ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಎಲ್ಲಾ ಸಾಮಾಜಿಕ ಸಮಸ್ಯೆಗಳು ಹುಟ್ಟು ನಮ್ಮಿಂದಲೇ ಹಾಗೂ ಇದರ ಅಂತ್ಯವೂ ಕೂಡ ನಮ್ಮಿಂದಲೇ ಆಗಬೇಕು. ದೃಢಚಿತ್ತದಿಂದ ಇದ್ದರೆ ಎಲ್ಲಿಯ ವರದಕ್ಷಿಣೆ, ಸತಿಪದ್ಧತಿ, ಬಾಲ್ಯವಿವಾಹ, ದೇವದಾಸಿ, ಅದು ಕೂಡಾ ವರದಕ್ಷಿಣೆಯನ್ನು ಪ್ರಧಾನವಾಗಿ ನೋಡಿದಾಗ ವರವೇ ಇಲ್ಲದ ಈ ಕಾಲದಲ್ಲಿ ವರದಕ್ಷಿಣೆ ಮಾತು ಬರಲಾರದು ಮತ್ತು ವಧುದಕ್ಷಿಣೆ ಪದ್ಧತಿ ಹುಟ್ಟಿಕೊಂಡರೂ ಅದರಲ್ಲಿ ಆಶ್ಚರ್ಯವೇನಿಲ್ಲ.


ಜನಸಂಖ್ಯಾ ಸಮಸ್ಯೆ:

ಇದು ಅತಿ ದೊಡ್ಡದಾದ ವಿಷಯವಾದರೂ ಕೂಡ ಜನಸಂಖ್ಯೆ ಒಂದು ದೃಷ್ಟಿಯಿಂದ ದೊಡ್ಡ ಸಮಸ್ಯೆಯೇ ಅಲ್ಲ. ಆ ಜನರನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬಾರದ ಸರಕಾರ, ಆಡಳಿತ ಯಂತ್ರದ ವೈಫಲ್ಯವೇ ಇಂದು ಈ ಸಮಸ್ಯೆಗೆ ಮೂಲ ಕಾರಣ. ಮಿತಿಮೀರಿದ್ದು ಜನಸಂಖ್ಯೆ ಎನ್ನುವುದಕ್ಕಿಂತಲೂ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಪ್ರಜಾಪ್ರಭುತ್ವ ದೇಶವಾದ ನಮ್ಮಲ್ಲಿ ಜನಸೇವಕರಿಗೆ ರಾಜಕಾರಣಿಗಳಿಗೆ ಜೀವರಕ್ಷಣೆ ಬೇಕು.

ದೇಶದ ಸಂಪತ್ತಿನಿಂದ ಈ ರಕ್ಷಣೆ, ಅದೆಷ್ಟು ಕೋಟಿ ಪ್ರತಿವರ್ಷ ಇವರುಗಳಿಗೆ ಜೀವರಕ್ಷಣಾ ವಿಷಯಗಳಿಗೆ ವ್ಯಯವಾಗುತ್ತಿದೆ. ಹೀಗಾದರೆ ಪ್ರಜೆಗಳಾದ ನಮಗೆ ಯಾವ ರೀತಿಯ ರಕ್ಷಣೆ ಸಿಗಬಹುದು. ಒಬ್ಬ ಎಂ.ಸಿ.ಎ. ಯಿಂದ ಹಿಡಿದು ರಾಷ್ಟ್ರಾಧ್ಯಕ್ಷರ ತನಕ ಎಲ್ಲಾ ಅಧಿಕಾರಿ ವರ್ಗಗಳಿಗೆ ಒಂದು ಗನ್ಮ್ಯಾನ್ ಬೇಕಾದರೆ, ಆರ್ಧಿಕ ನಷ್ಟ ಎಷ್ಟು ಯೋಚಿಸಿ, ಮುಂದೆ ಗ್ರಾಮಪಂಚಾಯತ್ ಸದಸ್ಯರಿಂದಲೂ ಇದು ಪ್ರಾರಂಭವಾಗಬಹುದು.

ಸಂಪತ್ತು ಹೇರಳವಾಗಿದೆ. ಹಿಂದಿನಂತೆ ಈಗ ಆರ್ಧಿಕ ಕೊರತೆ ನಿಜವಾಗಿಯೂ ನಮ್ಮ ದೇಶದಲ್ಲಿ ಇಲ್ಲ. ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಹೆಚ್ಚಾಗಿದೆ ಎಂದು ಎಲ್ಲೆಲ್ಲೂ ಕೇಳಿಬರುವ ವಿಚಾರ, ಮಾನವ ಶಕ್ತಿಯು ಹೆಚ್ಚಾದಂತೆ, ಉತ್ಪಾದನಾ ಶಕ್ತಿಯೂ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಾಗಿ ಆದಾಯ ಕಡಿಮೆಯಾಗಲು ಮೂಲಭೂತ ಕಾರಣ ನಾವು ಮಾಡುತ್ತಿರುವ ದುಂದು ವೆಚ್ಚ. ಆರ್ಥಿಕತೆ , ಸಾಮಾಜಿಕ ಅಭಿವೃದ್ಧಿ ಹಾಗೂ ಜನಸಂಖ್ಯೆ ಸಮಾನವಾಗಿ, ನೇರವಾಗಿ ಹೋಗಲು ಸಾಧ್ಯವಿದೆ.

ಸ್ತ್ರೀಯರ ಪಾತ್ರ ಈ ಸಮಾಜದಲ್ಲಿ ಮುಖ್ಯವಾದುದು. ದೇಶದ ಕಾನೂನು, ಪುರುಷರ ಮನಸ್ಸು, ಕುಟಂಬ ವ್ಯವಸ್ಥೆ, ಧಾರ್ಮಿಕ ಚಿಂತನೆ, ಇಲ್ಲಿ ಪಾತ್ರವಹಿಸುತ್ತದೆ. ಸಮಾನ ನಾಗರೀಕ ಕಾನೂನು ಯಾವ ಬೇಧಭಾವಗಳಿಲ್ಲದೆ, ದೇಶಪ್ರೇಮವನ್ನು ಬೆಳೆಸಿಕೊಂಡು ಅಳವಡಿಸಿಕೊಂಡಾಗ, ಜನಸಂಖ್ಯೆ ಏರಿಕೆಯಲ್ಲಿ ಖಂಡಿತವಾಗಿಯೂ ಮಿತಿ ಇರುತ್ತದೆ. ಜನಸಂಖ್ಯೆಯ ಏರಿಕೆಯೊಂದಿಗೆ ಸ್ತ್ರೀಯರ ಪಾತ್ರವನ್ನು ನಾವು ಕಂಡುಕೊಂಡಾಗ ಸ್ತ್ರೀಯರು ಕೂಡಾ ಇಂದು ಅವರವರ ಇತಿಮಿತಿಯೊಳಗೆ ಜೀವಿಸುವವರೇ ಆಗಿದ್ದಾರೆ.

ಇನ್ನುಳಿದಂತೆ ಈ ಜನಸಂಖ್ಯಾ ಹೆಚ್ಚಳ ಆಧುನಿಕ ಜಗತ್ತಿನಲ್ಲಿ ಸಾಮಾನ್ಯವಾಗಿ ಕಂಡುಬರುವಂತಹದ್ದು. ಸರ್ವತೋಮುಖ ಬೆಳವಣಿಗೆಯಲ್ಲಿ ವೈಯಕ್ತಿಕವಾದ ಹಾಗೂ ಸಾಮೂಹಿಕವಾದ ಬೆಳವಣಿಗೆ ಎರಡೂ ಕಂಡು ಬರುತ್ತದೆ. ಬ್ರಿಟಿಷರ ಕಾಲದಿಂದ ಕೇವಲ ಅಶನ, ವಸನ, ವಸತಿ ಹೀಗೆ ಇವಿಷ್ಟು ಮಾತ್ರ ಬೆಳವಣಿಗೆಯಾಗದೆ, ಆಧುನಿಕ ಅಗತ್ಯತೆ ಇರುವ ವಸ್ತುಗಳಲ್ಲಿಯೂ ಬದಲಾವಣೆಯಾಯಿತು. ಉತ್ಪಾದನೆಯನ್ನು ಹೆಚ್ಚಿಸಿ, ಜನಸಂಖ್ಯೆಯ ಸಮರ್ಪಕವಾದ ಬಳಕೆಯಾಗಬೇಕು. ಇದು ಇಚ್ಛಾಶಕ್ತಿಯಿಂದಲೇ ಆಗಬೇಕೇ ವಿನಃ ಒತ್ತಾಯಪೂರ್ವಕವಾದರೆ ಪ್ರಯೋಜನವಿಲ್ಲ.

ಭ್ರಷ್ಟಾಚಾರ ಇಂದು ಸರ್ವತೋಮುಖ ಅಭಿವೃದ್ಧಿಗೆ ಒಂದು ದೊಡ್ಡ ತೊಡಕು. ಸರಕಾರದ ಆರ್ಥಿಕ ನೀತಿ ಈ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ನಿರುದ್ಯೋಗ:
ನೈಜವಾಗಿ ವ್ಯಾಖ್ಯಾನಿಸಿದರೆ, ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಆದರೆ, ಆಧುನಿಕ ಸೌಲಭ್ಯಗಳ ಬೆಳವಣಿಗೆ, ಸಾಮಾಜಿಕ ವಿಘಟನೆ, ಕೃತಕ ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಬೇಕಾದಷ್ಟು ಕೆಲಸ ಮಾಡಲು ಅವಕಾಶವಿದ್ದರೂ ಕೂಡಾ ಮಾಡುವುದು ಯಾರು ಎಂಬುದು ಇಂದಿನ ಮುಖ್ಯಪ್ರಶ್ನೆ. ಉದ್ಯೋಗದಲ್ಲಿ ಸ್ಥಾನಮಾನ, ಸಂಭಾವನೆ ಮಟ್ಟ, ಸುಲಭತ್ವ, ಕಠಿಣತ್ವ, ನಾಚಿಕೆ, ಹೇಸಿಕೆ, ವಿದ್ಯೆ, ಬುದ್ಧಿ ಇತ್ಯಾದಿಗಳೆಲ್ಲಾ ಒಟ್ಟಾಗುತ್ತವೆ. ಶ್ರಮವಿಲ್ಲದ ಕೆಲಸ ಹೆಚ್ಚು ಸಂಬಳ ನಮ್ಮೆಲ್ಲರ ಜಪವಾಗಿ ಬಿಟ್ಟಿದೆ. ಗ್ರಾಮೀಣ ಮಟ್ಟದಿಂದ ನಗರ ಮಟ್ಟದವರೆಗೆ ಹಾಗೂ ನಗರದಿಂದ ಗ್ರಾಮೀಣದವರೆಗೆ ನಿರುದ್ಯೋಗ ಸಮಸ್ಯೆ ನಿರ್ಮೂಲನೆಗೆ ಉದ್ಯೋಗ ಸೃಷ್ಟಿ ವಿಷಯಕ್ಕೆ ಬಂದಾಗ ಇದ್ದುದನ್ನು ಇದ್ದುದರಲ್ಲಿಯೇ ಸರಿಹೊಂದಿಸುವ ಪ್ರವೃತ್ತಿ ಕಂಡುಬರುತ್ತದೆ.

ಶಿಕ್ಷಣ ಹೇಳುವಂತಹುದು ಒಂದು ಸುಂದರವಾದ ಪದ ಹಾಗೂ ಒಳ್ಳೆಯ ವಿಷಯ, ಎಲ್ಲರು ಮೇಲಿಂದ ಮೇಲೆ ಚರ್ಚಿಸುವ ವಿಷಯ. ಎಲ್ಲಿಯವರೆಗೆ ಶಿಕ್ಷಣ ನೀತಿಯನ್ನು ಹವಾನಿಯಂತ್ರಿತ ಕೊಠಡಿಯೊಳಗೆ ಕುಳಿತುಕೊಂಡು ತಮ್ಮವರೊಡನೆ ಚರ್ಚಿಸಿ ಜಾರಿಗೊಳಿಸುತ್ತಾರೋ, ಅಲ್ಲಿಯವರೆಗೆ ಇದರಲ್ಲಿ ಲೋಪ ಇದ್ದೇ ಇರುತ್ತದೆ. ಶಿಕ್ಷಣ ಕ್ಷೇತ್ರದ್ಲಿ ದುಡಿಯುತ್ತಿರುವವರನ್ನು ಇದರಲ್ಲಿ ದೂರವಿರಿಸುವುದು ಉಚಿತವಲ್ಲ. ವಿದ್ಯಾರ್ಥಿಗಳನ್ನೇ ಆಧುನಿಕ ಶಿಕ್ಷಣ ವ್ಯವಸ್ಥೆಯು ಪ್ರಯೋಗ ಶಾಲೆಯನ್ನಾಗಿ ಮಾಡಿ, ವರ್ಷವರ್ಷ ಹೊಸ ಹೊಸ ಪಠ್ಯಕ್ರಮಗಳ ಮೂಲಕ ಅವರ ಮೇಲೆ ಪ್ರಯೋಗ ನಡೆಸುತ್ತದೆ.

ಪ್ರತಿವರ್ಷವೂ ನೂರಾರು ಶಾಲೆ ಕಾಲೇಜುಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳೇ ಇಲ್ಲದ ಶಾಲೆಯನ್ನು ತೆರೆಯುತ್ತಿದ್ದೇವೆ. ಖಾಸಗಿ, ಸರಕಾರಿ , ಅರೆಸರಕಾರೀ ಇತ್ಯಾದಿ ಹೆಸರಿನಲ್ಲಿ ಶಿಕ್ಷಣ ಕಾರ್ಖಾನೆಯನ್ನು ತೆರೆದು ಅದರಲ್ಲಿಯೂ ಕೂಡಾ ಭ್ರಷ್ಟಾಚಾರವನ್ನು ಮಾಡುತ್ತಿದ್ದೇವೆ. ಇದರಿಂದ ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣವಾಗುತ್ತಾ ಇದೆ. ಇದರಿಂದ ಸರಕಾರೀ ಶಾಲೆಗಳು ಖಾಲಿ ಹೆಸರಿಗಾಗಿ ಮಾತ್ರ ಉಳಿದುಕೊಂಡಿವೆ. ಸ್ನಾತ್ತಕೋತ್ತರ ಪದವಿಯ ಮೇಲಿನ ಭ್ರಷ್ಟಾಚಾರದ ಪ್ರಭಾವದಿಂದ ವ್ಯವಸ್ಥೆ ಹಾಳಾಗುತ್ತಿದೆ. ಖಾಲಿ ಒಂದು ದೇಶದಲ್ಲಿ ಶಾಲೆಗಳನ್ನು ಅಥವಾ ಕಾಲೇಜುಗಳನ್ನು ಕಟ್ಟಿದಾಗ ಅದು ಶೈಕ್ಷಣಿಕವಾಗಿ ಬಲಗೊಳ್ಳುವುದಿಲ್ಲ. ಸಿಕ್ಕಿದ ಶಿಕ್ಷಣದಲ್ಲಿ ಮೌಲ್ಯಗಳು ಇವೆಯೋ ಎಂದು ನಾವು ಚಿಂತಿಸಬೇಕು. ಸಂಪೂರ್ಣವಾಗಿ ಈಗಿನ ಶಿಕ್ಷಣ ನೀತಿ ಫಲದಾಯಕವಾಗಿಲ್ಲ.

ಭಿಕ್ಷಾಟನೆ:
ಭಿಕ್ಷೆ ಬೇಡಿ ಜೀವನ ನಡೆಸುವುದು, ಇದೊಂದು ಸಾಮಾಜಿಕ ಪಿಡುಗು ಹೌದೂ ಹಾಗೂ ಅಲ್ಲವೂ ಕೂಡಾ. ಭಿಕ್ಷೆ ಎತ್ತುವುದರಿಂದ ಜೀವನ ನಡೀತದೆ, ಪ್ರಾಥಮಿಕ ಅವಶ್ಯಕತೆ ಪೂರೈಸುತ್ತದೆ. ಅಂತೆಯೇ ಸಾಮಾಜಿಕ ತೊಂದರೆ, ವ್ಯವಸ್ಥೆಯಲ್ಲಿ ವ್ಯತ್ಯಾಸ, ಆರೋಗ್ಯ ವಿಷಯದಲ್ಲಿ ತೊಂದರೆ, ವ್ಯಭಿಚಾರ, ಇತ್ಯಾದಿಗಳು ಕಾರ್ಯವೆಸಗುತ್ತದೆ. ಕಾನೂನು ಮಾತ್ರ ಭಿಕ್ಷಾಟನೆಗೆ ವಿರುದ್ಧ ಪದವಲ್ಲ. ಮಾತ್ರವಲ್ಲ ಕಾನೂನಿಗೆ ಮಾತ್ರ ಭಿಕ್ಷಾಟನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಇಲ್ಲಿ ಮನಸ್ಸಿನ ಪರಿವರ್ತನೆ, ಸ್ವಉದ್ಯೋಗ, ದುಡಿದು ಗಳಿಸುವುದರ ಮೂಲಕ ಅವಶ್ಯಕತೆಗಳ ಪೂರೈಕೆಯಾದಾಗ ಭಿಕ್ಷಾಟನೆ ಕಡಿಮೆಯಾಗುವುದು.

ಅಧಿಕಾರ ಲಾಲಸೆ ಮತ್ತು ಮತದ ಮೇಲಿನ ವ್ಯಾಮೋಹ, ರಾಜಕೀಯ ಆಟಗಳು ಈ ಭಿಕ್ಷಾಟನಾ ನಿರ್ಮೂಲನೆಯಲ್ಲಿ ಪರಿಣಾಮಗಳನ್ನು ಬೀರುತ್ತಾ ಇವೆ. ವಾರ್ಷಿಕ , ಪಂಚವಾರ್ಷಿಕ ಯೋಜನೆಗಳು ಕಾಗದದ ಮೇಲೆ ದೊಡ್ಡ ಡ್ರಾಗನ್ ರೂಪದಲ್ಲಿ ಚಿತ್ರಿತವಾಗುತ್ತದೆ. ಪುನರ್ವಸತಿ ಕೇಂದ್ರಗಳು ಉತ್ಪಾದನಾ ಕೇಂದ್ರಗಳಾಗಿ ಪರಿವರ್ತನೆಗೊಂಡರೆ ಭಿಕ್ಷುಕರಿಗೆ ನೈತಿಕ ಶಿಕ್ಷಣದೊಂದಿಗೆ, ಉದ್ಯೋಗ ಒದಗಿಸಿ ಸ್ವತಂತ್ರವಾಗಲು ಅವಕಾಶ ನೀಡಬೇಕು. ಫಲಾನುಭವಿಗಳಿಗೆ ಹಣದ ರೂಪದಲ್ಲಿ ಸಹಕಾರ ನೀಡುವುದರ ಬದಲು, ಸ್ವಉದ್ಯೋಗದಲ್ಲಿ ತಮ್ಮ ಕಾಲ ಮೇಲೆ ತಾವೇ ನಿಲ್ಲುವಂತೆ ಮಾಡಬೇಕು. ಆದರೆ ಅಧಿಕಾರಿಗಳಲ್ಲಿ ಈ ಕಾರ್ಯ ಮಾಡುವಾಗ ಎಷ್ಟು ನಿಷ್ಠೆ ಇದೆ ಎಂಬುವುದನ್ನು ನಾವು ಮೊದಲು ನೋಡಬೇಕು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯು ಇಲ್ಲಿ ಕಾರ್ಯವೆಸಗುತ್ತದೆ.

ಬಡತನ:
ಬಡತನ ಅಥವಾ ಬಡತನ ರೇಖೆ ಎಂಬುವುದು ರಾಜಕೀಯ ಲಾಭಕ್ಕಾಗಿ ಸೃಷ್ಟಿಸಿದ, ಬಹುದೊಡ್ಡ ಚಕ್ರ, ನಿಜಾರ್ಥದಲ್ಲಿ ಅದರಲ್ಲಿ ಏನೂ ಇಲ್ಲ. ನೇರವಾಗಿ ಬಡತನ ಎಂಬುವುದಕ್ಕೆ ವ್ಯಾಖ್ಯಾನವೇ ಇಲ್ಲ. ನಮ್ಮಲ್ಲಿ ಪ್ರತಿಭೆಗೆ ತಕ್ಕ ಅವಕಾಶವಿಲ್ಲ. ನಮ್ಮಲ್ಲಿ ಸಾಧನೆಯಿಲ್ಲ. ಆಡಳಿತದಲ್ಲಿ ಭ್ರಷ್ಟರೇ ತುಂಬಿಕೊಂಡಿದ್ದಾರೆ. ಇದೆಲ್ಲಾ ಬಡತನದ ಮೂಲ ಕಾರಣಗಳು ಒಂದು ರೂಪಾಯಿಯಲ್ಲಿ ಕೇವಲ 10 ಪೈಸೆ, ಒಂದು ಯೋಜನೆಯ ಅನುಷ್ಟಾನಕ್ಕೆ ಜಾರಿಯಾದರೆ, ಫಲಾನುಭವಿಗಳಿಗೆ ತಲುಪುವುದೇ ಅಪರೂಪ. ತಮ್ಮ ಬ್ಯಾಂಕ್ ಅಕೌಂಟ್ ಸ್ಥಿರವಾಗಿಸಲು ರಾಜಕಾರಣಿಗಳಿಗೆ ಇದಕ್ಕಿಂತ ಒಂದು ಒಳ್ಳೆಯ ಯೋಜನೆ ಇನ್ನೊಂದಿಲ್ಲ. ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ಮೊಬೈಲ್ ಯಾವ ಕಾರ್ಯಕ್ಕೆ ಊಟವೇ ಇಲ್ಲದವರಿಗೆ ಮೊಬೈಲ್ ನೀಡಿದರೆ ಅವರ ಹೊಟ್ಟೆ ತುಂಬುವುದೆಂಬುದ ಸರ್ಕಾರದ ಚಿಂತನೆ. ಹಸಿವೇ ನೀಗದೇ ಹೋದಾಗ ಈ ಸರಕಾರದ ಮತದ ಲಾಲಾಸೆಯಿಂದ ನೀಡುವ ಈ ಮೊಬೈಲ್ನಂತಹ ಸೌಲಭ್ಯ ಏತಕ್ಕಾಗಿ?.
ಯುವ ಅಶಾಂತಿ:
ಯುವ ಜನರ ಅಶಾಂತಿ ಬಹಳ ದೊಡ್ಡ ಚಿಂತೆಯ ವಿಷಯ. ಈ ಮಿಡ್ ಸ್ಟೇಯಂತಹ ಘಟನೆಗೆ ಯುವಜನರ ಅಶಾಂತಿ ಸೇರಿಕೊಂಡರೆ ಅದೊಂದು ನಿರಾಶಾದಾಯಕ ಬೆಳವಣಿಗೆ. ಯುವಜನಾಂಗದಲ್ಲಿ ಕಠಿಣತೆ, ಶ್ರದ್ಧೆ, ಗುರಿ ಇಲ್ಲ. ಯುವಜನರಿಗೆ ಖಂಡಿತವಾಗಿಯೂ ಮಾರ್ಗದರ್ಶನ ಇದೆ. ಆದರೆ ಅದರಂತೆ ನಡೆಯಲು ಏನೋ ಒಂದು ತೊಡಕು ಇದೆ. ಮೂಲ ಕಾರಣ ನಿಷ್ಟಾವಂತ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಮುಖಂಡರ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಪಾಶ್ಚಾತ್ಯೀಕರಣ ಅಂದರೆ ಮತ್ತೊಬ್ಬರನ್ನು ಪಾಲಿಸಬೇಕು ಎನ್ನುವ ಮನೋಭಾವ, ಅದರಲ್ಲಿ ಹೊಸತೊಂದು ಅನುಭವಿಸಲು ಹೋದ ನಾವು ತೊಂದರೆಗೆ ಸಿಕ್ಕಿ ಬೀಳುತ್ತವೆ.

ಯುವಶಕ್ತಿಯ ದುರ್ಬಳಕೆಯ ಹಿಂದಿನ ಮೂಲಕಾರಣ ರಾಜಕೀಯ ಶಕ್ತಿ. ಯುವಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿಸುವುದರಲ್ಲಿ ನಮ್ಮ ವಿಫಲತೆ ಇದೆ. ಸ್ವಾತಂತ್ರ್ಯಾನಂತರ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಕಡಿಮೆಯಾಗಿ, ದ್ವೇಷದ ಪ್ರೇಮ ಹೆಚ್ಚಾಯಿತು. ಇದನ್ನು ತಪ್ಪಿಸಲು ಹಿರಿಯರು ವಿಫಲರಾಗಿದ್ದಾರೆ. ತಾಂತ್ರಿಕ ಬೆಳವಣಿಗೆಯೂ ಇದರ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತಾ ಇದೆ. ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯುವಕರಲ್ಲಿ ಮೂಡಿಸುವುದು ಅಗತ್ಯವಾಗಿದೆ. ಇದು ಉತ್ತಮ ಚಿಂತನೆ, ಕಾರ್ಯಪ್ರವೃತ್ತಿ, ಧಾರ್ಮಿಕ ಮನೋಭಾವ, ಸಾಂಸ್ಕೃತಿಕ ಒಲುಮೆಯಿಂದ ಸಾಧ್ಯವಾಗುತ್ತದೆ. ಅತ್ಯಂತ ಸೂಕ್ಷ್ಮವಾಗಿ ಪರಿವರ್ತನೆಯ ಮಾರ್ಗವನ್ನು ನಾವಿಲ್ಲಿ ಕಂಡುಕೊಳ್ಳಬೇಕಾಗುತ್ತದೆ.

ಪರಿವರ್ತನೆಯ ಮಾರ್ಗೋಪಾಯ ಎಲ್ಲಾ ವಿಧಾನಗಳಿಂದ ಆಗಲೇಬೇಕು. ಇದು ಜೀವನ ಪದ್ಧತಿ, ಕುಟುಂಬ ದಿನಚರಿ, ಪಾಲಕರ ನಡೆನುಡಿ, ಸಮಾಜದ ದೃಷ್ಟಿ, ವೈಯಕ್ತಿಕ ಚಟುವಟಿಕೆ, ಶಿಕ್ಷಣ ಪದ್ಧತಿ, ಶಿಕ್ಷಣ ನೀತಿ, ಆರ್ಥಿಕ ನೀತಿ, ಶ್ರಮದ ಪರಿ, ಭಾಗವಹಿಸುವಿಕೆ, ಚಿಂತನೆಗಳನ್ನು ಬೆಳೆಸಿಕೊಂಡು ನಮ್ಮನ್ನು ನಾವು ಸರ್ವಶ್ರೇಷ್ಠ ಪುರುಷ ಅಥವಾ ಮಹಿಳೆಯನ್ನಾಗಿಸಬೇಕು.
ಯುವಕರು ವಸ್ತುನಿಷ್ಟ ಕಾರ್ಯವೆಸಗಲು ಸಾಧ್ಯವಾದಾಗ ಅವರಲ್ಲಿ ರಾಷ್ಟ್ರನಿರ್ಮಾಣ ಶಕ್ತಿ ಮಾತ್ರವಲ್ಲ, ಇದರಲ್ಲಿ ಅವರ ಪಾತ್ರ ಗಣನೀಯವಾಗುತ್ತದೆ. ನಿಜವಾಗಿಯೂ ಸೇವಾ ಮನೋಭವವನ್ನು ಬೆಳೆಸಿಕೊಂಡ ಯುವಕರು ರಾಜಕೀಯ ರಂಗಕ್ಕೆ ಧುಮುಕಬೇಕು. ಸುದ್ಧಿ ಮಾಧ್ಯಮ ಪ್ರಮುಖ ಉತ್ತಮ ಮಾಧ್ಯಮವನ್ನಾಗಿಸಲು, ಅದರಲ್ಲಿರುವ ವ್ಯಾಪಾರೀಕರಣ ಅದಕ್ಕೆ ತೊಡಕನ್ನು ಉಂಟು ಮಾಡುತ್ತಾ ಇದೆ. ಯುವಪೀಳಿಗೆ ಭವಿಷ್ಯವನ್ನು ಚಿಂತಿಸುವಂತಾಗಬೇಕು. ಕಾಲಿಗೆ ಮುಳ್ಳಾಗುವವರನ್ನು ಕಿತ್ತು ಬದಿಗೆ ಇಟ್ಟು, ಮುಂದುವರೆಯಬೇಕು ಈ ಯುವ ಜನಾಂಗ.

ವೃದ್ಧಾಪ್ಯ:
ಪ್ರತಿಯೊಬ್ಬನಿಗೂ ಸಿಗುವ ಒಂದು ಸ್ಥಿತಿ, ಆರ್ಥಿಕವಾಗಿ ಮುಂದುವರಿದ ಹೆಚ್ಚು ವಿದ್ಯಾವಂತ, ಜವಾಬ್ದಾರಿ ಕೆಲಸದಲ್ಲಿ ಇರುವ, ಉನ್ನತ ಅಧಿಕಾರಿ ವರ್ಗವೇ ಇಂದು ಪಾಲಕರನ್ನು ತ್ಯಜಿಸುವ ಮನೋಭಾವದವರಾಗುತ್ತಿದ್ದಾರೆ. ಸಾಮಾನ್ಯ ಮೌಲ್ಯಗಳ ಅರಿವು, ಪಾಪಕೃತ್ಯಗಳು, ನನ್ನಂತೇ ಎಲ್ಲರೂ, ನಾನು ಮುಂದೆ ಆ ವರ್ಗಕ್ಕೆ ಸೇರುವವನು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗಳ ತಿಳುವಳಿಕೆಯಲ್ಲಿ ಭಾರತೀಯ ಸಂಸ್ಕೃತಿ ಸಂಪ್ರದಾಯಗಳು ಪ್ರಧಾನ ಪಾತ್ರವಹಿಸುತ್ತವೆ. ಸರ್ಕಾರ ನಿವೃತ್ತಿ ವೇತನವನ್ನು ಎಲ್ಲರಿಗೂ ಸಿಗುವಂತೆ ಕಾರ್ಯಕ್ರಮ ರೂಪಿಸಬೇಕು. ನಿವೃತ್ತಿಯ ನಂತರ ಎಲ್ಲರೂ ಸಮಾನರು. ಇಲ್ಲಿ ಅಧಿಕಾರಿ, ಕಾರ್ಮಿಕ , ಕಾರಕೂನ, ಪೇದೆ ಇತ್ಯಾದಿ ಯಾವುದು ಕೂಡಾ ಇಲ್ಲ. ನಿವೃತ್ತಿ ವೇತನ ಒಂದು ಮಿತಿಯಲ್ಲಿ ಸರ್ವರಿಗೂ ನೀಡಲು ಸಾಧ್ಯವಾದರೆ ಈ ವೃದ್ದಾಪ್ಯ ಸಮಸ್ಯೆಯೇ ಅಲ್ಲ. ನಿವೃತ್ತಿ ವೇತನ ಎಲ್ಲರಿಗೂ ಸಿಗಬೇಕಾದರೆ ಸರ್ಕಾರ ಒಂದು ವಿಶೇಷ ಅನುದಾನ, ಆಯವ್ಯಯ ಪಟ್ಟಿಯಲ್ಲಿ ವಿಶೇಷ ಮೊತ್ತವನ್ನು ಕಾಯ್ದಿರಿಸಬೇಕು. ಸರಕಾರ ಖಾಲಿ ಸರ್ಕಾರಿ ನೌಕರರಿಗೆ ಮಾತ್ರ ನಿವೃತ್ತಿ ವೇತನ ನೀಡದೆ ಇತರ ಎಲ್ಲಾ ನೌಕರರಿಗೂ ಸರಿಯಾದ ನಿವೃತ್ತಿ ವೇತನ ಸಿಗುವಂತೆ ಮಾಡಬೇಕು. ಆಗ ಅವರ ಜೀವನ ಸಂಜೆಯು ಸುಂದರವಾಗಿರುತ್ತದೆ.

ಪ್ರತಿಭಾ ಪಲಾಯನ:
ಎಲ್ಲಿ ಉನ್ನತ, ಉತ್ತಮ, ಒಳ್ಳೆಯ ಅವಕಾಶದಲ್ಲಿ ಕೊರತೆ ಇರುವುದೋ ಅಲ್ಲಿ ಅವಕಾಶಕ್ಕಾಗಿ ಪಲಾಯನ, ತನ್ನಮೂಲಕ ಪರಿಪೂರ್ಣ ಬೆಳವಣಿಗೆಗೆ ಆಸೆ, ಇದು ಮಾನವ ಸಹಜ ಪ್ರವೃತ್ತಿ. ಆದರೆ ಭಾರತದಲ್ಲಿ ಇದು ಹೆಚ್ಚಿದೆ. ಮುಖ್ಯಕಾರಣ, ನೀತಿ ನಿಯಮಗಳು ಸರಕಾರೀ ಪ್ರವೃತ್ತಿಗಳು, ದಂಡಪಿಂಡ ಅಧಿಕಾರಿ ವರ್ಗ, ಭ್ರಷ್ಟರಾಜಕೀಯ, ವಿದೇಶದಲ್ಲಿ ಅವಕಾಶಗಳ ಸುರಿಮಳೆ. ಪರಿಹಾರ ನಮ್ಮಲ್ಲೇ ಹುಟ್ಟಬೇಕು. ಸರಕಾರ ಏಕಗವಾಕ್ಷಿ ಪದ್ಧತಿಯಲ್ಲಿ ಪ್ರತಿಭೆಗೆ ಅವಕಾಶ ನೀಡಬೇಕು. ಯಾರಿಗೂ ತೊಂದರೆ ನೀಡದೆ, ಅವರವರ ಪ್ರತಿಭೆಯನ್ನು ಮೆರೆಯಲು ಅವಕಾಶ ನೀಡಬೇಕು. ಆಗ ಮಾತ್ರ ದೇಶದ ಸರ್ವತೋಮುಖ ಬೆಳವಣಿಗೆ ಸಾಧ್ಯ.


ಸುಜಿತ್ (ವಿದ್ಯಾರ್ಥಿ, ಹವ್ಯಾಸಿ ಬರಹಗಾರ)

ಪಾವಂಜೆಗುಡ್ಡೆ ,ಉಡುಪಿ.

0 comments:

Post a Comment