ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ: ಮಂಗಳೂರು ವರದಿ
ಒಂಭತ್ತು ಮಂದಿ ಸಾಧಕರಿಗೆ ಮತ್ತು ಸಂಸ್ಥೆಯೊಂದಕ್ಕೆ ನ.18ರಂದು ಪ್ರಶಸ್ತಿ ಪ್ರದಾನ

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2012"ರ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಒಂಭತ್ತು ಮಂದಿ ಗಣ್ಯರನ್ನು ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಆಳ್ವ ಈ ವಿವರ ನೀಡಿದರು.
ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯ ನೀಡಿದ ಕೊಡುಗೆಗಾಗಿ ಅತಿ.ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ'ಸೋಜ, ಧರ್ಮಾಧ್ಯಕ್ಷರು, ಮಂಗಳೂರು, ಕನ್ನಡ ಸಾಂಸ್ಕೃತಿಕ ಸೇವೆಗಾಗಿ ಶ್ರೀ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ, ಡಾ.ಸಿ.ಪಿ.ಕೃಷ್ಣ ಕುಮಾರ್ (ಸಾಹಿತ್ಯ ), ಗಿರೀಶ್ ಕಾಸರವಳ್ಳಿ (ಚಲನಚಿತ್ರ), ಡಾ.ಜಿ.ಸಿದ್ದಲಿಂಗಯ್ಯ (ಸಾಹಿತ್ಯ), ವೈಜಯಂತಿ ಕಾಶಿ( ನೃತ್ಯ ಮತ್ತು ಕಿರುತೆರೆ), ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ (ಯಕ್ಷಗಾನ) ಡಾ.ವಿಷ್ಣುನಾಯ್ಕ (ಸಾಹಿತ್ಯ), ಸುಭದ್ರಮ್ಮ ಮನ್ಸೂರು (ರಂಗಭೂಮಿ) ಮತ್ತು ಲೋಕ ಶಿಕ್ಷಣ ಟ್ರಸ್ಟ್ (ಪ್ರಕಾಶನ) ಇವರನ್ನು 2012ರ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರುಪಾಯಿ ಹತ್ತುಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಗೌರವ ಸನ್ಮಾನವನ್ನು ಒಳಗೊಂಡಿರುತ್ತದೆ.

ನವೆಂಬರ್ 18 ರವಿವಾರ ಇಳಿಹಗಲು 3.30ರಿಂದ ನಡೆಯಲಿರುವ ಒಂಭತ್ತನೇ ವರುಷದ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಸನ್ಮಾನ್ಯರ ಮೆರವಣಿಗೆ ಬಳಿಕ ನುಡಿಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಮಾರೋಪ ಭಾಷಣ ಮಾಡಲಿದ್ದು, ನಾಡೋಜ ಡಾ.ಕೆ.ಎಸ್.ನಿಸಾರ್ ಅಹಮದ್ ಅಧ್ಯಕ್ಷತೆ ವಹಿಸಲಿದ್ದಾರೆ.
ನವಂಬರ 16-18ರವರೆಗೆ "ಕನ್ನಡ ಮನಸ್ಸು ಜನಪರ ಚಳವಳಿಗಳು" ಎಂಬ ಪರಿಕಲ್ಪನೆಯಲ್ಲಿ ಒಂಭತ್ತನೇ ವರುಷದ ಆಳ್ವಾಸ್ ನುಡಿಸಿರಿ ನಡೆಯಲಿದೆ. ಸಮ್ಮೇಳನಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ವಹಿಸಲಿದ್ದು , ಹಿರಿಯ ಸಾಹಿತಿ ಡಾ.ಯು.ಆರ್ ಅನಂತ ಮೂರ್ತಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ , ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅತಿಥಿಗಳಾಗಿ ಪಾಲ್ಗೊಳ್ಳುವರು.ಉದ್ಘಾಟನಾ ಸಮಾರಂಭಕ್ಕೆ ಮೊದಲು ಸಮ್ಮೇಳನಾಧ್ಯಕ್ಷರನ್ನೊಳಗೊಂಡಂತೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.ಶತಾಯುಷಿಗೆ ನುಡಿಸಿರಿ ಗೌರವ ಸನ್ಮಾನ
ಶತಾಯುಷಿ, ವಿದ್ವಾಂಸ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರಿಗೆ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನವಂಬರ 16 ರಂದು ಪೂರ್ವಾಹ್ನ 12 ರಿಂದ ನಡೆಯಲಿದೆ. ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಶತಾಯುಷಿಗೆ ಗೌರವ ಸಮರ್ಪಿಸಲಿದ್ದಾರೆ. ಡಾ.ಪಿ.ವಿ. ನಾರಾಯಣ ಅವರು ಅಭಿವಂದನೆ ಭಾಷಣ ಮಾಡಲಿದ್ದಾರೆ.
ಕನ್ನಡ ಸಾಹಿತ್ಯಕ ಚಳವಳಿಗಳು, ಸಾಮುದಾಯಿಕ ಚಳವಳಿಗಳು, ಅಖಂಡ ಕರ್ನಾಟಕ ಅಸ್ತಿತ್ವ - ಹೋರಾಟ, ಕಲೆ - ಮಾಧ್ಯಮ ಚಳವಳಿಗಳು ಎಂಬ ಪ್ರಮುಖ ನಾಲ್ಕು ಗೋಷ್ಠಿಗಳನ್ನು ಈ ಬಾರಿಯ ನುಡಿಸಿರಿಯಲ್ಲಿ ಆಯೋಜಿಸಲಾಗಿದೆ. ಇದಲ್ಲದೇ ಕಥಾ ಸಮಯ, ಕವಿಸಮಯ- ಕವಿನಮನ, ವಿಶೇಷೋಪನ್ಯಾಸ, ಮಾತಿನ ಮಂಟಪ ಮೊದಲಾದ ಹಲವು ಕಾರ್ಯಕ್ರಮಗಳಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ.

ನುಡಿಸಿರಿ ಘಟಕ
2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆಯಲಿರುವ ವಿಶ್ವ ನುಡಿಸಿರಿಯ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಆಳ್ವಾಸ್ ನುಡಿಸಿರಿಯ ಘಟಕಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಲುದ್ದೇಶಿಸಲಾಗಿದೆ. ತುಮಕೂರು, ಮೈಸೂರು, ಧಾರವಾಡ, ಗದಗ, ದಾವಣಗೆರೆ, ಚಿಕ್ಕಮಗಳೂರು, ಮಂಡ್ಯ, ತೀರ್ಥಹಳ್ಳಿ, ಮಂಗಳೂರು, ಕುಂದಾಪುರ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಭಾಗಗಳಲ್ಲಿ ಈಗಾಗಲೇ ನುಡಿಸಿರಿ ಘಟಕ ಸ್ಥಾಪಿಸಿ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗಿದೆ. ನವೆಂಬರ್ 11ರಂದು ಶಿವಮೊಗ್ಗದಲ್ಲಿ, ನವಂಬರ 13 ರಂದು ಸುಳ್ಯದಲ್ಲಿ ಘಟಕ ಉದ್ಘಾಟನೆ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

ನವೆಂಬರ್ 8- 11 ಚಿತ್ರಸಿರಿ

ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ಆಳ್ವಾಸ್ ಚಿತ್ರಸಿರಿ 2012 ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಮತ್ತು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ನವೆಂಬರ್ 8ರಿಂದ 11ರ ತನಕ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
ನವೆಂಬರ್ 8ರಂದು ಬೆಳಗ್ಗೆ 10.15ಕ್ಕೆ ಸರಿಯಾಗಿ ಮೂಡಬಿದಿರೆ ಜೈನ ಮಠದ ಶ್ರೀಶ್ರೀಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ದ.ಕ.ಜಿಲ್ಲಾ ಸಂಚಾಲಕ ರಾಜೇಂದ್ರ ಕೇದಿಗೆ ಉಪಸ್ಥಿತರಿರುವರು. ಒಟ್ಟು 20 ಮಂದಿ ರಾಜ್ಯದ ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಳ್ಳುವರು. ಚಂದ್ರಕಾಂತ ಬಾಗಲಕೋಟೆ, ಜೀವನ್ ಎ.ಎಸ್.ಮಂಗಳೂರು, ಪರಮೇಶ್ ಡಿ.ಜೋಲದ್, ಬಾಗಲಕೋಟೆ, ಹರೀಶ್ ಸಾಗಾ,ಕುಂದಾಪುರ, ಬಿ.ವಿ.ಕಾಮಾಜಿ, ಗುಲಬರ್ಗಾ, ದೇವೇಂದ್ರ ಎಮ್ ಬಡಿಗೇರ್ ಧಾರಾವಾಡ, ಶಹೆದ್ ಪಾಷಾ ಗುಲಬರ್ಗಾ, ವಿಶ್ವಕರ್ಮ ಆಚಾರ್, ಚಿಕ್ಕಮಗಳೂರು, ನಾಗರಾಜ್ ಕೆ.ಟಿ. ಮಂಗಳೂರು, ನವೀನ್ ಕುಮಾರ್ ಎ ಬೆಂಗಳೂರು, ಹರಿಪ್ರಸಾದ್ ಬಿ.ಎನ್.ತುಮಕೂರು, ಈರಣ್ಣ ದಂಡಿನ್ ಕೋಲಾರ, ಬಸವರಾಜ್ ಗವಿಮಠ್ ಬಾಗಲಕೋಟೆ, ಸಿ.ಡಿ.ಜಟ್ಟಣವರ್ ಹುಬ್ಬಳ್ಳಿ, ಶಿವಾನಂದ ಎಸ್.ಹೂಗಾರ್ ಗದಗ, ಅಭಿಲಾಶ್ ಡಿ. ಮೈಸೂರು, ಜಿ.ಎಮ್.ಹೆಗ್ಡೆ ಶಿರಸಿ, ಚಿತ್ರ ಆಚಾರ್ಯ ಉಡುಪಿ, ಆಶಾರಾಣಿ ನಡೋಣಿ ಬೆಳಗಾವಿ, ರಶ್ಮಿ ಟಿ.ಎನ್.ಬೆಂಗಳೂರು ಭಾಗವಹಿಸುವ ಕಲಾವಿದರು.

ಪ್ರತಿನಿಧಿಗಳಾಗಿ ಬನ್ನಿ
ಯುವ ಜನತೆಯಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗೆಗಿನ ಆಸಕ್ತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಈ ಬಾರಿಯೂ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ನಾಡು, ಹೊರನಾಡು, ಹೊರ ರಾಜ್ಯಗಳಿಂದ ಆಳ್ವಾಸ್ ನುಡಿಸಿರಿಗೆ ಪ್ರತಿನಿಧಿಗಳಾಗಿ ಸಾಹಿತ್ಯಾಸಕ್ತರು ಆಗಮಿಸಬೇಕು. ಪ್ರತಿನಿಧಿಗಳಾಗುವವರು ರು.100ನ್ನು ಕಾರ್ಯಾಧ್ಯಕ್ಷರು, ಆಳ್ವಾಸ್ ನುಡಿಸಿರಿ ಹೆಸರಿನಲ್ಲಿ ಎಂ.ಒ, ಡಿ.ಡಿ. ಮೂಲಕ ಸಲ್ಲಿಸಬಹುದು. ಪ್ರತಿನಿಧಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಆಳ್ವಾಸ್ ನುಡಿಸಿರಿಯಲ್ಲಿ ಪ್ರತಿನಿಧಿಗಳಾಗ ಬಯಸುವವರು ದೂರವಾಣಿ ಸಂಖ್ಯೆ 08258 - 238104, 105,106 ಸಂಪರ್ಕಿಸಿ ನುಡಿಸಿರಿ ಕಚೇರಿ ವ್ಯವಸ್ಥಾಪಕರಲ್ಲಿ ನೋಂದಾಯಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಕಾರ್ಯದರ್ಶಿಗಳಾದ ಹರೀಶ್ ಕೆ.ಆದೂರು, ಡಾ.ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.

0 comments:

Post a Comment