ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ : ಡಾ.ಮೋಹನ್ ಕುಂಟಾರ್
ಅನುವಾದ
ಕನ್ನಡ ಮತ್ತು ಮಲಯಾಳಂ ಸಾಹಿತ್ಯ ಸಂಬಂಧಕ್ಕೆ ನಾಂದಿ ಹಾಡಿದುದು ಅನುವಾದಗಳು. ಕೇಂದ್ರ ಸಾಹಿತ್ಯ ಅಕಾಡೆಮಿ, ದಕ್ಷಿಣ ಭಾರತೀಯ ಭಾಷಾ ಸಂಸ್ಥೆ, ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ಆಶಾನ್ ಮೆಮೋರಿಯಲ್ ಟ್ರಸ್ಟ್, ಕನ್ನಡ ವಿಶ್ವವಿದ್ಯಾಲಯ ಮೊದಲಾದ ಸಂಸ್ಥೆಗಳು ಅನುವಾದಗಳ ಮೂಲಕ ಎರಡೂ ಭಾಷೆಯ ಸಾಹಿತ್ಯಗಳ ನಡುವೆ ಸಂಬಂಧ ಕಲ್ಪಿಸಿವೆ. ಅಲ್ಲದೆ ಅನೇಕರು ವೈಯಕ್ತಿಕವಾಗಿ ಅನುವಾದಗಳನ್ನು ಮಾಡಿ ಈ ಎರಡೂ ಭಾಷೆಗಳ ಸಂಬಂಧ ಹೆಚ್ಚುವಲ್ಲಿ ನೆರವಾಗಿದ್ದಾರೆ.ಇಲ್ಲಿ ಉಲ್ಲೇಖಿಸಬಹುದಾದ ಮುಖ್ಯ ಮಲಯಾಳಂ ಕೃತಿ 'ಶ್ರೀ ತೂವೆನ್ನಿ ಲಾವ' ಇದೊಂದು ವಿಷವೈದ್ಯ ಶಾಸ್ತ್ರಗ್ರಂಥ.


'ವಿಷಾಬ್ದ ಮಾರುತ' ಎಂಬ ಟೀಕೆಯೊಡನೆ ಕನ್ನಡದಲ್ಲಿ 1895ರಲ್ಲಿ ಇದನ್ನು ಪ್ರಕಟಿಸಲಾಗಿದೆ. ಇದು ಮಲಯಾಳಂನಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾದ ಮೊತ್ತ ಮೊದಲ ಉಪಲಬ್ಧ ಕೃತಿ. ಈ ಗ್ರಂಥವನ್ನು ಗಣೇಶ ಶಾಂತಯ್ಯ ಕಾರೆಬಯ್ಲೆಕರ್ ಇವರು ಲೋಕೋಪಕಾರಾರ್ಥವಾಗಿ ಕನ್ನಡದಲ್ಲಿ ತಯಾರಿಸಿ ಪ್ರಕಟಿಸಿದ್ದೆಂದು ಮುಖಪುಟದಲ್ಲಿ ಹೇಳಿದ್ದಾರೆ. ಈ ವಿಷವೈದ್ಯ ಗ್ರಂಥವನ್ನು ಕನ್ನಡದಲ್ಲಿ ಸಿದ್ಧಪಡಿಸಿದ ಗಣೇಶಯ್ಯನವರು ಪೀಠಿಕೆಯಲ್ಲಿ ಹೇಳಿದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಭರತ ಖಂಡವೆಂಬ ಹಿಂದುಸ್ಥಾನದಲ್ಲಿಯ ಏನಿಕೆ ಜ್ಞಾತಿಗಳ ತಮ್ಮ ಸಂತತಿಗಳ ತಮ್ಮ ಸಂತತಿಗಭಿವೃದ್ಧಿಯ ಮುಖ್ಯ ಸಾಧನೆ ಎಂಬ ಭಕ್ತಿಯಿಂದ ವಿಷವಿಕ್ಕುವ ಅಜ್ಞ ಪದ್ಧತಿಯು, ಬೇಟೆಗಾಗಲೀ, ನಾರಗಹಾವು, ಇಲಿ, ಚೇಳು, ಬೆಕ್ಕು, ಹುಚ್ಚುನಾಯಿ ಮುಂತಾದ ವಿಷಯುಕ್ತ ಪ್ರಾಣಿಗಳ ಬೇಟೆಗಾಗಲೀ, ಹುಲಿ, ಕರಡಿ, ತೋಳ, ನರಿ ಮೊದಲಾದ ಸವಿಷಕ್ರೂರ ಕಾಡುಮೃಗಗಳ ಬೇಟೆಗಾಗಲೀ, ಶಿಲುಕಿ ವಿಷಗ್ರಸ್ತರಾಗಿ, ದಂಶಪಟ್ಟು, ಕೂಡಲೇ ತಕ್ಕ ಔಷಧವು ದೊರೆಯದಲೇ, ಕ್ರಮೇಣ ವಾಗಿಯಾಗಲೀ, ತತ್ಕ್ಷಣವೇಯಾಗಿ ಆಗಲೀ ಮೃತ್ಯುವಿಗರ್ಪಿಸಲ್ಪಡುವ ಅಸಂಖ್ಯ ನಿರಪರಾಧಿಗಳು, ಎಲ್ಲರ ತಿಳಿಯೋಣಕ್ಕೆ ಬಂದಿರುವಂತೆ, ನಮ್ಮ ತಿಳುವಿಕೆಗೂ ಬಂದು, ಇಂಥ ಭಯಂಕರ ಪರಿಣಾಮದ ಪ್ರತಿಬಂಧಕ್ಕೆ ಏನಾದರೊಂದು ಉತ್ತಮ ತೋದು ಇರಬೇಕೆಂದು, ವೈದ್ಯ, ಮಾಂತ್ರಿಕ, ಜೋತಿಸ್ಯುಗಳಲ್ಲಿ, ಹೆಸರುಗೊಂಡ, ಪ್ರಖ್ಯಾತ ಮಲಬಾರಿ ಗೃಹಸ್ಥರಲ್ಲಿ ವಿಷವೈದ್ಯರೆಂಬಭಿದಾನಗೊಂಡು, ವಾಡಿಕೆಯಾಗಿ, ಉಪಚಾರವನ್ನು ನಡಿಸುತ್ತಿರುವವರ ಬಳಿಗಿರುವ ಈ ಗ್ರಂಥವನ್ನು ಬಹಳ ಶ್ರಮೆಯಿಂದಲೂ, ಸಾಹಸದಿಂದಲೂ, ಕೈವಶ ಮಾಡಿಕೊಂಡು, ಈ ವಿಷಯವು ಸಕಲರಿಗರಿಕೆ ಯಾಗಿರಬೇಕೆಂಬ ಉದ್ದೇಶವೇ ಮುಖ್ಯ ಮಾಡಿ, ಸಮರ್ಪಕವಾಗಿ ಕನ್ನಡದಿಂದ ಟೀಕೆಯಂ ಬರೆದು, ಈ ಗ್ರಂಥವು ಮೂಲ ಮಲೆಯಾಳ ಭಾಷೆಯಿಂದಿರುವುದರಿಂದ, ಔಷಧಗಳ ಮಲೆಯಾಳ ಹೆಸರುಗಳಿಗೆ, ಕನ್ನಡದಿಂದಲೂ, ಮರಾಠಿಯಿಂದಲೂ, ಹಿಂದೂಸ್ಥಾನಿಯಿಂದಲೂ, ಅರ್ಥವಂ ಬರೆದು ಎಲ್ಲರಿಗೆ ತಿಳಿಯುವಂತೆ ಸಿದ್ಧಮಾಡಿದೆವು(ಗಣೇಶಯ್ಯ ಎಸ್. ಉಡುಪಿ, ಪೀಠಿಕೆಯು ಶ್ರೀ ತೂವನ್ನಿಲಾವ, 1895).

ಇದೊಂದು ಪದ್ಯ ಕೃತಿ. ಇಲ್ಲಿನ ಪದ್ಯಭಾಗವನ್ನು ಕನ್ನಡದಲ್ಲಿ ಲಿಪ್ಯಂತರ ಮಾಡಲಾಗಿದೆ. ವಿಷಾಬ್ದಮಾರುತ ಎಂಬ ಟೀಕೆಯೊಡನೆ ಕನ್ನಡದಲ್ಲಿ ತಿಳಿಯ ಹೇಳಲಾಗಿದೆ. ಈ ಕೃತಿಯ ಭಾಷಾಂತರ ಸಂದರ್ಭದಲ್ಲಿ ಅಲ್ಲಿನ ವಿಷಯವನ್ನು ಕನ್ನಡಿಗರಿಗೆ ತಿಳಿಯ ಹೇಳುವುದೇ ಮುಖ್ಯವಾಗಿತ್ತು. ಮೂಲಕೃತಿಯ ಲೇಖಕರ ಹೆಸರಾಗಲಿ, ಕೃತಿಯ ಸ್ವರೂಪವಾಗಲಿ ಇಲ್ಲಿ ಮುಖ್ಯವಲ್ಲ. ಕೃತಿಯ ಜ್ಞಾನವೇ ಕನ್ನಡದಲ್ಲಿ ಸಿದ್ಧಪಡಿಸಿದವರಿಗೆ ಮುಖ್ಯ ಆದ್ಯತೆ. ಅದನ್ನು ತಿಳಿಯಹೇಳುವಲ್ಲಿ ಅವರ ಶ್ರಮ ಕೇವಲ ಒಬ್ಬ ಅನುವಾದಕನದಲ್ಲ. ಅದು ಪ್ರಾಯೋಗಿಕವಾಗಿ ಬಳಕೆಗೆ ಬರುವ ವಿಷಯವೂ ಆಗಿದ್ದರಿಂದ ಮಲಯಾಳಂ ಔಷಧಿಯ ಹೆಸರುಗಳಿಗೆ ಕನ್ನಡದೊಡನೆ ಮರಾಠಿ, ಹಿಂದೂಸ್ತಾನಿ ಭಾಷೆಗಳ ಪದಗಳನ್ನು ಸಹ ಶ್ರಮಪೂರ್ವಕವಾಗಿ ಶೋಧಿಸಿ ಉಲ್ಲೇಖಿಸಿರುವುದು ಗಮನಾರ್ಹ.

ಕೃತಿ ರಚನೆಯ ವೇಳೆ ಕನ್ನಡದಲ್ಲಿ ಇಲ್ಲದ ಆದರೆ ಕನ್ನಡ ಜನರಿಗೆ ಉಪಯೋಗಕ್ಕೆ ಅಗತ್ಯವಾಗಿ ಬೇಕಾದ ತಿಳುವಳಿಕೆಯನ್ನು ನೀಡುವ ಉದ್ದೇಶದಿಂದಲೇ ಈ ಕೃತಿ ಕನ್ನಡದಲ್ಲಿ ಬೆಳಕು ಕಾಣುವಂತಾಯಿತು. ಇದನ್ನು ಆಗುಮಾಡುವಲ್ಲಿ ಕನ್ನಡ ಗ್ರಂಥಕರ್ತರ ಸಾರ್ವಜನಿಕ ಆಸಕ್ತಿಯೂ ಅಷ್ಟೇ ಮುಖ್ಯವಾಗಿದೆ. ಆ ದಿನಗಳಲ್ಲಿ ಇದರ ಎರಡು ಸಾವಿರ ಪ್ರತಿಗಳನ್ನು ಮೊದಲ ಆವೃತ್ತಿಯಲ್ಲಿಯೇ ಪ್ರಕಟಿಸಲಾಗಿದೆ ಎಂಬುದರಿಂದ ಈ ಕೃತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು.

ಎಚ್.ರೋಬರ್ಟ್ ಅವರು 1899ರಲ್ಲಿ ಜೋಸೆಫ್ ಮುಳಿಯಲ್ ಅವರ 'ಸುಕುಮಾರಿ' ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ಇದು ಮಲಯಾಳಂನಿಂದ ಕನ್ನಡಕ್ಕೆ ಬಂದ ಮೊದಲ ಕಾದಂಬರಿಯೂ ಹೌದು. ಬಳಿಕ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದ ಗೊಂಡಿವೆ. ತಗಳಿ ಶಿವಶಂಕರ ಪಿಳ್ಳೆ, ವೈಕಂ ಮುಹಮ್ಮದ್ ಬಷೀರ್, ಎಂ.ಟಿ.ವಾಸುದೇವನ್ ನಾಯರ್, ಎಸ್.ಕೆ.ಪೊಟ್ಟಕಾಟ್, ಲಲಿತಾಂಬಿಕ ಅಂತರ್ಜನಂ, ಒ.ಚಂದು ಮೇನೋನ್ ಮೊದಲಾದವರ ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗಿದೆ. ವಳ್ಳತ್ತೋಳ್, ಕುಮಾರನ್ ಆಶಾನ್ ಮೊದಲಾದವರ ಕವಿತೆಗಳು ಹಾಗೆಯೇ ಕೆಲವು ಪ್ರಸಿದ್ಧ ಏಕಾಂಕಗಳು ಕನ್ನಡಕ್ಕೆ ಬಂದಿವೆ.

ಅಲ್ಲದೆ ಇತ್ತೀಚಿನ ಮಲಯಾಳಂ ಕವಿತೆಗಳು, ಕುಂಜನ್ ನಂಬಿಯಾರರ ತುಳ್ಳಲ್ ಕತೆಗಳು, ಲೀಲಾತಿಲಕಂನಂತಹ ಲಕ್ಷಣ ಗ್ರಂಥಗಳು ಕನ್ನಡಕ್ಕೆ ಅನುವಾದಗೊಂಡಿವೆ. ವೈಕಂ ಮುಹಮ್ಮದ್ ಬಷೀರ್, ಎಂ.ಟಿ.ವಾಸುದೇವನ್ ನಾಯರ್, ಮಾಧವಿ ಕುಟ್ಟಿ ಮೊದಲಾದವರ ಕತೆಗಳು ಕನ್ನಡಕ್ಕೆ ಬಂದಿವೆ. ಒಂದು ಅಂದಾಜು ಪ್ರಕಾರ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಕತೆಗಳು ಕನ್ನಡದಲ್ಲಿ ಪ್ರಕಟವಾಗಿವೆ(ಆದರೆ ಕನ್ನಡದಿಂದ ಮಲಯಾಳಂಗೆ ಹೋದ ಕತೆಗಳ ಸಂಖ್ಯೆ ಐವತ್ತನ್ನು ಮೀರಲಾರದು ಎನಿಸುತ್ತದೆ). ಇದರಲ್ಲಿ ಬಷೀರರ ಹೆಚ್ಚಿನ ಸಂಖ್ಯೆಯ ಕೃತಿಗಳೂ ಕನ್ನಡದಲ್ಲಿ ಪ್ರಕಟವಾಗಿವೆ.

ಮುಂದುವರಿಯುವುದು...

0 comments:

Post a Comment