ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ " ಈ ಕನಸು.ಕಾಂ " ಕಳೆದ 3 ದಿನಗಳಿಂದ "ಬಾಣಲೆಯಿಂದ ಬೆಂಕಿಗೆ " ಶೀರ್ಷಿಕೆಯಲ್ಲಿ ಪ್ಲಾಸ್ಟಿಕ್ ನಿಷೇಧ,Nonwoven ಬ್ಯಾಗ್ ಗಳ ಭರಾಟೆಯ ಬಗೆಗೆ ಜಾಗೃತಿ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಓದುಗ ಬಳಗದಿಂದ ನಿರಂತರ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಏತನ್ಮಧ್ಯೆ ಮಂಗಳೂರಿನಲ್ಲಿ ಜಿಲ್ಲಾಡಳಿತ ಪ್ಲಾಸ್ಟಿಕ್ ಬ್ಯಾನ್ ಮಾಡುವ ಹೊಸ ಚಿಂತನೆಗೆ ಮುನ್ನುಡಿ ಬರೆದಿದೆ. ಅದರ ಕುರಿತು ಇಂದಿನ ಸಂಚಿಕೆಯಲ್ಲಿ...


ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ಲಾಸ್ಟಿಕ್ ಹಾವಳಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್ ನಿಷೇಧ ಜಾರಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಮೂಡಬಿದ್ರೆಯಲ್ಲಿ ಜಾರಿಗೆ ತಂದ ಪ್ಲಾಸ್ಟಿಕ್ ನಿಷೇಧ, ಮುಂದಿನ ಹಂತವಾಗಿ ನವೆಂಬರ್ 1ರಿಂದ ಮಂಗಳೂರು ನಗರ ಹಾಗೂ ತಾಲೂಕಿನಲ್ಲಿ ಜಾರಿಗೆ ಬರಲಿದೆ.ಇದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಸ್ಪಷ್ಟ ನುಡಿ.


ಈ ಕುರಿತು ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದ ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರಜ್ಞಾವಂತ ಜನರ ಸಹಕಾರ ದೊರಕಬೇಕು. ಪ್ಲಾಸ್ಟಿಕ್ ಹಾವಳಿಯನ್ನು ನಿಷೇಧಿಸಲು ಜನತೆಯ ಬೆಂಬಲ ಅಗತ್ಯವಿದೆ ಎಂದು ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವದಂದೇ ಪ್ಲಾಸ್ಟಿಕ್ ನಿಷೇಧ

ಈಗಾಗಲೇ 40ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕೈಬಳಕೆ ಚೀಲಗಳನ್ನು ನಿಷೇಧಿಸಲಾಗಿದೆ.ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ನಿರಂತರವಾಗಿ ಇಂತಹ ಉತ್ಪಾದಕರ ವಿರುದ್ಧ ದಾಳಿ ನಡೆಸಿ ದಂಡ ಕಟ್ಟಿಸಿಕೊಂಡಿದೆಯಲ್ಲದೆ, ಬಿಗಿ ಕಾನೂನು ಕ್ರಮಗಳನ್ನು ಕೈಗೊಂಡಿದೆ. ನಗರದ ಹಲವು ಕಾಲೇಜುಗಳು,ಸಂಘಸಂಸ್ಥೆಗಳ ಸಹಕಾರದಿಂದ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕ್ರಮಕೈಗೊಳ್ಳುವಂತೆ ಹಲವು ಬಾರಿ ಸೂಚನೆ ನೀಡಿದ್ದಾರೆ.
ಆದರೆ ಜಿಲ್ಲಾಡಳಿತ ನಿಷೇಧ ಆದೇಶ ಜಾರಿಗೆ ತರುವ ಮೊದಲು ಸಾಧಕ ಬಾಧಕಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಕ್ರಮಕೈಗೊಳ್ಳಲು ನಿರ್ಧರಿಸಿದೆ. ಪ್ರಥಮ ಹಂತವಾಗಿ ನವೆಂಬರ್ ಒಂದರಿಂದ ಮಂಗಳೂರು ತಾಲೂಕಿನಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಸಬ್ಸಿಡಿ ವ್ಯವಸ್ಥೆ

ಪ್ಲಾಸ್ಟಿಕ್ ಉತ್ಪಾದಿಸುವ 60 ಕೈಗಾರಿಕೆಗಳು ಸ್ಥಳೀಯವಾಗಿದ್ದು, ಪ್ಲಾಸ್ಟಿಕ್ ಗೆ ಪರ್ಯಾಯ ರೂಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ಬಟ್ಟೆ ಚೀಲ ಉತ್ಪಾದಿಸಲು ಮುಂದೆ ಬಂದರೆ ಅವರಿಗೆ ಸಬ್ಸಿಡಿ ನೀಡಲಾಗುವುದು. ಜನರಿಗೆ ಹೊರೆಯಾಗದ ರೀತಿಯಲ್ಲಿ ಮಾರುಕಟ್ಟೆಗೆ ಚೀಲಗಳನ್ನು ವಿತರಿಸಲು ಚಿಂತನೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Nonwoven ಬೇಡ
ಪ್ಲಾಸ್ಟಿಕ್ ಚೀಲಗಳಿಂದ ಹೆಚ್ಚಿನ ದುಷ್ಪರಿಣಾಮ ಬೀರುವ Nonwoven ಬ್ಯಾಗ್ ಬಳಕೆಯನ್ನೂ ಜಿಲ್ಲಾಡಳಿತ ಖಡ್ಡಾಯವಾಗಿ ನಿಷೇಧ ಮಾಡಲೇ ಬೇಕು.ಆಗ ಮಾತ್ರ ನಿಜವಾದ ಅರ್ಥದಲ್ಲಿ ಪರಿಸರದ ರಕ್ಷಣೆ ಮಾಡಿದಂತಾಗುವುದು. Nonwoven ಬ್ಯಾಗ್ ಇದೀಗ ಪ್ಲಾಸ್ಟಿಕ್ ನಿಷೇಧವಾದ ಎಲ್ಲಾ ಕಡೆಗಳಲ್ಲಿ ರಾರಾಜಿಸುತ್ತಿದೆ. ಈ Nonwoven ಬ್ಯಾಗ್ ಗಳ ಅತಿಯಾದ ಬಳಕೆ ಇಂದಾಗುತ್ತಿದ್ದು ಮುಂದೊಂದು ದಿನ ಇದು ಪ್ಲಾಸ್ಟಿಕ್ ಗಳಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿ ಬಾಧಿಸಲಿದೆ ಎಂಬ ಸತ್ಯವನ್ನು ಮನಗಾಣಬೇಕಾಗಿದೆ.

- ಟೀಂ ಈ ಕನಸು.


0 comments:

Post a Comment