ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ : ರಾಣೇಬೆನ್ನೂರು ಸುದ್ದಿ
ಮಕ್ಕಳಿಗೆ ಪ್ರಾಣಿಗಳ ಬಗ್ಗೆ ತುಂಬ ಕುತೂಹಲ. ಅದರಲ್ಲೂ ಹಾವುಗಳ ಬಗ್ಗೆ ಭೀತಿ ಇದ್ದರೂ, ಅವುಗಳ ಗುಣ ಸ್ವಭಾವವನ್ನುರಿತುಕೊಳ್ಳುವ ಬಗೆ ಅವರಿಗೆ ತುಂಬಾ ಆಸಕ್ತಿ. ಜೊತೆಗೆ ಹಾವುಗಳ ಬಗ್ಗೆ ತಾವು ಕೇಳಿದ ಅನೇಕ ಸಂಗತಿಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳವ ಬಯಕೆ. ಕೆಲವೊಮ್ಮೆ, ಕೆಲವೊಂದು ಪ್ರಶ್ನೆಗಳಿಗೆ ಉತ್ತರ ದೊರೆತರೂ, ಅವರಿಗೆ ಸಮಾಧಾನವಾಗುವುದಿಲ್ಲ. ಹಾವು ವಿಷಜಂತು ಎಂಬುದು ಅವರಿಗೂ ಗೊತ್ತು. ಆದರೆ, ಹಾವಿನ ವಿಷ ಎಲ್ಲಿರುತ್ತೆ? ದೇಹದಲ್ಲಿ ವಿಷವಿರುವುದರಿಂದ, ಹಾವು ಏಕೆ ಸಾಯುವುದಿಲ್ಲ ? ಹಾವಿನ ವಿಷ ಹೇಗೆ ತೆಗೆಯಲಾಗುತ್ತದೆ...ಹೀಗೆ ನೂರಾರು ಪ್ರಶ್ನೆಗಳು ಅವರನ್ನು ಕಾಡುತ್ತಲೇ ಇರುತ್ತದೆ.ಈ ಮಕ್ಕಳ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ಹಾವು ರಾಣೇಬೆನ್ನೂರಿನ ಓಂ ಪಬ್ಲಿಕ್ ಶಾಲೆಗೆ ಹಾಜರಾಗಿದ್ದು ವಿಶೇಷವಾಗಿತ್ತು! ಇದು ಮಕ್ಕಳಲ್ಲಿದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡುವ ಸದಾವಕಾಶವನ್ನು ಕಲ್ಪಿಸಿತು.
ಓಂ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಬಸವರಾಜ್ ಮಾಗಡಿ ಹಾವು ಹಿಡಿಯುವಲ್ಲಿ ಪರಿಣಿತರು. ಶಾಲಾ ಆವರಣದಲ್ಲಿದ್ದ ಹಾವನ್ನು ಸುಲಭವಾಗಿ ಹಿಡಿದ ಅವರು, ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಿದರು.ಈ ಸಂದರ್ಭದಲ್ಲಿ ಮಕ್ಕಳಿಂದ ಬಂದ ಪ್ರಶ್ನೆಗಳು ಶಿಕ್ಷಕರನ್ನೇ ದಂಗು ಬಡಿಸಿತ್ತು!


ಹಾವು ಹಿಡಿದ ಬಸವರಾಜ್, ಇದುವರೆಗೂ ತಾವೂ ಸುಮಾರು 30 ಕ್ಕೂ ಹೆಚ್ಚು ವಿವಿಧ ರೀತಿಯ ಹಾವುಗಳನ್ನು ಹಿಡಿದು ರಾಣೇಬೆನ್ನೂರಿನ ಪಕ್ಕದ ಕೃಷ್ಣಮೃಗ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಟ್ಟಿರುವುದಾಗಿ ತಿಳಿಸಿದರು..
ಭೂಮಿಯಲ್ಲಿ ನೂರಾರು ಜಾತಿಯ ಹಾವುಗಳಿದ್ದರೂ ಸುಮಾರು 60 ಹಾವುಗಳಷ್ಟೇ ವಿಷಕಾರಿಯಾಗಿವೆ.. ಇವುಗಳಲ್ಲಿ ಸಾವು ತರುವಂಥ ಹಾವುಗಳ ಸಂಖ್ಯೆ ಬೆರಳಿಕೆಯಷ್ಟು ಮಾತ್ರ. ಹಾಗಾಗಿ ವಿನಾಕಾರಣ ಜೀವಿ ಹಾವುಗಳನ್ನು ಸಾಯಿಸುವುದು ತರವಲ್ಲ.
ಕಾಳಿಂಗ ಸರ್ಪ, ನಾಗರಹಾವು , ಮಂಡಲಹಾವು ಮತ್ತು ಕಾಮನ್ ಕ್ರಾಟ್ ಹಾವುಗಳು ಮಾತ್ರ ವಿಷಪೂರಿತ ಹಾವುಗಳಾಗಿವೆ..ಉಳಿದ ವಿಷಕಾರಿ ಹಾವುಗಳು ಕಚ್ಚಿದರೂ ಪ್ರಾಣ ಹಾನಿಯಾಗುವುದಿಲ್ಲ ಎಂದು ಬಸವರಾಜ್ ಮಕ್ಕಳಿಗೆ ಎಚ್ಚರಿಸಿದರು.
ಈ ಎಲ್ಲ ವಿವರಣೆಗಳನ್ನು ಕೇಳಿದ ಬಳಿಕ, ಮಕ್ಕಳು ಬಸವರಾಜ್ ಹಿಡಿದಿದ್ದ ಹಾವನ್ನು ಮುಟ್ಟಿ, ಮೈಮೇಲೆ ಹಾಕಿಕೊಂಡು, ಹಾವುಗಳ ಬಗೆಗಿನ ಭೀತಿಗೆ ಗುಡ್ ಬೈ ಹೇಳಿದರು.


ಬಸವರಾಜ್ ಮೊದಲು ಹಾವು ಹಿಡಿದಿದ್ದು...
ಸುಮಾರು ವರ್ಷಗಳ ಹಿಂದೆ ಮನೆಯಲ್ಲೇ ಸಣ್ಣದೊಂದು ಹಾವು ಕಾಣಿಸಿತು. ಮನೆಯವರೆಲ್ಲ ಹೆದರಿ ಹೊಡೆಯಿರಿ-ಸಾಯಿಸಿರಿ...
ಎಂದು ಕೂಗುತ್ತಾ ಹಾರಾಟತಾರಾಟದಲ್ಲಿ ತೊಡಗಿದ್ದರು. ಇದನ್ನು ಕಂಡ ಬಸವರಾಜ್ ಸ್ವಲ್ಪವೂ ವಿಚಲಿತರಾಗದೇ, ಧೈರ್ಯದಿಂದ ಹಾವನ್ನು ಹಿಡಿದೇ ಬಿಟ್ಟರು. ಈ ಘಟನೆ ಅವರಿಗೆ ಹಾವುಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಲು ಸಹಕಾರಿಯಾಯಿತು.
ನಂತರದಲ್ಲಿ ಬಸವರಾಜ್, ಹಾವುಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿಕೊಂಡು, ಅವುಗಳ ಬಗ್ಗೆ ತಿಳಿದುಕೊಳ್ಳಲು ತೊಡಗಿದರು. ಜೊತೆಗೆ ಹಾವು ಹಿಡಿದ ಕಲೆಯನ್ನು ಕರಗತ ಮಾಡಿಕೊಂಡರು.


ಹಾವುಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದ ನಂತರ ಬಸವರಾಜ ಮಾಗಡಿ ಹಾವುಗಳನ್ನು ಹೊಡೆದು ಕೊಲ್ಲಬಾರದು ಎಂದು ಮಕ್ಕಳಲ್ಲಿ ವಿನಂತಿ ಮಾಡಿದರು. ಮಕ್ಕಳು ನಿರ್ಭಯವಾಗಿ ಬಸವರಾಜ ಅವರ ಸುತ್ತ ನಿಂತು ಹಾವಿನ ದೇಹದ ರಚನೆಯನ್ನು ನೋಡಿದರು. ಹಾವನ್ನು ಮೈಮೇಲೆ ಹಾಕಿಕೊಂಡು ಹಾವಿನ ಭಯವನ್ನು ಹೋಗಲಾಡಿಸಿಕೊಂಡರು. ಬಸವರಾಜ ಮಾಗಡಿಯವರ ಹಾವುಗಳ ಬಗೆಗಿನ ಅರಿವು ಮೂಡಿಸುವ ಪ್ರಯತ್ನ ಹೆಚ್ಚು ಫಲಕಾರಿ ಎಂಬುದು ಸಾಬೀತಾಯಿತು.

ರಾಣೇಬೆನ್ನೂರು ನಗರ, ಶಾಲಾ-ಕಾಲೇಜು, ಆಸ್ಪತ್ರೆ, ಸಿಬ್ಬಂದಿ ವಸತಿಗೃಹ ಸಮುಚ್ಚಯಗಳ ಒಳಾವರಣ-ಹೊರಾವರಣ ಹೀಗೆ ಯಾವುದೇ ಸ್ಥಳದಲ್ಲಿ ಹಾವು ಕಾಣಿಸಿದರೂ ಮೊದಲಿಗೆ ಬಸವರಾಜ್ ಮೊಬೈಲ್ ಸಂಖ್ಯೆ 9448693193 ಗೆ ಕರೆ ಹೋಗುತ್ತದೆ. ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲಿ ಹಾಜರಾಗುವ ಬಸವರಾಜ್, ಹಾವನ್ನು ಹಿಡಿದು, ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೂ ಹಾವುಗಳ ಬಗ್ಗೆ ತಿಳುವಳಿಕೆ ನೀಡುತ್ತಾರೆ.

ಎಷ್ಟೋ ಜನ ಹಾವು ಕಚ್ಚಿತು ಎಂದು ಹೆದರಿಯೇ ಪ್ರಾಣ ಕಳೆದುಕೊಳ್ಳುತ್ತಾರೆ ಎನ್ನುವ ಬಸವರಾಜ, ಪ್ರಥಮ ಚಿಕಿತ್ಸೆಯಿಂದ ಹಾವು ಕಚ್ಚಿದವರನ್ನು ಬದುಕಿಸುವ ವಿದ್ಯೆಯನ್ನೂ ಬಲ್ಲರು. ಸಂಘ-ಸಂಸ್ಥೆಗಳ ಸಹಕಾರದಿಂದ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆ ಬಸವರಾಜ ಮಾಗಡಿಯವರಿಗಿದೆ. ನಮ್ಮ ಪರಿಸರ ಚನ್ನಾಗಿರಬೇಕೆಂದರೆ ಪ್ರಾಣಿ-ಪಕ್ಷಿಗಳ ಇರುವಿಕೆಯು ಪ್ರಾಮುಖ್ಯವಾದದ್ದು. ಪ್ರಾಣಿ ಸಂಕುಲ ಉಳಿಸಿ ಎನ್ನುವ ಇವರ ಉಪಯುಕ್ತ ಯೋಜನೆ ಬೇಗ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಸೋಣ.

ಚಿತ್ರ-ಲೇಖನ: ನಾಮದೇವ ಕಾಗದಗಾರ
ರಾಣೇಬೆನ್ನೂರು0 comments:

Post a Comment