ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ದೈನಂದಿನ ಕಾದಂಬರಿ - ಭಾಗ 23

ಅನು ಬೆಳ್ಳೆ.
ಓದುಗರಲ್ಲಿ ಒಂದು ವಿನಂತಿ... ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರಾದ ಅನು ಬೆಳ್ಳೆ ಈ ಕನಸು.ಕಾಂ ಗಾಗಿ ಬರೆಯುತ್ತಿದ್ದ "ಎಲ್ಲಿರುವೆ ಕುಣಿಸದೆ ಕರೆವೆನ್ನ ಕೊರಳೇ...?" ದೈನಂದಿನ ಧಾರಾವಾಹಿ 22 ಕಂತುಗಳಾಗಿ ಮತ್ತೆ ಕೆಲ ಕಾಲ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿತ್ತು. ಓದುಗರ ನಿರಂತರ ಪತ್ರ, ಪ್ರತಿಕ್ರಿಯೆಗಳಿಂದಾಗಿ ಮತ್ತೆ ಧಾರಾವಾಹಿಯನ್ನು ಮುಂದುವರಿಸುತ್ತಿದ್ದೇವೆ. ಓದುಗರ ಪ್ರೋತ್ಸಾಹ ಮುಂದೆಯೂ ದೊರೆಯಲಿ ಎಂಬ ಆಶಯ ನಮ್ಮದು. ಈ ಧಾರಾವಾಹಿಯ ಕುರಿತಾದ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಳುಹಿಸಿ.info@ekanasu.com.


ಅಶುತೋಶ್ ಆ ದಿನ ತುಂಬಾ ಖಿನ್ನನಾಗಿದ್ದ. ತಂದೆಯ ನೆನಪಿಗಾಗಿ ಉಳಿಸಿಕೊಳ್ಳಬಹುದಾಗಿದ್ದ ಭವ್ಯ ಸೌಧವನ್ನು ವೈರಾಗಿಯಂತೆ ಮಾರಾಟ ಮಾಡಿದ್ದ. ಇನ್ನು ಊರಿಗೆ ಹೋಗಿ ಅಲ್ಲಿ ವಾಸ ಮಾಡುವುದು ಬರೀ ಕನಸು. ಒಂದಷ್ಟು ಗೆಳೆಯರನ್ನು ಸಂಪಾದಿಸಿದ್ದು ಬಿಟ್ಟರೆ ಅಲ್ಲಿ ನೆನಪಾಗಿ ಉಳಿದಿದ್ದ ತನ್ನನ್ನು ಸಾಕಿ ಸಲಹಿದ ಹರಿಣಮ್ಮ ಮತ್ತು ರಜೆಯ ದಿನಗಳಲ್ಲಿ ಊರಿಗೆ ಬರುತ್ತಿದ್ದ ತಂದೆ ಮತ್ತು ಅವರ ಶಿಸ್ತಿನ ಜೀವನ ಮಾತ್ರ. ಅದಕ್ಕಾಗಿಯೇ ತಾನೂ ದೇಶಸೇವೆಗಾಗಿ ಟೊಂಕಕಟ್ಟಿ ನಿಂತದ್ದು.

ಅವನದ್ದೇ ರೆಜಿಮೆಂಟ್ನ ಗೆಳೆಯ ಜಸ್ವಿಂದರ್ ರೂಂಗೆ ಬರುವಾಗ ಆಶುತೋಶ್ ಖಿನ್ನನಾಗಿ ಕುಳಿತಿರುವುದು ಕಂಡಿತು.
ಯಾಕೆ ಇಷ್ಟೊಂದು ಖಿನ್ನನಾಗಿದ್ದೀಯಾ? ಊರಿಂದ ಏನಾದ್ರೂ ಸಮಾಚಾರವಿದೆಯಾ? ಅವನ ಮಾತುಗಳನ್ನು ಕೇಳಿ ಒಣನಗೆ ತೋರಿದ.
ಪಶ್ಚಾತ್ತಾಪ ಪಡ್ತಾ ಇದ್ದೇನೆ. ತಂದೆ ಕಟ್ಟಿಸಿರೋ ಮನೆಯನ್ನು ಸೇಲ್ ಮಾಡ್ಬಿಟ್ಟೆ. ಅವರ ನೆನಪಾಗಿಯಾದರೂ ಉಳಿಸ್ಕೊಳ್ಳಬೇಕಿತ್ತೂಂತ ಈಗ ಅನಿಸ್ತಿದೆ. ಏನು ಮಾಡ್ಲಿ ತಲೆಗೆ ಕೈ ಹಚ್ಚಿ ಕುಳಿತಾಗ ಜಸ್ವಿಂದರ್ ಸಮಾಧಾನಿಸಿದ. ಅದಕ್ಯಾಕೆ ಇಷ್ಟೊಂದು ವರಿ ಮಾಡ್ತೀಯಾ? ಈಗ ಅದನ್ನು ಸೇಲ್ ಮಾಡಿರೋದು ನಿನ್ನ ಗೆಳೆಯನಿಗೆ ತಾನೆ? ಅವನಿಗೆ ಫೋನ್ ಮಾಡಿ ಹೇಳು. ಅದನ್ನು ವಾಪಾಸು ಪಡೆಯಬಹುದಲ್ವಾ?
ಆದ್ರೆ ಒಮ್ಮೆ ಅದನ್ನು ಕೊಟ್ಟ ಮೇಲೆ ಮರಳಿ ಪಡೆಯೋದು ಹೇಗೆ! ಅವನು ಬಿಸಿನೆಸ್ಗೋಸ್ಕರ ಈಗಾಗ್ಲೆ ಅದನ್ನು ತನಗೆ ಬೇಕಿದ್ದ ಹಾಗೆ ಮಾಡಿಕೊಂಡಿರ್ತಾನೆ ವಿಷಾದದಿಂದ ನುಡಿದಾಗ, ಹಾಗಾದ್ರೆ ಬಿಟ್ಟು ಬಿಡು ಅದನ್ನು ಅಂದ.

ಅಶುತೋಶ್ ಕಂಪ್ಯೂಟರ್ನ ಮುಂದೆ ಕುಳಿತು, ಯಾರಿಂದ ಮೇಲ್ ಬಂತು? ಅಂದ ಜಸ್ವಿಂದರ್ನನ್ನು ನೋಡಿ, ಯಾವ ಮೇಲ್ ಕೂಡ ಇಲ್ಲ. ನೊ ಚಾರ್ಮ್ ಅಂದಾಗ ಜಸ್ವಿಂದರ್ ಇ-ಮೇಲ್ ತೆರೆದು ಫೋನ್ ಬುಕ್ನಲ್ಲಿರುವ ಕೆಲವು ಗೆಳೆಯರ ಹೆಸರು ಸೂಚಿಸಿದ. ಅದೆಲ್ಲಾ ಯಾರಿಗೆ ಬೇಕು. ನೋಡು ಇಲ್ಲಿ ಅಂದು ತನ್ನ ಮೇಲ್ ತೆರೆದು ಒಂದು ಹುಡುಗಿಯ ಭಾವ ಚಿತ್ರ ತೋರಿಸಿದ. ಜಸ್ವಿಂದರ್ ಆ ಫೋಟೊ ನೋಡುತ್ತಲೇ ಆಶ್ಚರ್ಯ ವ್ಯಕ್ತ ಪಡಿಸಿದ.
ನಿನ್ನ ಖಿನ್ನತೆಗೆ ಅರ್ಥವಿಲ್ಲ ಕಣೋ... ಯಾರೊ ಇಷ್ಟೊಂದು ಮುದ್ದಾದ ಹುಡುಗಿ?
ಗೊತ್ತಿಲ್ಲ. ನಿಖಿಲ್ ಫಾರ್ವರ್ಡ್ ಮಾಡಿರೊ ಮೇಲ್ನಲ್ಲಿ ಇವಳ ಐಡಿ ಇತ್ತು. ನಾನೇ ಸುಮ್ನೆ ಮೇಲ್ ಮಾಡಿದೆ. ಈಗ ಪ್ರತಿದಿನ ಮೇಲ್ ಕಳುಹಿಸ್ತಾ ಇದ್ದಾಳೆ. ಅವಳ ಬಗ್ಗೆ ಹೆಚ್ಚೇನು ಗೊತ್ತಿಲ್ಲ ಅಂದ ಅಶುತೋಶ್.
ಬೇಡ, ಕೊನೆಗೆ ಹೆಸರಾದ್ರೂ ತಿಳ್ಕೊಂಡಿದೀಯಾ?
ನೋಡು, ಇದೆಯಲ್ಲಾ ಈ ಐಡಿಯಲ್ಲಿ ಅಂದವನೇ ಕರ್ಸರನ್ನು ಅವಳ ಹೆಸರಿನ ಮೇಲೆ ಬ್ಲಾಕ್ ಮಾಡಿ ಹಿಡಿದ.
ಸಿಂಚನ! ನೈಸ್ ನೇಮ್. ಅವಳ ರೂಪಕ್ಕೆ ತಕ್ಕ ಹಾಗಿದೆ ಹೆಸರು ಜಸ್ವಿಂದರ್ ಮೆಚ್ಚುಗೆ ಸೂಚಿಸಿದಾಗ ಅಶುತೋಶ್ನಲ್ಲಿ ಅದೇನೊ ಹುರುಪು ತುಂಬಿತು. ಮೆಲ್ಲಗೆ ಉತ್ತರವೆಂಬಂತೆ ಒಂದರೆಡು ಲೈನ್ ಬರೆದು ಸೆಂಡ್ಗೆ ಕರ್ಸರ್ ಇಟ್ಟು ಒತ್ತಿದ. `ಮೇಲ್ ಸಕ್ಸಫುಲಿ ಸೆಂಡ್' ಅನ್ನುವುದು ಸೂಚಿಸಿತು.

ಒಂದೆರಡು ನಿಮಿಷಗಳಲ್ಲಿಯೇ ಚಾಟ್ಗಾಗಿ ಸಿಂಚನ ಕಾಯುತ್ತಿರುವುದು ತಿಳಿಯಿತು. ಜಸ್ವಿಂದರ್, ಮುಂದುವರಿಸು ಅಂದು ತನ್ನ ಕೋಣೆಗೆ ಹೊರಟಾಗ ಅಶುತೋಶ್, ಸಿಂಚನಳ ಜೊತೆಗೆ ಹರಟೆಗೆ ಕುಳಿತ. ಒಂದೊಂದು ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿ ಅವಳ ಮನಸ್ಸನ್ನು ನಿಧಾನವಾಗಿ ಆವರಿಸಿದ. ಆದರೆ ತಪ್ಪಿಯೂ ತಾನು ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಷಯವನ್ನು ಬಹಿರಂಗ ಪಡಿಸಲಿಲ್ಲ. ಅವನಲ್ಲಿ ಹೊಸ ಹುರುಪನ್ನು ತುಂಬಿತ್ತು. ಮುಂದೆ ಬರುವ ರಜೆಯಲ್ಲಿ ಸಿಂಚನಳನ್ನು ಭೇಟಿಯಾಗಬೇಕೆನ್ನುವ ಬಲವಾದ ಹಂಬಲ ಮೂಡಿತು.

ಸಿಂಚನ ಮಾತ್ರ ಮುಚ್ಚುಮರೆಯಲ್ಲದೆ ಅಶುತೋಶ್ನ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿ, ತನ್ನ ಜಾತಕವನ್ನೇ ತೆರೆದಿಟ್ಟಳು. ಅದನ್ನು ಸತ್ಯವೆಂದೇ ತಿಳಿದ ಅಶುತೋಶ್. ಅದಕ್ಕಾಗಿಯೇ ಆ ರೀತಿಯ ನಿರ್ಧಾರಕ್ಕೆ ಬರಲು ಯೋಚಿಸಿದ.
ಕ್ರಮೇಣ ತನ್ನ ಮಾರಾಟವಾದ ತಂದೆಯ ಮನೆಯ ವಿಷಯವನ್ನು ಮರೆತುಬಿಟ್ಟು 'ಆಸೆಯೇ ದುಃಖಕ್ಕೆ ಮೂಲ' ಅನ್ನುವ ಮಂತ್ರವನ್ನು ಮನನ ಮಾಡಿಕೊಂಡ.

ಆ ಸಮಯದಲ್ಲಿಯೇ ನಿಖಿಲ್ನ ಫೋನ್ ಬಂದಾಗ ಆಶ್ಚರ್ಯವಾಯಿತು. ಸಾಮಾನ್ಯವಾಗಿ ಯಾರು ಅವನಿಗೆ ಫೋನ್ ಮಾಡುತ್ತಿರಲಿಲ್ಲ. ಹೆಚ್ಚಾಗಿ ರೆಜೆಮೆಂಟ್ನಲ್ಲಿ ಹೊರಗೆ ಉಳಿಯುವುದರಿಂದ ಕಮ್ಯುನಿಕೇಶನ್ ಸಾಧ್ಯವಾಗುತ್ತಿರಲಿಲ್ಲ. ವಾರದಲ್ಲಿ ಒಂದು ದಿನ ಮಾತ್ರ ಕೋಣೆಗೆ ಬರುವಂತಾಗುತ್ತಿತ್ತು. ಆ ಸಮಯದಲ್ಲಿ ಮಾತ್ರ ಯಾರ ಕಾಲ್ಗಳೇನಾದರೂ ಬಂದರೆ ಮಾತನಾಡುವ ಅವಕಾಶ ದೊರಕುತ್ತಿತ್ತು.
ನಿಖಿಲ್, ತುಂಬಾ ಸಂತೋಷವಾಯ್ತು. ಈಗಷ್ಟೆ ನಿನ್ನನ್ನು ಜ್ಞಾಪಿಸಿಕೊಳ್ತಾ ಇದ್ದೆ. ಹೇಗಿದ್ದೀಯಾ? ನಿನ್ನ ಬಿಸಿನೆಸ್ ಹೇಗೆ ನಡಿತಿದೆ? ಅಶುತೋಶ್ನ ಮಾತುಗಳನ್ನು ಕೇಳಿ ಹೃದಯ ತುಂಬಿ ಬಂತು.

ಚೆನ್ನಾಗಿದ್ದೇನೆ. ನೀನು ಹೇಗಿದ್ದೀಯಾ. ಇವತ್ತು ವಾರದ ರಜಾ ಅಂದುಕೊಂಡು ಕಾಲ್ ಮಾಡ್ದೆ. ಮಮ್ಮಿ ಡ್ಯಾಡಿ ಯಾವಾಗ್ಲೂ ನಿನ್ನ ನೆನಪಿಸಿಕೊಳ್ತಾ ಇರ್ತಾರೆ. ಈ ಸಾರಿ ನೀನು ರಜೆಗೆ ಬೆಂಗಳೂರಿಗೆ ಬರಬೇಕೆನ್ನೋದು ಅವರ ಇಚ್ಚೆ ನಿಖಿಲ್ ಅಂದಾಗ ಅಶುತೋಶ್ ಕೇಳಿದ.
ಅಂದ್ರೆ ಅವರುಗಳು ಊರು ಬಿಟ್ಟು ಬೆಂಗಳೂರಿಗೆ ಬರ್ತಾರಂತ್ಲಾ?
ಹೌದು. ನಮ್ಮ ಡ್ಯಾಡ್ಗೆ ಏನೊ ದೊಡ್ಡ ಕನಸಿದೆ. ಅದನ್ನು ನನಸು ಮಾಡೋದಿಕ್ಕೆ ಬೆಂಗಳೂರಿಗೆ ಬರ್ಬೇಕೂಂತಿದ್ದಾರೆ. ನೀನು ಕೂಡ ಮಿಸ್ ಆಗೋದು ಬೇಡ. ಹೇಗೂ ನಿನ್ನದೇ ಮನೆಯಿದೆ ಅಲ್ವ ನಿಖಿಲ್ನ ಮಾತು ಕೇಳಿ ಇಳಿದು ಹೋದಂತಾಯ್ತು ಅಶುತೋಶ್ಗೆ. ತಂದೆಯ ಏಕೈಕ ಆಸ್ತಿಯನ್ನು ಅವಸರದಿಂದ ಸೇಲ್ ಮಾಡಿ ಪಶ್ಚಾತ್ತಾಪ ಪಡುವಂತಾಗಿತ್ತು.

ಖಂಡಿತಾ ಬರ್ತೀನಿ ಕಣೊ. ನಿನ್ನ ಡ್ಯಾಡ್ ಅಷ್ಟೊಂದು ಪ್ರೀತಿಯಿಂದ ಕರೆಯುವಾಗ ಹೇಗೆ ಬರದಿರಲಿ ಹೇಳು? ಮಾತಿನ ಎಳೆಯಲ್ಲಿ ನೋವಿನ ಛಾಯೆ ದಟ್ಟವಾಗಿತ್ತು.
ಇನ್ನೊಂದು ಗುಡ್ ನ್ಯೂಸ್ ಏನು ಗೊತ್ತಾ? ನಾವು ಪರ್ಚೇಸ್ ಮಾಡಿರೊ ಮನೆಯನ್ನು ನಿನ್ನ ತಂದೆಯ ಹೆಸರಲ್ಲಿ ಒಂದು ಸಣ್ಣ ಸ್ಮಾರಕ ಮಾಡ್ಬೇಕೆನ್ನೋದು ಡ್ಯಾಡ್ನ ಆಸೆ.
ಆಶುತೋಶ್ ಆ ಮಾತುಗಳನ್ನು ಕೇಳಿ ಆನಂದದಿಂದ ಉಬ್ಬಿ ಹೋದ. ತನ್ನ ಕೈ ತಪ್ಪಿ ಹೋದ ಆ ಅವಕಾಶವನ್ನು ಇಂದ್ರಸೇನರು ಕಾರ್ಯರೂಪಕ್ಕೆ ತರುತ್ತಿದ್ದಾರೆಂದರೆ ಅವರ ಹಾಗೂ ತನ್ನ ತಂದೆಯ ಒಡನಾಟ ಹೇಗಿದ್ದಿರಬಹುದು ಅನಿಸದಿರಲಿಲ್ಲ. ಭಾವ ಪರವಶತೆಯಿಂದ ಮಾತುಗಳೇ ಹೊರಡದಂತೆ ಮೂಕನಾಗಿದ್ದ.
... ಮುಂದುವರಿಯುವುದು....

0 comments:

Post a Comment