ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಹಾವು ಎಂಬ ಶಬ್ಧ ಕಿವಿಗೆ ಬೀಳುತ್ತಲೇ ಅಬಾಲವೃದ್ಧರಾದಿಯಾಗಿ ಎಲ್ಲರೂ ಹೌಹಾರಿ, ಬೆಚ್ಚಿಬೀಳುತ್ತಾರೆ. ಆದರೆ ಕೆಲವು ಧೈರ್ಯಶಾಲಿಗಳು, ಹಾವಿನ ಬಗ್ಗೆ ತಿಳುವಳಿಕೆಯುಳ್ಳವರು ಮಾತ್ರ ಹಾವುಗಳನ್ನು ಹಿಡಿಯಲು ಮುಂದಾಗುತ್ತಾರೆ. ಹಾವುಗಳನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಮೈಯೆಲ್ಲಾ ಎಚ್ಚರಿಕೆಯಿಂದಿರಬೇಕು. ಸ್ವಲ್ಪ ಎಡವಟ್ಟಾದರೂ ಸಾವಿನ ಮನೆಯ ಬಾಗಿಲು ತಟ್ಟುವುದು ಶತಸಿದ್ಧ. ಚಿಕ್ಕ ಮಕ್ಕಳಲ್ಲಿ ಅಂತೂ ಈ ಹವ್ಯಾಸ ಅತಿ ವಿರಳ ಎಂದರೆ ತಪ್ಪಾಗಲಾರದು.

ಬಳ್ಳಾರಿಯ ಪುಟಾಣಿ ಅಣ್ಣ-ತಂಗಿ ಅಂಥ ಅಪರೂಪದ ಹವ್ಯಾಸಿಗಳಲ್ಲಿ ಒಬ್ಬರು. ಹಾವುಗಳ ಬಗ್ಗೆ ಸಾಕಷ್ಟು ವಿವರ ಸಂಗ್ರಹಿಸಿ, ತಿಳಿದುಕೊಂಡಿರುವ ಈ ಅಣ್ಣ- ತಂಗಿ ಭವಿಷ್ಯದಲ್ಲಿ ಉರಗತಜ್ಞರಾಗುವ ಭರವಸೆ ಮೂಡಿಸಿದ್ದಾರೆ.ಬಳ್ಳಾರಿಯ ದಂಡುಪ್ರದೇಶದಲ್ಲಿರುವ ಸೇಂಟ್ ಮೇರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ನಿಜಗುಣಸ್ವಾಮಿ ನೆಗಳೂರಮಠ ಮತ್ತು 3ನೇ ತರಗತಿ ವಿದ್ಯಾರ್ಥಿನಿ ಮಹೇಶ್ವರಿ ನೆಗಳೂರಮಠ ಉರಗಪ್ರೇಮಿ ಅಣ್ಣ-ತಂಗಿಯಾಗಿದ್ದಾರೆ.

ಇವರ ತಂದೆ ಕಾಶೀನಾಥ್ ನೆಗಳೂರುಮಠ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗದ ಕಲಾ ಮತ್ತು ಛಾಯಾಗ್ರಹಣ ಘಟಕದಲ್ಲಿ ಮಾಡ್ಯುಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಉರಗ ತಜ್ಞ ಹಾಗೂ ವನ್ಯ ಜೀವಿ ಛಾಯಾಗ್ರಾಹಕ ಕೂಡಾ ಹೌದು. ಈ ಮಕ್ಕಳ ತಾಯಿ ಶಶಿಕಲಾ ಕೂಡಾ ಸುಮಾರು ಐದು ವರ್ಷಗಳಿಂದಲೂ ಹಾವುಗಳ ಒಡನಾಟ ಬೆಳೆಸಿಕೊಂಡಿದ್ದಾರೆ.

ಬಳ್ಳಾರಿ ಸುತ್ತಮುತ್ತ ಎಲ್ಲೇ ಹಾವುಗಳು ಕಂಡುಬಂದರೂ, ಅವುಗಳನ್ನು ಹಿಡಿಯಲು ಕಾಶೀನಾಥ್ಗೆ ಮೊದಲ ಕರೆಹೋಗುತ್ತದೆ. ಹಾವು ಹಿಡಿಯುವ ಕಲೆಗಳನ್ನು ಚೆನ್ನಾಗಿ ಸಿದ್ಧಿಸಿಕೊಂಡಿರುವ ಕಾಶೀನಾಥ್ ಹಲವಾರು ವಿಷಪೂರಿತ ಹಾವುಗಳನ್ನು ಹಿಡಿದು, ಸುರಕ್ಷಿತವಾಗಿ ಅರಣ್ಯಗಳಿಗೆ ಬಿಟ್ಟುಬಂದಿದ್ದಾರೆ. ಈ ಕಾಯಕದಲ್ಲಿ ಈಗ ಇವರ ಪುತ್ರ ನಿಜಗುಣ ಮತ್ತು ಪುತ್ರಿ ಮಹೇಶ್ವರಿ ಕೂಡ ಸಾಥ್ ನೀಡಲಾರಂಭಿಸಿದ್ದಾರೆ.ರವೀಂದ್ರ ಐತಾಳ್ ತರಬೇತಿ:

ಈ ಉರಗಪ್ರೇಮಿ ಕುಟುಂಬಕ್ಕೆ ಪುತ್ತೂರಿನ ಪ್ರಶಿದ್ಧ ಉರಗ ತಜ್ಞ ರವೀಂದ್ರ ಐತಾಳ ತರಬೇತಿ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನೆಗಳೂರಮಠ ಕುಟುಂಬ ಹಾವುಗಳ ಬಗ್ಗೆ ವಿಶೇಷ ಜ್ಞಾನ ಸಂಪಾದಿಸಿಕೊಂಡಿದೆ. ಜೊತೆಗೆ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಇವರ ಈ ಹವ್ಯಾಸಕ್ಕೆ 'ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್'ನಲ್ಲಿ ತೋರಿಸುವ ಹಾವು ಹಿಡಿಯುವ ತಂತ್ರಗಳು ಕೂಡಾ ಇಂಬು ನೀಡುತ್ತಿವೆ.

ಹಿಡಿದ ಹಾವುಗಳು ಸಾವಿರಾರು:


ತಮ್ಮ ತಂದೆಗಿಂತ ನಾವೇನೂ ಕಡಿಮೆ ಎಂಬಂತೆ ನಿಜಗುನ ಮತ್ತು ಮಹೇಶ್ವರಿ ಇದುವರೆಗೂ ಸಾವಿರಾರು ಹಾವುಗಳನ್ನು ಹಿಡಿದು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
'ನಾಗರಹಾವು,ವೈಪರ್, ಕೆರೆಹಾವು, ಸ್ಯಾಂಡಬೋವಾ, ನೀರುಹಾವು, ಹಾರುಹಾವು,ಕ್ರೇಟ್ ಕ್ಯಾಟ್ರ್ರಿಂಕೆಟ್ ಸೇರಿದಂತೆ ಅನೇಕ ಬಗೆಯ ಹಾವುಗಳನ್ನು ಹಿಡಿದು ಸುಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದೇವೆ. ಹಾವು ಹಿಡಿದ ತಕ್ಷಣ ಅ ಹಾವಿನ ಅದರ ಅಳತೆ, ಬಣ್ಣ , ಜಾತಿ ಸೇರಿದಂತೆ ಅದರ ಜೀವನ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ಟಿಪ್ಪಣಿ ಸಿದ್ಧಪಡಿಸಿಕೊಳ್ಳುತ್ತೇವೆ ಎನ್ನುತ್ತಾರೆ ನಿಜಗುಣ ಮತ್ತು ಮಹೇಶ್ವರಿ.

ಹಾವು ಕಂಡ ಬಗ್ಗೆ 9844227806ಕ್ಕೆ ದೂರವಾಣಿ ಕರೆ ಬರುತ್ತಿದ್ದಂತೆ ತಂದೆ ಕಾಶೀನಾಥ ಊರಲಿಲ್ಲವೆಂದರೂ ಈ ಮಕ್ಕಳು ತಾಯಿ ಜೊತೆ ಸ್ಕೂಟರ್ ಏರಿ, ಹಾವು ಬಂದಿದೆ ಎನ್ನಲಾದ ಸ್ಥಳದಲ್ಲಿ ಹಾಜರಾಗುತ್ತಾರೆ. ಹಾವನ್ನು ಹಿಡಿದು ಮನೆಯವರ ಧಾವಂತ, ಆತಂಕ ಕಡಿಮೆ ಮಡಿ, ಹಿಡಿದ ಹಾವನ್ನು ಅರಣ್ಯಕ್ಕೆ ಬಿಟ್ಟುಬರುತ್ತಾರೆ. ಕೆಲವೇ ನಿಮಿಷಗಳಲ್ಲಿ ಹಾವಿದ್ದ ಸ್ಥಳಕ್ಕೆ ಹಾಜರ್. ಅವರ ತಂದೆ ಕಾಶೀನಾಥ್ ಮನೆಯಲ್ಲಿ, ಊರಲ್ಲಿಲ್ಲವೆಂದರೂ ತಾಯಿಯವರ ಜೊತೆ ಸ್ಕೂಟರ್ ಏರಿ ಬಂದು ಸರ್ಪ ಬಂಧನಕ್ಕೆ ಸಿದ್ಧರಾಗುತ್ತಾರೆ. ಕಾಡಿಗೆ ಬಿಟ್ಟು ಬರುವ ಪ್ರಕ್ರಿಯೆ ನೆರವೇರಿಸುತ್ತಾರೆ.


ಮೆಚ್ಚಿನ ವಿದ್ಯಾರ್ಥಿಗಳು:

ನಿಜಗುಣ ಮತ್ತು ಮಹೇಶ್ವರಿ ಓದಿನಲ್ಲೂ ಮುಂದಿದ್ದಾರೆ. ಕೈಗೆ ಕುಂಚಗಳು ಸಿಕ್ಕರೆ, ಸುಂದರವಾದ ಚಿತ್ತಾರ ಮೂಡಿಸುವ ಕಲೆಯೂ ಈ ಅಣ್ಣ-ತಂಗಿಯರಲ್ಲಿದೆ. ಕ್ಯಾಮರಾ ಹಿಡಿದು ಉತ್ತಮ ಚಿತ್ರಗಳನ್ನು ಸೆರೆಹಿಡಿವ ಕಲೆಯೂ ಇವರಿಗೆ ಗೊತ್ತಿದೆ.
ಶಾಲೆಯಲ್ಲಿ ಶಿಸ್ತಿನ ವರ್ತನೆ ಮತ್ತು ಒಳ್ಳೆಯ ಸಾಧನೆಯಿಂದಾಗಿ ನಿಜಗುಣ ಮತ್ತು ಮಹೇಶ್ವರಿ ತಮ್ಮ ಶಾಲೆಯ ಶಿಕ್ಷಕ ವೃಂದದ ಅಚ್ಚುಮೆಚ್ಚಿನ ವಿದ್ಯಾರ್ಥಿಗಳೆನಿಸಿದ್ದಾರೆ. ಸಹಪಾಠಿಗಳ ಪಾಲಿಗೆ ಹೆಮ್ಮೆಯ ಸ್ನೇಹಿತರಾಗಿದ್ದಾರೆ.

ಹಾವುಗಳ ಬಗ್ಗೆ ಈ ಮಕ್ಕಳು ಹೇಳುವುದು ಹೀಗೆ -

'ಹಾವುಗಳು ರೈತರ ಒಡನಾಡಿ, ಹಾವುಗಳ ನಾಶಪಡಿಸಿದರೆ, ಆಹಾರ ಸರಪಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.. ಹಳೆಯ ಕಂದಾಚಾರ, ಅಂಧಶ್ರದ್ಧೆಗಳು ಮತ್ತು ಭಯದಿಂದಾಗಿ ಹಾವುಗಳ ಬಗ್ಗೆ ಜನರಲ್ಲಿ ವ್ಯಾಪಕವಾದ ತಪ್ಪುತಿಳಿವಳಿಕೆ ಮೂಡಿದೆ. ಹಾವನ್ನೂ ಕೊಲ್ಲುವುದು ಕಾನೂನು ದೃಷ್ಟಿಯಲ್ಲೂ ಅಪರಾಧವಾಗಿದೆ. ಕಾಡು ನಾಶ ಅವ್ಯಾಹತವಾಗಿರುವುದರಿಂದ ಹಾವುಗಳು ನಾಡನ್ನು ಪ್ರವೇಶಿಸುವುದು ಸಾಮಾನ್ಯವಾಗುತ್ತದೆ, ಪರಿಸರ ಸಮತೋಲನದ ದೃಷ್ಟಿಯಿಂದ ಹಾವುಗಳ ಸಂರಕ್ಷಣೆ ಅಗತ್ಯ.'

ನಾಮದೇವ. ಜಿ. ಕಾಗದಗಾರ.

ಹಾವೇರಿ

2 comments:

Don said...

good

makara said...

ಶ್ರೀಯುತ ಕಾಶೀನಾಥ್ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು. ಅವರ ಸೇವೆಯನ್ನು ವಿವಿಧ ಶಾಲೆಗಳು ಬಳಸಿಕೊಂಡು ನಾಳಿನ ಪ್ರಜೆಗಳಾದ ಮಕ್ಕಳಿಗೆ ತಿಳಿಯಪಡಿಸಲಿ. ಈ ಲೇಖನದ ಮೂಲಕ ಅವರ ಬಗ್ಗೆ ಬೆಳಕು ಚೆಲ್ಲಿರುವ ನಾಮದೇವ ಅವರಿಗೂ ಧನ್ಯವಾದಗಳು.

Post a Comment