ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಬಾಣಲೆಯಿಂದ ಬೆಂಕಿಗೆ ಕಥಾನಕದ ಎರಡನೇ ಭಾಗ ಇಲ್ಲಿ ನೀಡ್ತಾ ಇದ್ದೇವೆ. ಇದು ಒಂದು ಸಾಹಸಮಯ ಕಥಾನಕ ಎಂದರೆ ತಪ್ಪಾಗಲಾರದು. ಆದರೆ ಇಲ್ಲಿ ಕೆಲವೊಂದು ತೊಂದರೆಗಳು ಉಂಟಾಗಿವೆ. ಆ ತೊಂದರೆಗಳನ್ನು ನಿವಾರಿಸಿದರೆ ಈ ಕಥಾನಕಕ್ಕೆ ಒಂದು ಉತ್ತಮ ಕೊನೆ ದೊರೆತಂತಾಗುತ್ತದೆ. ಕಾರಣ ಇಷ್ಟೇ.
ಜೈನ ಕಾಶಿ ಮೂಡಬಿದಿರೆ. ಸಾವಿರ ಕಂಬದ ಬಸದಿಯನ್ನು ಹೊಂದಿದ ವಿಶ್ವ ವಿಖ್ಯಾತ ಪ್ರದೇಶ. ಬಸದಿಗಳ ಬೀಡು.ವಿದ್ಯಾಕಾಶಿ. ಹಲವಾರು ಪ್ರಥಮಗಳಿಗೆ ಸಾಕ್ಷಿ. ಆದರೆ ಇಲ್ಲಿ ಪ್ಲಾಸ್ಟಿಕ್ ಮಾತ್ರ ಯತೇಚ್ಛವಾಗಿದೆ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್...ಮೂಡಬಿದಿರೆಯ ಒಂದೊಂದು ಕಲ್ಲುಗಳೂ ಇಲ್ಲಿನ ಗತ ಇತಿಹಾಸದ ವೈಭವವನ್ನು ಇಂದಿಗೂ ನೆನಪಿಸುತ್ತಿದ್ದರೆ ಇಲ್ಲಿ ಹೇರಳವಾಗಿ ರಾಶಿ ಬಿದ್ದಿರುವ ಬೀಳುತ್ತಿರುವ ಈ ಪ್ಲಾಸ್ಟಿಕ್ ಚೀಲಗಳು ಇಲ್ಲಿನ ಒಂದೊಂದೇ ದುರಂತ ಕಥೆಗಳನ್ನು ತೆರೆದಿಡುತ್ತವೆ...


ಎಲ್ಲಿ ನೋಡಿದರಲ್ಲಿ ಕಸ...ಕಸ... ಪ್ಲಾಸ್ಟಿಕ್... ಇಷ್ಟು ಮಾತ್ರವೇ ಈ ಬಿದಿರೆಯ ಊರ ತುಂಬೆಲ್ಲಾ ಕಂಡು ಬರುತ್ತಿದ್ದ ದೃಶ್ಯ. ರಸ್ತೆ ಬದಿಗಳಲ್ಲಿ, ನಗರದ ತುಂಬೆಲ್ಲಾ ರಾಶಿ ರಾಶಿ ಪ್ಲಾಸ್ಟಿಕ್ ... ಯಾವ ಅಂಗಡಿಗೆ ಹೋಗಿ ಹಿಂದೆ ಬಂದರೂ ಗ್ರಾಹಕರ ಕೈಯಲ್ಲಿ ಕನಿಷ್ಟ ಮೂರರಿಂದ ನಾಲ್ಕು ಪ್ಲಾಸ್ಟಿಕ್ ಚೀಲ... ಬೆಳಗ್ಗೆಯಾದರೆ ಮನೆಯ ತ್ಯಾಜ್ಯದೊಂದಿಗೆ ಬಂಧಿಯಾದ ಪ್ಲಾಸ್ಟಿಕ್ ಚೀಲಗಳು ಅಲ್ಲೆಂದರಲ್ಲಿ ಮೂಡಬಿದಿರೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ... ಕಸದ ತೊಟ್ಟಿಗಳು ನಾರುತ್ತಿರುತ್ತವೆ.


ಆಸ್ಪತ್ರೆ ತ್ಯಾಜ್ಯ, ಇತರೆ ತ್ಯಾಜ್ಯಗಳು ರಸ್ತೆಯುದ್ದಕ್ಕೂ ಇರುವ ಚರಂಡಿಗಳಲ್ಲಿ ಅರೆಸುಟ್ಟ ರೀತಿಯಲ್ಲಿ ಕಾಣಸಿಗುತ್ತವೆ... ರಾತ್ರಿಯಾಗುತ್ತಿದ್ದಂತೆಯೇ ಅಂಗಡಿಗಳು ಬಾಗಿಲು ಹಾಕುವ ಮುನ್ನ ಅಂಗಡಿಯೊಳಗಣ ಕಸ, ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳು ಎದುರು ಭಾಗದ ರಸ್ತೆಯನ್ನಲಂಕರಿಸುತ್ತವೆ... ಒಟ್ಟಾರೆಯಾಗಿ ಮೂಡಬಿದಿರೆಯ ಪುರಸಭಾ ವ್ಯಾಪ್ತಿಯಲ್ಲಂತೂ ಘನತ್ಯಾಜ್ಯ - ಪ್ಲಾಸ್ಟಿಕ್ ತ್ಯಾಜ್ಯದ್ದೇ ಕಾರುಬಾರು ಎಂಬಂತಹ ಸ್ಥಿತಿ ನಿರ್ಮಾಣ... ಏತನ್ಮಧ್ಯೆ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಬಂದವರೇ ರಾಯಪ್ಪ.ರಾಯಪ್ಪ ಈ ಹಿಂದೆ ಉಡುಪಿ , ಕುಂದಾಪುರ ಭಾಗಗಳಲ್ಲಿ ಕಾರ್ಯನಿರ್ವಹಿಸಿ ಸರಕಾರದಿಂದ ಪ್ರಶಸ್ತಿ ಪಡೆದ ಸರಕಾರಿ ನೌಕರರು. ಮೂಡಬಿದಿರೆಯ ಪುರಸಭೆಯ ಅಧಿಕಾರ ವಹಿಸಿದ ಸಂದರ್ಭದಲ್ಲಿ ಅವರಿಗೆ ಕಾಡಿದ್ದು ಇಲ್ಲಿನ ಘನತ್ಯಾಜ್ಯದ ವಿಲೇವಾರಿ. ಜೊತೆಗೆ ಪ್ಲಾಸ್ಟಿಕ್ ಕಾಟ. ಯಾವ ಬೀದಿಯಲ್ಲಿ ಸಾಗಿದರೂ ತ್ಯಾಜ್ಯ...ತ್ಯಾಜ್ಯದೊಂದಿಗೆ ಬೆರೆತ ಪ್ಲಾಸ್ಟಿಕ್... ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಕಸದ ತೊಟ್ಟಿಯ ಒಳ ಹೊರಗೂ ಕಂಡು ಬಂದಿದ್ದೇ ಈ ಪ್ಲಾಸ್ಟಿಕ್ ತ್ಯಾಜ್ಯಗಳು. ಹೇಗಾದರೂ ಮಾಡಿ ಇದಕ್ಕೊಂದು ಕಡಿವಾಣ ಹಾಕಬೇಕೆಂಬ ಯೋಚನೆ ಅವರ ಮನದಲ್ಲಿ ಮೂಡಿತು. ದ.ಕ.ಜಿಲ್ಲಾಧಿಕಾರಿ ಎನ್.ಎಸ್.ಚೆನ್ನಪ್ಪ ಗೌಡರಲ್ಲಿ ವಿಷಯ ಪ್ರಸ್ತಾವಿಸಿದರು.
ಪ್ಲಾಸ್ಟಿಕ್ ಬ್ಯಾನ್ ಮಾಡಿ ಎಂಬ ಆದೇಶ ಅವರಿಂದ ದೊರೆಯಿತು.
ಕೇವಲ ಕಡತದಲ್ಲಷ್ಟೇ ಈ ನಿಶೇಧ ಇದ್ದರೆ ಸಾಲದು .ಅದು ಸಾಕಾರ ಆಗಬೇಕೆಂಬುದು ಮುಖ್ಯಾಧಿಕಾರಿಗಳ ಚಿಂತನೆ. ಮೂಡಬಿದಿರೆ ಪುರಸಭಾ ಸದಸ್ಯರ ಗಮನಕ್ಕೆ ವಿಷಯ ತಂದರು. ಅವರ ಸಹಕಾರವೂ ದೊರಕಿತು. ಅಲ್ಲಿಂದ ಆರಂಭಗೊಂಡಿತು ಮೂಡಬಿದಿರೆಯಲ್ಲಿ ಪ್ಲಾಸ್ಟಿಕ್ ನಿಷೇಧ ಆಂದೋಲನ. ಹೊಟೇಲ್ ಗಳಲ್ಲಿ ಬಳಸುತ್ತಿದ್ದ ಪ್ಲಾಸ್ಟಿಕ್ಗೆ ನಿಷೇಧ. ಅಂಗಡಿಗಳಲ್ಲಿ ಬಳಸುತ್ತಿದ್ದ 40 ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಗೆ ನಿಷೇಧ. ಮನೆ ಮನೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಬಗ್ಗೆ ಮಾಹಿತಿ...ಒಟ್ಟಾರೆಯಾಗಿ ಮೂಡಬಿದಿರೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ಎಂಬಂತಹ ಸ್ಥಿತಿ. ಪ್ಲಾಸ್ಟಿಕ್ ಅಳಿಸಿ ಪರಿಸರ ಉಳಿಸಿ ಎಂಬ ಸ್ಲೋಗನ್ ಮೂಡಬಿದಿರೆಯ ತುಂಬೆಲ್ಲಾ ರಾರಾಜಿಸತೊಡಗಿತು.ಒಟ್ಟಿನಲ್ಲಿ ಮೂಡಬಿದಿರೆಯಲ್ಲಿ ಪ್ಲಾಸ್ಟಿಕ್ ನಿಷೇಧ ಆಗಲೇ ಬೇಕೆಂಬ ತೀರ್ಮಾನವೂ ನಡೆಯಿತು. ಇದಕ್ಕಾಗಿ ಮೂಡಬಿದಿರೆ ತುಂಬೆಲ್ಲಾ ಜಾಗೃತಿ ಮಾಹಿತಿ ಪ್ರಚಾರಗಳು ನಡೆದವು. ಪುರಸಭೆಯ ಮುಖ್ಯಾಧಿಕಾರಿ, ಸದಸ್ಯರ ಪ್ರಯತ್ನಕ್ಕೆ ಜನತೆಯ ಸ್ಪಂದನೆಯೂ ದೊರಕಿತು... ಆಗಿದ್ದೆಲ್ಲವೂ ಉತ್ತಮವೇ...ಆದರೆ ಅದರ ಜೊತೆ ಜೊತೆಗೆ ಇಲ್ಲೊಂದು ಆಘಾತಕಾರಿ ವಿಷಯ ಗೊತ್ತಾಗದಂತೆಯೇ ನಡೆದು ಹೋಯಿತು...

ಎಲ್ಲಿ ಪ್ಲಾಸ್ಟಿಕ್ ತಾಂಡವವಾಡುತ್ತಿತ್ತೂ ಅಲ್ಲೆಲ್ಲಾ ಇದೀಗ ಪ್ಲಾಸ್ಟಿಕ್ ಗಿಂತಲೂ ಹಾನಿಕಾರಕವಾದಂತಹ Nonwoven ಚೀಲಗಳು ಪ್ರತ್ಯಕ್ಷವಾಗಿದೆ. ಈ Nonwoven ಚೀಲಗಳು ಮಣ್ಣಿನೊಂದಿಗೆ ಮಣ್ಣಾಗುವುದಿಲ್ಲ...ಬದಲಾಗಿ ಪರಿಸರಕ್ಕೆ ಆರೋಗ್ಯಕ್ಕೆ ತೀವ್ರ ಹಾನಿಮಾಡುತ್ತವೆ.

ಪುರಸಭೆ ಪ್ಲಾಸ್ಟಿಕ್ ನಿಷೇಧಕ್ಕೆ ಕೊಟ್ಟ ಮುತುವರ್ಜಿಯನ್ನು ಮುಂದುವರಿಸಿ ಪರ್ಯಾಯ ವ್ಯವಸ್ಥೆಯಾಗಿ ಕಾಗದದ ಪೊಟ್ಟಣ ಅಥವಾ ಮರುಬಳಕೆಗೆ ಸಾಧ್ಯವಾಗುವಂತಹ ಬಟ್ಟೆ ಚೀಲಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಹಾಗಾದಾಗ ಮಾತ್ರ ಈ ಪ್ರಯತ್ನಕ್ಕೆ ಯಶ ಸಿಗಲು ಸಾಧ್ಯ.
ಮೂಡಬಿದಿರೆ ಪುರಸಭೆಯ ಈ ಸಾಹಸಕಥಾನಕ ಇಲ್ಲಿಗೆ ಮುಗಿಯುವುದಿಲ್ಲ. ಇನ್ನಷ್ಟು ವಿಷಯಗಳಿವೆ...ಮುಂದಿನ ಸಂಚಿಕೆಯೊಂದಿಗೆ...ಮತ್ತೆ ಭೇಟಿಯಾಗೋಣ...

ಹರೀಶ್ ಕೆ.ಆದೂರು/ ವಿಜಯ್ ಬೆಳ್ವಾಯಿ.

0 comments:

Post a Comment