ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

- ಡಾ.ಮೋಹನ ಕುಂಟಾರ್
ಕಳೆದ ಸಂಚಿಕೆಯಿಂದ...
ಕನ್ನಡದಿಂದ ಮಲಯಾಳಂಗೆ ಅನುವಾದಗೊಂಡ ಅನೇಕ ಕೃತಿಗಳಿವೆ. ನಿಸರ್ಗ, ಗ್ರಾಮಾಯಣ, ಚಿರಸ್ಮರಣೆ, ಮೃತ್ಯುಂಜಯ, ಸ್ವಾಮಿ ಅಪರಂಪಾರ, ರಂಗಮ್ಮನ ವಠಾರ, ಮರಳಿ ಮಣ್ಣಿಗೆ, ಕುಡಿಯರ ಕೂಸು, ಮೂಕಜ್ಜಿಯ ಕನಸುಗಳು, ಚೋಮನದುಡಿ, ಗೃಹಭಂಗ, ಭಾರತೀಪುರ, ಸಂಸ್ಕಾರ, ಅವಸ್ಥೆ, ಕರ್ವಾಲೋ, ಕಾಡು, ಭುಜಂಗಯ್ಯನ ದಶಾವತಾರಗಳು, ಪರಸಂಗದ ಗೆಂಡೆತಿಮ್ಮ, ಫಣಿಯಮ್ಮ, ಚಂದ್ರಗಿರಿಯ ತೀರದಲ್ಲಿ, ಸಿಂಗಾರೆವ್ವ ಮತ್ತು ಅರಮನೆ ಮೊದಲಾದ ಕಾದಂಬರಿಗಳು ಮಲಯಾಳಂನಲ್ಲಿ ಪ್ರಕಟವಾಗಿವೆ.

ಅನಂತಮೂರ್ತಿ, ಆಲನಹಳ್ಳಿ, ಚಂದ್ರಶೇಖರ ಕಂಬಾರ, ಶಿವರಾಮ ಕಾರಂತ ಮೊದಲಾದವರ ಕೃತಿಗಳೂ ಮಲಯಾಳಂನಲ್ಲಿ ಬೆಳಕು ಕಂಡಿವೆ. ಗೋವಿಂದ ಪೈಯವರ ಎಲ್ಲಾ ಕೃತಿಗಳನ್ನು ಮಲಯಾಳಂನಲ್ಲಿ ಪ್ರಕಟಿಸುವಲ್ಲಿ ಕೇರಳ ಸರಕಾರವೇ ಯೋಜನೆ ರೂಪಿಸಿ ಕಾರ್ಯ ರೂಪಕ್ಕಿಳಿಸಿದೆ. ಬೇಂದ್ರೆ, ಅಡಿಗ ಮೊದಲಾದವರ ಕೆಲವು ಕವಿತೆಗಳು, ಪುರಂದರದಾಸರ ಕೀರ್ತನೆಗಳು, ಕೆಲವು ವಚನಗಳು ಮಲಯಾಳಂಗೆ ಅನುವಾದಗೊಂಡಿವೆ.

ಕೆಲವು ವರ್ಷಗಳ ಹಿಂದೆ 'ಪುಸ್ತಕ ಪ್ರಪಂಚ' ಮಾಸಪತ್ರಿಕೆಯು ಬಷೀರರ ಬಗೆಗೆ ವಿಶೇಷ ಸಂಚಿಕೆಯೊಂದನ್ನು ಹೊರತಂದಿತ್ತು. ಮಲಯಾಳಂ ಸಣ್ಣ ಕತೆಗಳಿಗೆ ನೂರು ವರ್ಷ ತುಂಬಿದ ಸವಿನೆನಪಿಗಾಗಿ 'ಲೆಟೆಸ್ಟ್' ವಾರ ಪತ್ರಿಕೆಯ ಕಾಸರಗೋಡಿನಲ್ಲಿ ಅನುವಾದ ಕಾರ್ಯಾಗಾರವೊಂದನ್ನು 1988ರಲ್ಲಿ ಏರ್ಪಡಿಸಿತ್ತು. ಈ ಕಾರ್ಯಗಾರದಲ್ಲಿ ಅನೇಕ ಮಲಯಾಳಂ ಕತೆಗಳನ್ನು ಕನ್ನಡಕ್ಕೆ ಅನುವಾದಿಸಲಾಯಿತು. ಅವುಗಳನ್ನು ಕತೆಗಾರರ ಸಂಕ್ಷಿಪ್ತ ಪರಿಚಯದೊಂದಿಗೆ 'ತರಂಗ' ವಾರಪತ್ರಿಕೆಯು(18.08.1988) ಮಲಯಾಳಂ ಕಥಾಸಂಚಯ ಎಂಬ ಹೆಸರಿನಲ್ಲಿ ವಿಶೇಷ ಸಂಚಿಕೆಯಾಗಿ ಪ್ರಕಟಿಸಿತ್ತು.

ಅಲ್ಲದೆ ಅದೇ ಪತ್ರಿಕೆ ಮತ್ತೊಮ್ಮೆ(08.02.1998) ಮಲಯಾಳಂ ಕಥಾಸಂಚಯವನ್ನು ಪ್ರಕಟಿಸಿ ಅನೇಕ ಮಲಯಾಳಂ ಕತೆಗಳನ್ನು ಕನ್ನಡ ಓದುಗರಿಗೆ ಕೊಟ್ಟಿದೆ. 'ಮಂಗಳ' ವಾರಪತ್ರಿಕೆಯು ಮಲಯಾಳಂನ ಜನಪ್ರಿಯ ಬರಹಗಾರರ ಕಾದಂಬರಿಗಳನ್ನು ಧಾರವಾಹಿಯಾಗಿಯೂ ನಿರಂತರ ಪ್ರಕಟಿಸಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕನ್ನಡ ದೈನಿಕಗಳು ಭಾನುವಾರದ ವಿಶೇಷ ಪುರವಣಿಗೆಗಳಲ್ಲಿ ಮಲಯಾಳಂ ಕತೆಗಳನ್ನು ಪ್ರಕಟಿಸುತ್ತಿವೆ. ಮಲಯಾಳಂನಿಂದ ಕನ್ನಡಕ್ಕೆ ಅನುವಾದ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೆ ಕನ್ನಡದಲ್ಲಿ ಮಲಯಾಳಂಗೆ ಅನುವಾದಿಸುವ ಕೆಲಸದಲ್ಲಿ ನಿರತರಾದವರ ಸಂಖ್ಯೆ ವಿರಳ.

1998ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ನೆರವಿನೊಂದಿಗೆ ಆಧುನಿಕ ಕವಿತೆ ಹಾಗೂ ಕತೆಗಳ ಪರಸ್ಪರ ಅನುವಾದ ಕಾರ್ಯಾಗಾರವನ್ನು ನಡೆಸಲಾಗಿತ್ತು. ಆಧುನಿಕ ಕವಿತೆಗಳನ್ನು ಪರಸ್ಪರ ಅನುವಾದಿಸುವಲ್ಲಿ ಸಾಹಿತ್ಯ ಸಂಬಂಧಗಳನ್ನು ಹೆಚ್ಚಿಸಲು ಉಪಯುಕ್ತವಾಗುವಂತೆ ಹಮ್ಮಿಕೊಳ್ಳಲಾಗಿತ್ತು. ಎರಡೂ ಭಾಷೆಗಳ ಕವಿಗಳನ್ನು ಒಂದೆಡೆ ಸೇರಿಸಿ ಸ್ವತಃ ಕವಿಯೇ ತನ್ನ ಕವಿತೆಗಳನ್ನು ವಾಚಿಸಿ ಅನುವಾದಿಸುವ ಕವಿಗೆ ತಿಳಿಯ ಹೇಳಬೇಕಾಗಿತ್ತು. ಹೀಗೆ ಕವಿಯ ಜೊತೆಗಿನ ಸಂವಾದ, ವ್ಯಕ್ತಿತ್ವ ಇತ್ಯಾದಿಗಳ ಹಿನ್ನೆಲೆಯಲ್ಲಿ ಕವಿತೆಯ ಅನುವಾದ ಸಾಧ್ಯವಾಗಿದೆ.

ಇಂಗ್ಲಿಷಿನ ಗೈರುಹಾಜರಿಯಲ್ಲಿಯೂ ಎರಡು ಭಾರತೀಯ ಭಾಷಿಕರ ನಡುವೆ ಅರ್ಥಪೂರ್ಣ ಸಂವಹನ ಸಾಧ್ಯವಾಗಿದೆ. ಮಲಯಾಳಂ ಕನ್ನಡ ಲಿಪಿಗಳ ನಡುವೆ ಸಂವಹನ ಶೂನ್ಯ. ಆದರೆ ಎರಡೂ ಭಾಷೆಗಳ ವ್ಯಕ್ತಿಗಳ ನಡುವೆ ಮಾತುಗಳು ಸಂವಹನ ಸಾಧಿಸುತ್ತವೆ ಎಂಬುದನ್ನು ಕಮ್ಮಟ ಸಿದ್ಧಪಡಿಸಿದೆ. ಈ ಕಾರ್ಯಗಾರದಲ್ಲಿ ರೂಪುಗೊಂಡ ಕನ್ನಡ ಕವಿತೆಗಳನ್ನು ಕನ್ನಡ ವಿಶ್ವವಿದ್ಯಾಲಯವೂ ಮಲಯಾಳಂ ಕವಿತೆಗಳನ್ನು ಕೇರಳ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ಹಂಪಿಯ ಅನುಭವಗಳ ನೆಲೆಯಿಂದ ಅನೇಕ ಮಲಯಾಳಂ ಕವಿಗಳೂ ಬಳಿಕ ಕವಿತೆಗಳನ್ನು ಬರೆದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ 80 ವರ್ಷ ತುಂಬಿದ ಸಂದರ್ಭದಲ್ಲಿ ಕೇರಳದ ಕೋಟ್ಟಯಂನಲ್ಲಿ ಕನ್ನಡ ಮಲಯಾಳಂ ಕಾವ್ಯಾನುವಾದ ಕಮ್ಮಟ್ಟವನ್ನು ಏರ್ಪಡಿಸಲಾಗಿತ್ತು. ಸುಮಾರು 15 ಮಂದಿ ಮಲಯಾಳಂ ಕವಿಗಳ 27 ಕವಿತೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು 'ಮಾನಸಾಂತರ ಪುಸ್ತಕದಲ್ಲಿ ಪ್ರಕಟಿಸಿದೆ. ಅಷ್ಟೇ ಅಲ್ಲದೆ ಮಲಯಾಳಂ ಪ್ರದೇಶದಲ್ಲಿ ನೆಲೆಸಿದ್ದ ಅವಧಿಯಲ್ಲಿ ಯು.ಆರ್. ಅನಂತಮೂರ್ತಿಯವರು ಬರೆದ ಕವಿತೆಗಳಲ್ಲಿ ಆ ನೆಲದ ಸಾಂಸ್ಕೃತಿಕ ಆವರಣವನ್ನು ಗುರುತಿಸಬಹುದು.

ಅನುವಾದಗಳು ನಡೆದಿದ್ದರೂ ಕನ್ನಡದಿಂದ ಮಲಯಾಳಂ ಭಾಷೆಗೆ ಹೋದುದಕ್ಕಿಂತ ಮಲಯಾಳಂನಿಂದ ಕನ್ನಡಕ್ಕೆ ಬಂದುದೇ ಹೆಚ್ಚು. ಕನ್ನಡ ಸಂಬಂಧದಲ್ಲಿ ಮಲಯಾಳಂ ಅನುವಾದ ಕೃತಿಗಳೂ ಗಮನಾರ್ಹವಾಗಿದ್ದು ತಗÙಳ, ವಾಸುದೇವನ್ ನಾಯರ್, ಬಷೀರ್ ಮೊದಲಾದವರು ಅನೇಕ ಕನ್ನಡ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಬಷೀರರ ಕೃತಿಗಳೂ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾದ ತರುವಾಯದಲ್ಲಿಯೇ, ಕನ್ನಡದಲ್ಲೂ ಮುಸ್ಲಿಂ ಲೇಖಕರು ತಮ್ಮ ಸಾಂಸ್ಕೃತಿಕಲೋಕವನ್ನು ಕನ್ನಡ ಸಾಹಿತ್ಯಲೋಕದಲ್ಲಿ ಅನಾವರಣಗೊಳಿಸಿದರು. ಬಷೀರರ ವೈನೋದಿಕ ಶೈಲಿ, ಮುಸಲ್ಮಾನರ ಅಂಧ ಆಚಾರಗಳ ವಿಡಂಬನೆ ಅನೇಕ ಕನ್ನಡ ಓದುಗರ ಆಸಕ್ತಿಯನ್ನು ಕೆರಳಿಸಿತ್ತು. ಅಲ್ಲದೆ ಫಕೀರ್ ಮಹಮ್ಮದ್ ಕಟ್ಪಾಡಿ, ಬೋಳುವಾರ್, ಮಹಮ್ಮದ್ ಕುಂಞ, ಸಾರಾ ಅಬೂಬಕ್ಕರ್ ಮೊದಲಾದ ಬರಹಗಾರರು ಕನ್ನಡದಲ್ಲಿ ಬರೆಯಲು ಬಷೀರರ ಸಾಹಿತ್ಯ ಪ್ರೇರಣೆ ನೀಡಿದೆ ಎಂಬುದನ್ನು ಗಮನಿಸಬೇಕು.

ಆದರೆ ಮಲಯಾಳಂ ಸಾಹಿತ್ಯ ಸಂದರ್ಭದಲ್ಲಿ ಕನ್ನಡದ ಲೇಖಕರು ಇಂತಹ ಪ್ರೇರಣೆಯನ್ನು ಪ್ರಭಾವವನ್ನು ಮೂಡಿಸಿದಂತಿಲ್ಲ. ನಿರಂಜನ, ಶಿವರಾಮ ಕಾರಂತ, ಆಲನಹಳ್ಳಿ, ಆನಂತಮೂರ್ತಿ ಮಲಯಾಳಂ ಓದುಗರ ಪ್ರೀತಿಯ ಬರಹಗಾರರು. ಕಮ್ಯೂನಿಸಂನ ಆಕರ್ಷಣೆಯಿಂದ ನಿರಂಜನರು ಮೊದಲು ಜನಪ್ರಿಯರಾದರು. 'ಚಿರಸ್ಮರಣೆ' ಕೇರಳದ ಹಿನ್ನೆಲೆಯುಳ್ಳ ಕೃತಿ. ಕೃಷ್ಣ ಆಲನಹಳ್ಳಿಯವರ ಕೃತಿಗಳೂ ಮಲಯಾಳಂ ವಾರಪತ್ರಿಕೆಗಳಲ್ಲಿ ಅನುವಾದಗೊಂಡು ಪ್ರಕಟವಾಗಿದ್ದುವು. ಆ ಕಾರಣಕ್ಕಾಗಿ ಆಲನಹಳ್ಳಿ ಮಲಯಾಳಿ ಓದುಗರ ಮನೆಮಾತಾದರು.

ತಮ್ಮ ಸಂಸ್ಕೃತಿಗಿಂತ ಭಿನ್ನವಾದ ಹೊಸ ಸಂಸ್ಕೃತಿಯೊಂದರ ಸಾಹಿತ್ಯವನ್ನು ಮಲಯಾಳಂ ಓದುಗರು ಪ್ರೀತಿಯಿಂದಲೇ ಸ್ವಾಗತಿಸುತ್ತಾರೆ. ಏಕೆಂದರೆ ಕೇರಳದ ಸಂಸ್ಕೃತಿಗಿಂತ ಭಿನ್ನವಾದ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿ ಅನನ್ಯವಾದುದು. ಹಾಗಾಗಿ ಹೊಸ ಸಂಸ್ಕೃತಿಯ ಬಗೆಗಿನ ಆಕರ್ಷಣೆ ಸಹಜವಾಗಿರುತ್ತದೆ. ಕೇರಳದಲ್ಲಿ ಸಾಕ್ಷರತೆಯ ಪ್ರಮಾಣ ಅಧಿಕವಾಗಿರುವುದರಿಂದ ಅಕ್ಷರ ಮಾಧ್ಯಮ ಅತ್ಯಂತ ಪ್ರಭಾವಶಾಲಿಯಾಗಿದೆ. ಅಕ್ಷರಗಳ ಮೂಲಕ ಪ್ರವೇಶ ಪಡೆದ ಯಾವುದೇ ಸಂಸ್ಕೃತಿಗೆ ಕೇರಳದಲ್ಲಿ ಶೀಘ್ರ ಪ್ರಚಾರ, ಜನಪ್ರಿಯತೆ ಲಭಿಸುತ್ತದೆ.

ಒಂದು ಅನುವಾದ ಕೃತಿ ಇನ್ನೊಂದು ಭಾಷೆಯ ಕೃತಿಗೆ ನೇರವಾದ ಪ್ರಭಾವ ಪ್ರೇರಣೆಗಳನ್ನು ನೀಡದೇ ಇರಬಹುದು. ಆದರೆ ಅವು ಇಡೀ ಸಾಹಿತ್ಯ ಸಂದರ್ಭದಲ್ಲಿ ಬರಹಗಾರನ ಸೂಕ್ಷ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿರುತ್ತದೆ. ಅವು ಅಭಿವ್ಯಕ್ತಿಗಳಲ್ಲಿ ಗೋಚರಕ್ಕೆ ನಿಲುಕದಿರಬಹುದು.
ಕನ್ನಡ ಮತ್ತು ಮಲಯಾಳಂ ಸಾಹಿತ್ಯ ಸಂಬಂಧ, ಬೇಕಾದ ಮಟ್ಟದಲ್ಲಿ ಆಗಲಿಲ್ಲ. ಗಿರೀಶ್ ಕಾರ್ನಾಡರ ನಾಟಕಗಳು ಇತ್ತಿಚಿನ ವರ್ಷಗಳಲ್ಲಿ ಅನುವಾದವಾಗಿರವುದನ್ನು ಬಿಟ್ಟರೆ, ಅದಕ್ಕೂ ಮೊದಲು ಒಂದೇ ಒಂದು ಕನ್ನಡ ನಾಟಕ ಮಲಯಾಳಂನಲ್ಲಿ ಪ್ರಕಟವಾಗಿರಲಿಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ 1997ರಲ್ಲಿ ನಡೆದ ಅನುವಾದ ಕಾರ್ಯಗಾರದಲ್ಲಿ ಮೂರು ನಾಟಕಗಳು ಮಲಯಾಳಂಗೆ ಅನುವಾದಗೊಂಡಿದೆ.

ಅವುಗಳನ್ನು ಮಲಯಾಳಂ ನಾಟಕಗಳು ಶೀರ್ಷಿಕೆಯಲ್ಲಿ ವಿಶ್ವವಿದ್ಯಾಲಯ ಪ್ರಕಟಿಸಿದೆ. ಆದರೆ ಕನ್ನಡದಿಂದ ಮಲಯಾಳಂಗೆ ಅನುವಾದ ಮಾಡಿದ ನಾಟಕಗಳು ಇನ್ನೂ ಪ್ರಕಟವಾಗಿಲ್ಲ. ಕನ್ನಡಕ್ಕೆ ವಿಶಿಷ್ಟವಾದ ವಚನ ಸಾಹಿತ್ಯ, ಅಭಿಜಾತ ಕಾವ್ಯ ಕೃತಿಗಳು, ಆಧುನಿಕ ಕವಿತೆಗಳು ವಿಮರ್ಶೆ ಮೊದಲಾದ ಪ್ರಕಾರಗಳ ಕೃತಿಗಳು ಮಲಯಾಳಂಗೆ ಹೋಗಲೇಬೇಕಾಗಿದೆ. ಆಗ ಮಾತ್ರ ಮಲಯಾಳಂ ಸಾಹಿತ್ಯ ಕ್ಷೇತ್ರಕ್ಕೆ ಕನ್ನಡದ ಕಂಪು ಕಸುವು ದೊರೆತಂತಾಗಬಹುದು. ಪಂಪನ ವಿಕ್ರಮಾರ್ಜುನ ವಿಜಯವನ್ನು ಕುರಿತು ಮಲಯಾಳಂನಲ್ಲಿ ಲೇಖನಗಳು ಪ್ರಕಟವಾಗಿವೆ. ವಿಕ್ರಮಾರ್ಜುನ ವಿಜಯದ ಎರಡು ಆಶ್ವಾಸಗಳು ಮಲಯಾಳಂಗೆ ಅನುವಾದವಾಗಿವೆ. ಮಲಯಾಳಂಗೆ ವಿಶಿಷ್ಟವಾದ ತುಳ್ಳಲ್ ಸಾಹಿತ್ಯ, ಪಾಟ್ಟು ಸಾಹಿತ್ಯ, ವೈವಿಧ್ಯಮಯವಾದ ಸಣ್ಣ ಕಥಾಲೋಕ ಕನ್ನಡಕ್ಕೆ ಬರುವ ಅಗತ್ಯವಿದೆ. ಹಾಗಾದಾಗ ಮಾತ್ರ ಎರಡೂ ಸಾಹಿತ್ಯ ಕ್ಷೇತ್ರಗಳೊಳಗಿನ ಸಂಬಂಧ ಆಯಾ ಭಾಷೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷತೆ ಸಾಧಿಸುವುದು ಸಾಧ್ಯ ಎಂದೆನಿಸುತ್ತದೆ.
(ಈ ಲೇಖನ ಮಾಲೆ ಇಲ್ಲಿಗೆ ಮುಗಿಯಿತು...ನಾಳೆಯಿಂದ ಮತ್ತೊಂದು ಭಾಷಾಂತರದ ಕುರಿತಾದ ಲೇಖನ ಇದೇ ಲೇಖಕರಿಂದ...)

0 comments:

Post a Comment