ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ: ಮಂಗಳೂರು ವರದಿ
ಆಕಾಶವಾಣಿಯು ಭಾವಗೀತೆಗಳ ವಿಸ್ತರಣೆಯಲ್ಲಿ ಹಾಗೂ ಪ್ರಚಾರ ಪ್ರಸಾರದಲ್ಲಿ ದೊಡ್ಡ ಪಾತ್ರ ನಿರ್ವಹಿಸಿದೆ. ಶಾಸ್ತ್ರೀಯ ಸಂಗೀತದ ಪಂಚಾಂಗದಿಂದ ಸ್ವರ ರಾಗಗಳ ಮಾಧುರ್ಯವನ್ನು ತೆಗೆದುಕೊಂಡು ಸಾಹಿತ್ಯದ ಭಾವವನ್ನು ವಿಸ್ತರಿಸಿ ರಸಪೋಷಣೆ ಮಾಡುವ ಈ ಪ್ರಕಾರವು ಆಧುನಿಕ ಕಾಲದಲ್ಲಿ ಬಹುಜನಪ್ರಿಯವಾಗಿದೆ. ಸಂಗೀತವನ್ನು ಸಾಹಿತ್ಯವನ್ನು ಜೊತೆಜೊತೆಯಾಗಿ ಜನರ ಮಧ್ಯಕ್ಕೆ ಕೊಂಡೊಯ್ಯುವ ಕೆಲಸ ಇದರಿಂದ ಆಗಿದೆ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.


ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ ಭಾವಗೀತೆಗಳ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕವಿಗಳು ಭಾವಗೀತೆಗಳನ್ನು ರಚನೆ ಮಾಡುತ್ತಾರೆ. ಸಂಗೀತ ಸಂಯೋಜಕರು ಅವುಗಳ ನಾಡಿ ಹಿಡಿದು ಅದಕ್ಕೆ ಸ್ವರಸಂಯೋಜನೆ ಮಾಡುತ್ತಾರೆ, ಹಿನ್ನೆಲೆ ವಾದ್ಯ ಸಹಕಾರದೊಂದಿಗೆ ಗಾಯಕರು ಅವನ್ನು ಹಾಡುತ್ತಾರೆ. ಈ ನಾಲ್ಕು ವಿಭಾಗದವರನ್ನು ಒಟ್ಟು ಸೇರಿಸಿ ಮಾಡುವ ಈ ಕಾರ್ಯಾಗಾರದಲ್ಲಿ ಸರಸ್ವರ ತಿಳುವಳಿಕೆ ಅನುಭವಗಳ ಹಂಚಿಕೆ ಆಗಿ ಉತ್ತಮ ಭಾವಗೀತೆಗಳ ನಿರ್ಮಾಣಕ್ಕೆ ಆಸ್ಪದವಾಗುತ್ತದೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೇಖಕ ಹಾಗೂ ವಿಮರ್ಶಕ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಅವರು, ಕರ್ನಾಟಕದ ಮಟ್ಟಿಗೆ ಭಾವಗೀತೆಗಳ ಪ್ರಕಾರಕ್ಕೆ ಆಕಾಶವಾಣಿಯ ಕೊಡುಗೆ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಿಂದಲೇ ಆರಂಭಗೊಂಡ ಆಕಾಶವಾಣಿಯ ಈ ಪರಂಪರೆಯು ಇವತ್ತಿಗೂ ಅರ್ಥಪೂರ್ಣವಾಗಿ ಬೆಳೆದು ಬರುತ್ತಿರುವುದಕ್ಕೆ ಈ ಕಮ್ಮಟ ಸಾಕ್ಷಿಯಾಗಿದೆ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಹಾಗೂ ಶಿಬಿರ ಸಂಯೋಜಕ ಗುರುರಾಜ ಮಾರ್ಪಳ್ಳಿಯವರು ಪ್ರತಿಯೊಂದು ಭಾವಗೀತೆಯೂ ಸಂಗೀತ ಸಂಯೋಜಕರ ಮೂಲಕ ಮರುಸೃಷ್ಟಿ ಪಡೆಯುತ್ತದೆ. ಗಾಯಕರು ತಮ್ಮ ಕಲ್ಪನೆಯನ್ನು ಸೇರಿಸಿ ಅದನ್ನು ಇನ್ನೊಂದು ಎತ್ತರಕ್ಕೆ ಕೊಂಡುಯ್ಯುತ್ತಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಕಾಶವಾಣಿ ಕೇಂದ್ರದ ಅಭಿಯಂತರರಾದ ಜಿ. ರಮೇಶಚಂದ್ರನ್ ಅವರು ಆಕಾಶವಾಣಿಯು ಕಲಾವಿದರಿಗೆ ದೊಡ್ಡದೊಂದು ಭಿತ್ತಿಯನ್ನು ಒದಗಿಸಿಕೊಡುತ್ತದೆ. ಆ ಭಿತ್ತಿಯಲ್ಲಿ ಕಲಾವಿದರು ತಮ್ಮ ಕಲ್ಪನೆಯ ವರ್ಣಚಿತ್ರಗಳನ್ನು ಕಲಾತ್ಮಕವಾಗಿ ಮತ್ತು ತಮ್ಮ ಸೃಜನಶೀಲತೆಗೆ ಬೇಕಾದಂತೆ ಬಿಡಿಸುತ್ತಾರೆ. ಅದನ್ನು ಗುಣಾತ್ಮಕವಾಗಿ ಸಾರ್ವಜನಿಕರಿಗೆ ತಿಳಿಯಪಡಿಸುವ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿದರು.

ವ ಈ ಶಿಬಿರದಲ್ಲಿ ಕವಿಗಳಾದ ಧನಂಜಯ ಕುಂಬಳೆ, ರಘು ಇಡ್ಕಿದು, ರಾಧಾಕೃಷ್ಣ ಬೆಳ್ಕೂರು, ಕಾತ್ಯಾಯಿನಿ ಕುಂಜಿಬೆಟ್ಟು, ಗುರುರಾಜ ಮಾರ್ಪಳ್ಳಿಯವರ ಜೊತೆಗೆ ಸಂಗೀತ ಸಂಯೋಜಕರಾದ ಎಮ್.ಎಸ್. ಗಿರಿಧರ್, ಟಿ.ಜಿ. ಗೋಪಾಲಕೃಷ್ಣನ್, ರಫೀಕ ಖಾನ, ಮೌನೇಶಕುಮಾರ್ ಛಾವಣಿ, ಕೆ. ಆರ್. ಕುಮಾರ್, ಕೆ. ಎಚ್. ರವಿಕುಮಾರ್ ಮೊದಲಾದವರು ಭಾಗವಹಿಸಿದ್ದರು. ಹಿನ್ನೆಲೆ ವಾದ್ಯ ಸಹಕಾರದ ಕಲಾವಿದರಲ್ಲದೆ ಹಲವಾರು ಮಂದಿ ಗಾಯಕ ಗಾಯಕಿಯರು ಭಾಗವಹಿಸುತ್ತಿದ್ದು ಹಲವು ಉತ್ತಮ ಭಾವಗೀತೆಗಳ ನಿರ್ಮಾಣ ಆಗಲಿದೆ.

ಕಾರ್ಯಕ್ರಮ ನಿರ್ವಾಹಕ ಬಿ.ವಿ. ಶ್ರೀಧರ್ ಸ್ವಾಗತಿಸಿದರು. ಮೌನೇಶಕುಮಾರ್ ಛಾವಣಿ ಪ್ರಾರ್ಥನೆ ಹಾಡಿದರು. ಸಂಗೀತ ವಿಭಾಗದ ಅಧಿಕಾರಿ ಶಾರದಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಸಾರ ನಿರ್ವಾಹಕ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ ವಂದಿಸಿದರು.

0 comments:

Post a Comment