ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಬೇಸಾಯ ಪುರುಷ ಪ್ರಧಾನ ವ್ಯವಸ್ಥೆ ಎಂಬ ಭಾವನೆ ಇದೆ. ಆದರೆ ಹೊಲಗದ್ದೆಗಳಲ್ಲಿ ದುಡಿಯುವವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಕೆಲ ಮಹಿಳೆಯರು ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಹೊಲದಲ್ಲಿ ಏನನ್ನು ಬೆಳೆಯಬೇಕು ಎಂದು ನಿರ್ಧರಿಸುವುದರ ಜೊತೆಗೆ ಬೆಳೆದ ಕಾಳು ಕಡಿಗಳನ್ನು ಮಾರಾಟ ಮಾಡುವವರೆಗೆ ಎಲ್ಲವನ್ನೂ ಮಹಿಳೆಯರೇ ನಿರ್ಧರಿಸುತ್ತಾರೆ.


ಕೆಲವು ಆಳುಗಳಿಂದ ಕೆಲಸ ಮಾಡಿಸದೇ ಸ್ವತಃ ಹೊಲದಲ್ಲಿ ದುಡಿಯುತ್ತಾರೆ. ಅಂತಹ ಮಹಿಳೆಯರಲ್ಲಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕಿನ ಬಾದಮಗಟ್ಟಿ ಗ್ರಾಮದ ರಾಜೇಶ್ವರಿ ಹೀರೆಮಠ ಸಹ ಒಬ್ಬರು.
ಮಳೆಗಾಲದಲ್ಲಿ ಮಣ್ಣಿನಲ್ಲಿ ಹೊರಳಾಡುವ ಎರೆಹುಳಗಳನ್ನು ಹೊರಕ್ಕೆಳೆದು ಅಂಗೈಯಲ್ಲಿ ಹಾಕಿಕೊಂಡು ತಿರುಗಿಸುತ್ತ ಖುಷಿಪಡುತ್ತಿದ್ದ ನೆನಪು ಅನೇಕರಲ್ಲಿ ಇದೆ. ಆದರೆ ಅದೇ ಎರೆಹುಳು ಸಾಕಣೆ ಮತ್ತು ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಾ ವರ್ಷಕ್ಕೆ ಸುಮಾರು 80ಸಾವಿರದಿಂದ 90 ಸಾವಿರದ ತನಕ ಆದಾಯ ಗಳಿಸುತ್ತಿರುವ ರಾಜೇಶ್ವರಿಯವರ ಯಶೋಗಾಥೆ ಇದು.


ರಾಜೇಶ್ವರಿ ಓದಿದ್ದು ಒಂಬತ್ತನೇ ತರಗತಿ. ಚಿಕ್ಕದಿನಿಂದ ಶಿಕ್ಷಕಿಯಾಗಬೇಕು ಎಂದು ಕನಸು ಕಂಡಿದ್ದ ಇವರು ಆಗಿದ್ದು ಮಾತ್ರ ಎರೆಹುಳು ಸಾಕಣೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ಸಾಧಕಿ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ಇವರು ನಂತರ ದಿನಗಳಲ್ಲಿ ಗಂಡನ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡರು. ಒಂದು ದಿನ ರೈತರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಜಲಸಂವರ್ಧನ ಇಲಾಖೆಯಿಂದ ಬಂದ ಡಿ.ಎಸ್ ಪಾಟೀಲ, ಎಸ್.ಎಂ.ಮರಗಾಲ ಮತ್ತು ಜಿ ನಾರಪ್ಪ ಇವರಿಂದ ತರಬೇತಿಯನ್ನು ಪಡೆದು ಅಲ್ಲಿಂದ 2 ಕೆ.ಜಿ ಎರೆಹುಳು ತಂದರು.


ಈಗ ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಾರೆ. ಈಗ ಇವರು ತಯಾರಿಸುತ್ತಿದುವ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಎರೆಹುಳು ಸಾಕಾಣೆ ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತಿದೆ.ಇವರು ತಯಾರಿಸುತ್ತಿರುವ ಎರೆಹುಳುಗೊಬ್ಬರಕ್ಕೆ ಹೆಚ್ಚು ಬೇಡಿಕೆಯೂ ಇದೆ. 2006 ರಲ್ಲಿ ಜಲಸಂವರ್ಧನ ಯೋಜನ ಸಂಘದಿಂದ 2500 ರೂಪಾಯಿ ಸಹಾಯ ಧನ ಪಡೆದು ತಾವು ಕೈಯಿಂದ 2500 ಹಣವನ್ನು ಹಾಕಿ 10 ಅಡಿ ಉದ್ದ 6 ಅಡಿ ಅಗಲ 3 ಅಡಿ ಆಳ ದ ತೊಟ್ಟಿಯನ್ನು ನಿರ್ಮಿಸಿ ಗೊಬ್ಬರ ತಯಾರಿಸಲು ಪ್ರಾರಂಭಿಸಿದರು. ಬೇಡಿಕೆ ಹೆಚ್ಚಾದಾಗ ಎರಡು ನೆಲದ ತೊಟ್ಟಿ ಒಂದು ತಿಪ್ಪೆ ತೊಟ್ಟಿಯನ್ನು ನಿರ್ಮಿಸಿ ಅದರಲ್ಲಿ ಎರೆಹುಳುಗಳನ್ನು ಬಿಟ್ಟು ಗೊಬ್ಬರ ತಯಾರಿಕೆಯಲ್ಲಿ ತೊಡಗಿದ್ದಾರೆ.


ರಾಜೇಶ್ವರಿಯವರು ಗೊಬ್ಬರದ ತೊಟ್ಟಿಗಳಿಗೆ ಹಸಿರೆಲೆಸೊಪ್ಪು, ಚದುರಂಗಸೊಪ್ಪು, ಗೊಬ್ಬರದಸೊಪ್ಪು ಬಿಳಿಹುಲ್ಲಿನಪುಡಿ ಇನ್ನು ಅನೇಕ ತ್ಯಾಜ್ಯ ವಸ್ತುಗಳನ್ನು ಹಾಕಿ ಕೊಳೆಯಲು ಬಿಟ್ಟು ನಂತರ ಎರೆಹುಳುಗಳನ್ನು ಬಿಡುತ್ತಾರೆ. ಶೇ 50 ತೇವಾಂಶ ಇರುವಂತೆ ನೋಡಿಕೋಳ್ಳುತ್ತಾರೆ. ತೊಟ್ಟಿಗಳ ಮೇಲೆ ಬಿಸಿಲಿನ ಝಳ ಬೀಳದಂತೆ ಎಚ್ಚರವಹಿಸಿದ್ದಾರೆ. ತ್ಯಾಜ್ಯ ವಸ್ತುಗಳನ್ನೆಲ್ಲ ಹುಳುಗಳು ತಿಂದುಹಾಕಿ ಚಹಾ ಪುಡಿಯಂತಹ ಎರೆಹುಳು ಗೊಬ್ಬರ ಸಿದ್ದವಾಗುತ್ತದೆ. ಯುಡ್ರಿಲೇಸ್ ಜರ್ಮನ್ ತಳಿ ಮತ್ತು ಆಫ್ರಿಕನ್ ತಳಿಯ ಎರೆಹುಳುಗಳನ್ನು ಸಾಕುವುದರಿಂದ ಗೊಬ್ಬರ ಬೇಗ ಸಿದ್ದವಾಗುತ್ತದೆ ಎನ್ನುತ್ತಾರೆ ರಾಜೇಶ್ವರಿ.

ತಾವು ತಯಾರಿಸಿದ ಗೊಬ್ಬರವನ್ನು ತನ್ನ ಸ್ವಂತ ಹೊಲಕ್ಕೆ ಉಪಯೋಗಿಸುತ್ತಾರೆ ಉಳಿದ ಗೊಬ್ಬರವನ್ನು ಮತ್ತು ಎರೆಹುಳುಮಾರಾಟದಿಂದ ವರ್ಷಕ್ಕೆ ಏನ್ನಿಲ್ಲವೆಂದರು 80 ಸಾವಿರದಿಂದ 90 ಸಾವಿರದವರೆಗೆ ಲಾಭ ಗಳಿಸುತ್ತಾರೆ.
ತನಗಿರುವ 5 ಎಕರೆ ಜಮೀನಿನಲ್ಲಿ ಶ್ರೀಪದ್ದತಿಯಲ್ಲಿ ಭತ್ತ, ಹತ್ತಿ, ಮಾವಿನ ಕೊಪ್ಪಲಿನಲ್ಲಿ ಮಿಶ್ರ ಬೆಳೆಯಾಗಿ ಗೋವಿನಜೋಳ, ನೀಲಗಿರಿ, ತೇಗ, ಗಿರ್, ನೇಪಾಳ ಮತ್ತು ಆಫ್ರಿಕಾ ತಳಿಯ ಹುಲ್ಲನ್ನು ಬೆಳೆಸಿ ಹೈನುಗಾರಿಕೆಯನ್ನು ಮಾಡಿದ್ದಾರೆ. ಹಸುಗಳಿಂದ ಬಂದ ಸಗಣಿಯಿಂದ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಿಕೊಂಡು ಬಯೋಗ್ಯಾಸ್ನ್ನು ಮನೆಯ ಅಡಿಗೆ ಮಾಡಲು ಬಳಸುತ್ತಾರೆ. ರೈತ ಮಹಿಳೆಯರಿಗೆ ಉಚಿತವಾಗಿ ಎರೆಹುಳುಗಳನ್ನು ನೀಡಿ ಅವರನ್ನು ಕೃಷಿಗೆ ಪ್ರೆರೇಪಿಸುತ್ತಾರೆ. ಮನೆಯ ಹಿತ್ತಲಲ್ಲಿ ತೆಂಗು, ನೆಲ್ಲಿ, ನಿಂಬೆ, ಕರಿಬೇವು, ತರಕಾರಿಗಳಾದ ಚವಳಿ, ಟೊಮೆಟೊ, ಹಾಗಲಕಾಯಿ, ಬದನೆಇನ್ನು ವಿವಿಧ ರೀತಿಯ ತರಕಾರಿಗಳನ್ನು ಬೆಳಸಿ ದಿನನಿತ್ಯ ಅಡುಗೆಗೆ ಉಪಯೋಗಿಸುತ್ತಾರೆ. ಆದರೆ ಯಾವುದಕ್ಕೂ ರಾಸಾಯನಿಕ ಸಿಂಪಡಿಸುವುದಿಲ್ಲ.


ಇತ್ತೀಚಿಗೆ ಆಕಾಶವಾಣಿ ಧಾರವಾಡ ಕೇಂದ್ರದಿಂದ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ರೈತರ ಮತ್ತು ರೈತ ಮಹಿಳೆಯರ ತರಬೇತಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಮತ್ತು ಜಲಸಂವರ್ಧನ ಯೋಜನ ಸಂಘದ ಅಡಿಯಲ್ಲಿ ಅನ್ನಪೂರ್ಣೇಶ್ವರಿ ಸಂಘವನ್ನು ಸ್ಥಾಪಿಸಿ ಕೃಷಿಯ ಕುರಿತು ಸಮಾಲೋಚನೆಯನ್ನು ಮಾಡುತ್ತಾರೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯದಿಂದ ನೀಡುವ 'ಶ್ರೇಷ್ಠ ಕೃಷಿಕ ಮಹಿಳೆ' ಎಂಬ ಪ್ರಶಸ್ತಿಯನ್ನು 2010-11 ರಲ್ಲಿ ನೀಡಿ ಗೌರವಿಸಿದ್ದಾರೆ.
ನಿರುದ್ಯೋಗ ಎಂದು ಕಾಲಹರಣ ಮಾಡುವ ಇಂದಿನ ಯುವಕ ಯುವತಿಯರಿಗೆ ಈ ರಾಜೇಶ್ವರಿ ಮಾದರಿಯಾಗಿದ್ದಾರೆ ಇವರ ಸಂಪರ್ಕಕ್ಕೆ 9686976956.- ಟಿ.ಶಿವಕುಮಾರ್
ಸಹ ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಳೇಶ್ವರ

0 comments:

Post a Comment