ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ : ಭಾಗ 27 - ಅಧ್ಯಾಯ 9 . ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಹ್ಯಾಕಿಂಗ್ ಬಗ್ಗೆ ಕಲಿಯಲು ಬೆಂಗಳೂರಿಗೆ ಹೋಗಬೇಕಾಗಿಲ್ಲವೆನ್ನುವುದು ತಿಳಿದು ಮನಸ್ವಿತಾಳ ಮನಸ್ಸು ಹಗುರವಾಯಿತು. ಈಗಿಂದೀಗಲೇ ಆನ್ಲೈನ್ ಕಲಿಕೆಗೆ ತಯಾರಿ ನಡೆಸಿದಳು. ಅದರ ಕಲಿಕಾ ಫೀಸನ್ನು ಕ್ರೆಡಿಟ್ ಕಾರ್ಡ್ ಮುಖಾಂತರ ಪಾವತಿ ಮಾಡಬೇಕಾಗಿತ್ತು. ಅದರಂತೆಯೇ ತನ್ನ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ನಿರ್ದಿಷ್ಟ ಬಾಕ್ಸ್ನಲ್ಲಿ ತುಂಬಿಸಿ ನೊಂದಾಯಿಸಿಕೊಂಡಳು. ತಕ್ಷಣವೇ ಅವಳ ಮೇಲ್ ಅಡ್ರೆಸ್ಗೆ ಆ ಕೋರ್ಸ್ ಮಾಹಿತಿಯಿರುವ ಮೇಲ್ ಬಂತು.

ಒಂದೆರಡು ದಿನಗಳಲ್ಲಿ ಅಕೌಂಟಿನಿಂದ ಹಣ ಪಾವತಿಯಾದಂತೆ ಮೆಸೇಜ್ ಬಂದಾಗ ತನ್ನ ಪಾಸ್ ಪುಸ್ತಕವನ್ನು ಪರಿಶೀಲಿಸಿ ದೃಢ ಪಡಿಸಿಕೊಂಡಳು. ಒಂದು ವಾರ ಕಳೆಯುತ್ತಿದ್ದಂತೆ ಹ್ಯಾಕಿಂಗ್ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡವಳು 'ಅರವಿಂದ್'ನ ಮೇಲ್ ಬಗ್ಗೆ ಸ್ಟಡಿ ಮಾಡುವುದಕ್ಕೆ ಆರಂಭಿಸಿದಳು.

ಮೊದಲನೆಯದಾಗಿ ಆತ ಕಳುಹಿಸಿದ ಮೇಲ್ಗಳ ಬಗ್ಗೆ ಅಧ್ಯಯನ ನಡೆಸಿದವಳಿಗೆ ಒಂದು ಮಾಹಿತಿ ಸ್ಪಷ್ಟವಾಯಿತು. ಮೇಲ್ ಕಳುಹಿಸಿರುವ ವ್ಯಕ್ತಿ ಒಬ್ಬಂಟಿ. ಸಮಯ ಕಳೆಯುವುದಕ್ಕಾಗಿಯೇ ಈ ರೀತಿ ಮೇಲ್ ಕಳುಹಿಸುತ್ತಿದ್ದಾನೆ. ಇದು ಆತ ಬರೆಯುವ ಮೇಲ್ಗಳಿಂದ ಸ್ಪಷ್ಟವಾಗಿತ್ತು. ಅಮೆರಿಕದ ಸಂಸ್ಥೆಯೊಂದು ನಿರಂತರವಾಗಿ ಮೇಲ್ ಕಳುಹಿಸುವ ಮತ್ತು ಚಾಟಿಂಗ್ನಲ್ಲಿ ತೊಡಗಿರುವವರ ಬಗ್ಗೆ ಅಧ್ಯಯನ ನಡೆಸಿದನ್ನು ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿತ್ತು. ಅದು ಮನಸ್ವಿತಾಳ ಶೋಧನೆಗೆ ಪೂರಕವಾಗಿತ್ತು. ಅದರ ಆಧಾರದ ಮೇಲೆ ಅರವಿಂದ್ ಕೂಡ ಅದೇ ವರ್ಗಕ್ಕೆ ಸೇರಿದವನೆಂದು ತಿಳಿಯಿತು.

ಆತ ಮೊದಲಬಾರಿಗೆ ಕಳುಹಿಸಿದ ಮೇಲ್ ಡಿಲಿಟ್ ಮಾಡಿದ್ದರೂ ತ್ರಾಷ್ ಬಾಕ್ಸ್ನಿಂದ ಹುಡುಕಿ ತೆರೆದು, ಆ ಮೇಲ್ ಯಾವ ಸೈಬರ್ನಿಂದ ಬಂದಿದೆಯೆನ್ನುವುದನ್ನು ಹುಡುಕಿದವಳಿಗೆ ಒಂದು ಎಳೆ ಕಂಡಿತು. ಅದರಲ್ಲಿನ ಕೋಡ್ಗಳನ್ನು, ಐಪಿ ಅಡ್ರೆಸ್ಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟು ಆತನಿಗೊಂದು ಸರ್ಪ್ರೈಸ್ ಮೇಲ್ ಕಳುಹಿಸಬೇಕೆಂದುಕೊಂಡಳು.

ಆತ ಕಳುಹಿಸಿದ ಸೈಬರ್ ಇರುವ ಪ್ರದೇಶ ತಿಳಿದ ನಂತರ ಅದು ಪರಿಚಿತ ವ್ಯಕ್ತಿಯೇ ಅರವಿಂದನೆನ್ನುವ ಹೆಸರಿನಿಂದ ಮೇಲ್ ಕಳುಹಿಸುತ್ತಿದ್ದಾನೆನ್ನುವುದನ್ನು ಊಹಿಸಿಕೊಂಡು, ಆ ಪ್ರದೇಶದ ವಿಶೇಷತೆ, ವಾತಾವರಣದ ಬಗ್ಗೆ ಒಂದು ಮೇಲ್ ಬರೆದು ಕಳುಹಿಸಿದಳು.
ಅವಳು ಕಳುಹಿಸಿದ ಮೇಲ್ಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವಳು ಊಹಿಸಿದಂತೆ ಆ ವ್ಯಕ್ತಿ ಆಶುತೋಶ್ ಅನ್ನುವುದು ತಿಳಿಯಿತು. ಇಲ್ಲದಿದ್ದರೆ ಇಷ್ಟರೊಳಗೆ ಆತ ತಾನು ಕಳುಹಿಸಿದ ಮೇಲ್ಗೆ ಉತ್ತರಿಸುತ್ತಿದ್ದ. ಇನ್ನು ಮುಂದೆ ಆತ ಕಮ್ಯುನಿಕೇಷನ್ ನಿಲ್ಲಿಸಿದರೂ ಹೆಚ್ಚಲ್ಲ ಅಂದುಕೊಂಡಳು.

ಆದರೆ ಅವಳ ಊಹೆ ತಲೆಕೆಳಗಾಗುವಂತೆ ಅರವಿಂದ್ ಉದ್ದನೆಯ ಮೇಲ್ ಕಳುಹಿಸಿದ್ದ. ಅದರಲ್ಲಿ ಸಂದರ್ಭ ಬಂದಾಗ ತಾನಾಗಿಯೇ ತನ್ನ ಊರು, ವೃತ್ತಿಗಳ ಬಗ್ಗೆ ಕೂಲಂಕಷವಾಗಿ ತಿಳಿಸುವುದಾಗಿ ಬರೆದಿದ್ದ. ಮನಸ್ವಿತಾಳಿಗೆ ಅದನ್ನು ಅರಗಿಸಿಕೊಳ್ಳಲಾಗಲಿಲ್ಲ. ತಾನು ಹ್ಯಾಕಿಂಗ್ ಮಾಡಿರುವುದು ಸರಿಯಾಗಲಿಲ್ಲವೆ? ಎಂದು ಪರಿಶೀಲಿಸಿದವಳು ಇನ್ನೆರಡು ದಿನಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಪಡೆದುಕೊಂಡಳು. ಬಂದಿರುವ ಮೇಲ್ಗಳು ಎರಡು ಬೇರೆ ಬೇರೆ ಸೈಬರ್ ಸೆಂಟರ್ನಿಂದ ಬಂದಿರುವುದು ತಿಳಿಯಿತು. ಆದರೆ ಅವುಗಳೆರಡನ್ನು ಅಕ್ಕ ಪಕ್ಕದ ನಂಬರುಗಳಿರುವುದು ಖಾತ್ರಿಯಾಯಿತು. ಮುಂದೆ ಆ ಐಡಿಗಳನ್ನೇ ಉಪಯೋಗಿಸಿಕೊಂಡು ಪತ್ತೆ ಕಾರ್ಯ ನಡೆಸಬೇಕೆಂದುಕೊಂಡಳು.

ಆ ಐಡಿ ನಂಬರುಗಳನ್ನು ಗೂಗಲ್ ಸರ್ಚ್ ಗೆ ಫೀಡ್ ಮಾಡಿ ಹುಡುಕಾಡಿದಳು. ಯಾವುದೋ ಕೆಲವು ಸೈಟ್ಗಳ ಹೆಸರು ಮೂಡಿತು. ಅದರಲ್ಲಿ ಒಂದು ಆಸ್ಪತ್ರೆಯ ಹೆಸರು ಇತ್ತು. ಕುತೂಹಲದಿಂದ ಅದನ್ನು ಒತ್ತಿದಾಗ ಅದೊಂದು ಆಧುನಿಕ ಸೌಕರ್ಯಗಳಿರುವ ಆಸ್ಪತ್ರೆಯೆಂದು ತಿಳಿಯಿತು. ಆದರೆ ಆಸ್ಪತ್ರೆಯಿಂದ ಇ-ಮೇಲ್ ಕಳುಹಿಸುವುದು ಅಸಾಧ್ಯವೆಂದು ತಿಳಿಯಿತು. ಮತ್ತೊಂದು ಐಡಿಯನ್ನು ಪ್ರಯತ್ನಿಸಿದರೂ ಅದು ತೆರೆಯಲಿಲ್ಲ.
ಅಶುತೋಶ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆನ್ನುವ ಹಂಬಲ ಮೂಡಿತು.

ನಿಖಿಲ್ನನ್ನು ತಾನು ನೇರವಾಗಿ ಕೇಳಿದರೆ ಅವನಿಂದ ಸಮರ್ಪಕ ಉತ್ತರ ಬರಲಾರದು. ಅದರ ಬದಲಾಗಿ ಅಶುತೋಶ್ನ ಬಗ್ಗೆ ಹೆಚ್ಚು ತಿಳಿದಿರುವುವರೆಂದರೆ ನಿಖಿಲ್ನ ತಂದೆ ಇಂದ್ರಸೇನ್ರು. ಆ ದಿನ ಬೆಂಗಳೂರಿಗೆ ಹೋದಾಗ ಸ್ವತಃ ನಿಖಿಲ್ನೇ ಅಶುತೋಶ್ನ ತಂದೆ; ಕುಟುಂಬ ಸ್ನೇಹಿತರೆನ್ನುವುದನ್ನು ತಿಳಿಸಿದ್ದ. ಹಾಗಾಗಿ ಅವನ ತಂದೆ ಅಥವಾ ತಾಯಿಯಿಂದಲೇ ಸರಿಯಾದ ಮಾಹಿತಿ ದೊರಕಬಹುದೆನ್ನುವುದು ತಿಳಿಯಿತು. ಆದರೆ ನಿಖಿಲ್ ತಾನಾಗಿಯೇ ಮನೆಗೆ ಕರೆಯದೆ ತಾನು ಅವರನ್ನು ಭೇಟಿ ಮಾಡುವುದು ಸರಿಯಲ್ಲವೆಂದುಕೊಂಡಳು.
ಹೇಗೂ ತನಗಾಗಿ ಒಂದು ಮನೆಯನ್ನು ಗೊತ್ತು ಪಡಿಸಿದ್ದಾನೆ ನಿಖಿಲ್. ಆ ಮನೆಗೆ ಹೋದ ಬಳಿಕ ಇಂದ್ರಸೇನ್ ದಂಪತಿಗಳನ್ನು ವಿಚಾರಿಸಬೇಕು. ಆಗ ಅವರಿಂದ ಅಶುತೋಶ್ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳಬಹುದೆಂದುಕೊಂಡಳು.
... ಮುಂದಿನ ಸಂಚಿಕೆಗೆ...


0 comments:

Post a Comment