ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:48 PM

'ನೀರುಕಾಯಿ ಮರ'

Posted by ekanasu

ವೈವಿಧ್ಯ

ನನ್ನ ಕಾಲುಗಳು ಶಾಲೆ ಕಡೆ ಮುಖಮಾಡಿದ್ದವು ಆದರೆ ನನ್ನ ಕಣ್ಣುಗಳು ಮಾತ್ರ ರಸ್ತೆ ಬದಿಯ ಮರದ ಕಡೆಗೆ ನೋಡುತ್ತಿದ್ದವು. ಏಕೆಂದರೆ 'ನೀರುಕಾಯಿ ಮರ' ದಲ್ಲಿ ಹೂವುಗಳ ಸಂಭ್ರಮ. ಆಕಾಶಕ್ಕೆ ಬೆಂಕಿ ಹತ್ತಿದಂತೆ ಕಾಣುತ್ತಿತ್ತು. ವಾವ್.. ಆ ಹೂವುಗಳನ್ನು ನೋಡುವುದೆಂದರೆ ಒಂದು ರೋಮಾಂಚನ.ಒಂದು ಅಳಿಲು ಆಗಾಗ ಮರದ ಮೇಲಿನ ಹೂವುಗಳ ಮಧ್ಯ ತನ್ನ ಮೂತಿ ಹಾಕಿ ಹೊರ ತೆಗೆಯುತ್ತಿತ್ತು.
ಈ ಮರದ ಸೊಬಗು, ಈ ಮರದ ಹೂವಿನ ಲೋಕವನ್ನು ಅದರ ಬಣ್ಣಗಳ ಸಂಭ್ರಮವನ್ನು ಹತ್ತಿರದಿಂದ ನೋಡಿದಾಗ ನಿಜಕ್ಕೂ ಮನಸ್ಸು ರೋಮಾಂಚನಗೊಳ್ಳುತ್ತದೆ. ಇದರ ಒಳಲೋಕ ಹೊಕ್ಕರೆ ರಂಗೋರಂಗು. ಈ ಸುಂದರ ಮರಕ್ಕೆ ಹಳ್ಳಿ ಕಡೆ 'ನೀರುಕಾಯಿ ಮರ', ನೀರುಬುಗ್ಗೆ ಮರವೆನ್ನುತ್ತಾರೆ. ಕಂಡದ್ದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಇಲ್ಲಿದೆ. ಮುಂದೆ ನೋಡಿದಂತೆಲ್ಲಾ ನಿಮ್ಮ ಮನಸ್ಸಿನಲ್ಲೂ ಹಿಡಿದಿಟ್ಟುಕೊಳ್ಳಬಹುದು.


ಇದು ಪ್ರಪಂಚದ ಹೂ ಬಿಡುವ ಸುಂದರ ಮರಗಳಲ್ಲೊಂದಾಗಿದೆ. ಈ ಮರ ಆಫ್ರಿಕಾ ಮೂಲದ್ದು. ಶ್ರೀಲಂಕಾ ದೇಶಗಳಲ್ಲೂ ಈ ಮರಗಳಿವೆ. ಈ ಮರ ಭಾರತದಲ್ಲಿ ಚಿಕ್ಕಮಗಳೂರಿನ ಪರಿಸರದಲ್ಲಿ, ಬೆಂಗಳೂರು, ಹೈದರಾಬಾದ್, ಮುಂಬೈ ಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಉತ್ತರಕರ್ನಾಟಕ ಭಾಗಗಳಲ್ಲಿ ಅಲ್ಲಲ್ಲಿ ಮಾತ್ರ ಕಾಣುತ್ತವೆ.


'ಬಿಗ್ನೋನಿಯೇಸೀ' ಕುಟುಂಬಕ್ಕೆ ಸೇರಿದ ಈ ಮರವನ್ನು ಸಸ್ಯಶಾಸ್ತ್ರದಲ್ಲಿ 'ಸ್ಪ್ಯ್ಪಾತೋಡಿಯಾ ಕೆಂಪನುಲಾಟ್' ಎಂದು ಕರೆಯುತ್ತಾರೆ. ಇದರ ಮೂಲ ಹೆಸರು ಗ್ರೀಕ್ ಭಾಷೆಯಿಂದ ಬಂದಿದೆ. ಈ ಮರಕ್ಕೆ ' ಆಫ್ರಿಕನ್ ಟ್ಯುಲಿಪ್ ಟ್ರೀ' , 'ಸ್ಕಾರ್ಲೆಟ್ ಬೆಲ್ ಟ್ರೀ' , 'ಫೌಂಟೈನ್ ಟ್ರೀ' ಎಂಬ ಮುಂತಾದ ಹೆಸರುಗಳಿವೆ.

ಈ ಮರಗಳು ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಹೂ ಬಿಡಲು ಪ್ರಾರಂಭಿಸುತ್ತವೆ. ಹೂಗಳು ಕಡು ಕೇಸರಿ ಬಣ್ಣದಿಂದ ಕೂಡಿರುತ್ತವೆ. ಡಿಸೆಂಬರ್ ವರೆಗೆ ಹೂವುಗಳಿರುತ್ತವೆ. ಒಂದು ಮರದಲ್ಲಿ ತುಂಬಾ ಹೂವುಗಳಿದ್ದರೆ ಇನ್ನೊಂದು ಮರ ಇನ್ನೂ ಮೊಗ್ಗು ಬಿಡುತ್ತಿರುತ್ತದೆ.

ಈ ಮರ ಸುಮಾರು 30 ರಿಂದ 50 ಅಡಿಗಳವರೆಗೆ ನೇರವಾಗಿ ಬೆಳೆಯಬಲ್ಲದು. ಇದನ್ನು ಸಾಮಾನ್ಯವಾಗಿ ಉದ್ಯಾನವನಗಳಲ್ಲಿ ಚಿಕ್ಕದಾಗಿಯೂ ಬೆಳೆಸಲಾಗುತ್ತದೆ. ಕಡು ಕಂದುಬಣ್ಣದ ಕಾಂಡ ಹೊಂದಿದ್ದು. ಒಳಗಡೆ ಬಿಳಿ ಬಣ್ಣವಿರುತ್ತದೆ. ಈ ಮರವನ್ನು ಕುಸುರಿ ಕೆಲಸ ಮತ್ತು ಪೇಪರ್ ತಯಾರಿಸಲು ಉಪಯೋಗಿಸುತ್ತಾರೆ. ಇವುಗಳ ಎಲೆಗಳ ಮಧ್ಯದಿಂದ ಮೊಗ್ಗುಗಳು ಒಂದು ಗುಚ್ಚದಂತೆ ಹೊರಬರುತ್ತವೆ.. ಮೊಗ್ಗುಗಳು ಕೊಂಬಿನಾಕಾರದಲ್ಲಿರುತ್ತವೆ. ಹೂವುಗಳು ಅರಳಿದಾಗ ದೋಣಿಯಕಾರದಲ್ಲಿ ಕಾಣುತ್ತವೆ.


ಹೂವುಗಳ ಮಧ್ಯ ನೀರಿನಂತಹ ದ್ರವವಿರುತ್ತದೆ. ಹೂವುಗಳು ಅರಳುವ ಮುನ್ನ ಆ ದ್ರವವನ್ನು ಹೀರಿಕೊಳ್ಳುತ್ತವೆ. ಅಲ್ಲದೇ ಕೆಲವು ಜಾತಿಯ ಪಕ್ಷಿಗಳು, ಅಳಿಲುಗಳು ಈ ನೀರನ್ನು ಕುಡಿದು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.

ಈ ಹೂವುಗಳ ಮಧ್ಯ ನಾಲ್ಕು ಪರಾಗ ಕೇಸರಗಳಿರುತ್ತವೆ. ಅದರಲ್ಲಿ ಎರಡು ಚಿಕ್ಕದಾಗಿ ಇನ್ನೆರಡು ದೊಡ್ಡದಾಗಿರುತ್ತವೆ. ಅವು ಒಂದೊಕ್ಕೊಂದು ಮುತ್ತುಕೊಡುತ್ತಿರುವಂತೆ (Kissing anthers) ನೇರವಾಗಿ ನಿಂತಿರುತ್ತವೆ. ಇದರಿಂದ ಇವುಗಳ ಪರಾಗಸ್ಪರ್ಶಕ್ಕೆ ಸಹಾಯವಾಗುತ್ತದೆ. ಹೂಗಳು ಉದುರಿದ ಮೇಲೆ ಕೋಡಿನಾಕಾರದ ಬೀಜಗಳು ಉತ್ಪತ್ತಿಯಾಗುತ್ತವೆ. ಹೀಗೆ ಅರಳುವುದರಿಂದ ಇದರಿಂದ ಬೀಜ ಪ್ರಸರಣ ಹೆಚ್ಚಾಗುತ್ತದೆ ಎಂದು ವಿವರಣೆ ನೀಡಿದರು.


ಪ್ರಕೃತಿಯು ನಮಗೆ ಒಂದು ಪಾಠಶಾಲೆ. ದಿನನಿತ್ಯ ನಮ್ಮ ಕಣ್ಣೆದುರಿಗೆ ಹಲವಾರು ಪಾಠಗಳು ನಡೆಯುತ್ತಿದ್ದರೂ ನಮ್ಮ ಗಮನ ಹೋಗುವುದು ಕೆಲವೊಮ್ಮೆ ಮಾತ್ರ . ಅವುಗಳನ್ನು ಕಂಡು ಸಂಭ್ರವಿಸುವುದೊಂದು ಅನನ್ಯ ಅನುಭವ. ಸಸ್ಯ ಲೋಕ ತನ್ನ ಗರ್ಭದಲ್ಲಿ ಎಷ್ಟೊಂದು ಅತ್ಯದ್ಭುತ, ಆಶ್ಚರ್ಯಕರ ಬಣ್ಣ, ವಿನ್ಯಾಸ, ಗುಣಗಳನ್ನು ಅಡಗಿಸಿಕೊಂಡಿದೆಯೋ ಏನೋ.....!?.

ಚಿತ್ರ ಲೇಖನ : ನಾಮದೇವ ಕಾಗದಗಾರ.
ರಾಣೇಬೆನ್ನೂರು(ಹಾವೇರಿ ಜಿಲ್ಲೆ)

0 comments:

Post a Comment