಅವರು ನಿಜವಾದ ಶಿಕ್ಷಕರೇ ಅಲ್ಲ! ಅಥವಾ ಅಂಥವರು ಶಿಕ್ಷಕ ಎನ್ನುವ ಪದಕ್ಕೆ ಅಪಮಾನ ಮಾಡಿದಂತೆ. ಯಾಕೆಂದರೆ ನಾಗರಿಕ ಸಮಾಜದಲ್ಲಿ ತಪ್ಪು ಮಾಡಿದ/ ತಪ್ಪು ಹಾದಿಯನ್ನು ತುಳಿದ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾದವರು ಅವರೇ. ಮತ್ತು ಆ ನಂಬಿಕೆಯಿರುವುದರಿಂದಲೇ ಎಂದಿಗೂ ಅವರು ಕೆಟ್ಟವರಲ್ಲ ಎಂದೇ ಸಮಾಜ ಪರಿಭಾವಿಸುತ್ತದೆ. ಒಂದು ವೇಳೆ ಅವರೇ ಕೆಟ್ಟವರಾದರೆ ವಿದ್ಯಾರ್ಥಿಗಳು ಹೇಗೆ ತಾನೆ ಉತ್ತಮರಾಗಲು ಸಾಧ್ಯ? ಇದನ್ನೇ ತ್ರಿಪದಿ ಕವಿ ಸರ್ವಜ್ಞ ಪ್ರಸಿದ್ಧ ತ್ರಿಪದಿಯೊಂದರಲ್ಲಿ ಶಿಕ್ಷಕರ, ತಂದೆಯ, ತಾಯಿಯ ಜವಾಬ್ದಾರಿಯನ್ನು ಸರಳವಾಗಿ ವಿವರಿಸುತ್ತಾನೆ.

ಹುಟ್ಟಿದಂದಿನಿಂದ ತಂದೆ ತಾಯಿಯನ್ನು ಪರಿಪಾಲಿಸುವ ಮಕ್ಕಳು ನಂತರದ ದಿನಗಳಲ್ಲಿ ಶಿಕ್ಷಕರ ಮಾತನ್ನು ಪಾಲಿಸುತ್ತಾರೆ. ಇನ್ನು ಮಕ್ಕಳು ಮನೆಯನ್ನು ಬಿಟ್ಟರೆ ಹೆಚ್ಚಿನ ಸಮಯವನ್ನು ಕಳೆಯುವುದು ಶಾಲೆಗಳಲ್ಲಿ, ಇಂತಹ ಸಮಯದಲ್ಲಿ ಅವರು ಕಲಿತು ಮೈಗೂಡಿಸಿಕೊಂಡದ್ದನ್ನೇ ಕೊನೆಯವರೆಗೂ ಪಾಲಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಮಕ್ಕಳು ಏನನ್ನು ಮಾಡುತ್ತಿದ್ದಾರೆ, ಏನನ್ನು ಕಲಿಯುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಶಿಕ್ಷಕರದ್ದು. ವಿದ್ಯಾರ್ಥಿದೆಸೆಯಲ್ಲಿ ಇದು ಬಹಳ ಮುಖ್ಯವಾದ ಘಟ್ಟ. ಈ ಸಂದರ್ಭದಲ್ಲಿ ಕಲಿತ ಸಂಸ್ಕಾರ, ಸದ್ಗುಣಗಳು ಜೀವನದುದ್ದಕ್ಕೂ ದಾರಿದೀಪವಾಗುತ್ತವೆ. ಇದು ಪ್ರಾಥಮಿಕ ಹಂತವಾದರೆ ವಿದ್ಯಾರ್ಥಿಗಳ ಮುಂದಿನ ಪ್ರತೀ ಹಾದಿಯಲ್ಲೂ ಶಿಕ್ಷಕರ ಪಾತ್ರ ಅಪಾರ. ಹಾಗಾಗಿ ಶಿಕ್ಷಕರಿಲ್ಲದಿದ್ದರೆ ವಿದ್ಯಾರ್ಥಿಗಳು ಹೇಗೆ ತಾನೆ ಇರಲು ಸಾಧ್ಯ. (ಏಕಲವ್ಯನಂತವರನ್ನು ಅಪವಾದವಾಗಿ ಸ್ವೀಕರಿಸಿ, ಆದರೂ ಏಕಲವ್ಯನಿಗೆ ದ್ರೋಣರೂ ಗುರುಗಳೇ.) ಹೀಗೆ ಬದುಕಿನ ಪ್ರತೀ ಹಂತದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಶಿಕ್ಷಕರು ದೊರೆಯುತ್ತಾರೆ. ಅಥವಾ ಅವರು ಅವಶ್ಯವಾಗಿ ಬೇಕೇ ಬೇಕು. ಹಾಗಾಗಿ 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ಮಾತನ್ನು ಒಪ್ಪಲೇಬೇಕು.

ಇಂದು ಶಿಕ್ಷಣವೆನ್ನುವುದು ಸೇವೆಯ, ಸಮರ್ಪಣಾ ಮನೋಭಾವದ ಸ್ಥತಿಯಾಗಿ, ಶ್ರೇಷ್ಠವಾದ ಆದರ್ಶವಾಗಿ, ಜ್ಞಾನ ದಾಸೋಹದ ಕೇಂದ್ರವಾಗಿ ಉಳಿದಿಲ್ಲ. ಬದಲಾಗಿ ಸಮಯದ ವೇಗಕ್ಕೆ ಒಗ್ಗಿಕೊಂಡು ಲಾಭದಾಯಕ ಉದ್ದಿಮೆಯಾಗಿ ಮಾರ್ಪಟ್ಟಿದೆ. ಅದಕ್ಕೆ ತಕ್ಕಂತೆ ಶಿಕ್ಷಕರೂ, ಅವರ ಮನೋಧರ್ಮಗಳೂ ಬದಲಾಗತೊಡಗಿವೆ. ಹಿಂದೆಲ್ಲಾ ಶಿಕ್ಷಕರು ಎನ್ನುವುದು ಶ್ರೇಷ್ಠವಾದ ವೃತ್ತಿ, ಅದಕ್ಕಿಂತಲೂ ಮುಖ್ಯವಾಗಿ ಅದೊಂದು ಮನೋಧರ್ಮವಾಗಿದ್ದರೆ; ಇಂದು ಅದೊಂದು ಹೊಟ್ಟೆಪಾಡಿನ ಕೆಲಸವಾಗಿದೆ. ಸಂಬಳಕ್ಕಾಗಿ ಮಾಡುವ ಕೆಲಸವಾಗುವ ಸಂಭವತೆಯನ್ನೂ ತಳ್ಳಿಹಾಕುವಂತಿಲ್ಲ, ತತ್ಪರಿಣಾಮ ಆ ವೃತ್ತಿಯ ಹಿಂದಿನ ಮೌಲ್ಯ ಕಡಿಮೆಯಾಗತೊಡಗಿದೆ.

ಎಲ್ಲರೂ ಎಲ್ಲವೂ ಹಾಗೆ ಬದಲಾಗಿದೆ ಎಂದಲ್ಲ, ಅದರ ಈ ಪರಿವರ್ತನೆಗಳು ಆಗಿರುವುದು ನಿಜ. ಹಣವೇ ಎಲ್ಲವೂ ಆಗಿರುವ ಈ ಸಮಾಜದಲ್ಲಿ ಆದರ್ಶ ಮತ್ತು ಮಾದರಿ ಶಿಕ್ಷಕರಾಗಿದ್ದ ದಿವಂಗತ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ನೆನಪು ಮತ್ತೆ ಮತ್ತೆ ಕಾಡುತ್ತದೆ. ಅವರು ಶಿಕ್ಷಕ ವೃತ್ತಿಗೆ ಸೇರಿದ ಪ್ರಾರಂಭದ ದಿನಗಳವು. ಆಗ ಅವರ ಸಂಬಳ ತಿಂಗಳಿಗೆ ಕೇವಲ 17ರೂಪಾಯಿಗಳು. ಅವರನ್ನೂ ಬಡತನ ಬಾಧಿಸುತ್ತಿದ್ದ ಕಾಲ. ತಟ್ಟೆ ಕೊಳ್ಳುವುದಕ್ಕೂ ದುಡ್ಡಿಲ್ಲದೆ ಬಾಳೆಯ ಎಲೆಯಲ್ಲೇ ಊಟಮಾಡುತ್ತಿದ್ದರು. ಒಂದು ದಿನ ಹೀಗಾಯಿತು: ಅಂದು ಅವರ ಬಳಿ ಬಾಳೆಯ ಎಲೆ ಕೊಳ್ಳಲೂ ದುಡ್ಡಿರಲಿಲ್ಲ ಹಾಗಾಗಿ ಅವರು ನೆಲವನ್ನೇ ಸ್ವಚ್ಛಗೊಳಿಸಿ ಅಲ್ಲೇ ಊಟಮಾಡಿದ ಉದಾಹರಣೆಯಿದೆ. ಅಂತಹ ಸಂದರ್ಭವಿದ್ದರೂ ಸರ್ವಪಳ್ಳಿ ರಾಧಾಕೃಷ್ಣನ್ರವರು ನೆಮ್ಮದಿಯಿಂದ ತಾವು ಶ್ರೇಷ್ಠವೆಂದು ನಂಬಿದ್ದ ಶಿಕ್ಷಕ ವೃತ್ತಿಯನ್ನೇ ಮುಂದುವರೆಸಿದರು. ನಮ್ಮ ಮುಂದೆ ಇಂತಹ ಅದೆಷ್ಟೋ ಉದಾಹರಣೆಗಳು ದೊರೆಯುತ್ತವೆ. ಅಂತವರು ಶಿಕ್ಷಕ ವೃತ್ತಿಯನ್ನು ಕೇವಲ ವೃತ್ತಿಯನ್ನಾಗಿ ನೋಡದೆ ಅದನ್ನು ತಮ್ಮ ಉಸಿರನ್ನಾಗಿ ನೋಡಿದ್ದಾರೆ. ಅದು ಅವರ ಜೀವನಧರ್ಮವಾಗಿಯೂ ಘನೀಕರಿಸಿದೆ. ಕೇವಲ ಸರ್ಕಾರಿ ಶಾಲೆಯ ಮಕ್ಕಳು ಎಂಬ ಕಾರಣಕ್ಕಾಗಿ ಅವರ ಮೆಲೆ ದೌರ್ಜನ್ಯವೆಸಗುವಂತಹ ಶಿಕ್ಷಕರಿಗೆ., ತಿದ್ದುವ ಹೆಸರಲ್ಲಿ ಶಿಕ್ಷಿಸುವವರಿಗೆ ಮತ್ತು ಆದ್ಯಂತಿಕವಾಗಿ ಹಣಕ್ಕಾಗಿ ಶಿಕ್ಷಣವನ್ನೂ, ತಮ್ಮನ್ನೂ ಮಾರಿಕೊಳ್ಳುವವರಿಗೆ ಇದೆಲ್ಲಾ ಎಲ್ಲಿ ತಾನೆ ಅರ್ಥವಾಗಬೇಕು. ನಮ್ಮ ಮುಂದಿರುವ ಅನೇಕ ಸಂಪತ್ಸಹಿತವಾದ ದಿವ್ಯ ಚೇತನಗಳು ಇವರಿಗೆಲ್ಲಾ ಮಾದರಿಯಾಗಲಿ.

ಒಂದು ಕಾಲದಲ್ಲಿ ಗುರು ಶಿಷ್ಯ ಸಂಬಂಧವೆನ್ನುವುದು ಅತ್ಯಂತ ಉನ್ನತವಾದ ಸಂಬಂಧ ಮತ್ತು ಪರಂಪರೆಯಾಗಿತ್ತು. ಆದರೆ ಇಂದು ಪರಿಸ್ಥಿತಿ ಹಿಂದೆಂದಿಗಿಂತ ಭಿನ್ನವಾಗಿದೆ. ಗುರುಗಳೆಂದರೆ 'ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಾ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಶ್ರೀ ಗುರುವೇನ್ನಮಃ' ಎಂದು ಹಾಡಿ ಹೊಗಳಿ ಪೂಜಿಸಿದ ಶಿಷ್ಯವರ್ಗವೇ ಇಂದು ತಮ್ಮ ಶಿಕ್ಷಕರ ಬಗ್ಗೆ ಏಕವಚನದಲ್ಲಿ ಕರೆಯುವುದು, ಅವರ ಬಗ್ಗೆ ಹಿಂದಿನಿಂದ ತಮಾಷೆ ಮಾಡುವುದು, ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಅವೆಲ್ಲಕ್ಕಿಂತ ಹೀನವಾಗಿ ತಮ್ಮ ಗುರುಗಳ ಬಗ್ಗೆ ಮತ್ತು ಒಟ್ಟಾರೆ ಶಿಕ್ಷಕರ ಬಗ್ಗೆ ಅಶ್ಲೀಲವಾದ ಹಾಗೂ ಅವರನ್ನೇ ಮೂರ್ಖರಂತೆ ಬಿಂಬಿಸುವ ರೀತಿಯಲ್ಲಿ ಜೋಕ್ಗಳ ಎಸ್.ಎಂ.ಎಸ್. ಮಾಡುವುದು.... ಹೀಗೆ ಅನೇಕಾನೇಕ ಹೆಸರಿಸಲಾಗದ ಮನೋವಿಕಾರಗಳನ್ನು ವಿದ್ಯಾರ್ಥಿಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡುತ್ತಿದ್ದಾರೆ.

ಈ ಮನೋವಿಕಾರಗಳನ್ನು ತಿದ್ದುವವರು ಯಾರು. ಇನ್ನು ಪವಿತ್ರವಾದ ಗುರು-ಶಿಷ್ಯ ಸಂಬಂಧ ಅನಾಗರೀಕರ ಬಾಯಲ್ಲಿ 'ಬಕೆಟ್' ಎಂಬ ಆಧುನಿಕ ಪದವಾಚಿಕೆಯನ್ನು ಪಡೆದುಕೊಂಡಿದೆ. ಪ್ರಾಯಶಃ ಇಂತವರಿಗೆಲ್ಲಾ ಒಳ್ಳೆಯ ಶಿಕ್ಷಣದ ಕೊರತೆಯಿಂದಲೋ ಅಥವಾ ಹೇಳಿದ್ದನ್ನೇ ಕೇಳದ ಮನಸ್ಥಿತಿಯಿಂದಲೋ ಇಂತಹ ಘಟನೆಗಳು ಜರುಗುತ್ತಿರಬಹುದು. ಇಂತಹ ವಿಕಾರಗಳಿಗೆಲ್ಲಾ, ಸಂಕಲ್ಪ ಹಿಂಸೆಗಳೆಗೆಲ್ಲಾ ಇಂದಾದರೂ ಕೊನೆ ಹಾಡದಿದ್ದಲ್ಲಿ ವಿದ್ಯಾರ್ಥಿಯಾಗಿ ಫಲವೇನು??

ಮುಖ್ಯವಾಗಿ ಎಷ್ಟೇ ಉನ್ನತ ಹುದ್ದೆಯನ್ನು ಏರಿದರೂ ಎಂದಿಗೂ ಶಿಕ್ಷಕರೆಂದೇ ಕರೆಸಿಕೊಳ್ಳಲು ಇಚ್ಛಿಸುತ್ತಿದ್ದ ಭಾರತ ರತ್ನ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯನ್ನೇ ಶಿಕ್ಷಕರ ದಿನವನ್ನಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಶಿಕ್ಷಕರ ದಿನಾಚರಣೆಯೆನ್ನುವುದು ಉಳಿದ ಕೆಲವಾರು ದಿನಾಚರಣೆಯಂತೆ ಬೂಟಾಟಿಕೆಯ ದಿನಾಚರಣೆಯಾಗಿಯೋ, ಅಥವಾ ಅರ್ಥವಿಲ್ಲದ ದಿನಾಚರಣೆಯಾಗಿಯೋ, ಅಥವಾ ಅದನ್ನು ಇನ್ನಿಲ್ಲದಂತೆ ವಿಜೃಂಭಿಸಿ, ಆ ದಿನದಂದು ಶಿಕ್ಷಕರನ್ನು ಇನ್ನಿಲ್ಲದಂತೆ ಹಾಡಿಹೊಗಳಿ ಅಟ್ಟಕ್ಕೇರಿಸಿ ಹೊನ್ನಶೂಲಕ್ಕೇರಿಸುವ ಅಪಾಯದ ದಿನವಾಗಿಯೋ, ಅಥವಾ ಇಂದಿನ ದಿನ ಅವರನ್ನು ಸಾಕ್ಷಾತ್ ದೇವರ ಸ್ವರೂಪದಂತೆ ಕಂಡು ಪೂಜಿಸಿ ಉಳಿದ ದಿನಗಳಂದು ಭಯ, ಭಕ್ತಿ, ಗೌರವವಿಲ್ಲದೆ ದೆವ್ವಗಳಂತೆ ಕಾಣುವ ನಾಟಕೀಯ ದಿನಾಚರಣೆ ಇದಾಗದಿರಲಿ. ಅದಕ್ಕೆ ಬದಲಾಗಿ ತಮ್ಮ ಬಾಳನ್ನೇ ವಿದ್ಯಾರ್ಥಿಗಳ ಏಳ್ಗೆಗಾಗಿ ಸಮರ್ಪಿಸುವ ಶಿಕ್ಷಕರನ್ನು ನೆನೆಯುವ, ಅವರ ಸಾಧನೆಗಳನ್ನು, ನಮಗಾಗಿ ಮಾಡಿದ ಸೇವೆಯನ್ನು ಮೆಲುಕು ಹಾಕುವ ಮೂಲಕ ಅವರನ್ನು ದೈನ್ಯದಿಂದ ಸ್ಮರಿಸುವ ದಿನ ಇಂದಾಗಲಿ.

ಅವರ ನೋವು-ನಲಿವುಗಳನ್ನು, ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುವ ಮೂಲಕ, ಅವರೊಂದಿಗೆ ಕೆಲಕಾಲ ಕಲೆತು ಅವರು ಏನನ್ನು ಬೊಧಿಸಿದ್ದಾರೆ? ಇಂದು ನಾವೇನಾಗಿದ್ದೇವೆ? ಎಂಬುದರ ಅವಲೋಕನ ಜೊತೆಗಿರಲಿ. ಸಾಧ್ಯವಾದರೆ ಶಿಕ್ಷಕರಿಗೊಂದು ಆತ್ಮೀಯವಾದ ಹಾಗು ಮುಕ್ತವಾದ ಪತ್ರವನ್ನು ಬರೆದರೆ ಅದರಿಂದ ಏನೋ ಒಂದಂನ್ನು ಪಡೆದುಕೊಂಡ ಅನುಭವವಾಗುತ್ತದೆ ಅದಕ್ಕಿಂತಲೂ ಪ್ರಮುಖವಾಗಿ ಶಿಕ್ಷಕರ ಮೇಲಿನ ನಲ್ಮೆಯ ಅಭಿಮಾನವನ್ನು ಕೇವಲ ಈ ದಿನಕ್ಕೆ ಸೀಮಿತಗೊಳಿಸದೆ ಅದು ಅನುದಿನವೂ ಅಂತರಾಳದ ಸ್ಮೃತಿಪಟಲದಲ್ಲಿ, ಆತ್ಮದ ಚೈತನ್ಯದಲ್ಲಿ ಅನುರಣಿಸುತ್ತಿರಲಿ. ಅದೇ ಶಿಕ್ಷಕರಿಗೆ ನೀಡುವ ನಿಜವಾದ ಗೌರವ. ಪ್ರಮಾಣಿಕವಾಗಿ ಪ್ರತಿ ಗುರುವೂ ತನ್ನನ್ನು ಮೀರಿಸುವ, /ಎತ್ತರಕ್ಕೆ ಶಿಷ್ಯ/ಶಿಷ್ಯೆ ಬೆಳೆಯಲಿ ಎಂಬುದನ್ನೇ ಬಯಸುತ್ತಾರೆ. ಅವರನ್ನು ಗೌರವಿಸಬೇಕು. ಉತ್ತಮ ಕಾರ್ಯಗಳಿಗೆ ಸಮುದಾಯಗಳಿಂದ ಪ್ರೋತ್ಸಾಹ ದೊರೆಯಬೇಕು. ಆಗಲೇ ಉತ್ತಮ ಸಮಾಜವನ್ನು ನಿರ್ಮಿಸಲು ಅವರಿಂದ ಸಾಧ್ಯವಾಗುವುದು. ಇಂದು ಶಿಕ್ಷಕರ ದಿನಾಚರಣೆ, ನನ್ನೆಲ್ಲಾ ಶಿಕ್ಷಕರಿಗೂ, ಪ್ರಪಂಚದ ಸರ್ವವಿಧದ ಶಿಕ್ಷಕರೆಲ್ಲರಿಗೂ ಶುಭಾಶಯಗಳು.

0 comments:

Post a Comment