ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಓದುಗ...ಸಂಪಾದಕ...
ಇಂಥವರೂ ಇದ್ದಾರೆ...ಮನೆಗೆ ಬೆಂಕಿ ಬಿದ್ದಾಗ ಅದರಲ್ಲೇ ಬೀಡಿ ಸುಡುವಂತಹವರು...ರಾಜಕೀಯಕ್ಕೆ ಸೇರಿದ ಮೇಲೆ ವ್ಯಕ್ತಿ ಅದೆಷ್ಟು ಬದಲಾಗಿ ಬಿಡ್ತಾನೆ ಅಲ್ವಾ.? ಮೊನ್ನೆ ಜೆ.ಡಿ.ಎಸ್. ಪಕ್ಷದ ಪ್ರಮುಖರೆನಿಸಿದವರೊಬ್ಬರು ಫೋನಾಯಿಸಿದರು. ನಮ್ಮ ಸಮಾಜದ ಮುಖಂಡನೋರ್ವ ನಿಧನರಾಗಿದ್ದಾರೆ. ಅವರ ನಿಧನ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕಿತ್ತು ಎಂದರು . ಅವರ ಫೋಟೋ ಹಾಗೂ ಮಾಹಿತಿ ನೀಡುವುದಾಗಿ ವಿನಂತಿಸಿದರು.

ಅವರ ಕರೆಯನ್ನು ಗೌರವಿಸಿ ಸ್ಥಳಕ್ಕೆ ಹೋದಾಗ ಅವರ ಮಾತಿನ ಶೈಲಿ ಬೇರೆಯೇ... ಇವರು ನಮ್ಮ ಸಮಾಜದ ಪ್ರಮುಖರು , ನಿಮ್ಮ ಪತ್ರಿಕೆಯ ಮುಖಪುಟದಲ್ಲಿಯೇ ಇವರ ನಿಧನದ ಸುದ್ದಿ ಬರಬೇಕು. ಒಳಪುಟದಲ್ಲಿ ಪ್ರಕಟಿಸಿದರೇ ಜೋಕೆ ಎಂಬಂತಹ ಉದ್ದಟತನದ ಮಾತುಗಳನ್ನಾಡಿದರು. ಅದಷ್ಟೇ ಅಲ್ಲ, ಇವರ ನಿಧನದ ಸಂತಾಪಕ್ಕೆ ನಮ್ಮ ಪಕ್ಷದ ನಾಯಕರ ಹೆಸರಿನ ಜೊತೆ ಇನ್ನು ನಾಲ್ವರ ಹೆಸರನ್ನು ಹೇಳಿ ಇವರ ಹೆಸರನ್ನು ಪ್ರಕಟಿಸಬೇಕು ಎಂದು ದುಂಬಾಲು ಬಿದ್ದರು. ಅಸಲಿಗೆ ಆತ ಹೆಸರು ಹೇಳಿದ ರಾಜಕೀಯ ನಾಯಕರಿಗೆ ಮೃತ ವ್ಯಕ್ತಿಯ ನಿಧನ ವಾರ್ತೆಯೇ ತಿಳಿದಿರಲಿಲ್ಲ..!

ಮೃತ ವ್ಯಕ್ತಿಯ ಆಪ್ತರೂ ಅವರಾಗಿರಲಿಲ್ಲ. ಅಂಥವರ ಸಂತಾಪವನ್ನು ಪ್ರಕಟಿಸಲು ಸಾದ್ಯವಿಲ್ಲ ಎಂದಾಗ ಸಂಪಾದಕರಿಗೆ ಫೋನಾಯಿಸಿ ಪತ್ರಿಕಾ ಪ್ರತಿನಿಧಿ ವಿರುದ್ದ ದೂರು ನೀಡಿದ್ದರು. ನಿಧನ ವಾರ್ತೆ ಪಕ್ಷದ ಮುಖಂಡರಿಗೆ ತಿಳಿಯುವ ಮುನ್ನವೇ ಅವರ ಹೆಸರಿನೊಂದಿಗೆ ತಮ್ಮ ಹೆಸರನ್ನು ಸೇರಿಸಿ ಸಂತಾಪ ಸೂಚಿಸಿ ಸಾವಿನ ಮನೆಯಲ್ಲಿಯೂ ರಾಜಕಾರಣಕ್ಕೆ ಮುಂದಾಗಿದ್ದರು. ಕಳೆದ ಕೆಲ ದಿನಗಳಿಂದ ಇದೇ ವ್ಯಕ್ತಿ "ಮುಖಪುಟ" ಅಂಕಣದಲ್ಲಿ ತಮ್ಮ ಫೋಟೋ ಪ್ರಕಟಿಸುವಂತೆ ಪೀಡಿಸುತ್ತಲಿರುವದು ಉಲ್ಲೆಖನೀಯ. ಯೋಗ್ಯತೆಯಿದ್ದರೇ ಖಂಡಿತ ಇವರನ್ನು "ಮುಖಪುಟ" ಅಂಕಣದಲ್ಲಿ ಗುರುತಿಸಬಹುದಿತ್ತು ಬಿಡಿ.

ಈ ಹಿಂದೆ ಕಾಂಗ್ರೇಸ್ ಧುರೀಣರೋರ್ವರಿಂದ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಲಿಖಿತ ಹೇಳಿಕೆ ಬಂದಿತ್ತು. ಅದನ್ನು ನಾವು ಪತ್ರಿಕಾ ಕಾರ್ಯಾಲಯಕ್ಕೆ ರವಾನಿಸಿ ಇನ್ನೇನು ಹೇಳಿಕೆ ಮುದ್ರಣವಾಗಬೇಕು ಎನ್ನುವಷ್ಟರಲ್ಲಿ ಆ ನಾಯಕರ ಆಪ್ತ ಸಹಾಯಕ ಫೋನಾಯಿಸಿದ. "ಅವರಿನ್ನು ಸತ್ತಿಲ್ವಂತೆ, ಇನ್ನು ಒಂದೆರಡು ದಿನ ಬಿಟ್ಟು ಸಾಯಬಹುದು. ನಂತರವೇ ಆ ಸಂತಾಪ ವರದಿ ಪ್ರಕಟಿಸಿ" ಎಂದು ನಗೆಯಾಡಿದ.! ಇವಿಷ್ಟೆ ಅಲ್ಲ ಠಾಕ್ರೆ ನಿಧನವಾಗುವ ಮುನ್ನವೇ ಅವರ ಆತ್ಮಕ್ಕೆ ಶಾಂತಿ ಕೋರಿ ಟ್ವಿಟ್ಟರ್ ನಲ್ಲಿ ಕೆಲ ಮುಖಂಡರು ಟ್ವಿಟ್ ಮಾಡಿದ್ದರು..! ಸಾವಿನ ಮನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳುವ ಬದಲು ಪತ್ರಿಕೆಯಲ್ಲಿ ಸಾಂತ್ವನ ಕೋರಿ ಬಿಟ್ಟಿ ಪ್ರಚಾರ ಪಡೆಯುವ ಜನರ ಬಗ್ಗೆ ಎಚ್ಚರಿಕೆ ನೀಡಲು, ಸೂತಕದ ಮನೆಯಲ್ಲಿಯೂ ಬಿಡದೇ ರಾಜಕಾರಣ ಮಾಡಲು ಮುಂದಾದ ಇವರ ಅಮಾನವೀಯ ಬೆಳವಣಿಗೆಯ ಬಗ್ಗೆ ತಿಳಿಸಲು ಇಷ್ಟೆಲ್ಲ ಹೇಳಬೇಕಾಯಿತು..
ಅಚ್ಯುತಕುಮಾರ ಯಲ್ಲಾಪುರ

0 comments:

Post a Comment