ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಯಾವುದೇ ಮುಚ್ಚು ಮರೆಯಿಲ್ಲದೇ ನೇರವಾಗಿ ಹೇಳ ಬಹುದಾದರೆ ನಿಜಕ್ಕೂ ಅವರು ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಕಳಂಕ ವ್ಯಕ್ತಿ, ತಮ್ಮ ಇಡೀ ಆಡಳಿತ ಅವಧಿಯಲ್ಲಿ ಎಂದು ಕೂಡ ಬೇರೆಯವರಿಂದ ಹೇಳಿಸಿಕೊಂಡ ಜಾಯಮಾನದವರಲ್ಲ, ಭ್ರಷ್ಟಾಚಾರದ ಸಮೀಪ ಸುಳಿದವರಂತು ಅಲ್ಲವೇ ಅಲ್ಲ, ಭಾರತ ದೇಶ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದಾಗ ತಮ್ಮ ಅತ್ಯಂತ ಬುದ್ದಿವಂತಿಕೆಯಿಂದ ಸಮಸ್ಯೆಗಳನ್ನು ಬಗೆ ಹರಿಸಿದ ಕೀರ್ತಿ ಅವರದ್ದು, ಅವರ ದೇಹದ ಎತ್ತರ ಕುಳ್ಳಗಿದ್ದರು ಸಾಧನೆ ಮಾತ್ರ ಬಲು ಎತ್ತರ, ಅಷ್ಟಕ್ಕು ಅವರ್ಯಾರು ಎನ್ನುತ್ತಿರಾ, ಅವರು ಬೇರ್ಯಾರು ಅಲ್ಲ ಅವರೇ ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಗಳು.


ಭಾರತ ದೇಶ ಹಲವಾರು ಪ್ರಧಾನಿಗಳನ್ನು ಕಂಡಿದೆ. ಅವರಲ್ಲಿ ಪ್ರಾಮಾಣಿಕರು ಸಿಗುವುದು ಕೆಲವೇ ಮಂದಿ. ಆ ಕೆಲವರಲ್ಲಿ ಇವರು ಕೂಡ ಒಬ್ಬರು. ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಗಳು ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದು ಕೇವಲ 19 ತಿಂಗಳು ಮಾತ್ರ. ಈ ಅಲ್ಪಾವಧಿಯಲ್ಲೇ ಅನೇಕ ಸಾಧನೆಗಳನ್ನು ಮಾಡಿದ ಹೆಗ್ಗಳಿಕೆ ಶಾಸ್ತ್ರಿಗಳಿಗೆ ಸಲ್ಲುತ್ತದೆ.
1904 ಅಕ್ಟೋಬರ್ 2 ರಂದು ಕಾಶಿಯಿಂದ ಸ್ವಲ್ಪ ದೂರದಲ್ಲೇ ಇರುವ ಮುಘಲ್ಸರಾಯ್ ಎಂಬ ಸ್ಥಳದಲ್ಲಿ ಜನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಗಳು ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಗಳ ಕಡೆ ಗೀಳು ಹತ್ತಿಸಿಕೊಂಡವರು, ಅದರಲ್ಲೂ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕರ ವ್ಯಕ್ತಿತ್ವಕ್ಕೆ ಮಾರು ಹೋಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು, ಸದಾ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಒಳಗೊಂಡಂತಹ ಪುಸ್ತಕಗಳನ್ನು ಓದುವುದರಲ್ಲೇ ಮಗ್ನರಾಗುತ್ತ, ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶಕ್ಕಾಗಿ ದುಡಿದರು.

ಮಹಾತ್ಮ ಗಾಂಧಿಜೀಯವರು ಆರಂಭಿಸಿದ್ದ ಅಸಹಕಾರ ಚಳುವಳಿ ಮತ್ತು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾದರು.
ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿದ ಪರಿಣಾಮ ಅನೇಕ ಬಾರಿ ಜೈಲು ಶಿಕ್ಷೆಗೆ ಗುರಿಯಾಗಿ ಹಲವು ವರ್ಷಗಳ ಕಾಲ ಜೈಲಿನಲ್ಲೇ ಕಾಲ ಕಳೆಯಬೇಕಾಯಿತು, ಆದರು ಎದೆಗುಂದಲಿಲ್ಲ ಕಾರಣ ದೇಶಕ್ಕಾಗಿ ತಾನೇ ಶಿಕ್ಷೆ ಅನುಭವಿಸುತ್ತಿರುವುದು ಎಂಬ ಭಾವನೆ ಶಾಸ್ತ್ರಿಗಳ ಮನದಲ್ಲಿತ್ತು. ಕೇಂದ್ರ ಸಚಿವ ಮತ್ತು ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು ಕೂಡ ಅತ್ಯಂತ ಸರಳ ರೀತಿಯಲ್ಲಿ ಜೀವನ ನಡೆಸುವ ಮೂಲಕ ಎಲ್ಲರಿಗು ಆದರ್ಶ ವ್ಯಕ್ತಿಯಾಗಿದ್ದರು. ತನ್ನ ಕೈಗೆ ಅಧಿಕಾರ ಸಿಕ್ಕಿದೆಯೆಂಬ ದರ್ಪ, ಅಹಂಕಾರವಿಲ್ಲದೆ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿ ಎಲ್ಲರ ಗೌರವಕ್ಕೆ ಪಾತ್ರರಾದ ವ್ಯಕ್ತಿ ಶಾಸ್ತ್ರಿಗಳು, ಸರಳ ಬದುಕಿಗೆ ಮಾರು ಹೋಗಿದ್ದ ಶಾಸ್ತ್ರಿಗಳು ಪ್ರಧಾನಿ ಮಂತ್ರಿಯಾಗಿದ್ದರು ಕೂಡ ತಮ್ಮ ಮಕ್ಕಳನ್ನು ಸರ್ಕಾರಿ ಬಸ್ಸಿನಲ್ಲೇ ಕಳುಹಿಸುತ್ತಿದ್ದರು.

ಸರ್ಕಾರದ ಹಣವನ್ನು ಎಂದು ದುರುಪಯೋಗ ಪಡಿಸಿಕೊಳ್ಳುವುದಾಗಲಿ, ದುಂದು ವೆಚ್ಚ ಮಾಡುವುದಾಗಲಿ ಮಾಡಲಿಲ್ಲ, ಶಾಸ್ತ್ರಿಗಳು ಕೇಂದ್ರ ಸಚಿವರಾಗಿದ್ದಾಗ ರೈಲ್ವೇ ಅಪಘಾತ ಒಂದು ನಡೆಯುತ್ತದೆ. ಆ ಸಮಯದಲ್ಲಿ ಅಪಘಾತದ ನೈತಿಕ ಹೊಣೆ ಹೊತ್ತು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅಧಿಕಾರ ಆಸೆ ತಮಗಿಲ್ಲ ಎನ್ನುವುದನ್ನು ಮತ್ತು ತಮ್ಮ ವ್ಯಕ್ತಿತ್ವ ಏನೆಂಬುವುದನ್ನು ಸಾಬೀತು ಪಡಿಸಿದ್ದರು. ಶಾಸ್ತ್ರಿಗಳು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭಾರತದಲ್ಲಿ ಗಲಭೆ, ಅಹಿತಕರ ಘಟನೆಗಳನ್ನು ಸೃಷ್ಟಿಸುವ ಸಲುವಾಗಿ ಪಾಕ್ ಸಂಚು ರೂಪಿಸಿ ವಿನಾಕಾರಣ ಭಾರತದೊಳಗೆ ಯುದ್ದ ಮಾಡಲು ತನ್ನ ಸೈನಿಕರನ್ನು ಕಳುಹಿಸಿದಾಗ ಶಾಸ್ತ್ರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಭಾರತ ಸೇನೆಯ ಮುಖ್ಯಸ್ಥರಿಗೆ ಸಂಪೂರ್ಣ ಸಹಕಾರ ನೀಡಿ ಧೈರ್ಯದಿಂದ ಪಾಕ್ ಕುತಂತ್ರವನ್ನು ಎದುರಿಸಿ ಪಾಕ್ ಸೈನಿಕರನ್ನು ಭಾರತದಿಂದ ಹೊರದೊಡಿಸಿ ವ್ಯವಸ್ಥಿತವಾಗಿ ಪರಿಸ್ಥಿತಿ ನಿಭಾಯಿಸಿದ ಕೀರ್ತಿಶಾಸ್ತ್ರಿಗಳದ್ದು.
ಆಲಿಪ್ತ ದೇಶಗಳ ಒಕ್ಕೂಟ ಸಭೆಯಲ್ಲಿ ಭಾಗವಹಿಸಿ ಭಾರತ ದೇಶದ ನಿಲುವನ್ನು ಪ್ರತಿಪಾದಿಸಿ ಇತರೆ ದೇಶಗಳ ಬೆಂಬಲ ಹಾಗೂ ಸ್ನೇಹ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಷ್ಕೆಂಟ್ ಒಪ್ಪಂದದ ಸಲುವಾಗಿ ಇತರೆ ರಾಷ್ಟ್ರಗಳ ಪ್ರಮುಖರ ಜೊತೆ ಚರ್ಚಿಸಲು ರಷ್ಯಾ ದೇಶಕ್ಕೆ ಹೋಗಿದ್ದ ಶಾಸ್ತ್ರಿಗಳು ಮರಳಿ ಭಾರತಕ್ಕೆ ಬಂದದ್ದು ಶವವಾಗಿ, 1966 ಜನವರಿ 11 ರಂದು ಕೊನೆಯುಸಿರು ಎಳೆದಿದ್ದರು, ಅವರು ಯಾವ ಕಾರಣಕ್ಕಾಗಿ ಮರಣ ಹೊಂದಿದರು ಎಂಬ ಬಗ್ಗೆ ಇಂದು ಕೂಡ ಸ್ಪಷ್ಟವಾದ ಮಾಹಿತಿ ಯಾರ ಬಳಿಯು ಇಲ್ಲ, ಆ ಬಗ್ಗೆ ತನಿಖೆ ನಡೆಸಿ ಜನ ಸಾಮಾನ್ಯರಿಗೆ ಉತ್ತರಿಸಿ ಬೇಕಾಗಿದ್ದ ಅಂದಿನ ಸರಕಾರದ ಬೇಜಾಬ್ದಾರಿಯಿಂದ ಅವರ ಸಾವಿನ ಕುರಿತ ರಹಸ್ಯ ಇನ್ನು ರಹಸ್ಯವಾಗಿಯೇ ಉಳಿದಿದೆ.
ಇಂದು ಶಾಸ್ತ್ರಿಗಳಂತಹ ವ್ಯಕ್ತಿತ್ವ ಹೊಂದಿದ ಜನಪ್ರತಿನಿಧಿಗಳು ಸಿಗುವುದು ತೀರ ಕಷ್ಟ, ಇಂದು ಜನಪ್ರತಿನಿಧಿಗಳೆಂದು ಕರೆಸಿಕೊಳ್ಳುವವರು ಸದಾ ಭ್ರಷ್ಟಾಚಾರದ ಸಮೀಪದಲ್ಲೇ ವಾಸಿಸುತ್ತಾರೆ. ಜನ ಸಾಮಾನ್ಯರ ಕಲ್ಯಾಣಕ್ಕೆ ವಿನಿಯೋಗಿಸ ಬೇಕಾದ ಸರ್ಕಾರಿ ಹಣ ಕಬಳಿಸುವ ಕಡೆ ಗಮನ ಕೇಂದ್ರಿಕರಿಸಿರುತ್ತಾರೆ. ಪ್ರತಿ ಕ್ಷಣವು ಸ್ವಾರ್ಥದಿಂದ ಆಲೋಚಿಸುತ್ತ ಅದೇ ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ, ಜನರ ಹಿತವನ್ನು ಮರೆತು ತಮ್ಮ ಕುಟುಂಬದ ಹಿತಕ್ಕಾಗಿ ಶ್ರಮಿಸುತ್ತಾರೆ. ಆದರೆ ಶಾಸ್ತ್ರಿಗಳು ಎಂದು ಕೂಡ ಅಧಿಕಾರ ಪಡೆಯಲು ಅಡ್ಡದಾರಿ ಹಿಡಿದವರಲ್ಲ, ಸಿಕ್ಕ ಅಧಿಕಾರವನ್ನು ಸ್ವಂತ ಹಿತಕ್ಕಾಗಿ ಬಳಸಿಕೊಂಡವರಲ್ಲ, ಪ್ರಧಾನಿಯಾದರು ಕೂಡ ಜನ ಸೇವಕ ಎಂಬುವುದನ್ನು ಎಂದು ಮರೆತಿರಲಿಲ್ಲ, ಸ್ವಾಭಿಮಾನಕ್ಕೆ ದಕ್ಕೆಯಾದರೆ ಕ್ಷಣದಲ್ಲಿ ಅಧಿಕಾರ ತ್ಯಜಿಸುವ ಗುಣ ಅವರದ್ದಾಗಿತ್ತು.


ದುರಂತವೆಂದರೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿಯಿಡಿದು ಆಡಳಿತ ನಡೆಸಿದ ಇಲ್ಲಿಯವರೆಗಿನ ಸರ್ಕಾರಗಳು ಅಪಾರ ದೇಶ ಪ್ರೇಮಿ, ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸುತ್ತ ಬಂದಿವೆ. ಕೆಲ ಸೀಮಿತ ಮಾಜಿ ಪ್ರಧಾನ ಮಂತ್ರಿಗಳಿಗೆ ಜೋತು ಬಿದ್ದಿರುವ ಸರಕಾರಗಳು ಹಾಗೂ ಜನಪ್ರತಿನಿಧಿಗಳು ಶಾಸ್ತ್ರಿಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೆಲ ಮಾಜಿ ಪ್ರಧಾನಿಗಳ ಹುಟ್ಟು ಹಬ್ಬವನ್ನು ಮಾತ್ರ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ, ಕೋಟಿ ಗಟ್ಟಲೆ ಸರಕಾರಿ ಹಣ ಖರ್ಚು ಮಾಡಿ ಅವರ ಹೆಸರಿನಲ್ಲಿ ಶುಭಾಶಯ ಕೋರುವ ಪುಟ ಗಟ್ಟಲೆ ಜಾಹೀರಾತನ್ನು ಮಾಧ್ಯಮಗಳಿಗೆ ನೀಡುತ್ತದೆ. ಆದರೆ ಶಾಸ್ತ್ರಿಗಳ ಹುಟ್ಟು ಹಬ್ಬದಂದು ಅವರ ಹೆಸರಲ್ಲಿ ಜಾಹೀರಾತು ನೀಡುವುದಿರಲಿ ಕನಿಷ್ಟ ಪಕ್ಷ ಅವರನ್ನು ನೆನಪಿಸಿಕೊಳ್ಳುವ ಸೌಜನ್ಯವನ್ನು ತೋರುತ್ತಿಲ್ಲ.


ಇಲ್ಲಿಯವರೆಗೂ ಕೇಂದ್ರದಲ್ಲಿ ಆಡಳಿತ ನಡೆಸಿದ ಸರಕಾರಗಳು ಜಾರಿಗೆ ತಂದ ಬಹುತೇಕ ಎಲ್ಲಾ ಯೋಜನೆಗಳಿಗೆ ಕೆಲ ಸೀಮಿತ ಮಾಜಿ ಪ್ರಧಾನ ಮಂತ್ರಿಗಳ ಹೆಸರನ್ನು ಮಾತ್ರ ಇಟ್ಟು ಉಳಿದ ಮಾಜಿ ಪ್ರಧಾನಿಗಳನ್ನು ಪಕ್ಕಕ್ಕೆ ತಳ್ಳಿದ್ದಾರೆ, ಅಣೆಕಟ್ಟುಗಳಿಗೆ, ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಿಗೆ, ವಿಶ್ವ ವಿದ್ಯಾಲಯಗಳಿಗೆ, ಬಸ್, ರೈಲ್ವೆ, ವಿಮಾನ ನಿಲ್ದಾಣಗಳಿಗೆ, ಕ್ರೀಡಾಂಗಣಗಳಿಗೆ, ಸಮುದಾಯ ಭವನಗಳಿಗೆ, ಹೊಸದಾಗಿ ಜಾರಿಗೆ ತರುವ ಯೋಜನೆಗಳಿಗೆ ಕೆಲವೇ ಮಾಜಿ ಪ್ರಧಾನಿಗಳ ಹೆಸರಿಡುವ ಮೂಲಕ ಸರಕಾರ ರಾಜಕೀಯ ಮಾಡುತ್ತಿದೆ.
ದೇಶದಲ್ಲಿರುವ ಎಷ್ಟು ರಸ್ತೆಗಳಿಗೆ ತಾನೇ ಲಾಲ್ ಬಹುದ್ದೂರ್ ಶಾಸ್ತ್ರಿಗಳ ಹೆಸರಿಡಲಾಗಿದೆ ? ಎಷ್ಟು ಉದ್ಯಾನವನಗಳಿಗೆ, ಸಮುದಾಯ ಭವನಗಳಿಗೆ ತಾನೇ ಶಾಸ್ತ್ರಿಗಳ ಹೆಸರನ್ನು ನಾಮಕರಣ ಮಾಡಲಾಗಿದೆ ? ಎಷ್ಟು ಸ್ಥಳಗಳಲ್ಲಿ ತಾನೇ ಶಾಸ್ತ್ರಿಯವರ ಪುತ್ರಿಮೆಯನ್ನು ಸ್ಥಾಪಿಸಲಾಗಿದೆ ? ಬೆರಳಣಿಕೆಯಷ್ಟು ಸ್ಥಳಗಳಿಗೆ ಮಾತ್ರ ಶಾಸ್ತ್ರಿಗಳ ಹೆಸರಿಡಲಾಗಿದೆ, ಆದರೆ ಬೇರೆ ಮಾಜಿ ಪ್ರಧಾನಿಗಳ ಹೆಸರಿನಲ್ಲಿ ನೂರಾರು ಯೋಜನೆಗಳು ಜಾರಿಯಾಗಿವೆ, ಸರಕಾರದ ವತಿಯಿಂದಲೇ ಹಲವು ಸ್ಥಳಗಳಲ್ಲಿ ಹಲವು ಮಾಜಿ ಪ್ರಧಾನಿಗಳ ಪ್ರತಿಮೆಗಳು ಸ್ಥಾಪನೆಯಾಗಿವೆ, ನಗರಗಳಷ್ಟೇ ಅಲ್ಲದೇ ಹಳ್ಳಿಯ ಮಟ್ಟದಲ್ಲಿನ ಅನೇಕ ರಸ್ತೆಗಳಿಗೆ ಹೆಸರಿಡಲಾಗಿದೆ. ಆದರೆ ಶಾಸ್ತ್ರಿಗಳನ್ನು ಮಾತ್ರ ಕಡೆಗಣಿಸುತ್ತಾ ಸಾಗುತ್ತಿದ್ದಾರೆ ಇವರ ಈ ನಡವಳಿಕೆಗೆ, ನಿರ್ಲಕ್ಷ್ಯ ಮನೋಭಾವಕ್ಕೆ ಏನೇನ್ನ ಬೇಕು ಅರ್ಥವಾಗುತ್ತಿಲ್ಲ ?


ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷಗಳು ಕೂಡ ಕೇಂದ್ರದಲ್ಲಿ ಆಡಳಿತ ನಡೆಸಿವೆ, ತಮ್ಮ ಅಧಿಕಾರವಧಿಯಲ್ಲಿ ಶಾಸ್ತ್ರಿಗಳಿಗೆ ಹೇಳಿಕೊಳ್ಳುವಷ್ಟು ಬೆಲೆ ನೀಡದೆ ನಿರ್ಲಕ್ಷ್ಯತನವನ್ನು ತೋರಿದ್ದಾರೆ.ಸರಕಾರಗಳು ಕಣ್ತೆರೆಯ ಬೇಕು. ಲಾಲ್ ಬಹದ್ದೂರ್ ಶಾಸ್ತ್ರಿಗಳನ್ನು ರಾಷ್ಟ್ರ ನಾಯಕರಂತೆ ಕಾಣಬೇಕು. ಮುಂದೆ ಜಾರಿಗೆ ತರುವ ಹೊಸ ಯೋಜನೆಗಳಿಗೆ, ಪ್ರಮುಖ ರಸ್ತೆಗಳಿಗೆ, ಪ್ರಮುಖ ಉದ್ಯಾನವನಗಳಿಗೆ, ಸರಕಾರಿ ಕಾಲೇಜುಗಳಿಗೆ ಅವರ ಹೆಸರಿಡ ಬೇಕು. ಕೇಂದ್ರದಲ್ಲಿ ಆಗಲಿ ರಾಜ್ಯಗಳಲ್ಲಾಗಲಿ ಕಾಂಗ್ರೆಸ್, ಬಿಜೆಪಿ, ಇತರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸುತ್ತ ಪ್ರಾಮಾಣಿಕ, ನಿಸ್ವಾರ್ಥದಿಂದ ದೇಶಕ್ಕಾಗಿ ದುಡಿದ ಸ್ವಾತಂತ್ರ್ಯ ಹೋರಾಟಗಾರರನ್ನು, ಜನ ಪ್ರತಿನಿಧಿಗಳನ್ನು ಗೌರವಿಸುವುದರ ಜೊತೆಗೆ ಯಾವುದೇ ಪಕ್ಷ ಪಾತ ಮಾಡದೇ ಅವರ ಹೆಸರನ್ನು ವಿವಿಧ ಯೋಜನೆಗಳಿಗೆ, ಸ್ಥಳಗಳಿಗೆ ಇಡುವ ಮೂಲಕ ಅವರು ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು.

ದೇವಲಪಲ್ಲಿ ಎನ್.ಗಿರೀಶ್
ಬೆಂಗಳೂರು 7760313833

0 comments:

Post a Comment