ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ : ಭಾಗ 26ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ

ಆ ದಿನ ಕೆಲಸದ ಮೇಲೆ ಹೆಚ್ಚು ಗಮನವಿರಿಸಲು ಸಾಧ್ಯವಾಗಲಿಲ್ಲ. ಸಿಸ್ಟಮ್ ಅಪರೇಟರ್ನನ್ನು ಹುಡುಕಿಕೊಂಡು ಕಂಪ್ಯೂಟರ್ ಕೋಣೆಗೆ ಬಂದಾಗ ಪ್ರತ್ಯಕ್ಷ ಎದ್ದು ನಿಂತು ಅವಳನ್ನು ಬರಮಾಡಿಕೊಂಡ.ಶುಭಾ ಎಲ್ಲಿ ಕಾಣಿಸ್ತಿಲ್ಲ? ಅವಳೆಂದಾಗ, ಅವರು ಈಗಷ್ಟೆ ಹೊರಗೆ ಹೋದ್ರು. ಏನಾದ್ರೂ ಸಹಾಯ ಬೇಕಿತ್ತೆ? ಅಂದ ಪ್ರತ್ಯಕ್ಷ. ಮನಸ್ವಿತಾಳಿಗೆ ಸಂಕೋಚವಾಯಿತು. ಶುಭಾಳ ಜೊತೆಗಾದರೆ ಮುಕ್ತವಾಗಿ ಹೇಳಿಕೊಳ್ಳಬಹುದು. ಆದರೆ ಪ್ರತ್ಯಕ್ಷ ಒಳ್ಳೆಯವನೆ ತನಗಿರುವ ಗೊಂದಲವನ್ನು ನಿವಾರಿಸಿಕೊಳ್ಳುವುದು ಹೇಗೆ? ನೇರವಾಗಿ ವಿಷಯವನ್ನು ಪ್ರಸ್ತಾಪಿಸಿದರೆ ಅಪಾರ್ಥವಾಗುವುದಿಲ್ಲವೆ?


ನನಗೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕು. ಅದರಲ್ಲಿಯೂ ಮುಖ್ಯವಾಗಿ ಇ-ಮೇಲ್ ವಿಷಯದಲ್ಲಿ. ನಾವು ಕಳುಹಿಸೊ ಮೇಲ್ ಎಲ್ಲಿಂದ ಬಂದಿದೆ ಅನ್ನುವುದನ್ನು ತಿಳಿದುಕೊಳ್ಳಬಹುದೆ?
ಅಂದ್ರೆ ವ್ಯಕ್ತಿ ನಮಗೆ ಪರಿಚಿತನಾಗಿದ್ರೆ, ಅವರು ಇಂತಲ್ಲಿಂದಲೇ ಕಳುಹಿಸಿದಾಂತ ಊಹಿಸಬಹುದಲ್ವೆ?
ಮನಸ್ವಿತಾಳಿಗೆ ತನ್ನ ಪ್ರಶ್ನೆಗೆ ನಗು ಬಂತು.
ಆದರೆ ಇದು ಅಪರಿಚಿತರಿಂದ ಬಂದ ಮೇಲ್, ಅದನ್ನು ಪತ್ತೆ ಹಚ್ಚಲು ಸಾಧ್ಯವೇ?
ಪ್ರತ್ಯಕ್ಷ ಆಲೋಚನೆಗೊಳಗಾದ.

ಹಾಗೇ ತಿಳಿದುಕೊಳ್ಳುವುದು ಅಸಾಧ್ಯ. ನಮಗೆ ಗೊತ್ತಿರುವ ವ್ಯಕ್ತಿಗಳೇ ಬೇರೆ ಬೇರೆ ಐಡಿಯಿಂದ ಮೇಲ್ ಕಳುಹಿಸಬಹುದು. ಅವರ ಲಾಂಗ್ವೇಜ್, ಪದ ಬಳಕೆಯನ್ನು ಊಹಿಸಿಕೊಂಡು ಇಂತವರದೇಂತ ಊಹಿಸಬಹುದು ಹೊರತು, ನಿಖರವಾಗಿ ಹೇಳಲಾಗದು
ಅಲ್ಲಿಯವರೆಗೂ 'ಅರವಿಂದ' ನನ್ನು ಹುಡುಕುವ ಒಂದು ಆಸೆಯು ಕಮರಿದ ಹಾಗಾಯಿತು. ಆದರೂ ಏನಾದರೊಂದು ಮೂಲ ಸಿಗದೆ ಇರದೆನ್ನುವ ಆಶಯ ನಶಿಸಲಿಲ್ಲ.

ಸಪೋಸ್, ಮೇಲ್ ಜೊತೆಗೆ ಫೈಲ್ ಅಟ್ಯಾಚ್ ಮಾಡಿದರೆ ಯಾವ ಕಂಪ್ಯೂಟರ್ನಿಂದ ಅದು ಕಳುಹಿಸಿರಬಹೂದೂಂತ ತಿಳಿದುಕೊಳ್ಳಬಹುದೆ?
ಆ ಸಾಧ್ಯತೆ ಕಡಿಮೆ, ಯಾವ ಯು ಆರ್ ಎಲ್ ನಿಂದ ಬಂದಿದೆ ಅನ್ನುವುದು ತಿಳಿದುಕೊಳ್ಳಬಹುದು ಹೊರತು ಯಾವ ಪಿಸಿಯಿಂದ ಬಂತು ಅನ್ನೋದು ಕಷ್ಟ.

ನೋಡಿ, ಈಗ ಪ್ರತಿಯೊಂದು ಪಿಸಿಗೂ ಅದರದೇ ಆದ ಐಡೆಂಟಿಟಿ ಸಂಖ್ಯೆಯಿದೆ. ಹಾಗಿರುವಾಗ ಅದು ಯಾವ ಕಂಪ್ಯೂಟರ್ನಿಂದ ಕಳುಹಿಸಿರೋದೂಂತ ತಿಳಿಯೋದಿಕ್ಕೆ ಸಾಧ್ಯವಿಲ್ಲಾಂತ ಹೇಳ್ತೀರಾ?
ಸಾಧ್ಯತೆಯಿದೆ. ಉದಾಹರಣೆಗೆ ಮುಂಬೈ ಬ್ಲಾಸ್ಟ್ ಬಗ್ಗೆ ಯಾರದೋ ಇಂಟರ್ನೆಟ್ ಉಪಯೋಗಿಸಿ ಭಯೋತ್ಪಾದಕರು ಮೇಲ್ ಕಳುಹಿಸುರುವುದು ಬಹಿರಂಗವಾಗಿದೆ. ಹಾಗೆನೆ... ನೀವು ಓಂ ಆರ್ಗನೈಸೇಶನ್ನ ರೆಕಾರ್ಡ್ ಎಥಿಕಲ್ ಹ್ಯಾಕಿಂಗ್ ಸರ್ಟಿಫಿಕೇಟ್ ಅನ್ನುವ ಕೋರ್ಸು ಇದೆ. ಅದನ್ನು ತಿಳಿದುಕೊಂಡರೆ ನಿಮಗೆ ಬಂದಿರುವ ಮೇಲ್ ಅನ್ನು ಹ್ಯಾಕ್ ಮಾಡಿ ಯಾವ ಏರಿಯಾದಿಂದ ಬಂದಿರೋದಂತ ತಿಳ್ಕೊಳ್ಳಬಹುದು. ಹಾಗೆ ನೀವು ಹ್ಯಾಕ್ ಮಾಡ್ತಾ ಇರೋದು ಒಳ್ಳೆಯ ಉದ್ದೇಶಕ್ಕೆ ಮಾತ್ರ ಆಗಿರಬೇಕು.

ಮನಸ್ವಿತಾಳ ಮುಖದಲ್ಲಿ ತೆಳುವಾದ ನಗುವೊಂದು ಮೂಡಿತು. ಅಂತು 'ಅನಾಮಿಕ'ನಾಗಿರುವ 'ಅರವಿಂದ್'ನನ್ನು ಪತ್ತೆ ಹಚ್ಚಲು ಸಾಧ್ಯವಿದೆಯೆಂದಾಯಿತಲ್ಲವೆ? ಮನಸ್ವಿತಾ ಮುಂದುವರಿಸು.... ಅಂದಿತು ಮನಸ್ಸು.
ಹಾಗಾದರೆ ಅದನ್ನು ಕಲಿಬೇಕಾದರೆ ಎಲ್ಲಿ ಕಲಿಸ್ತಾರೆ?
ಪ್ರತ್ಯಕ್ಷ ಆಲೋಚನೆಗೊಳಗಾದ.

ಎಲ್ಲಾ ಕಡೆ ಅದನ್ನು ಕಲಿಯುವುದಕ್ಕೆ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಕೆಲವೊಂದು ಕಡೆ ಕಲಿಸ್ತಾರೆ.
ಅವನಿಗೆ ಕೃತಜ್ಞತೆ ಸೂಚಿಸಿ ಹೊರಗೆ ಬಂದವಳ ಮುಖದಲ್ಲಿ ಗೆಲುವಿರುವುದನ್ನು ಗಮನಿಸಿದ ಸಹೋದ್ಯೋಗಿಗಳು ವಿಚಿತ್ರವೆಂಬಂತೆ ದಿಟ್ಟಿಸಿದರು.
ಸಾಮಾನ್ಯವಾಗಿ ಅವಳೇ ಯಾವುದಾದರೂ ಕೆಲಸವಿರುತ್ತಿದ್ದರೆ ಕರೆಸುತ್ತಿದ್ದಳೇ ವಿನಃ ತಾನಾಗಿಯೇ ಉಳಿದವರನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ.
ಮನಸ್ವಿತಾ ತನ್ನ ಕ್ಯಾಬಿನ್ಗೆ ಬಂದು ಮೊದಲಿಗೆ ಕಂಪ್ಯೂಟರ್ ಪರದೆಯ ಮೇಲೆ ಇಂಟರ್ ನೆಟ್ ಅನ್ನು ಕ್ಲಿಕ್ ಮಾಡಿದಳು. ಅರವಿಂದ್ನ ಮೇಲ್ಗಾಗಿ ಕಣ್ಣು ತಡಕಾಡಿತು. ಯಾವುದೇ ಮೇಲ್ಗಳು ಕಾಣಿಸಲಿಲ್ಲ. ಹಿಂದೆ ಆತ ಕಳುಹಿಸಿದ ಮೇಲ್ ತೆರೆದು ಓದಿಕೊಂಡಳು. 'ಅರವಿಂದ್' ಸುಲಭದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆನ್ನುವುದು ಖಚಿತವಾಯಿತು.

ಆದರೆ ಹ್ಯಾಕಿಂಗ್ ಬಗ್ಗೆ ಕಲಿಯಲು ಬೆಂಗಳೂರಿಗೆ ಹೋಗಬೇಕು. ನಿಖಿಲ್ ಅನುಮತಿ ನೀಡಬಹುದೆ? ಅನ್ನುವುದು ಖಚಿತವಿರಲಿಲ್ಲ. ಆದರೂ ಆತನನ್ನು ಕೇಳುವುದರಲ್ಲಿ ತಪ್ಪಿಲ್ಲವೆಂದುಕೊಂಡು ಅವನ ಕ್ಯಾಬಿನ್ಗೆ ನಡೆದಳು.
ಆತ ಮುಗುಳ್ನಗೆಯಿಂದ ಸ್ವಾಗತಿಸಿ ಅವಳನ್ನು ಕುಳಿತುಕೊಳ್ಳುವಂತೆ ಸೂಚಿಸಿದ. ಅವನ ಮುಂದಿದ್ದ ಪ್ಯಾಡ್ ಮೇಲೆ ಅರವಿಂದ ಎಂಬ ಅಕ್ಷರ ಬರೆದಿರುವುದು ಅವಳಿಗೆ ಗೋಚರವಾಗಲಿಲ್ಲ. ಅವಳು ತಾನು ಬಂದಿರುವ ವಿಷಯವನ್ನು ಪ್ರಸ್ತಾಪಿಸಿದಳು. ನಿಖಿಲ್ ಮತ್ತೆ ನೋಡೋಣವೆನ್ನುವಂತೆ ಮಾತು ತೇಲಿಸಿದ.

ಮನಸ್ವಿತಾ ಅರವಿಂದನ ಶೋಧನೆಯಲ್ಲಿ ತೊಡಗಿಕೊಂಡಾಗ ಅವಳಗರಿವಿಲ್ಲದಂತೆ ಲವಲವಿಕೆ ಮೂಡಿತು. ಆಫೀಸ್ನ ಜಂಜಡದ ನಡುವೆಯೂ ಪ್ರತ್ಯಕ್ಷ ಹೇಳಿದ ಕೋರ್ಸು ತಿಳಿದುಕೊಂಡು ಸ್ವಲ್ಪ ಸಮಯದ ಮಟ್ಟಿಗಾದರೂ ಬೆಂಗಳೂರಿಗೆ ಹೋಗಿ ಬರಬೇಕೆಂದು ನಿರ್ಧರಿಸಿದಳು.
ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ನಿಖಿಲ್ನನ್ನು ಹೇಗಾದರೂ ಮಾಡಿ ಒಪ್ಪಿಸಬೇಕೆನ್ನುವ ನಿರ್ಧಾರವೂ ಇತ್ತು. ಕಂಪ್ಯೂಟರ್ ತೆರೆದು ಗೂಗ್ಲ್ ಸರ್ಚ್ ಗೆ ಹೊರಟವಳು ಆ ಪ್ರೋಗ್ರಾಂ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಟೈಪ್ ಮಾಡಿ ಸರ್ಚ್ ಕೊಟ್ಟಳು. ಅದು ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಸೈಟ್ ಐಡಿಯಿಂದ ಹಿಡಿದು ಎಲ್ಲವನ್ನು ತೆರೆಯಿತು. ನಿಧಾನಕ್ಕೆ ಒಂದೊಂದೇ ಮಾಹಿತಿಯನ್ನು ಓದಿಕೊಂಡು ವಿಷಯಗಳನ್ನು ಕಲೆ ಹಾಕುತ್ತಿರುವಾಗ ಅದನ್ನು ಆನ್ಲೈನ್ನಲ್ಲಿಯೇ ಕಲಿತುಕೊಳ್ಳಬಹುದೆನ್ನುವುದು ತಿಳಿಯಿತು. ಅದಕ್ಕಾಗಿ ಅದರ ಸಂಪೂರ್ಣ ವಿವರಗಳನ್ನು ಕ್ಲಿಕ್ ಮಾಡಿ ತಿಳಿದುಕೊಂಡಳು.
... ಮುಂದುವರಿಯುವುದು...

0 comments:

Post a Comment