ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ...ನಂಬದೇ ಇದ್ರೆ ಅದು ನಿಮ್ಮ ತಪ್ಪಾಗುತ್ತಷ್ಟೆ... ಆದ್ರೆ ಈ ಕ್ಷೇತ್ರದ ಶಕ್ತಿ , ಕಾರಣೀಕಕ್ಕೆ ಇಲ್ಲಿರುವ ಒಂದು ವಿಶೇಷವಾದ ದಂಡವೇ ಸಾಕ್ಷಿಯಾಗಿದೆ. ಇಲ್ಲಿ ನಿಮ್ಮ ಬಯಕೆ ಈಡೇರುತ್ತೆ. ಸಂತಾನ ಹೀನರಿಗೆ ಸಂತಾನ ಪ್ರಾಪ್ತವಾಗುತ್ತದೆ.ಇದಕ್ಕೆಲ್ಲ ಕಾರಣ ಇಲ್ಲಿರುವ ತಪಶ್ಯಕ್ತಿಯ ಫಲ...ಅದಕ್ಕೆ ಇಂದಿಗೂ ಸಾಕ್ಷಿಯಾಗಿರುವ ಇಲ್ಲಿರುವ ದಂಡ. ಈ ದಂಡವೇ ಇಂದಿಗೂ ಇಲ್ಲಿಯ ಮಹಿಮೆಗಳಿಗೆ ಸಾಕ್ಷಿಯಾಗಿದೆ. ಹಲವರು ಈ ದಂಡವೇ ಸಾಕ್ಷಾತ್ ದೇವರು ಎಂಬಂತೆ ಭಕ್ತಿ ಸಮರ್ಪಿಸುತ್ತಾರೆ. ಇಷ್ಟೆಲ್ಲಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಕ್ಷೇತ್ರವಾದರೂ ಯಾವುದು...ಅಲ್ಲಿನ ವಿಶೇಷತೆ ಯೇನು...ಈ ಕುತೂಹಲ ನಿಮ್ಮಲ್ಲಿದ್ರೆ ಈ ಸ್ಟೋರಿ ಓದಿ...ಇದು ಇಂದಿನ ಈ ಕನಸು.ಕಾಂ ವಿಶೇಷ ವರದಿ...ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಇಲ್ಲಿ ಹಿಂದೆ ಕೌಂಡಿನ್ಯ ಮಹರ್ಷಿಯು ತಪಸ್ಸು ಮಾಡುತ್ತಿದ್ದರಂತೆ.

ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ ಚಕ್ರ ಮುರಿದು ಬೀಳುವುದೆಂದೂ, ಆ ಸ್ಥಳದಲ್ಲಿ ಅಗೆಸಿದರೆ ವೇಣುಗೋಪಾಲಸ್ವಾಮಿಯ ವಿಗ್ರಹ ಲಭಿಸುವುದೆಂದೂ, ಅದನ್ನು ಒಯ್ದು ಕೌಂಡಿನ್ಯ ಋಷಿಗಳಿಂದ ಕ್ಷೇತ್ರದಲ್ಲಿ ಸ್ಥಾಪಿಸಿ ಪೂಜಿಸೆಂದೂ ಅನುಗ್ರಹವಾಯಿತಂತೆ. ಕನಸಿನಂತೆಯೇ ಘಟನೆಗಳು ನಡೆದು, ಈಗಿನ ಹೆಮ್ಮರಗಾಲದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯ ರೂಪುಗೊಂಡಿತು. ಕಾಲಾನಂತರದಲ್ಲಿ ಹೊಯ್ಸಳರ ಪಾಳೆಯಗಾರರ ಆಳ್ವಿಕೆಯಲಿ ಇನ್ನಷ್ಟು ಅಭಿವೃದ್ಧಿಗೊಂಡಿತು. ಈಗಿನ ದೇವಸ್ಥಾನವನ್ನು ೧೩ ನೆಯ ಶತಮಾನದಲ್ಲಿ ಕಟ್ಟಲಾಯಿತಂತೆ.

ಕೊಳಲನ್ನೂದುವ ವೇಣುಗೋಪಾಲನ ವಿಗ್ರಹ ತುಂಬಾ ಸುಂದರವಾಗಿದೆ. ಇವನ ಕುರಿತು ಹಬ್ಬಿರುವ ದಂತಕತೆ ಇನ್ನೂ ಸೊಗಸಾಗಿದೆ. ಬಾಲಗೋಪಾಲನಾಗಿ ಕಂಗೊಳಿಸುವ ವೇಣುಗೋಪಾಲನಿಗೆ ಸಂತಾನಗೋಪಾಲ ಎಂಬ ಹೆಸರೂ ಇದೆ. ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಹರಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತಾರೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ದೇವರಿಗೆ ಅರ್ಪಿಸಿದ ಪುಟ್ಟ ಬೆಳ್ಳಿಯ ತೊಟ್ಟಿಲುಗಳು ಅಲ್ಲಿ ತೂಗಾಡುತ್ತಿದ್ದುವು.

ಇದಲ್ಲದೆ ಈ ಸ್ವಾಮಿಗೆ 'ಹುಚ್ಚು ಗೋಪಾಲ' ಎಂಬ ಹೆಸರೂ ಇದೆ! ಇನ್ನೊಂದು ಕಥೆಯ ಪ್ರಕಾರ ಅಲ್ಲಿ ಆಳಿದ ಚೋಳ ರಾಜನೊಬ್ಬನಿಗೆ ೧೨ ಜನ ಹೆಣ್ಣು ಮಕ್ಕಳಿದ್ದರಂತೆ. ಪುತ್ರ್ರಾಕಾಂಕ್ಷಿಯಾಗಿ ವೇಣುಗೋಪಾಲನನ್ನು ಭಕ್ತಿಯಿಂದ ಪೂಜಿಸಿದರೂ ಆತನ ೧೩ನೆಯ ಮಗು ಹೆಣ್ಣಾಗಿ ಹುಟ್ಟಿತಂತೆ. ನಿರಾಶೆಯಿಂದ ರಾಜ-ರಾಣಿ ಇಬ್ಬರೂ ದೇವಾಲಯದಲ್ಲಿಯೇ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿ, ಕೊನೆಯ ಬಾರಿಗೆ ನವಜಾತ ಶಿಶುವನ್ನು ನೋಡಿ ಸಾಯೋಣ ಎಂದು ಮಗುವನ್ನು ನೋಡಿದಾಗ ಅದು ಗಂಡು ಮಗುವಾಗಿತ್ತಂತೆ. ಭಕ್ತಿ-ಆಶ್ಚರ್ಯ- ಸಂತೋಷಾತಿರೇಕದಿಂದ ಆತ ದೇವರನ್ನು ಹುಚ್ಚು ಗೋಪಾಲನೆಂದು ಕರೆದು ಪೂಜಿಸಿದಂತೆ. ಹೀಗೆ ಬಹು ನಾಮಾಂಕಿತ ಈ ಗೋಪಾಲ.

ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ 'ಕೌಂಡಿನ್ಯ ಮಹರ್ಷಿಯ ದಂಡ' . ನಂಬಿಕೆಯ ಪ್ರಕಾರ ಕೌಡಿನ್ಯರು ಸದ್ಗತಿ ಹೊಂದುವ ಸಮಯದಲ್ಲಿ ತನ್ನ ತಪಶ್ಶಕ್ತಿಯನ್ನು ದಂಡಕ್ಕೆ ವರ್ಗಾಯಿಸಿ, ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸಿದರಂತೆ. ಹಾಗಾಗಿ ಈ ದೇವಸ್ಥಾನದಲ್ಲಿ 'ದಂಡ ದರ್ಶನಂ ಪಾಪ ನಾಶನಂ, ದಂಡ ಸ್ಪರ್ಶನಂ ಪುಣ್ಯ ವರ್ಧನಂ'. ಹೂವಿನಿಂದ ಅಲಂಕೃತವಾದ ದಂಡವನ್ನು ಹಿಡಿದ ಅರ್ಚಕರು ಹಿಡಿದಿರುತಾರೆ. ಸಾಲಾಗಿ ಬರುವ ಭಕ್ತರು ಶಿರವೊಡ್ಡಿ ದಂಡವನ್ನು ಮೆತ್ತಗೆ ಸ್ಪರ್ಶಿಸುತ್ತಾರೆ. ಶನಿವಾರ ಹಾಗೂ ಭಾನುವರ ಮಾತ್ರ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯ ವರೆಗೆ 'ದಂಡ ಸ್ಪರ್ಶನ' ಮಾಡಲು ಅವಕಾಶವಿರುತ್ತದೆ. ಉಳಿದ ದಿನಗಳಲ್ಲಿ ಈ ಕಾರ್ಯಕ್ರಮವಿರುವುದಿಲ್ಲ.

ಅಲ್ಲಿಗೆ ಹೋಗುವ ವರೆಗೆ ಈ ವಿಚಾರಗಳಾವುವೂ ನಮಗೆ ಗೊತ್ತಿರಲಿಲ್ಲ. ಆದರೂ ಭಾನುವಾರವಾಗಿದ್ದರಿಂದ ದಂಡಸ್ಪರ್ಶನ ಸಾಧ್ಯವಾಯಿತು. ಹುಣ್ಣಿಮೆಯ ದಿನವಾಗಿದ್ದರಿಂದ ವಿಶೇಷ ಕಾರ್ಯಕ್ರಮವಾಗಿ ಸುದರ್ಶನ ಯಾಗ ನಡೆಯುತ್ತಿತ್ತು. ಪ್ರಸಾದ ಅನ್ನ ಸಂತರ್ಪಣೆಯಲ್ಲೂ ಪಾಲ್ಗೊಂಡೆವು. ರುಚಿಯಾದ ಸಿಹಿ ಪೊಂಗಲ್, ಖಾರ ಪೊಂಗಲ್ ಸವಿದು ಮರಳಿದೆವು.

ಹೆಮ್ಮರಗಾಲಕ್ಕೆಹೋಗುವ ದಾರಿ : ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಹೊರಟು ಬದನವಾಳು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಹೆಮ್ಮರಗಾಲಕ್ಕೆ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಆದರೆ ದೇವಸ್ಥಾನದ ವರೆಗೆ ಹೋಗಬಹುದು. ಹಳ್ಳಿ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಪ್ರಯಾಣಿಸಬೇಕು. ಬೇಕಾದಷ್ಟು ಸಮಯವಿದ್ದರೆ, ಗುಂಪಲ್ಲಿ ಹರಟುತ್ತಾ, ದಾರಿಯಲ್ಲಿ ಸಿಗುವ ಎಳನೀರು ಕುಡಿಯುತ್ತಾ, ಕಬ್ಬು ತಿನ್ನುತ್ತಾ, ನಡೆಯುವುದನ್ನೇ ಕೆಲಸವನ್ನಾಗಿಸಬಹುದು.


ಹೇಮಮಾಲಾ . ಬಿ. ಮೈಸೂರು.

0 comments:

Post a Comment