ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರ - ಅಂತಾರಾಷ್ಟ್ರ ಸುದ್ದಿ: ಸಿಂಗಪುರ ವರದಿ - ವೆಂಕಟ್
ಕನ್ನಡ ಸಂಘ (ಸಿಂಗಪುರ) ಆಶ್ರಯದಲ್ಲಿ, ಸಿಂಗಪುರದಲ್ಲಿನ ವಿವಿಧ ದೇವಸ್ಥಾನಗಳು ಹಾಗು WOODLANDS COMMUNITY CLUB ನ ಆಯೋಗದೊಂದಿಗೆ ಮೊದಲ ಬಾರಿಗೆ ತೆಂಕತಿಟ್ಟು ಶೈಲಿಯ "ಯಕ್ಷಗಾನ"ದ ಸವಿಯನ್ನು ಸವಿಯುವ ಸುವರ್ಣಾವಕಾಶ ಸಿಂಗನ್ನಡಿಗರಿಗೆ ಒದಗಿ ಬಂದಿದೆ.

ಈ ಬಾರಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾಧಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ೪ ದಿನಗಳು ಸತತವಾಗಿ ಕನ್ನಡನಾಡಿನ ಹೆಮ್ಮೆಯ ಪ್ರಾಚೀನ ಜನಪದ ಕಲೆಯ ಮೂಲಕ ವಿವಿಧ ಪೌರಾಣಿಕ ಪ್ರಸಂಗಗಳನ್ನು ಪ್ರಸ್ತುತಪಡಿಸಿ ಯಕ್ಷಗಾನದ ರಸದೌತಣವನ್ನು ಉಣಬಡಿಸಿದರು.

ಮಾರ್ಸ್ಲಿಂಗ್‌ನ ಶ್ರೀ ಶಿವ ಕೃಷ್ಣ ದೇವಸ್ಥಾನದ ಆವರಣದಲ್ಲಿ "ದಕ್ಷಯಜ್ಞ (ದಕ್ಷಾಧ್ವರ), ಭಸ್ಮಾಸುರ ಮೋಹಿನಿ" ಪ್ರಸಂಗವನ್ನು ಪ್ರದರ್ಶಿಸುವುದರೊಂದಿಗೆ ಶ್ರೀ‌ಗಣೇಶವಾಯಿತು. ಎರಡು ಪ್ರಸಂಗಗಳು ನೆರೆದಿದ್ದ ಪ್ರೇಕ್ಷಕರನ್ನು ಸಂಪೂರ್ಣವಾಗಿ ಆವರಿಸಿ ೩ಘಂಟೆಗಳು ಕದಲದೆ ಮೂಖವಿಸ್ಮಿತರಾಗಿ ವೀಕ್ಷಿಸುವಂತೆ ಮಾಡುವಲ್ಲಿ ಸಫಲವಾದವು.


ಶ್ರೀ ಗೌರಿಯ ತವರು ಮನೆಯ ಕಡೆಗಿನ ಸೆಳೆತ, ಶಿವನನ್ನು ಸಂತೈಸುವ ರೀತಿ, ದಕ್ಷನ ಅಹಂಕಾರ, ಶಿವನ ಕಡೆಗಿನ ನಿರ್ಲಕ್ಷ, ಶಿವನ ಪ್ರಳಯಕಾಲದ ಆವೇಶ, ವೀರಭದ್ರನ ಸೃಷ್ಟಿ ಹಾಗು ದಕ್ಷನ ವಧೆಯ ನವರಸಗಳನ್ನಾಧರಿತ ಪ್ರಸಂಗವು ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡಿತ್ತು. ಕೊನೆಯಲ್ಲಿ ವೀರಭದ್ರನು ದಕ್ಷಬ್ರಹ್ಮನನ್ನು ಶಿರಸ್ಸನ್ನು ಚೆಂಡಾಡಿದಾಗ ಪ್ರೇಕ್ಷರರೆಲ್ಲರೂ ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದು ಅವರ ತಲ್ಲೀನತೆಗೆ ಹಿಡಿದ ಕನ್ನಡಿಯಾಗಿತ್ತು.

ಭಸ್ಮಾಸುರ ಮೋಹಿನಿಯ ಪ್ರಸಂಗದಲ್ಲಿ ಭಸ್ಮಾಸುರ ಮತ್ತು ಶಿವನ ನಡುವಿನ ಸಂಭಾಷಣೆ ನೆರೆದಿದ್ದ ಮಕ್ಕಳನ್ನು ಕೂಡ ಸೆರೆದಿಟ್ಟು, ಕೊನೆಯಲ್ಲಿ ಭಸ್ಮಾಸುರನು ಮೋಹಿನಿ ರೂಪದ ವಿಷ್ಣುನೊಂದಿಗಿನ ನಾಟ್ಯದಲ್ಲಿ ತನ್ನ ತಲೆಯ ಮೇಲೆ ಕೈಯಿಟ್ಟುಗೊಂಡು ಭಸ್ಮವಾಗುವ ಸನ್ನಿವೇಶವನ್ನು ನೋಡಲು ರೋಮಾಂಚನವಾಗಿತ್ತು. ಹಿಮ್ಮೇಳದಲ್ಲಿ ಭಾಗವತರ ಅಮೋಘ ಗಾಯನ,ಮೃದಂಗ ಹಾಗು ಚಂಡೆಯ ವಾದನ ಮತ್ತು ಮುಮ್ಮೇಳದ ಸುಮಧುರ ಸಂಭಾಷಣೆಯ ಸಮ್ಮಿಲನವು ಸಿಂಗಪುರದಲ್ಲಿನ ಕಲಾಭಿಮಾನಿಗಳಿಗೆ ಮರೆಯಲಾರದಂತಹ ಸವಿ ಅನುಭವವೆನ್ನಬಹುದು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಖಚಾಂಚಿ ಶೀನಿವಾಸ್ ಅವರಿಂದ ವಂದನಾರ್ಪಣೆ, ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಹಾಗು Shree Siva Krishna Temple ನ ಆಡಳಿತ ಮಂಡಳಿಯಿಂದ ಕಲಾವಿದರಿಗೆ ನೆನಪಿನ ಕಾಣಿಕೆ ಹಾಗು ಪ್ರಸಾದದ ವಿತರಣೆಯೊಂದಿಗೆ ಕಾರ್ಯಕ್ರಮದ ಮಂಗಳವಾಯಿತು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾಧಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಏರ್ಪಡಿಸಿದ "ಯಕ್ಷಗಾನೋತ್ಸವ"ದಲ್ಲಿ, ೨೬ ಅಕ್ಟೋಬರ್ ಪೋಟೊಂಗ್ ಪಾಸಿರ್‌ನ ಶ್ರೀ ಶಿವ ದುರ್ಗ ದೇವಸ್ಥಾನದಲ್ಲಿ "ಶ್ರೀದೇವಿ ಮಹಾತ್ಮೆ", ೨೭ರ ಅಕ್ಟೋಬರ್ ಪಯಾಲೇಬರ್ ಹತ್ತಿರದ ಶ್ರೀ ಶಿವನ್ ದೇವಸ್ಥಾನದಲ್ಲಿ "ಶ್ರೀ ಗಿರಿಜಾ ಕಲ್ಯಾಣ ಹಾಗು ಕುಮಾರ ವಿಜಯ" ಹಾಗು ಕೊನೆಯದಾಗಿ ೨೮ ಅಕ್ಟೋಬರ್‌ರಂದು WOODLANDS COMMUNITY CLUB ಸಭಾಂಗಣದಲ್ಲಿ "ಶ್ರೀ ಗಾಯತ್ರಿ ಮಹಾತ್ಮೆ"ಯ ಆಖ್ಯಾನಗಳನ್ನು ಪ್ರದರ್ಶಿಸಲಾಯಿತು


ಹಿಮ್ಮೇಳದಲ್ಲಿ ಪಟ್ಲ ಸತೀಶ್ ಕುಮಾರ್ (ಭಾಗವತರು),ಪ್ರಶಾಂತ್ ಕುಮಾರ್ ಶೆಟ್ಟಿ (ಮೃದಂಗ),ಗುರುಪ್ರಸಾದ್ ಬೊಲಿಂಜಡ್ಕ (ಚಂಡೆ) ಹಾಗೂ ಮುಮ್ಮೇಳದಲ್ಲಿ ಬಾಲಕೃಷ್ಣ ಗೌಡ, ಬನಾರಿ ಚಂದ್ರಶೇಖರ ಗೌಡ, ಗಣೇಶ್ ಶೆಟ್ಟಿ, ಜಯರಾಮ್ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಮೋಹನ್ ಕುಮಾರ್ ಅಮ್ಮುಂಜೆ, ಮೋನಪ್ಪ ಗೌಡ, ರಮೇಶ್ ಭಟ್ ಸರವು,ರವಿಶಂಕರ್ ವಳಕ್ಕುಂಜ,ರವಿಶೇಖರ್ ಕುಳಾಲ್ ಕಾವೂರ್, ಸುಬ್ರಾಯ ಹೊಳ್ಳ, ಸುರೇಶ್ ಕುಪ್ಪೆಪದವು ಇವರನ್ನೊಳಗೊಂಡ ತಂದವು ಅಮೋಘವಾದಂತಹ ಪ್ರದರ್ಶನಗಳನ್ನು ನೀಡಿ ಸಿಂಗನ್ನಡಿಗರನ್ನು ರಂಜಿಸಿದರು


ಛಾಯಚಿತ್ರ: ರಾಜೇಶ್ ಹೆಗಡೆ.

0 comments:

Post a Comment