ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನುಡಿಚಿತ್ರ:ನಾಮದೇವ ಕಾಗದಗಾರ, ರಾಣೇಬೆನ್ನೂರು
ಎಂದಿನಂತೆ ಶಾಲೆಗೆ ಬಂದೊಡನೆ ವಿದ್ಯಾರ್ಥಿಗಳು ನನ್ನಹತ್ರ ಒಡೋಡಿ ಬಂದು ಎದಿರುಸಿರು ಬಿಡುತ್ತಾ ಹೇಳಲು ಸುರುಮಾಡಿದರು- ಸರ್.. ಸರ್.. ಕಂಪ್ಯೂಟರ್ ಕೋಣಿ ಮುಂಬಾಗ್ಲಲ್ಲಿ ಎರಡು ಪಕ್ಷಿ ಬಂದು ಕುಂತಾವ್ರಿ. ನಾವು ಅಂತಾ ಪಕ್ಷಿನ ಎಲ್ಲೂ ನೋಡಿಲ್ರಿ... ಬೇಗ ಬರ್ರಿ ಸರ್ ಹಾರಿ ಹೋಗ್ತಾವು.ಆ ಕ್ಷಣ ನನಗೂ ಆ ಪಕ್ಷಿ ನೋಡೋ ತವಕ ಉಂಟಾಗಿ ಅವರ ಜೊತೆ ನಡೆದೆ.


ಹೌದು.. ವಿದ್ಯಾರ್ಥಿಗಳು ಹೇಳಿದಂತೆ ಅಲ್ಲಿ ಪಕ್ಷಿಗಳು ಕೂತಿದ್ದವು. ಅಲ್ಲಿ ಏನು ಹುಡುಕುತ್ತಿರುವಂತೆ ಕಾಣುತ್ತಿದ್ದವು. ಅವು ಏನು ಮಾಡಬಹುದೆಂದು ತಿಳಿಯಲು ಎದುರು ನೋಡುತ್ತಾ ಸ್ವಲ್ಪ ದೂರದಲ್ಲಿ ಕುಳಿತೆ. ಕೊಠಡಿಯ ಮುಂಬಾಗಿಲಿನ ಶೆಟರ್ಸ ತೆರೆದೆ ಇತ್ತು. ಅಲ್ಲಿ ಗೂಡು ರಚಿಸಲು ಸ್ಥಳ ಪರೀಕ್ಷಿಸುವಂತೆ ಅತ್ತ-ಇತ್ತ ಹಾರಾಡುತ್ತಿದ್ದವು.. ಕೊನೆಗೂ ಅವು ಅಲ್ಲಿ ಸಂಸಾರ ಹೂಡಲು ತೀರ್ಮಾನಿಸಿ ಉದ್ದುದ್ದ ಹಸಿ ಹುಲ್ಲೆಸುಳುಗಳನ್ನು ಕಿತ್ತು ತಂದು ಗೂಡು ರಚಿಸುವಲ್ಲಿ ನಿರತವಾದವು. ಇವುಗಳಿಗೆ ತೊಂದರೆಕೊಡದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಸಿ,ಈ ಪಕ್ಷಿಗಳ ಬಗ್ಗೆ ತಿಳಿಯಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಹಕ್ಕಿಪುಕ್ಕ' ದಲ್ಲಿ ಕುಳಿತೆ. ಆಗಲೇ ಇದು ಮುನಿಯ ಎಂದು ಗೊತ್ತಾಯಿತು.


ಭತ್ತದ ಗದ್ದೆಗಳಲ್ಲಿ ಪೈರು ಕೊಯ್ಲಿಗೆ ಬರುವ ಸಮಯದಲ್ಲಿ ಗುಂಪು-ಗುಂಪಾಗಿ ದಾಳಿ ಇಡುವ ಇವು ಆಕಾಶದಲ್ಲಿ ಸಾಗರದ ಅಲೆಗಳು ತೇಲಿ ಬರುವಂತೆ ಕಾಣುತ್ತಿರುತ್ತದೆ. ನಾಲೆ ನೀರಿನ ಗದ್ದೆ ಬಯಲುಗಳಲ್ಲಿ ವರ್ಷಪೂರ್ತಿ ಕಾಳುಕಡ್ಡಿಗಳು ದೊರೆಯುವುದರಿಂದ ಅಪಾರ ಸಂಖ್ಯೆಯಲ್ಲಿ ಮುನಿಯಾಗಳು ಠಿಕಾಣಿಹೂಡುತ್ತವೆ. ದಾಳಿ ಇಡುವ ಈ ಗುಂಪಿನಲ್ಲಿ ನಾಲ್ಕುನೂರಿನಿಂದ ಐದುನೂರರವರೆಗೂ ಮುನಿಯಗಳಿರುತ್ತವೆ.

ಇದು ಎಲ್ಲೆಡೆ ಸಿಗುವ ಹಕ್ಕಿ. ನಮ್ಮ ಗ್ರಾಮೀಣರು ಅಬ್ಬಲಕ್ಕಿ ಎನ್ನುತ್ತಾರೆ. 'ಎವ್ಸ್' ಪ್ರವರ್ಗಕ್ಕೆ ಸೇರಿದ ಈ ಹಕ್ಕಿಯನ್ನು ಇಂಗ್ಲೀಷ್ನಲ್ಲಿ 'ಸ್ಕ್ಯಾಲಿ ಬ್ರೆಸ್ಟೆಡ್ ಮುನಿಯ' ಎಂದು ಕರೆಯುತ್ತಾರೆ.
ಇವು ಗುಬ್ಬಚ್ಚಿ ಕುಟುಂಬಕ್ಕೆ ಸೇರಿದವುಗಳು. ಕಾಡಲ್ಲದೇ ಹೊಲ, ತೋಟಗಳಲ್ಲಿ ಈ ಪಕ್ಷಿಯ ವಾಸ್ತವ್ಯ.

ಟಿಕೀಂ.... ಟಿಕೀಂ.... ಎಂದು ಉಲಿಯುತ್ತವೆ. ಕೆಲವು ಸಾರೆ ಗೆಜ್ಜೆ ಸಪ್ಪಳದಂತೆ ಮಧುರವಾಗಿ ಕೂಗುತ್ತವೆ.ಗಂಡು-ಹೆಣ್ಣು ನೋಡಲು ಒಂದೇ ತೆರನಾಗಿದ್ದು ನೋಡಲು ಆಕರ್ಷಕವಾಗಿರುತ್ತವೆ. ಕಂದು ಬಣ್ಣ ಹೊಂದಿದ್ದು, ಎದೆ ಭಾಗದಲ್ಲಿ ಮೀನಿನ ಹುರಪೆಯಂತೆ ಬಿಳಿ ಚುಕ್ಕೆಗಳನ್ನು ಹೊಂದಿವೆ. ಇವುಗಳು ಗೀಜುಗ ಹಕ್ಕಿಯ ಎಲ್ಲಾ ಗುಣಲಕ್ಷಣಗಳನ್ನು ಹೊಂದಿವೆ. ಆದರೆ ಗೀಜುಗನಂತೆ ಗೂಡನ್ನು ಹೆಣೆಯುವ ಕಲೆಗಾರಿಕೆ ಮಾತ್ರವಿರುವುದಿಲ್ಲ. ಗೂಡುಗಳನ್ನು ಯರ್ರಾಬಿರ್ರಿಯಾಗಿ ಯದ್ವಾತದ್ವಾವಾಗಿ ಕಟ್ಟಿಕೊಳ್ಳುತ್ತವೆ. ಉದ್ದುದ್ದ ಹಸಿ ಹುಲ್ಲೆಸುಳುಗಳನ್ನು ಕಿತ್ತು ತಂದು ನೆಲದಿಂದ ಸುಮಾರು ಐದರಿಂದ ಆರು ಅಡಿ ಎತ್ತರದಲ್ಲಿ ಹುಲ್ಲೆಸಳುಗಳನ್ನು ಸಿಂಬಿ ಸುತ್ತಿದಂತೆ ದೊಡ್ಡದಾಗಿ ಗೂಡು ರಚಿಸುತ್ತವೆ.

ಗುಬ್ಬಚ್ಚಿ ಗಾತ್ರದಲ್ಲಿರುವ ಇವು ಸಾಮಾನ್ಯವಾಗಿ ಜೊತೆಯಾಗಿಯೇ ಇರುತ್ತವೆ. ಗಟ್ಟಿ ಧಾನ್ಯದ ಬೀಜಗಳನ್ನು ಒಡೆಯಲು ಬಲವಾದ ಕೊಕ್ಕನ್ನು ಹೊಂದಿವೆ. ಮುನಿಯಾಗಳು ರೈತರಿಗೆ ಉಪದ್ರವಕಾರಿಗಳಾಗಿವೆ.


ಜೂನ್ನಿಂದ ಅಕ್ಟೋಬರ್ ವರೆಗೆ ಇವುಗಳ ಸಂತಾನೋತ್ಪತ್ತಿ ಕಾಲ. ಸಂತಾನೋತ್ಪತ್ತಿ ಸಮಯದಲ್ಲಿ ಇವುಗಳಿಗೆ ಸಂಗಾತಿ ಸಿಗುವುದು ಕಷ್ಟ. ಒಂದು ವೇಳೆ ಸಿಕ್ಕರೆ ಅನೋನ್ಯ ಜೀವನ ನಡೆಸುತ್ತವೆ. ಇವು ಸುಮಾರು 4 ಮೊಟ್ಟೆಗಳನ್ನು ಇಡುತ್ತವೆ. 12 ದಿನಗಳ ಕಾಲ ಗಂಡು-ಹೆಣ್ಣು ಸೇರಿ ಮೊಟ್ಟೆಗೆ ಕಾವು ಕೊಡುತ್ತವೆ. 25 ದಿನಗಳ ನಂತರ ಮರಿಗಳ ರೆಕ್ಕೆ ಬಲಿತು ಸ್ವತಂತ್ರವಾಗಿ ಹಾರಾಡಲು ಶುರುಮಾಡುತ್ತವೆ.
ಕಾಡುಗಳ ಪಕ್ಕದಲ್ಲಿ ಗದ್ದೆ ಇದ್ದರೆ ಮುಗಿಯಿತು ಕೊಯ್ಲಿನ ಸಮಯದಲ್ಲಿ ಮುನಿಯಾಗಳು ಗುಂಪುಗಳಾಗಿ ದಾಳಿ ಇಡುತ್ತವೆ. ಇವುಗಳ ಉಪದ್ರವ ತಾಳಲಾರದೇ ಇವುಗಳ ಬೇಟೆಯಾಡಿದ ಉದಾಹರಣೆಗಳುಂಟು.

ಕೊಯ್ಲಿನ ಸಮಯದಲ್ಲಿ ಇವುಗಳಿಗೆ ಗೂಡು ಕಟ್ಟಿಕೊಳ್ಳುವಷ್ಟು ಸಮಯಾವಕಾಶವಿರುವುದಿಲ್ಲ. ಕೆಲವು ಸಾರೆ ಇವು ಪಕ್ಕದ ಕುರುಚಲು ಗಿಡಗಳ ಮೇಲೆ ಕೂತು ಕಾಲ ಕಳೆಯುತ್ತವೆ.
ಭಾರತವಲ್ಲದೆ, ಬಾಂಗ್ಲಾದೇಶ, ಶ್ರೀಲಂಕಾ, ಇಂಡೋನೇಷಿಯಾ,ಫಿಲಿಫೈನ್ಸ ಮತ್ತು ಬರ್ಮಾಗಳಲ್ಲಿ ಈ ಪಕ್ಷಿಯನ್ನು ಕಾಣಬಹುದು. ಕಪ್ಪು ತಲೆಯ ಮುನಿಯಾ, ಕೆಂಪು, ಹಳದಿ, ನೀಲಿಬಣ್ಣದ ಮುನಿಯಾಗಳಿವೆ. ಭಾರತದಲ್ಲಿ ಕೆಮ್ಮುನಿಯ, ಚುಕ್ಕೆ ಮುನಿಯ, ಕರಿ ಮುನಿಯಗಳು ಮಾತ್ರ ಕಾಣಸಿಗುತ್ತವೆ. ಆಫ್ರಿಕಾ ಖಂಡದ 'ಕಾಮರೂನ್ ದೇಶದಲ್ಲಿ ಅನೇಕ ವರ್ಣರಂಜಿತ ಮುನಿಯಾಗಳಿವೆ. ಯುರೋಪಿನಲ್ಲಿ ಪಂಜರದಲ್ಲಿ ಸಾಕುವ ಹಕ್ಕಿಯಾಗಿ ಮುನಿಯ ಜನಪ್ರಿಯವಾಗಿದೆ. ಆದರೆ ಇತ್ತೀಚಿಗೆ ರೈತರು ಬೆಳೆಗಳಿಗೆ ಕೀಟನಾಶಕಗಳನ್ನು ಬಳಸುವುದರಿಂದ ಮುನಿಯಗಳಂತಹ ಎಷ್ಟೋ ಹಕ್ಕಿಗಳ ಸಂತತಿ ಕೊನೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಕರ್ತವ್ಯವಾಗಿದೆ.


ಪೊದೆಗಳಲ್ಲಿ ಗೂಡು ಮಾಡುವ ಈ ಮುನಿಯ ಜೋಡಿಹಕ್ಕಿಗಳು, ಕಾಡನ್ನು ಬಿಟ್ಟು ನಮ್ಮ ಶಾಲೆಯ ಕಂಪ್ಯೂಟರ್ ಕೊಠಡಿಯ ಮುಂಬಾಗಿಲಿನ ಒಂದು ಭಾಗದಲ್ಲಿ ತಮ್ಮ ಸಂಸಾರ ಹೂಡುವಲ್ಲಿ ನಿರತರಾಗಿ, ಇನ್ನೇನು ತಮ್ಮ ಸಂಸಾರದ ಪ್ರೀತಿಯನ್ನು ಗಟ್ಟಿಗೊಳಿಸಿ ಹೊಸ ಸಂತತಿಯನ್ನು ಪ್ರಪಂಚಕ್ಕೆ ನೀಡಬೇಕು ಎನ್ನುವ ಹೊತ್ತಿಗೆ ನಮ್ಮ ಶಾಲೆಯ ಜವಾನ ಕರಿಬಸವ ಕೊಠಡಿಯ ಬಾಗಿಲು ಮುಚ್ಚುವ ಸಮಯದಲ್ಲಿ ಅವುಗಳ ಸಂಸಾರಕ್ಕೆ ಇತಿಶ್ರೀ ಹಾಡಿಬಿಟ್ಟಿದ್ದ.

0 comments:

Post a Comment