ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ವಿಶೇಷ ವರದಿ: ಅಚ್ಯುತಕುಮಾರ ಯಲ್ಲಾಪುರ

ಹೊಸ ಪರಿಚಯದಲ್ಲಿ ತನ್ನೊಳಗಿನ ಯಾವದೇ ಮಾಹಿತಿಯನ್ನು ಬಿಚ್ಚಿಡದ ಸಿತಾರಾಂ ಸಿದ್ದಿಯವರ ಕೈಯನ್ನು ಎಳೆದು ಅವರ ಅಂಗೈಯಲ್ಲಿ ಹಸಿರ ನೋಟನ್ನು ಹಿಡಿಸಿದಾಕ್ಷಣ ತನ್ನೊಡಲನ್ನು ಒಂದೊಂದಾಗಿ ತೆರೆದಿಡುವದು ತಮಾಶೆಯ ಸಂಗತಿ.

ಕಳೆದ 25ವಸಂತಗಳಿಂದ ಈತ ಯಾವದೇ ಮೂಲಭೂತ ಸೌಕರ್ಯಗಳಿಲ್ಲದೇ ಜೋಪಡಿಯೊಂದರಲ್ಲಿಯೇ ಜೀವಿಸುತ್ತಲಿರುವದು ಸೋಜಿಗದ ವಿಷಯವಾಗಿದ್ದರೂ ಈತನ ಮೇಲಿರುವ ಆರೋಪಗಳನ್ನು ಅಲ್ಲಗಳೆಯುವಂತಿಲ್ಲ. ಅರಣ್ಯ ಇಲಾಖೆಯಲ್ಲಿಯೇ ಈತನ ಮೇಲೆ ಹತ್ತಾರು ಆರೋಪಗಳನ್ನು ಮಾಡಿರುವದು ವಾಸ್ತವ. ಪ್ರಯಾಣಿಕರಿಗೆ ಭಯದ ವಾತಾವರಣವನ್ನು ನಿರ್ಮಾಣ ಮಾಡಿ ಅವರಿಂದ ದೋಚುತ್ತಾನೆ. ರಾತ್ರಿ ಸಂಚರಿಸುವವರಿಗೆ ದೆವ್ವದಂತೆ ಗೋಚರಿಸಿ ದಿಗಿಲನ್ನುಂಟು ಮಾಡುವ ವ್ಯಕ್ತಿಯೂ ಈತನೇ...ಹಲವು ಆರೋಪಕ್ಕೂ ಸಿತಾರಾಂ ಸಿದ್ದಿ ಆಹಾರವಾಗಿದ್ದಾರೆ.


ಈ ಕಾಡಿಗೆ ನಾನೇ ರಾಜ. ಮರಗಳ್ಳರನ್ನು ಹಿಡಿದು ಸೆದೆ ಬಡೆಯುವದು ನನ್ನ ಕಾಯಕ ಎನ್ನುತ್ತಲೇ ಮಾತನ್ನು ಆರಂಬಿಸುವವ ಬೇಡ್ತಿ ದಟ್ಟಾರಣ್ಯದಲ್ಲಿ 25ವರ್ಷಗಳಿಂದ ಏಕಾಂಗಿಯಾಗಿ ಜೀವಿಸುತ್ತಿರುವ ಸಿತಾರಾಂ ಸಿದ್ದಿ.
ಸರಿ ಸುಮಾರು 65ವರ್ಷದ ಸಿತಾರಾಂ ಸಿದ್ದಿ ಜೀವಿತ ಅವದಿಯ ಕಾಲುಭಾಗವನ್ನು ಕಾನನದಲ್ಲಿ ಕಳೆದಿದ್ದಾರೆ. ಕಳೆದ 25ವಸಂತಗಳಿಂದ ಯಲ್ಲಾಪುರದ ಬೇಡ್ತಿ ಕಾನನದಲ್ಲಿ ಏಕಾಂಗಿಯಾಗಿ ವಾಸಮಾಡುತ್ತಿದ್ದಾರೆ. ಕಾಡಿನ ಉತ್ಪನ್ನಗಳೇ ಇವರ ಜೀವನಾಂಶವಾಗಿದೆ. ಬೇಡ್ತಿ ತೀರದಿಂದ ದೂರದಲ್ಲಿ ಗೋಚರಿಸುವ ಪುಟ್ಟ ಮನೆಯೊಂದರಲ್ಲಿ ಸಿತಾರಾಂ ಸಿದ್ದಿ ವಾಸಿಸುತ್ತಾರೆ. ಯಾವದೇ ಮೂಲಭೂತ ಸೌಕರ್ಯಗಳಿಲ್ಲದೇ ಬೇಡ್ತಿ ಕಾಡಿನ ನಡುವೆ 25ವರ್ಷಗಳನ್ನು ದೂಡಿದ್ದಾರೆ.

ನಾನು ಅರಣ್ಯ ಇಲಾಖೆಯ ನೌಕರ ಎಂದೇ ನಂಬಿರುವ ಸಿತಾರಾಂ ಸಿದ್ದಿ ದಟ್ಟವಾದ ಅರಣ್ಯದಲ್ಲಿ ಸಿಗುವ ಜೇನು, ವಾಟೆಹುಳಿ, ಲವಂಗ, ರಾಮಪತ್ರೆಗಳನ್ನೆ ಜೀವನಾಂಶವನ್ನಾಗಿಸಿಕೊಂಡಿದ್ದಾರೆ. ಕಾಡಿನಲ್ಲಿ ದೊರಕುವ ಗಡ್ಡೆ ಗೆಣಸುಗಳನ್ನೇ ದಿನನಿತ್ಯದ ಆಹಾರವನ್ನಾಗಿಸಿಕೊಂಡಿದ್ದಾರೆ. ವಾರಕ್ಕೊಮ್ಮೆ ಆಹಾರ ಹಾಗೂ ಕಟ್ಟಿಗೆ ಸಂಗ್ರಹಣೆಗೆ ಇಡೀ ಕಾಡನ್ನು ಪ್ರದಕ್ಷಿಣೆ ಹಾಕುವದನ್ನು ಬಿಟ್ಟರೆ ತಿಂಗಳಿಗೆ ಒಂದು ಬಾರಿ ನದಿಯಲ್ಲಿ ಸ್ನಾನ ಮಾಡಲು ಮಾತ್ರ ಇವರು ಜೋಪಡಿಯಿಂದ ಹೊರಬೀಳುತ್ತಾರೆ. ಉಳಿದಂತೆ ತನ್ನ ಜೋಪಡಿಯೊಳಗೆ ಕಾಲ ಕಳೆಯುತ್ತಾರೆ ಈ ಸಿದ್ದಿ. ಹಾಗಂತ ಇವರೇನು ರೋಗದಿಂದ ಬಳಲುತ್ತಿಲ್ಲ. ಸದೃಢ ಆರೋಗ್ಯವಂತ ದೇಹ ಇವರದ್ದು.


ಸಿರಸಿ ಯಲ್ಲಾಪುರ ಮಾರ್ಗದಲ್ಲಿ ಬೇಡ್ತಿ ಸೇತುವೆಗೂ ಮುನ್ನ ಎಡಗಡೆಯ ಕಾಡಿನಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿದರೆ ಅಲ್ಲಿ ಸಿತಾರಾಂ ಸಿದ್ದಿಯವರ ಜೋಪಡಿ ಕಂಡುಬರುತ್ತದೆ. ಮೊದಲೆಲ್ಲ ಅಮಲಿನಲ್ಲಿಯೇ ದಿನದೂಡುತ್ತಲಿದ್ದ ಸಿತಾರಾಂ ಪ್ರಸ್ತುತ ಕುಡಿಯುವದನ್ನು ಬಿಟ್ಟಿರುವದಾಗಿಯೂ ಹೇಳುತ್ತಾರೆ. ಜೋಪಡಿಯ ಒಳಹೊಕ್ಕು ನೋಡಿದರೆ ಒಂದೆರಡು ಅಡುಗೆ ಸಾಮಗ್ರಿಗಳು, ಅವಧಿ ಮುಗಿದ ಎರಡು ಕ್ಯಾಲೆಂಡರ್, ಒಂದು ಪೊರಕೆ, ಮಲಗಲಿಕ್ಕೊಂದು ಸೊಪ್ಪಿನ ಚಾಪೆ, ಗಾಂಜಾ ಮದ್ಯದಂತಹ ಅಮಲು ಪದಾರ್ಥ, ಒಲೆಯಲ್ಲದ ಒಲೆಯಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಬಿಟ್ಟು ಇನ್ನೇನೂ ಗೋಚರಿಸಿದು.

ಅವರ ಮಾತಿನಲ್ಲಿಯೇ ಹೇಳುವಂತೆ ಅವರಿಗೆ ಎಷ್ಟು ವರ್ಷ ವಯಸ್ಸಾಯಿತೆಂದು ಸರಿಯಾಗಿ ಅವರಿಗೆ ನೆನಪಿಲ್ಲವಂತೆ. ಮೊದ ಮೊದಲು ಅಲ್ಲಲ್ಲಿ ದುಡಿಯಲು ಹೋಗುತ್ತಲಿದ್ದ ಸಿತಾರಾಂ ಸಿದ್ದಿ ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಹೆಂಡತಿ ಮಕ್ಕಳನ್ನು ದೂರ ಮಾಡಿ ಕಾಡು ಸೇರಿದರು. ಕಾಡಿನ ಮರಗಳ ಬುಡದಲ್ಲಿಯೇ ಎರಡು ವರ್ಷ ಕಾಲಕಳೆದ ನಂತರ ಜಿಕ್ಕದೊಂದು ಜೋಪಡಿ ನಿರ್ಮಿಸಿಕೊಂಡರು. ವಾರಾಂತ್ಯವನ್ನು ಹೊರತುಪಡಿಸಿ ಇನ್ನಾವದೇ ದಿನಗಳಲ್ಲಿ ಸಿತಾರಾಂ ಜೋಪಡಿಯನ್ನು ಬಿಟ್ಟು ಹೊರಬೀಳಲಾರರು. ಆ ಜೋಪಡಿಗೂ ಈಗ 23ರ ಹರೆಯ.


ಹೊರಗಿನ ಪ್ರಪಂಚದೊಂದಿಗೆ ಯಾವದೇ ಸಂಬಂಧವಿಲ್ಲದೇ ಜೀವಿಸುತ್ತಿರುವ ಸಿತಾರಾಂ ಸಿದ್ದಿ ಹಾವು ಚೇಳು ಕಾಡು ಪ್ರಾಣಿಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದಾರೆ. ಕಾಡು ಜೀವಿಗಳೆಂದರೆ ಇವರ ಮನೆಗೆ ಬರುವ ಅತಿಥಿಗಳಿದ್ದಂತೆ. ಆಗಾಗ ಬೇಡ್ತಿ ಸನಿಹದಲ್ಲಿ ದೆವ್ವಗಳೊಂದಿಗೆ ಸಂಬಾಷಣೆ ನಡೆಸುವುದಾಗಿಯೂ ಇವರು ಹೇಳಿಕೊಳ್ಳುತ್ತಾರೆ.! ಅರಣ್ಯ ಇಲಾಖೆಯಲ್ಲಿ ಈಗಾಗಲೇ ಇವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಇದ್ಯಾವದಕ್ಕೂ ತಲೆಭಾಗದ ಸಿತಾರಾಂ ಈ ಕಾಡು ನನ್ನದು, ನಾನು ಈ ಕಾಡಿನ ರಾಜ ಎಂಬ ಮಾತನ್ನೆ ಪುನರುಚ್ಚರಿಸುತ್ತಾರೆ.