ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್
ಪಶ್ಚಿಮ ಘಟ್ಟ, ಹಿಮಾಲಯಕ್ಕಿಂತಲೂ ಪುರಾತನವಾದದ್ದು. ಸುಮಾರು 150 ಮಿಲಿಯ ವರ್ಷದಷ್ಟು ಹಳೆಯದು. ಗೊಂಡ್ವಾನ ಭೂಭಾಗ ಪ್ಯಾರೀಸ್ನ ಲಾರೇಶಿಯಾದಿಂದ ಬೇರ್ಪಟ್ಟು, ಹಿಮಾಲಯದ ಆ ಕಡೆಯಲ್ಲಿ ಫ್ರಾಂಜಿಯದಿಂದ ಬೇರ್ಪಟ್ಟಾಗ, ಅದು ಉತ್ತರಕ್ಕೆ, ಸರಿದು 100 ಮಿಲಿಯ ವರ್ಷಗಳ ಹಿಂದೆ ಭೂಭಾಗ ಮೇಲ್ಬರುವಾಗ ಮೊದಲ ಪಶ್ಚಿಮ ಘಟ್ಟ ಮೇಲ್ಬಂತು. ನಂತರ ಅದು ಲಾರೇಶಿಯಾಗೆ ಡಿಕ್ಕಿ ಹೊಡೆದು ಹಿಮಾಲಯ ಉದ್ಭವವಾಯ್ತು.


ಪ್ರಪಂಚದ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ ಪಶ್ಚಿಮ ಘಟ್ಟ, 1600ಕಿ.ಮೀ. ಉದ್ದ ಇದ್ದು, ಗುಜರಾತ್ನ ವಿಂದ್ಯಾಸಾತ್ಪುರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಅದರ ವ್ಯಾಪ್ತಿ ಇದೆ. ದಕ್ಷಿಣ ಭಾರತದ ಎಲ್ಲಾ ಕಡೆ ಅದು ಹರಡಿರುವಾಗ ಅದಕ್ಕೆ ವಿಶಿಷ್ಟವಾದ ವೈಶಿಷ್ಟ್ಯತೆ ಇದೆ. ಭೌಗೋಳಿಕವಾಗಿ ಪಶ್ಚಿಮಘಟ್ಟ ಅದ್ಭುತವಾದ ಪರಿಸರವನ್ನು ಹೊಂದಿದೆ. ಮಳೆಯ ಆಧಾರದಲ್ಲಿ ವಿಶ್ಲೇಷಿಸಿದರೆ ದಕ್ಷಿಣ ಭಾರತದ ಕನ್ಯಾಕುಮಾರಿ, ಪಾಲ್ಗಾಟ್ ಸುಮಾರು ಆರು ತಿಂಗಳ ಕಾಲ ಮಳೆಯನ್ನು ಪಡೆದರೆ, ಉತ್ತರ ಭಾರತದ ಗುಜರಾತ್ನಲ್ಲಿ ವರ್ಷಕ್ಕೆ ಒಂದೆರಡು ತಿಂಗಳುಗಳ ಕಾಲ ಮಳೆ ಬೀಳ್ತದೆ. ಮಳೆಯ ವ್ಯತ್ಯಾಸ ಭೌಗೋಳಿಕ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ. ದಕ್ಷಿಣದಲ್ಲಿ ನಿತ್ಯಹರಿದ್ವರ್ಣದ ಕಾಡುಗಳು, ಎತ್ತರವಾದ ಗುಡ್ಡ ಬೆಟ್ಟಗಳಿವೆ. ಆದರೆ ಲಾವಾರಸ ಹರಿಯುವಿಕೆಯಿಂದಾಗಿ ಉತ್ತರಭಾರತದಲ್ಲಿ ಪಶ್ಚಿಮಘಟ್ಟಗಳು ಸಮತಟ್ಟಾಗಿವೆ. ಆನೆಗುಂಡಿ ಬಹುಎತ್ತರದ ಪರ್ವತ ಶ್ರೇಣಿ.

ಅತ್ಯಂತ ವೈವಿಧ್ಯ ಜೀವ ಆವಾಸಗಳು ಪಶ್ಚಿಮ ಘಟ್ಟಗಳಲ್ಲಿವೆ. ಭಾರತದ 2%ರಷ್ಟು ಭೂಭಾಗ ಹಾಗೂ 5.6 ರಷ್ಟು ಜೀವವೈವಿಧ್ಯ ಇಲ್ಲಿದೆ. ಸ್ಥಳೀಯ ಪ್ರಭೇದಗಳು, ಪಶ್ಚಿಮಘಟ್ಟಕ್ಕೆ ಸೀಮಿತವಾದಂತಹ ಪ್ರಭೇದಗಳು ಹೇರಳವಾಗಿ ಕಂಡುಬರುತ್ತವೆ. ಜಗತ್ತಿನ ಎಂಟು ಅತ್ಯಂತ ಪ್ರಮುಖ ಜೀವ ವೈವಿಧ್ಯತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದು ಸುಮಾರು 508 ಜಾತಿ ಪಕ್ಷಿ ಪ್ರಭೇದಗಳು, 300ರಷ್ಟು ಸಸ್ತನಿಗಳು, 182 ಜಾತಿ ಕಪ್ಪೆಗಳು, 308 ಜಾತಿಯ ಚಿಟ್ಟೆಗಳಿಂದ ಕೂಡಿದ್ದು, ವೈವಿಧ್ಯಮಯ ಜೀವರಾಶಿಯಿಂದ ಕಂಗೊಳಿಸುತ್ತಾ ಇದೆ.

ಪಶ್ಚಿಮಘಟ್ಟದ ಬಹುತೇಕ ಸಸ್ಯಗಳು ಒಂದಲ್ಲಾ ಒಂದು ರೀತಿಯಲ್ಲಿ ಸಂಜೀವಿನಿ. ರಾಲ್ಫಿಮಾ ಸರ್ಪಂಟೈನ (ಸರ್ಪಗಂಧಿ) ಎನ್ನುವ ಸಸ್ಯವನ್ನು ಸುಮಾರು ನಾಲ್ಕು-ಐದುಸಾವಿರ ವರ್ಷಗಳಿಂದ ಆಯುರ್ವೇದದಲ್ಲಿ ಉಪಯೋಗಿಸಿದ್ದು, ನಮ್ಮ ಹೃದಯ ರೋಗಕ್ಕೆ ರಾಮಬಾಣವಾಗಿದೆ. ಜರ್ಮನಿಯ ಒಬ್ಬ ಸಂಶೋಧಕ ಈ ಸಸ್ಯದ 'ರಿಸರ್ಟೈನ್' ಎಂಬ ರಾಸಾಯನಿಕ ಕಂಡು ಹಿಡಿದು ಅದನ್ನು ಈಗಲೂ ಹೃದಯರೋಗ ಚಿಕಿತ್ಸೆಗೆ ಉಪಯೋಗಿಸುತ್ತಾರೆ. ಪ್ರಸ್ತುತ ಸರಕಾರವು ಸ್ಥಳೀಯ ಜ್ಞಾನಕ್ಕೆ ಮಾರುಕಟ್ಟೆ ಒದಗಿಸುವ ಬಗ್ಗೆ ಪ್ರಯತ್ನಿಸುತ್ತಿದೆ. ಆದರೆ ಈಗ ದುರಂತವೆಂದರೆ ಮಾರುಕಟ್ಟೆ ಒದಗಿಸುತ್ತಿರುವುದು ಪ್ರಾಯೋಗಿಕವಾಗಿ ಸಾಧಿಸಲ್ಪಟ್ಟುದುದಕ್ಕಾಗಿ ಮಾತ್ರ.

ಈ ನಿಲುವಿನಲ್ಲಿ ಪರಂಪರಾಗತ ಜ್ಞಾನಕ್ಕೆ ಮಾರುಕಟ್ಟೆ ಒದಗಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ. ನಮ್ಮ ಸರಕಾರವು ಪಶ್ಚಿಮ ಘಟ್ಟದ ಯಾವುದೇ ಸಸ್ಯ ಪ್ರಭೇದವನ್ನು ವಿದೇಶಿ ಕಂಪೆನಿಗಳಿಗೆ ಪರವಾನಿಗೆಯಿಲ್ಲದೆ ಮುಟ್ಟುವ ಅಧಿಕಾರವನ್ನು ಮೊಟಕುಗೊಳಿಸಿದ್ದು, ಒಂದು ಸಮಾಧಾನಕರ ಬೆಳವಣಿಗೆ.

ಪಶ್ಚಿಮ ಘಟ್ಟದಲ್ಲಿ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಹಾಟ್ಸ್ಪಾಟ್. ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 18%ರಷ್ಟು ಜನಸಂಖ್ಯೆ ಪ್ರತೀವರ್ಷ ಏರುತ್ತಿರುತ್ತದೆ. ಇದರಿಂದ ಅವರ ದೈನಂದಿನ ಬದುಕಿಗೆ ಬೇಕಾದಂತಹ ಆಹಾರ, ನೀರು, ವಸತಿ ಸಲಕರಣೆ ಇತ್ಯಾದಿಗಳು ಕಾಡುಗಳಲ್ಲಿ ಇರಬೇಕಾಗಿರುವುದರಿಂದ ಅಲ್ಲಿ ಮಾನವನ ಒತ್ತಡ ಹೆಚ್ಚಾಗುತ್ತಿದೆ. ಮನುಷ್ಯ ಪ್ರಭೇದದಿಂದಾಗಿ ಅಲ್ಲಿನ ಜೀವ ಪ್ರಬೇಧಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಇದೆಲ್ಲಾ ಮಾನವನ ನಗರಕೇಂದ್ರಿತ ಅಭಿವೃದ್ಧಿಯ ಮೂಲಕಾರಣ. ಹಳೆ ಶಿಲಾಯುಗದಿಂದ ಆರಂಭಿಸಿ, ಪ್ರಸ್ತುತ ಕಂಪ್ಯೂಟರ್ ಯುಗದವರೆಗೂ ಪಶ್ಚಿಮಘಟ್ಟದಲ್ಲಿ ಮೂಲನಿವಾಸಿಗಳು ವಾಸಿಸುತ್ತಾರೆ. ಅವರೆಲ್ಲಾ ಅಲೆಮಾರಿಗಳು. ಒಂದು ಕಡೆ ನೆಲೆಸಿ, ಅಲ್ಲಿಯ ಕಾಡನ್ನು ಕಡಿದು, ವ್ಯವಸಾಯ ಮಾಡಿ, ಇಳುವರಿ ಪಡೆದು ಕಡೆಗೆ ಮತ್ತೊಂದು ಕಡೆ ವಲಸೆ ಹೋಗುತ್ತಿದ್ದರು. ಇದು ಮುಖ್ಯವಾಗಿ 'ಸ್ಲಾಶ್ ಮತ್ತು ಬರ್ನ್' ಪ್ರವೃತ್ತಿ. ಆದರೆ ಈಗ ಕ್ರಮೇಣ ಜನಸಂಖ್ಯಾ ಹೆಚ್ಚಳ ಆಧುನಿಕತೆಯ ಪ್ರಭಾವದಿಂದಾಗಿ ಕಾಡುಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ.

ಅಲ್ಲಿನ ಬುಡಕಟ್ಟು ಜನರಿಗೆ ಪಶ್ಚಿಮಘಟ್ಟದ ಕಾಡುಗಳನ್ನು ಸಂರಕ್ಷಿಸುವ ಹೊಣೆಯನ್ನು ನೀಡಿದ್ದಲ್ಲಿ, ಅವರು ನಿಷ್ಟೆಯಿಂದ ಕೆಲಸ ಮಾಡುವಲ್ಲಿ ಆಶ್ಚರ್ಯವೇನಿಲ್ಲ. ಇಂದು ಕಾಡು, ಕಾಡುಪ್ರಾಣಿಗಳು ಉಳಿದಿವೆ ಎಂದರೆ, ಅದು ಅಲ್ಲಿನ ಬುಡಕಟ್ಟು ಜನಾಂಗದವರಿಂದ ಮಾತ್ರ. ಕಾಡೇ ಇಂತಹ ಜನರ ಬದುಕು. ದುರದೃಷ್ಟವಶಾತ್ ಆಧುನಿಕ ಜಗತ್ತಿಗೆ ಅವರು ತೆರೆದುಕೊಂಡದ್ದರಿಂದ, ಆಧುನಿಕತೆಯ ಪ್ರಭಾವ ಅವರ ಮೇಲಿದೆ. ಕಾಡುಪ್ರಾಣಿಗಳಿಗೆ, ಅವುಗಳ ಉತ್ಪನ್ನಗಳಿಗೆ ಹೆಚ್ಚು ಮಾರ್ಕೆಟಿಂಗ್ ಸಿಗುತ್ತದೆ ಎಂದು ಅವುಗಳ ಸಂಹಾರದಲ್ಲಿ ತೊಡಗುತ್ತಾರೆ.

ಸರಕಾರ ಕಾಡನ್ನು ರಕ್ಷಿಸುತ್ತದೆ. ನಾವು ಯಾಕೆ ರಕ್ಷಿಸಬೇಕೆನ್ನುವ ನಿರಾಶಾಭಾವ ಈ ಅಲ್ಲಲ್ಲಿ ಕೇಳಿಬರುತ್ತದೆ. ಆದಿವಾಸಿಗಳನ್ನು ಅವರ ಮಟ್ಟದಲ್ಲಿ ಉಳಿಯಲು ಬಿಡ್ಬೇಕು ಅಥವಾ ಅವರನ್ನು ಶೈಕ್ಷಣಿಕ ಮಟ್ಟದಿಂದ ಉನ್ನತೀಕರಿಸಿದಲ್ಲಿ ಅವರು ಆದಿವಾಸಿಗಳಾಗಿ ಉಳಿಯುವುದಿಲ್ಲ. ಬದಲಿಗೆ ನಮ್ಮಂತೆಯೇ ನಾಗರೀಕರಾಗುತ್ತಾರೆ. ಇಲ್ಲದೇ ಹೋದಲ್ಲಿ ಕಾಡನ್ನು ಹೊಂದಿಕೊಂಡು ಬದುಕುವ ಸಂಸ್ಕೃತಿ ಅದರೊಂದಿಗೆ ಮುಗಿದು ಬಿಡುತ್ತದೆ. ಶೈಕ್ಷಣಿಕ ಮಟ್ಟದಲ್ಲಿ ಆದಿವಾಸಿಗಳನ್ನು ಉನ್ನತೀಕರಿಸುವುದಾ, ಬಿಡುವುದಾ ಎಂಬುವುದು ನಮ್ಮ ಮುಂದಿರುವ ಪ್ರಶ್ನೆ.

ನಗರಕೇಂದ್ರಿತ ಅಭಿವೃದ್ಧಿ ಹಿನ್ನಲೆಯಲ್ಲಿ ಅನೇಕ ಅಭಿವೃದ್ಧಿಗಳು ಇಂದುಪಶ್ಚಿಮ ಘಟ್ಟದಲ್ಲಿ ನಡೆಯುತ್ತಾ ಇದೆ. ಕರ್ನಾಟಕದಲ್ಲಿ 45 ಮಿನಿ ವಿದ್ಯುತ್ ಸ್ಥಾವರವನ್ನು ಪಶ್ಚಿಮಘಟ್ಟದಲ್ಲಿ ಸ್ಥಾಪಿಸುವ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ. ಒಂದು ಜಲವಿದ್ಯುತ್ ಕೇಂದ್ರ ಸ್ಥಾಪನೆಯಾದಲ್ಲಿ ಅಲ್ಲಿ ಅಣೆಕಟ್ಟು ಕಟ್ಟಿ, ನೀರಿನಲ್ಲಿರುವ ಅನೇಕ ಜೀವಜಂತುಗಳ ವಿನಾಶಕ್ಕೆ ಅದು ಬುನಾದಿ ಹಾಕಿದಂತಾಗುತ್ತದೆ. ಅಣೆಕಟ್ಟುಗಳ ಬೆಳವಣಿಗೆ ಪಶ್ಚಿಮಘಟ್ಟದಲ್ಲಿ ಪ್ರಮುಖವಾಗಿ ಪರಿಣಾಮ ಬೀರುವಂತವುಗಳು ಎಂಬುವುದು, ವಿಚಾರವಾದಿಗಳ ಚಿಂತನೆ.

ಗಣಿಗಾರಿಕೆ ಇಂದು ಎರಡು ದೃಷ್ಟಿಯಲ್ಲಿ ಹಾನಿಕಾರಕ, ಮೊದಲನೆಯದಾಗಿ ನಮ್ಮ ರಾಷ್ಟ್ರೀಯ ಸಂಪತ್ತನ್ನು ವಿದೇಶಿ ವಿನಿಮಯಗೊಳಿಸುವ ದೃಷ್ಟಿಯಿಂದ, ಅಗಾಧ ಪ್ರಮಾಣದಲ್ಲಿ ಅಗೆದು ತೆಗೆದು ವಿದೇಶಕ್ಕೆ ಕಳುಹಿಸಿ ಅದು ಬರಿದಾಗುತ್ತಾ ಇದೆ. ಅದೊಂದು ನವೀಕರಿಸಲಾಗದಂತಹ ಶಕ್ತಿ ಸಂಪನ್ಮೂಲ. ಇದು ಹೀಗೇ ಮುಂದುವರೆದಲ್ಲಿ ಮುಂದೊಂದು ದಿನ ನಾವು ವಿದೇಶದ ಮುಂದೆ ಕೈಚಾಚುವ ಪರಿಸ್ಥಿತಿ ಎದುರಾಗಬಹುದು. ಇದರಿಂದ ವ್ಯಾಪಕವಾದ ಪರಿಸರ ಹಾನಿ ಎರಡನೆಯ ಚಿಂತಿಸಬೇಕಾದಂತಹ ವಿಷಯ. ಸುತ್ತಮುತ್ತಲಿನ ಗಿಡ, ಮರ, ಪ್ರಾಣಿ, ಪಕ್ಷಿ, ಗಾಳಿ, ಬೆಳಕು ಎಲ್ಲವೂ ತೊಂದರೆಗೆ ಒಳಗಾಗುತ್ತಾ ಇದೆ.
ಮೂರನೆಯದು ಕಾಡಿನ ಅವೈಜ್ಞಾನಿಕ ನಿರ್ವಹಣೆ. ಕಾಫಿತೋಟ, ಅಡಿಕೆ ತೋಟ, ರಬ್ಬರ್ ಕೃಷಿಗಳನ್ನು ಪಶ್ಚಿಮ ಘಟ್ಟದ ಸುಂದರವಾದ ಕಾಡುಗಳನ್ನು ನಾಶಮಾಡಿ ನಿರ್ಮಾಣ ಮಾಡಿದರೆ ಏನರ್ಥ? ! ! ಇದು ಅನೇಕ ಜೀವಿಗಳ ಸ್ಮಶಾನದ ಮೇಲೆ ನಾವು ನಮ್ಮ ಸೌಧವನ್ನು ಕಟ್ಟಿದಂತೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದು, ಪಶ್ಚಿಮ ಘಟ್ಟ ನಾಶ ಆದಲ್ಲಿ ಅದರಿಂದ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ನಷ್ಟ ಇದೆ.

ಪಶ್ಚಿಮ ಘಟ್ಟದಲ್ಲಿ ಇತ್ತೀಚೆಗೆ ಎತ್ತಿನಹಳ್ಳ ಹಾಗೂ ಗುಂಡ್ಯಾ ಹೈಡ್ರೋ ಇಲೆಕ್ಟ್ರಿಕ್ ಪ್ರಾಜೆಕ್ಟ್ಗಳು ಭಾರೀ ಪ್ರಚಲಿತದಲ್ಲಿದೆ. ಸಕಲೇಶಪುರ, ಗುಂಡ್ಯಾ ಹಾಗೂ ಎತ್ತಿನಹಳ್ಳ ಜಾಗದಲ್ಲಿ 3 ಕಿ.ಮೀ. ಉದ್ದದ ಭೂಗತ ಟನೆಲ್ ಒಂದನ್ನು ಕೊರೆದಿದ್ದಾರೆ. ದುರದೃಷ್ಟವೆಂದರೆ, ಆ ಟನೆಲ್ ಕೊರೆದ ಪ್ರಸ್ತುತವಾದ ಜಾಗ ಅಚ್ಚುಕಟ್ಟಾದ ಅರಣ್ಯ ಪ್ರದೇಶ. ಇಂತಹ ಅದ್ಭುತವಾದ ಅರಣ್ಯ ಪ್ರದೇಶದಲ್ಲಿ ಲಾರಿ, ಬುಲ್ಡೋಜರ್ಗಳು ಹೋಗಲು ಅನುಕೂಲ ಆಗುವಂತಹ 4 ಕಿ.ಮೀ. ಉದ್ದದ ರಸ್ತೆ ಮಾಡಿದ್ದಾರೆ. ಈ ರಸ್ತೆಯೇ ಮರಗಳ್ಳರಿಗೋ, ಪ್ರಾಣಿಗಳ್ಳರಿಗೋ, ಒಂದು ಹೊಸ ದಾರಿ ತೋರಿಸಿದಂತಾಗುತ್ತದೆ. ಆದರೆ ವಿಚಾರವಾದಿಗಳ ಚಿಂತನೆ ಏನೆಂದರೆ ಪಶ್ಚಿಮ ಘಟ್ಟದ ಯಾವುದೇ ನದಿಗಳನ್ನು ಮುಟ್ಟಬಾರದು.

ಅದು ಎತ್ತಿನ ಹಳ್ಳ ಯೋಜನೆ ಇರಬಹುದು ಅಥವಾ ಗುಂಡ್ಯಾ ಹೈಡ್ರೋ ಇಲೆಕ್ಟ್ರಿಕ್ ಯೋಜನೆಯಿರಬಹುದು. ನದಿಯಲ್ಲಿ ನೀರು ಹರಿಯುವುದು ನಿಸರ್ಗ ನಿಯಮ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೆ ಅದು ಸುನಾಮಿ ರೀತಿಯಲ್ಲಿ ಪ್ರತಿಕ್ರಿಯೆ ನಡೆಸುವುದರಲ್ಲಿ ಆಶ್ಚರ್ಯವೇನಿಲ್ಲ. ಒಂದು ಪ್ರಭೇದದ ನಾಶ, ಅದನ್ನು ಪುನಃ ಸೃಷ್ಟಿಸಲಾಗದಂತಹ ಕ್ರಿಯೆ. ಪಶ್ಚಿಮ ಘಟ್ಟದ ಸಂರಕ್ಷಣೆಗೆ ಈಗಿಂದೀಗಲೇ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯ.

ಪಶ್ಚಿಮ ಘಟ್ಟವನ್ನು 'ವಿಶ್ವ ಪರಿಸರ ತಾಣ' ಗಳ ಪಟ್ಟಿಯಲ್ಲಿ ಸೇರಿಸುವ ಬಗೆಗಿನ ಚಿಂತನೆ ಅತ್ಯಾವಶ್ಯ. ಪ್ರಪಂಚದ ಯಾವ ಭಾಗದಲ್ಲೂ ಕಾಣಲು ಸಿಗದಂತಹ ವಿಶಿಷ್ಟವಾದ ಜೀವಜಂತುಗಳು ಇಲ್ಲಿ ಕಾಣಲು ಸಿಗುತ್ತದೆ. ಮಾತ್ರವಲ್ಲ ಅದು ವೇಗವಾಗಿ ನಾಶವಾಗುತ್ತಾ ಇದೆ. ಇಲ್ಲಿ ಲಯನ್ ಟೇಲ್ ಮಂಕಿ, ಬರಂಕಾ, ಟ್ರಾಗಲಸ್ ಮಮ್ಯಿನಾ, ಹಾರ್ನ್ ಬಿಲ್, ಸಿಲ್ವನ್ ಫ್ರಾಗ್ಮೋತಿ ಹೀಗೆ ಕೆಲವು ವಿಶಿಷ್ಟವಾದ ಪ್ರಭೇಧಗಳು ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವುದು. ಇವುಗಳ ಸಂರಕ್ಷಣೆ ನೈಸರ್ಗಿಕ ತಾಣದಲ್ಲೇ ಆಗಬೇಕು. ಹಾಗಾಗಿ ಪಶ್ಚಿಮ ಘಟ್ಟವನ್ನು ವಿಶ್ವಪರಿಸರ ತಾಣಗಳ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಅದರ ಮೇಲ್ವಿಚಾರಣೆ ಆಗುತ್ತಾ ಇದೆ. ಕೇಂದ್ರ ಸರಕಾರದ ಹಿನ್ನಲೆಯು ಈ ನಿಟ್ಟಿನಲ್ಲಿದೆ. ಇದು ಸುರಕ್ಷತೆಯ ದೃಷ್ಟಿಯಿಂದ, ಜೀವ ವೈವಿಧ್ಯಗಳನ್ನು ಸಂರಕ್ಷಿಸುವ ದೃಷಿಯಿಂದ ಇದೊಂದು ಸ್ವಾಗತಾರ್ಹ ವಿಷಯ.

ಯುನೆಸ್ಕೋದ ನಿಲುವು ಇದರಲ್ಲಿ ಸಮ್ಮಿಲಿತವಾಗಿದೆ. ಆದರೆ ಇದಕ್ಕೆ ಕೆಲವು 'ಸ್ಥಾಪಿತ ಹಿತಾಸಕ್ತಿ' ಉಳ್ಳವರಿಂದ ಸ್ವಲ್ಪ ವಿರೋಧವಿದೆ. ಪಶ್ಚಿಮ ಘಟ್ಟ ವಿಶ್ವ ಪರಿಸರ ತಾಣಗಳ ಪಟ್ಟಿಯಲ್ಲಿ ಸೇರಿದರೆ, ಅದು ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟರೆ, ಅದು ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸಫಲವಾಗುತ್ತದೆ. ಆದರೆ ಇದರಿಂದ ಅಲ್ಲಿನ ಪರಿಸರ ಮಾಲಿನ್ಯ ಹೆಚ್ಚಾಗುವ ಸಂಭವನೀಯತೆಯೂ ಇದೆ. ಇದು ಅಲ್ಲಿಯ ಬುಡಕಟ್ಟು ಜನಾಂಗದ ಸಂಸ್ಕೃತಿಯ ಮೇಲೆ ನೇರ ಪರಿಣಾಮವನ್ನು ಬೀರಬಹುದು. ಇದರಿಂದ ಅವರು ತಮ್ಮ ಸಂಸ್ಕೃತಿಯನ್ನು ಕಡೆಗಣಿಸಿ ಹೊಸಬರ ಸಂಸ್ಕೃತಿಗೆ ತಮ್ಮನ್ನು ಒಗ್ಗಿಸಿಕೊಳ್ಳುವ ದುರಂತ ನಡೆಯಬಹುದು. ಇದರ ಒತ್ತಡ ಪುನಃ ಪರಿಸರದ ಮೇಲೆ ಬೀಳುತ್ತದೆ. ಇದರ ಪರಿಹಾರ ನಮ್ಮೆಲ್ಲರ ಹೊಣೆ.

ಪಶ್ಚಿಮ ಘಟ್ಟದ ಪರಿಸರ ತಾಣದ 6 ಕಿ.ಮೀ. ದೂರದಲ್ಲಿ ಮನುಷ್ಯರ ಚಟುವಟಿಕೆಯಲ್ಲಿ ನಿಲ್ಲಿಸಬೇಕು. ಹೀಗೆ ಮಾಡಿದರೆ ಮಾತ್ರ ನಾವು ಪಶ್ಚಿಮ ಘಟ್ಟದ ವೈವಿಧ್ಯವನ್ನು, ವೈಶಿಷ್ಟ್ಯವನ್ನು, ಜೀವ ಸಂಪತ್ತನ್ನು ಮುಂದಿನ ಶತಮಾನಕ್ಕೆ ಈಗಿರುವ ಪರಿಸ್ಥಿತಿಯಲ್ಲಿ ಉಳಿಸಬಹುದು. ಇಲ್ಲದಿದ್ದಲ್ಲಿ ಮುಂದೆ ಚಿತ್ರದಲ್ಲಿ, ದೃಶ್ಯದಲ್ಲಿ ಮಾತ್ರ ನೋಡುವಂತಹ ಪರಿಸ್ಥಿತಿ ಉಳಿದುಬಿಡಬಹುದು. ಆದ್ದರಿಂದ ಪಶ್ಚಿಮಘಟ್ಟ ವಿಶ್ವ ಪರಿಸರ ತಾಣಗಳ ಪಟ್ಟಿಯಲ್ಲಿ ಸೇರಿಸುವುದು ಸ್ವಾಗತಾರ್ಹ ವಿಷಯ.

ಇಲ್ಲಿನ ಪರಿಸರ ನಾಶ ಮಳೆ ಕಡಿಮೆಯಾಗುವುದು, ನದಿಗಳು ಬತ್ತಿ ಹೋಗುವುದು, ಆಹಾರ ಬೆಳೆ ಕುಂಟಿತವಾಗುವುದು, ಕಾಳ್ಗಿಚ್ಚು ಜಾಸ್ತಿಯಾಗುವುದು ಇತರ ಅನೇಕ ರೀತಿಯ ಪರಿಣಾಮವನ್ನು ಬೀರುತ್ತದೆ. ಪಶ್ಚಿಮಘಟ್ಟದ ಪರಿಸರ ಹಾಳಾದಲ್ಲಿ ಅದರಿಂದ ಉಂಟಾಗುವ ಅನಾಹುತಗಳು ಅನೇಕ. ಇಡೀ ಭಾರತಕ್ಕೆ ವ್ಯಾಪಕವಾಗಿ ಕೇವಲ ಜೀವ ವೈವಿಧ್ಯದ ದೃಷ್ಟಿಯಿಂದ ಮಾತ್ರವಲ್ಲ, ಭೌಗೋಳಿಕ ಸಂರಚನೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಪಶ್ಚಿಮ ಘಟ್ಟ ಉಳಿಯಬೇಕು. ಇದು ನಮ್ಮೆಲ್ಲರ ಶಪಥವಾಗಿರಲಿ .

ಸುಜಿತ್ (ವಿದ್ಯಾರ್ಥಿ, ಹವ್ಯಾಸಿ ಬರಹಗಾರ)
ಪಾವಂಜೆಗುಡ್ಡೆ, ಬಡಾನಿಡಿಯೂರು
ಉಡುಪಿ
ಚಿತ್ರ:ಅಂತರ್ಜಾಲ ಕೃಪೆ


0 comments:

Post a Comment