ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ : ಡಾ. ಪಿ. ನಾಗಭೂಷಣಗೌಡ


ಹೈದರಾಬಾದ ಸಂಸ್ಥಾನ, ಭಾರತ ಸ್ವಾತಂತ್ರ್ಯ ಪೂರ್ವದ ಅತ್ಯಂತ ಶ್ರೀಮಂತ ದೇಶೀಯ ಸಂಸ್ಥಾನ. 1724 ರಲ್ಲಿ ಅಸಫಜಾಹಿ ಎನ್ನುವ ಹೆಸರಿನಲ್ಲಿ ಸ್ಥಾಪಿತವಾದ ಈ ಸ್ಡತಂತ್ರ ಸಂಸ್ಥಾನವನ್ನು ಒಟ್ಟು ಏಳು ಜನ ನಿಜಾಮರು ಆಳಿ ಹೋದರು. ಈ ರಾಜ್ಯದ ಏಳನೆಯ ಹಾಗೂ ಕೊನೆಯ (ದೊರೆ) ನಿಜಾಮ ನವಾಬ ಮೀರ ಉಸ್ಮಾನ ಅಲಿ ಖಾನ್ ಬಹಾದ್ದೂರ. ತನ್ನ ವಿಚಿತ್ರ ವರ್ತನೆಗಳಿಂದ ಹೆಸರಾದ ಈತನ ಬಗ್ಗೆ ಹಲವು ನಂಬಲು ಅಸಾಧ್ಯವಾದ ಮಾಹಿತಿಗಳನ್ನು ಕೇಳುತ್ತಿರುತ್ತೇವೆ.

ಧರ್ಮಬೀರು ಮುಸಲ್ಮಾನನಾಗಿದ್ದ ನಿಜಾಮ ಅಷ್ಟೇ ಜಿಪುಣನಾಗಿದ್ದ. ವಿಶ್ವದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆ ಆತನದಾಗಿತ್ತು. ಪೇಪರ್ ವ್ಹೇಟ್ ಗಾಗಿ ಆತ ಜೇಕಬ್ ಡೈಮಂಡನ್ನು ಬಳಸುತ್ತಿದ್ದ. ಆತನ ಟೇಬಲ್ಲಿನ ಡ್ರಾಯರನಲ್ಲಿ ಅದನ್ನು ಇಟ್ಟಿರುತ್ತಿದ್ದ. ಒಂದು ನಿಂಬೆ ಹಣ್ಣಿನಷ್ಟಿದ್ದ ಆ ವಜ್ರ 280 ಕ್ಯಾರೆಟ್ ತೂಗುತ್ತಿತ್ತು. ನಿಜಾಮನ ಹತ್ತಿರ ಹೇರಳವಾದ ಚಿನ್ನಾಭರಣಗಳಿದ್ದವು. ಅವನಲ್ಲಿದ್ದ ಮುತ್ತು ರತ್ನಗಳಿಗೆ ಲೆಕ್ಕವೇ ಇಲ್ಲ. ಪಚ್ಚೆ, ಕೆಂಪು ಮತ್ತಿತರ ನಮೂನೆಯ ಹರಳುಗಳು ಅವನ ಭಂಡಾರದಲ್ಲಿತ್ತು. ಆ ಕಾಲದಲ್ಲಿ ಅವುಗಳ ಅಂದಾಜು ಬೆಲೆ 50 ಕೋಟಿ ರೂಪಾಯಿಗಳು. (ಈಗಲೂ ನಿಜಾಮನ ಹತ್ತಿರ ಇದ್ದ ಆಭರಣಗಳ ಪ್ರದರ್ಶನವನ್ನು ಆರ.ಬಿ.ಐ ವತಿಯಿಂದ ಏರ್ಪಡಿಸಲಾಗುತ್ತದೆ.)

ಇದೆಲ್ಲದರ ಹೊರತಾಗಿ ನಿಜಾಮ ಇಡೀ ಹೈದರಾಬಾದ ಸಂಸ್ಥಾನದ ಒಡೆಯನಾಗಿದ್ದ. ಪ್ರಥಮ ಮಹಾ ಯುದ್ಧದ ಸಮಯದಲ್ಲಿ ನಿಜಾಮ ಬ್ರಿಟಿಷ ಸರ್ಕಾರಕ್ಕೆ ಇಪ್ಪತ್ತೈದು ಮಿಲಿಯನ್ ಪೌಂಡುಗಳನ್ನು ಯುದ್ಧದ ಪರಿಹಾರಕ್ಕೆಂದು ನೀಡಿದ್ದ. ಹೀಗೆ ಮೊದಲಿಂದಲೂ ಬ್ರಿಟಿಷರೊಡನೆ ಸ್ನೇಹಪೂರ್ವಕವಾಗಿ ಇದ್ದುದರಿಂದಲೇ ಭಾರತದ ಯಾವ ಅರಸನಿಗೂ ಇಲ್ಲದ ಗೌರವ ನಿಜಾಮನಿಗಿತ್ತು. ಇತರೆ ರಾಜರಿಗೆ ಅವರ ಹೆಸರಿನ ಜೊತೆ ಹಿಸ್ ಹೈನೆಸ್ ಎಂಬ ನಾಮಾಂಕಿತವಿದ್ದರೆ ನಿಜಾಮನಿಗೆ ಮಾತ್ರ ಹಿಸ್ ಎಕ್ಸಾಲ್ಟೆಡ್ ಹ್ಯೆನೆಸ್ ಎನ್ನುವ ನಾಮಾಂಕಿತವನ್ನು ಬ್ರಿಟಿಷ ಸರಕಾರ ನೀಡಿತ್ತು. (ಉದಾ- ಹಿಸ್ ಹೈನೆಸ್ ದ ಮಹಾರಾಜ ಆಫ್ ಮೈಸೂರ್ ಹೀಗೆ ನಿಜಾಮನಿಗೆ ಹಿಸ್ ಎಕ್ಸಾಲ್ಟೆಡ್ ಹೈನೆಸ್ ದ ನಿಜಾಮ್ ಆಫ್ ಹೈದರಾಬಾದ್)
ಇಷ್ಟೆಲ್ಲ ಇದ್ದರೂ ಆತ ಸರಳ ಜೀವಿಯಾಗಿದ್ದ .

ಆತ ಉಡುತ್ತಿದ್ದುದು ಹತ್ತಿ ಬಟ್ಟೆಯ ಪಾಯಿಜಾಮ. ವಿದೇಶದಿಂದ ತರಿಸಿ ಧರಿಸ ಬಹುದಾಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದ ಸಾದಾ ಪಾದರಕ್ಷೆಗಳನ್ನೇ ಹಾಕಿ ಕೊಳ್ಳುತ್ತಿದ್ದ. ಆತನ ಬೆಡ್ ರೂಮಿನಲ್ಲಿ ಸಾದಾರಣ ಮಂಚವನ್ನೇ ಹಾಕಿಸಿದ್ದ. ಅನೇಕ ನವಾಬರು, ರಾಜರು ರತ್ನಗಂಬಳಿಗಳನ್ನು ಬಳಸುತ್ತಿದ್ದರೆ ನಿಜಾಮ ಬಳಸುತ್ತಿದ್ದುದು ಸಾದಾರಣವಾದ ಹಾಸಿಗೆ ಮಾತ್ರ. ಆತ ಎಂದಿಗೂ ದಿನಕ್ಕೊಂದು ಟೋಪಿ ಬದಲಿಸಲಿಲ್ಲ. ಬದಲಾಗಿ ದೀರ್ಘ ಕಾಲದವರೆಗೆ ಒಂದೇ ಟೋಪಿ ಧರಿಸಿದ್ದ.
ಇರಾಕಿನ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್ ತನ್ನ ಶೌಚಾಲಯಗಳ ಟಬ್ ಗಳಿಗೂ ಚಿನ್ನದ ಲೇಪನ ಮಾಡಿಸಿದ್ದನ್ನು ನಾವೆಲ್ಲ ಕೇಳಿದ್ದೇವೆ. ಆತನ ಪದಚ್ಯುತಿಯಾದಾಗ ಟಿ.ವಿಗಳಲ್ಲಿ ನೋಡಿದ್ದೆವು ಕೂಡಾ. ಆದರೆ ನಿಜಾಮ ನೂರಾರು ಕಡೆ ಚಿನ್ನದ ತಟ್ಟೆಗಳಲ್ಲಿ ಊಟ ಮಾಡಬಹುದಾಗಿದ್ದರೂ ಆತ ಊಟ ಮಾಡುತ್ತಿದ್ದುದು ಚಾಪೆ ಮೇಲೆ ಕುಳಿತು ಸ್ಟೀಲ್ ತಟ್ಟೆಯಲ್ಲಿ. ಇವೆಲ್ಲವೂ ಆತ ಸರಳ ಜೀವಿ ಎಂದು ಪರಿಗಣಿಸಲು ನೆರವಾಗಬಲ್ಲ ಅಂಶಗಳು. ಆದರೆ. . .

ತುಂಡು ಸಿಗರೇಟು ಸೇದುತ್ತಿದ್ದನೆ ನಿಜಾಮ?
ಲ್ಯಾರಿ ಕಾಲಿನ್ಸ ಅವರು ಡೊಮಿನಿಕ್ ಲೇಪಿಯರ್ ಜೊತೆ ಸೇರಿ ಬರೆದ ಫ್ರೀಡಂ ಎಟ್ ಮಿಡ್ ನೈಟ್ (ಕನ್ನಡ ಅನುವಾದ- ಎಚ್. ಆರ್. ಚಂದ್ರವದನ ರಾವ್ ನಡುರಾತ್ರಿಯಲ್ಲಿ ಸ್ವಾತಂತ್ರ್ಯ) ಕೃತಿಯಲ್ಲಿ ನಿಜಾಮ ಮೀರ ಉಸ್ಮಾನ ಅಲಿ ಖಾನ್ ಒಬ್ಬ ಲೋಭಿ, ಆಸೆಬುರುಕ ಎಂದು ವಿವರಿಸಲಾಗಿದೆ. ರಾಜ ಎಂದ ಮೇಲೆ ಆಸೆ ಇರುವುದು ಸಹಜವೆನಿಸಿದರೂ ಅತಿಥಿಗಳು ಸೇದಿ ಎಸೆದ ತುಂಡು ಸಿಗರೇಟುಗಳನ್ನು ಸೇದುತ್ತಿದ್ದ ಎಂಬ ವಿವರವನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ವಿಶ್ವದ ಅತ್ಯಂತ ಶ್ರೀಮಂತನೊಬ್ಬ ಅದೂ ಅರಸನೊಬ್ಬ ಈ ರೀತಿ ಬೇರೆಯವರು ಸೇದಿ ಬಿಸಾಡಿದ ಸಿಗರೇಟು ಸೇದುತ್ತಾನೆಂದರೆ ...?

ನಿಜಾಮ ಆ ಕಾಲದಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತ ರಾಜನಾಗಿದ್ದ ಟರ್ಕಿ ಸುಲ್ತಾನನಿಗೆ ತನ್ನ ಮಗಳನ್ನು ಕೊಟ್ಟಿದ್ದ. 1942 ರಲ್ಲಿ ಬೆವೆರ್ಲಿ ನಿಕಲೇಸ್ ಭಾರತಕ್ಕೆ ಭೇಟಿ ಕೊಟ್ಟಾಗ ಹೀಗೆ ಹೇಳುತ್ತಾನೆ- 'ಒಂದು ವೇಳೆ ನಿಜಾಮನ ಚಿರಾಸ್ತಿಯನ್ನು ಮಾರುಕಟ್ಟೆಗೆ ಬಿಟ್ಟಿದ್ರೆ ವಿಶ್ವದ ಮಾರುಕಟ್ಟೆಯೇ ಅಲ್ಲೋಲ ಕಲ್ಲೋಲವಾಗುತ್ತಿತ್ತು' ತನ್ನ ಸ್ವಾತಂತ್ರ್ಯ ಕಳೆದು ಕೊಂಡ ಮೇಲೂ 1950 ರಲ್ಲಿ ಆತನ ವೈಯಕ್ತಿಕ ಆಸ್ತಿ 200 ಕೋಟಿ ರೂಪಾಯಿಗಳು. ಆ ಕಾಲದಲ್ಲಿ ಅರಮನೆಗಳ ಕಿಮ್ಮತ್ತೇ 100 ಕೋಟಿ ರೂಪಾಯಿಗಳು. ಇದಲ್ಲದೆ ಸರ್ಫ್-ಎ-ಖಾಸ್ ಇದರ ಕಂದಾಯವೇ ಮೂರುವರೆ ಕೋಟಿ ರೂಪಾಯಿಗಳು. ಇಷ್ಟೆಲ್ಲವುಗಳ ಜೊತೆಗೆ ಆತನಿಗೆ ಉರ್ದು, ಪರ್ಷಿಯನ್, ಅರೆಬಿಕ್ ಹಾಗೂ ಇಂಗ್ಲೀಷ್ ಜ್ಙಾನವನ್ನು ಕೂಡಾ ನೀಡಲಾಗಿತ್ತು. ಇಂತಹ ವಿದ್ಯಾವಂತ ನಿಜಾಮ ಅರಮನೆಗೆ ಬಂದ ಅತಿಥಿಗಳು ಸೇದಿ ಬಿಟ್ಟ ಸಿಗರೇಟುಗಳನ್ನು ಸೇದುತ್ತಿದ್ದನೆಂದು ಬರೆದರೆ ನಂಬುವುದು ಸ್ವಲ್ಪ ಕಷ್ಟವೇ ಸರಿ, ಅಥವಾ ಸಾಮಾನ್ಯ ಜನರು ಅಲ್ಲಲ್ಲಿ ಬಾಯಿ ಚಪಲಕ್ಕೆ ಆಡುವ ಮಾತೇ ಹೀಗೆ ಪುಸ್ತಕದ ರೂಪಕ್ಕೆ ಇಳಿಯಿತೇ. . . . .?

ಸಿಂಹಾಸನದಿಂದಿಳಿದು ಅಂಬೆಗಾಲಿಟ್ಟನೇ ನಿಜಾಮ?
ಅದೇ ಪುಸ್ತಕದಲ್ಲಿ ಇನ್ನೊಂದು ವಿವರ ಹೀಗಿದೆ ವರ್ಷಕ್ಕೆ ಒಂದು ಬಾರಿ ಹಲವು ಸಂಸ್ಥಾನಗಳಲ್ಲಿ ಶ್ರೀಮಂತ ಪ್ರಜೆಗಳು ತಮ್ಮ ರಾಜರಿಗೆ ಮರ್ಯಾದೆ ತೋರಿಸಲು ಚಿನ್ನದ ನಾಣ್ಯವನ್ನು ಸಾಂಕೇತಿಕವಾಗಿ ಅರ್ಪಿಸುವ ವಾಡಿಕೆಯಿತ್ತು. ರಾಜರುಗಳು ಅದನ್ನು ಮುಟ್ಟಿ ವಾಪಸ್ಸು ಹಿಂದಿರುಗಿಸುತ್ತಿದ್ದರು. ಆದರೆ ಹೈದರಾಬಾದ್ ನಿಜಾಮನ ಬಳಿ ಸಾಂಕೇತಿಕ ಅನ್ನುವುದೇನೂ ಇರಲಿಲ್ಲ. ಕೊಟ್ಟದ್ದನ್ನು ಗಬಕ್ಕನೆ ಕಿತ್ತುಕೊಂಡು ಸಿಂಹಾಸನದ ಪಕ್ಕದಲ್ಲಿದ್ದ ಚೀಲಕ್ಕೆ ಅವನು ಹಾಕುತ್ತಿದ್ದ. ಒಂದು ಬಾರಿ ಶ್ರೀಮಂತನೊಬ್ಬ ಅರ್ಪಿಸಿದ ಚಿನ್ನದ ನಾಣ್ಯ ಕೆಳಕ್ಕೆ ಬಿದ್ದು ಹೋಯಿತು. ನಿಜಾಮ ತಕ್ಷಣವೇ ಸಿಂಹಾಸನದಿಂದಿಳಿದು ಅಂಬೆಗಾಲು ಹಾಕುತ್ತ ಉರುಳುತ್ತಿದ್ದ ಚಿನ್ನದ ನಾಣ್ಯಗಳನ್ನು ಹಿಡಿದು ತಂದು ಚೀಲಕ್ಕೆ ಹಾಕಿಕೊಂಡ
ನಿಜಕ್ಕೂ ಲ್ಯಾರಿ ಕಾಲಿನ್ಸ ಮತ್ತು ಡೊಮಿನಿಕ್ ಲೇಪಿಯರ್ ಬರೆದಿರುವ ಫ್ರೀಡಂ ಎಟ್ ಮಿಡ್ ನೈಟ್ ಅದ್ಭುತ ಕೃತಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಮೇಲಿನ ಎರಡು ಸಂಗತಿಗಳನ್ನು ನಂಬುವುದು ತುಂಬಾ ಕಷ್ಟ. ಅದಕ್ಕೆ ಪೂರಕವಾದ ಹೇಳಿಕೆಗಳನ್ನು ಗ್ರಂಥದಲ್ಲಿ ದಾಖಲಿಸಿದ್ದರೆ ಉಪಕಾರವಾಗುತ್ತಿತ್ತು.

ನಿಜಾಮ ಕೆಳಕ್ಕೆ ಬಿದ್ದ ನಾಣ್ಯವನ್ನು ಅಂಬೆಗಾಲಿಕ್ಕಿ ತೆಗೆದು ಕೊಂಡಿದ್ದು ಸುಳ್ಳಲ್ಲ, ಆದರೆ ಆ ಘಟನೆ ನಡೆದದ್ದು ನಿಜಾಮ ಚಿಕ್ಕ ಬಾಲಕನಿದ್ದಾಗ. ಅದರ ವಿವರವನ್ನು ನಾನು ಸಂಶೋಧನೆಗೆ ತೊಡಗಿದ್ದಾಗ ಗಮನಿಸಿದ್ದೆ. ನಿಜವಾದ ವಿವರ ಹೀಗಿದೆ.
. . . .ಮೂಸಿ ನದಿ ದಡದ ಮೇಲಿನ ಹೈದ್ರಾಬಾದ್ ನಲ್ಲಿ ಸುಮಾರು ನವಾಬರ ವಂಶಕ್ಕೆ ಸೇರಿದ 1100 ಕುಟುಂಬಗಳಿದ್ದವು. ಆಂಧ್ರಪ್ರದೇಶದ ತೆಲಂಗಾಣ, ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಹೈದ್ರಾಬಾದ್ ಕರ್ನಾಟಕದ ಬೀದರ, ಗುಲ್ಬರ್ಗ, ರಾಯಚೂರು ಹಾಗು ಈಗಿನ ಕೊಪ್ಪಳ ಜಿಲ್ಲೆಗಳು ಸೇರಿ, ಒಟ್ಟು 16 ಜಿಲ್ಲೆಗಳಿಗೆ ಹೆಚ್ಚು ಕಡಿಮೆ ಇವರೇ ಒಡೆಯರು. 6ನೇ ನಿಜಾಮನ ಹೆಸರು ಮೀರ್ ಮೆಹಬೂಬ್ ಅಲಿ ಖಾನ್. ಆತನ ಮಗನೇ ಮೀರ ಉಸ್ಮಾನ್ ಅಲಿ ಖಾನ. 6ನೆ ನಿಜಾಮ ಮಹಬೂಬ್ ಅಲಿ ಖಾನ್ ಇರುತ್ತಿದ್ದ ಫಲಕ್ನುಮಾ ಅರಮನೆ (ಹೆವೆನ್ಸ್ ವ್ಯೂ) ಗೆ ಆಗಿನ್ನೂ ಚಿಕ್ಕವನಿದ್ದ ಮೀರ್ ಉಸ್ಮಾನ್(ಮುಂದೆ ನಿಜಾಮ ಪಟ್ಟಕ್ಕೇರಬೇಕಾದವ) ವಾರಕ್ಕೊಮ್ಮೆ ತಂದೆಗೆ ಗೌರವ ಸಲ್ಲಿಸಲು ಹೋಗಬೇಕಾಗಿದ್ದಿತು.

ಹೀಗೊಂದು ದಿನ ಬಾಲಕ ಮೀರ ಉಸ್ಮಾನ್ ಅರಮನೆಗೆ ಹೋದ. ತಂದೆ ಹರೆಮ್ ನಿಂದ ಬರಲು ತಡವಾಯ್ತು. ತಂದೆಯನ್ನು ಕಾಯುವ ಸಲುವಾಗಿ ಈತ ನಿಜಾಮನ ಇನ್ನೊಬ್ಬ ಮಗ ಸಾಹೇಬ್ ಜಂಗ್ ನ ಜೊತೆ ಬಿಲಿಯರ್ಡ್ಸ್ ಆಟದಲ್ಲಿ ತೊಡಗಿದ್ದ. ತಂದೆ ಆರನೇ ನಿಜಾಮ ಮೀರ ಮಹಬೂಬ್ ಅಲಿ ಅಲ್ಲಿಗೆ ಬಂದಾಗ ಉಸ್ಮಾನ್ ಟೇಬಲ್ ಕೆಳಗೆ ಏನನ್ನೋ ಹುಡುಕುತ್ತಿದ್ದ. ತಂದೆ ಏನು ಮಾಡುತ್ತಿರುವೆ ಎಂದು ಕೇಳಿದಾಗ ಬಾಲಕ ಉಸ್ಮಾನ್ ಸಾಹೇಬ್ಜಾದಾ ನಾಣ್ಯವೊಂದನ್ನು ಕೆಳಗೆ ಬೀಳಿಸಿದ್ದ, ಅದನ್ನು ಹುಡುಕುತ್ತಿದ್ದೇನೆ ಎಂದ ಮುಗ್ದವಾಗಿ, ತಂದೆ ಗಂಭೀರವಾದರು. ನೆಲಕ್ಕೆ ಬಿದ್ದ ನಾಣ್ಯ ಆಯುವ ಮೂಲಕ ತಮ್ಮ ಗೌರವಕ್ಕೆ ಧಕ್ಕೆ ತಂದಿರುವಿ ಎಂದು ಮಗನನ್ನು ಜರಿದು ಹೊರ ಹೋಗು ಎಂದು ಆದೇಶಿಸಿದರು.

ತನಗೆ ಮಗ ಉಸ್ಮಾನನ ಮುಖ ತೋರಿಸ ಬಾರದೆಂದು ಅಧಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು. ಅಂತೆಯೇ ತಾನು ಸಾಯುವವರೆಗೆ ಮಗನ ಮುಖ ನೋಡಲಿಲ್ಲವಂತೆ ತಂದೆ ಮೀರ್ ಮಹಬೂಬ್ ಅಲಿ ಖಾನ್ ಬಹಾದ್ದೂರ್. ತನ್ನ ನಂತರ ಉಸ್ಮಾನನನ್ನು ನಿಜಾಮನನ್ನಾಗಿ ಮಾಡಬಾರದೆಂದು ಕೂಡಾ ಆತ ಹೇಳಿದ್ದನಂತೆ. ಇನ್ನೊಬ್ಬ ಮಗ ಸಾಹೇಬ್ ಜಂಗನನ್ನು ಅಧಿಕಾರಕ್ಕೆ ತರುವ ಯತ್ನಗಳು ಕೂಡಾ ನಡೆದಿದ್ದವು.ಆದರೆ ಲಾರ್ಡ ರಿಪ್ಪನ್ ವೈಸರಾಯ್ ಇದ್ದಾಗಲೇ ಉಸ್ಮಾನ್ ಮುಂದಿನ ನಿಜಾಮ ಎಂದು ಘೋಷಿಸಿದ್ದ.. 6ನೇ ನಿಜಾಮ ಫಲಕ್ನುಮಾ ಅರಮನೆಯಲ್ಲೇ ಸತ್ತಿದ್ದರಿಂದ ಉತ್ತರಾಧಿಕಾರಿ ಅಲ್ಲಿ ವಾಸಿಸ ಬಾರದೆಂದು ಅದನ್ನು ಗೆಸ್ಟ್ ಹೌಸ್ ಆಗಿ ಪರಿವರ್ತಿಸಲಾಯಿತು. ಇಂತಹ ಉಸ್ಮಾನ ಅಲಿಗೆ ಎರಡು ವರ್ಷ ತರಬೇತಿ ಅವಧಿ ಗೊತ್ತು ಪಡಿಸಲಾಯಿತು. ಆಗ ಆತನಿಗೆ 25 ವರ್ಷ ವಯಸ್ಸು. ಕೆಳಗೆ ಬಿದ್ದ ನಾಣ್ಯ ನಿಜಾಮ ಆಯ್ದದ್ದು ಚಿಕ್ಕ ಬಾಲಕನಿದ್ದಾಗ. ಆದರೆ ನಿಜಾಮನು ಸಿಂಹಾಸನದಿಂದ ಕೆಳಗಿಳಿದು ಅಂಬೆಗಾಲಿಡುತ್ತ ಹೋಗಿ ಉರುಳುತ್ತಿದ್ದ ಚಿನ್ನದ ನಾಣ್ಯವನ್ನು ತಂದು ಚೀಲಕ್ಕೆ ಹಾಕಿ ಕೊಂಡ ಎಂಬುದನ್ನು ಲೇಖಕರು ಯಾವ ಮೂಲದಿಂದ ಈ ಅಂಶವನ್ನು ದಾಖಲಿಸಿದರೋ. . . .? ಅಥವಾ ನಿಜಾಮ ತನ್ನ ಆಳ್ವಿಕೆ ಅವಧಿಯಲ್ಲಿ ಸ್ವತಂತ್ರನಾಗಿರಲು ಬಯಸಿ ಇತ್ತೆಹಾದ್-ಉಲ್-ಮುಲ್ಕ್ ಸಂಘಟನೆಯ ಮುಖಂಡ ಕಾಸಿಂ ರಜ್ವಿಯ ಮತಾಂಧತೆಗೆ ಬೆಂಬಲಿಸಿ ಹೈದ್ರಾಬಾದ್ ಸಂಸ್ಥಾನದಲ್ಲಿ ಅಮಾಯಕರ ಮೇಲೆ ಹಿಂಸಾಚಾರ ನಡೆಯಲು ಕಾರಣೀಭೂತನಾದದ್ದಕ್ಕೆ ಯಾರಾದರೂ ಕುಹಕಿಗಳು ಈ ರೀತಿ ಸುದ್ದಿ ಹಬ್ಬಿಸಿ ತೃಪ್ತಿ ಪಟ್ಟರೋ? ಯಾವುದಕ್ಕೂ ಯಾರಾದರೂ ಹಿರಿಯ ಸಂಶೋಧಕರು ಈ ಬಗ್ಗೆ ಹೆಚ್ಚಿನ ಮಾಹಿತಿಗಳಿದ್ದರೆ ತಿಳಿಸಿದರೆ ನಿಜವಾದ ಇತಿಹಾಸ ಪುನರ್ರಚಿಸಲು ನೆರವಾದೀತು.
( ಲೇಖಕರು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರು.).

0 comments:

Post a Comment