ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಶಿವಮೊಗ್ಗದಿಂದ ನರಸಿಂಹರಾಜಪುರಕ್ಕೆ ಹೋಗುವ ರಸ್ತೆಯಲ್ಲಿ ಲಕ್ಕಿಕೊಪ್ಪ ಎಂಬ ಗ್ರಾಮವಿದೆ. ಸೊಂಪಾಗಿ ಬೆಳೆದ ಅಡಿಕೆ ಮತ್ತು ಬಾಳೆಯ ತೋಟ,ಪಕ್ಕದಲ್ಲಿ ಹೂವಿನ ಬನ,ದುಮ್ಮಿಕ್ಕುವ ಕೃತಕ ಜಲಪಾತ,ವನ್ಯಮೃಗಗಳ ವಿಗ್ರಹಗಳು ಅಂಗಳದ ನಡುವಿನ ಅಶೋಕಸ್ಥಂಭದ ಸುತ್ತಲಿನ ಇನ್ನೂ 3 ಸ್ಥಂಭಗಳು, ಇಂಥಹ ಪ್ರಶಾಂತ ವಾತಾವರಣದಲ್ಲಿ ನೆಲೆನಿಂತ ಇಲ್ಲಿ 'ಅಮೂಲ್ಯಶೋಧ ಮತ್ತು ನೆನಪು' ಎಂಬ ಜಾನಪದ ಹಾಗೂ ಐತಿಹಾಸಿಕ ವಸ್ತು ಸಂಗ್ರಹಾಲಯಗಳಿವೆ.ಇವೆರಡು ಖಾಸಗಿ.

ಏನಿದು 'ಅಮೂಲ್ಯಶೋಧ ಮತ್ತು ನೆನಪು' ಇದೊಂದು ಪ್ರೇಮ ಕಹಾನಿ! ಪಾರ್ಕು,ಸಿನಿಮಾ ಅಂತಾ ಊರೂರು ಸುತ್ತಿ ಕೊನೆಗೆ ಯಾವುದೇ ದುರಂತದಲ್ಲಿ ಕೊನೆಯಾಗುವ ಪ್ರೇಮ ಕಥೆಯಲ್ಲ ಉಸಿರಿರುವ ತನಕ ಎದೆಬಡಿತದಲ್ಲಿ ಮಿಳಿತಗೊಂಡು,ಆಳಿದ ಮೇಲೂ ಅಜರಾಮರವಾಗುವ ಪ್ರೇಮ ಕಾವ್ಯ ಇದು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಎಚ್.ಖಂಡೋಬರಾವ್ ಅವರೇ ಈ 'ಅಮೂಲ್ಯಶೋಧ ಮತ್ತು ನೆನಪು' ಎಂಬ ಪ್ರೇಮಸೌಧದ ರೂವಾರಿ.

ಪ್ರೇಮಿಗಳ ದಿನದಂದು, ಪಾರ್ಕು-ಪಬ್ಬು ಗ್ರೀಟಿಂಗ್ ಮೀಟಿಂಗ್ ಎಂದು ಹಾಗೇ ಸುಮ್ಮನೆ ಢಾಂಬಿಕ ಆಚರಣೆ ಮಾಡುವವರಿಗೆ ಇದೊಂದು ಮಾದರಿ ಪ್ರೇಮಾಯಣ. ರಾಜ್ಯದಲ್ಲಿ ಎಲ್ಲೂ ಕಾಣದಂತಹ ಅಮೂಲ್ಯ ಪ್ರಾಚೀನ ವಸ್ತು ಸಂಗ್ರಾಹಾಲಯ ಇದು. ಸರಕಾರಿ ಸಹಭಾಗಿತ್ವ ಇಲ್ಲದೆ ಏಕವ್ಯಕ್ತಿ ನಿರ್ಮಿತ ಅಪರೂಪದ ತಾಣವಿದು.

ಕೇವಲ ಎರಡು ಎಕರೆ ಜಾಗದಲ್ಲಿ ನಾಲ್ಕೇ ವರ್ಷದಲ್ಲಿ ನಿರ್ಮಿಸಿರುವ ಈ 'ಅಮೂಲ್ಯ ಸೌಧ' ದ ಹಿಂದೆ ಒಂದು ನವಿರಾದ ಪ್ರೇಮ ಕಥಾ ಹಂದರವಿದೆ

ಮರಾಠಿ ಸಮುದಾಯದ ಖಂಡೋಬರಾವ್ ಹಾಗೂ ಒಕ್ಕಲಿಗ ಸಮುದಾಯದ ಯಶೋಧ ನಡುವೆ ಪ್ರೇಮಾಂಕುರವಾಗಿದ್ದು 1968. ಎನ್.ಆರ್. ಪುರದಿಂದ ಶಿವಮೊಗ್ಗಕ್ಕೆ ವಿದ್ಯಾಭ್ಯಾಸಕ್ಕೆಂದು ಬಂದು ಪಕ್ಕದ್ಮನೆ ಹುಡುಗಿಯ ಮನಸು ಕದ್ದ ಖಂಡೋಬರಾವ್, ಮನೆಯವರ ಪ್ರತಿರೋಧದ ನಡುವೆ 1972 ರಲ್ಲಿ ವಿವಾಹವಾದರು. ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ನ್ಯಾಷನಲ್ ಹಾಗೂ ಕಮಲಾ ನೆಹರು ಕಾಲೇಜಿನ ಉಪನ್ಯಾಸಕ ವೃತ್ತಿ ಆರಂಭಿಸಿದ ದಂಪತಿ,ಇಬ್ಬರು ಗಂಡು ಮಕ್ಕಳೊಂದಿಗೆ 38 ವರ್ಷಗಳ ತುಂಬು ಜೀವನ ನಡೆಸಿದರು.


ನನಗೆ ನೀನು ನಿನಗೆ ನಾನು ಎನ್ನುವ ಹಾಗೇ ಇವರ ಜೀವನ ಸಾಗಿತ್ತು. ಆದರೆ 1996 ರಲ್ಲಿ ಪತ್ನಿ ಯಶೋಧರಿಗೆ ಮೂತ್ರಪಿಂಡ ವೈಪಲ್ಯ ಕಾಣಿಸಿಕೊಂಡಿತ್ತು. ಆಗ ಮುದ್ದಿನ ಮಡದಿಗೆ ತಮ್ಮ ಒಂದು ಕಿಡ್ನಿಯನ್ನು ಖಂಡೋಬರಾವ್ ನೀಡಿದ್ದರು ಪತಿಯ ಅಂಗದಾನದಿಂದ 10 ವರ್ಷ ಸುಖೀ ಸಂಸಾರ ಸಾಗಿಸಿದ ಯಶೋದಮ್ಮ 2007ರಲ್ಲಿ ನಿಧನರಾದರು. ಸುಮಾರು 6 ತಿಂಗಳು ಡಯಾಲಿಸಿಸ್ ಮಾಡಿದರು ಉಳಿಯಲಿಲ್ಲಿ. ಸಂಗಾತಿಯ ಅಗಲಿಕೆಯಿಂದ ನೊಂದು ಖಂಡೋಬರಾವ್, ಪತ್ನಿ ನೆನಪಲ್ಲಿ 'ಅಮೂಲ್ಯ ಶೋಧ' ಎಂಬ ಕಟ್ಟಡವನ್ನು ಕಟ್ಟಿಸಿ ಅದರಲ್ಲಿ ನಮ್ಮ ಹಿಂದಿನ ತಲೆಮಾರುಗಳ ಜನರು ನಿತ್ಯ ಉಪಯೋಗಿಸುತ್ತಿದ್ದ ಬಗೆ ಬಗೆಯ ವಸ್ತುಗಳು, ವಿಗ್ರಹಗಳು, ನೇಗಿಲು, ನೊಗ, ಕುಡುಗೋಲು, ಒನಕೆ, ಮದ್ದುಗುಂಡು, ಇನ್ನು ಅನೇಕ ಸಾಮಗ್ರಿಗಳನ್ನು ಒಪ್ಪ ಓರಣವಾಗಿ ಜೋಡಿಸಿಡಲಾಗಿದೆ. ಹಳೆಯ ರೇಡಿಯೋ,ಹಳೆಯ ಲಾಟೀನ್ಗಳು, ಮರದ ಗ್ರಾಮಾಪೋನ್ ಸಂಗೀತ ಉಪಕರಣಗಳು,ತಾಮ್ರದ ಶಾಸನಗಳು,ಶಿಲಾಶಾಸನಗಳು,ಹಳೆಯ ತೈಲಚಿತ್ರಗಳು,ಇನ್ನು ಅನೇಕ ಸಂಗ್ರಹಗಳು ಇಲ್ಲಿವೆ.ಕ್ರಿ.ಶ. 1699 ರಲ್ಲಿ ಚಿತ್ರದುರ್ಗದ ಬಿಚ್ಚುಗತ್ತಿ ಭರಮಣ್ಣನಾಯಕನು ಅಲ್ಲಿಯ ದೇವಿಗೆ ನೀಡಿರುವ ಚವುಡಿಕೆಯು ಈ ಸಂಗ್ರಹದಲ್ಲಿದೆ.


ಸುಮಾರು ಮೂರು ಶತಮಾನಗಳ ಹಿಂದಿನ ನಗಾರಿಯ ಮೇಲೆ ಹಳೆಗನ್ನಡದ ಶಾಸನವಿದೆ. ಯುದ್ಧದಲ್ಲಿ ಬಳಸುತ್ತಿದ್ದ ನಾನಾ ವಿನ್ಯಾಸದ ಹಿಡಿಪಿನ ಕತ್ತಿಗಳು, ಈಟಿಗಳು ಖಡ್ಗಗಳು, ಲೋಹದ ಕೊಡಲಿಗಳು ನಾಡಬಂದೂಕುಗಳನ್ನು ನೋಡಬಹುದು. ಕರ್ನಾಟಕ ಮತ್ತು ಮಹಾರಾಷ್ರಗಳ ನಡುವಿನ ಸಂಬಂಧವನ್ನು ತಿಳಿಸುವ ಕಡತಗಳು, ಲೆಕ್ಕ ಪತ್ರಗಳು, ಹಿಂದೆ ಅಕ್ಕಿ ಗಿರಣಿ ಇರಲಿಲ್ಲ ಅಕ್ಕಿಗೆ ಹುಳು ಅಥವಾ ಕೀಟಗಳ ಬಾಧೆಯಾಗದಂತೆ ಉದ್ದನೆಯ ಮರದ ದೋಣಿಯಲ್ಲಿ ತುಂಬುತ್ತಿದ್ದರು. ಇದಕ್ಕೆ ಸುಭದ್ರವಾದ ಮುಚ್ಚಳವಿದ್ದು ಕೆಲವು ವೇಳೆ ಇದರ ಮೇಲೆ ಹಾಸಿಗೆ ಹಾಕಿಕೊಂಡು ಮಲಗಬಹುದಾಗಿತ್ತು ಇಂಥಹ ದೋಣಿ ಈ ವಸ್ತು ಸಂಗ್ರಹಾಲಯದಲ್ಲಿ ಕೇವಲ ಪ್ರದರ್ಶನಕ್ಕಾಗಿ ಇಟ್ಟಿದೆ ಇದನ್ನು 'ಪತಾಸು' ಎಂದೂ ಕರೆಯುತ್ತಾರೆ ಇದರಿಂದ ಯಶೋಧ ಅವರ ನೆನಪನ್ನು ಅಮೂಲ್ಯವಾಗಿಸಿದ್ದಾರೆ. ಮತ್ತು 'ನೆನಪು' ಎಂಬ ಕಟ್ಟಡದಲ್ಲಿ ವಿವಿಧ ದೇಶಗಳ ನೋಟುಗಳು ಹಾಗೂ ಚೋಳರು,ಪಲ್ಲವರು,ಗುಪ್ತರು,ಸುಲ್ತಾನರು ಮತ್ತು ಮೈಸೂರು ಅರಸರ ಕಾಲದ ನಾಣ್ಯಗಳು ಈ ಸಂಗ್ರಹದಲ್ಲಿವೆ.ಮತ್ತು ವಿವಿಧ ರೀತಿಯ ಬೀಗದ ಕೀಲಿಗಳು ಮತ್ತು ವಿವಿಧ ರೀತಿಯ ಸುಣ್ಣದ ಡಬ್ಬಿಗಳು ಸಹ ಇಲ್ಲಿವೆ

12ನೇ ಶತಮಾನದ ಮರಾಠರ ಕಂಚಿನ ಶಾಸನಗಳು,ವಿಜಯನಗರದ ಕಾಲದ ನಾಣ್ಯಗಳು,ಮೈಸೂರು ಸಂಸ್ಥಾನದ ಗಂಡು ಬೇರುಡ ಲಾಂಛನ ಇಲ್ಲಿದೆ.
ಇತಿಹಾಸ ಆದ್ಯಯನ ಮಾಡುವ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಮಾರ್ಗದರ್ಶಿಯಾಗಿರುವ ವಸ್ತು ಸಂಗ್ರಹಾಲಯಕ್ಕೆ ದೇಶ ವಿದೇಶಿ ಪ್ರವಾಸಿಗರೂ ಭೇಟಿ ಕೊಟ್ಟಿದ್ದಾರೆ. ಬಿಎಡ್ ಹಾಗೂ ಡಿಎಡ್ ವಿದ್ಯಾರ್ಥಿಗಳಿಗೆ ಇದೊಂದು ಪ್ರಮುಖ ಅಧ್ಯಯನ ಕೇಂದ್ರ. ಶಾಲಾಮಕ್ಕಳು,ಮಹಿಳೆಯರಿಗೆ ಕರಕುಶಲ ತರಬೇತಿ ನೀಡಲಾಗುತ್ತದೆ ಗ್ರಂಥಾಲಯ, ವಿಚಾರಸಂಕಿರಣ, ಆಧ್ಯಯನ ಶಿಬಿರ, ಚಿಕ್ಕಕಾರ್ಯಕ್ರಮಕ್ಕೆ ಸಂಭಾಂಗಂವೂ ಇದೆ.
ಮ್ಯೂಸಿಯಂಗಳು ಹೆಚ್ಚಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇವೆ. ಆದರೆ ಹಳ್ಳಿಯಲ್ಲಿ ಮ್ಯೂಸಿಯಂ ಇರುವುದು ಅಪರೂಪ.ಆಸಕ್ತಿ. ಅಭಿರುಚಿ ಇದ್ದವರು ಏನನ್ನಾದರೂ ಸಾಧಿಸುತ್ತಾರೆ ಎನ್ನವುದಕ್ಕೆ ಈ ಮ್ಯೂಸಿಯಂ ಒಂದು ಅತ್ಯುತ್ತಮ ಉದಾಹರಣೆ. ಶಿವಮೊಗ್ಗದ ಕಡೆ ಬಂದರೆ ಈ ಮ್ಯೂಸಿಯಂಗೆ ಭೇಟಿ ನೀಡಿ

ಚಿತ್ರ ಲೇಖನ: ಟಿ.ಶಿವಕುಮಾರ್
ಸಹ-ಶಿಕ್ಷಕ
ಸ.ಹಿ.ಪ್ರಾ. ಶಾಲೆ ಅರಳೇಶ್ವರ
(ತಾ) ಹಾನಗಲ್ಲ (ಜಿ) ಹಾವೇರಿ

1 comments:

pushpabishek said...

tumba andre tumbane chennagide sir....eintha vishayagalu tumbanee aparuupa.. aintha innastu vishayagalondige photos sameta maahithi kodi sir.
shubavagali

Post a Comment