ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ - ಭಾಗ 32 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಪ್ರಿಯ ಓದುಗರೇ...ಕಳೆದ 30 ಸಂಚಿಕೆಗಳಿಂದ ಈ ಕನಸು.ಕಾಂ ಅನು ಬೆಳ್ಳೆ ಅವರ ಎಲ್ಲಿರುವೆ ಕುಣಿಸದೆ ಕರೆವೆನ್ನ ಕೊರಳೇ...? ಧಾರಾವಾಹಿಯನ್ನು ಪ್ರಕಟಿಸುತ್ತಿದೆ. ಓದುಗರಾದ ತಮ್ಮ ಅಭಿಪ್ರಾಯವೂ ಚೆನ್ನಾಗಿಯೇ ಇವೆ... ಇನ್ನು ಕೆಲವೇ ಕಂತುಗಳಲ್ಲಿ ಈ ಧಾರಾವಾಹಿ ಕೊನೆಯಾಗಲಿವೆ...ಅದಕ್ಕೂ ಮೊದಲು ತಮ್ಮಲ್ಲೊಂದು ವಿನಂತಿ. ಇದರ ಕೊನೆ ನೀವು ನೀಡಬೇಕು...ಧಾರಾವಾಹಿ ನಮ್ಮದು...ಕೊನೆ ನಿಮ್ಮದು...ಉತ್ತಮ ಬರಹಕ್ಕೆ ಬಹುಮಾನವಿದೆ. ಬರಹಗಳು ಇದೇ ತಿಂಗಳ ಕೊನೆ ಅಂದರೆ ಡಿಸೆಂಬರ್ 31ರೊಳಗೆ editor@ekanasu.com ಗೆ ನುಡಿ/ಬರಹ ತಂತ್ರಾಂಶದಲ್ಲಿ ಕಳುಹಿಸಿ...ಜೊತೆಗೆ ಭಾವಚಿತ್ರವಿರಲಿ...


ಜವಾಬ್ದಾರಿಯುತವಾಗಿ ಅವಳು ಮಾತನಾಡುವಾಗ ನಿಖಿಲ್ಗೆ ಹೆಮ್ಮೆಯೆನಿಸಿತು. ಆದರೆ ಒಂದು ಮಾತ್ರ ನಿಗೂಢವಾಗಿತ್ತು. ಈ ಹೆಣ್ಣಿಗೆ ಆಸೆ ಆಕಾಂಕ್ಷೆಗಳಿಲ್ಲವೆ? ಎಲ್ಲರಂತೆ ತಾನೂ ಒಂದು ದಡ ಸೇರಬೇಕೆನ್ನುವುದು ಗೊತ್ತಿಲ್ಲವೆ? ಪ್ರಪೋಸ್ ಮಾಡಿದರೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದಷ್ಟು ಮುಗ್ಧತೆಯೆ? ಮನಸ್ಸಿನೊಳಗೆ ನಕ್ಕ.

ಅಶುತೋಶ್ ಬೆಂಗಳೂರಿಗೆ ಬರುವ ಸಂಭ್ರಮದಲ್ಲಿ ಇಂದ್ರಸೇನ್ ಕುಟುಂಬ ಬಹಳ ಲವಲವಿಕೆಯಿಂದ ಓಡಾಡಿತು. ಎಷ್ಟೆಂದರೂ ಆತ್ಮರಾಮ್ನ ದೇಶಸೇವೆಯನ್ನು ಬಹಳವಾಗಿ ಸ್ಮರಿಸಿದ ಕುಟುಂಬ, ಇದ್ದೊಬ್ಬ ಮಗನನ್ನು ತಮ್ಮ ಸನಿಹವೇ ಉಳಿಸಿಕೊಳ್ಳುವಲ್ಲೆ ಸೋತಿರುವುದು ವಿಷಾದನೀಯ. ಹಾಗಂತ ಅದರಿಂದ ಹಾಳಾಗದಿದ್ದರೂ ಗೆದ್ದಿರುವುದೇ ಹೆಚ್ಚು. ತಂದೆಯಂತೆ ಮಗ ಕೂಡ ದೇಶಸೇವೆಗೆ ಟೊಂಕಕಟ್ಟಿ ನಿಂತಾಗ ಹೆಮ್ಮೆಯೆನಿಸಿತು. ಬರೀ ವ್ಯವಹಾರದಲ್ಲಿ ಮುಳುಗಿ ಕರ್ತವ್ಯಚ್ಯುತಿ ತಂದುಕೊಳ್ಳುವುದಕ್ಕಿಂತ ಈ ರೀತಿಯ ದೇಶ ರಕ್ಷಣೆ ಅವನಿಗೆ ಕಂಡಿದ್ದು ಅವನ ಬಹು ದೊಡ್ಡ ಗುಣಗಳಲ್ಲಿ ಒಂದು.

ನಿಖಿಲ್ ತನ್ನ ಜವಾಬ್ದಾರಿಗಳನ್ನೆಲ್ಲಾ ಮನಸ್ವಿತಾಳ ಹೆಗಲಿಗೆ ಹೊರಿಸಿದರೂ ಅದರಿಂದ ನುಣುಚಿಕೊಳ್ಳುವಂತೆಯೇ ಇರಲಿಲ್ಲ. ಆಫೀಸಿನಿಂದ ಹೊರಗುಳಿದರೂ ಒಂದಲ್ಲ ಹತ್ತು ಬಾರಿಯಾದರೂ ಅವಳನ್ನು ಟೆಲಿಪೋನ್ ಮೂಲಕ ಸಂಪರ್ಕಿಸುತ್ತಿದ್ದ.
ಅಶುತೋಶ್ ಬಂದಾಗಲೂ ಸ್ವಲ್ಪ ಸಮಯದವರೆಗೆ ಅವನ ಜೊತೆಗೆ ಓಡಾಡುವುದಿದ್ದರೂ ತನ್ನ ಕರ್ತವ್ಯಗಳನ್ನೆಂದೂ ಮರೆಯುವಂತಿಲ್ಲ. ಅಶುತೋಶ್ ಬೆಂಗಳೂರಿಗೆ ಬಂದಿರುವ ಮಾಹಿತಿ ದೊರಕಿದ ಕೂಡಲೇ ಮನಸ್ವಿತಾ ತಾನು ಒಮ್ಮೆ ಅವನನ್ನು ಮುಖತಃ ಭೇಟಿಯಾಗಬೇಕೆಂದು ನಿರ್ಧರಿಸಿದಳು. ನಿಖಿಲ್ ತಾನಾಗಿಯೇ ತನ್ನನ್ನು ಕರೆದುಕೊಂಡು ಹೋಗಿ ಅಶುತೋಶ್ನನ್ನು ಭೇಟಿ ಮಾಡಿಸುತ್ತಾನೆಂದು ತಿಳಿದಿದ್ದು ಸುಳ್ಳಾಯಿತು.

ಅಶುತೋಶ್ನನ್ನು ಕಂಡು ಮಾತನಾಡುವುದಕ್ಕಿಂತಲೂ ತನಗೆ ಅನಾಮಿಕವಾಗಿ ಮೇಲ್ ಕಳುಹಿಸುತ್ತಿರುವವನು ಅವನೆಯೆ? ಏನೊ ಅನ್ನುವುದನ್ನು ನೋಡಬೇಕಿತ್ತು. ಮುಖದ ಭಾವನೆಯನ್ನು ಗಮನಿಸಿದರೆ ತಿಳಿದುಕೊಳ್ಳಬಹುದು. ಇಲ್ಲವಾದರೆ ತಾನಾಗಿಯೇ ಅವನನ್ನು ಮಾತಿಗೆಳೆದು ಸುತ್ತಿ ಬಳಸಿ ವಿಷಯವನ್ನು ಹೊರಗೆಡಹಿದರೆ ಎಲ್ಲಾವೂ ನಿರಾಳ.

ಎರಡು ದಿನಗಳಿಂದ ನಿಖಿಲ್ ಆಫೀಸ್ನ ಕಡೆಗೆ ತಲೆಹಾಕದಿದ್ದಾಗ ಪೋನ್ ಮಾಡಿ ವಿಚಾರಿಸಿಕೊಂಡಳು. ನಿಖಿಲ್ ಆ ದಿನ ಆಫೀಸಿಗೆ ಬರುವುದಾಗಿ ತಿಳಿಸಿದನಾದರೂ ಅಶುತೋಶ್ ಜೊತೆಗೆ ಓಡಾಡುತ್ತಿದ್ದುದರಿಂದ ಅವನು ಹೇಳಿದಂತೆ ಬರಲಾಗಲಿಲ್ಲ. ಮನಸ್ವಿತಾಳಿಗೆ ಇನ್ನು ಆತ ಬರದಿದ್ದರೆ ಅವನ ಸೈನ್ಗಾಗಿ ಕಾದಿರೋ ಕಾಗದ ಪತ್ರಗಳನ್ನು ತೆಗೆದುಕೊಂಡು ಅವನ ಮನೆಗಾದರೂ ಹೋಗಿ ಬರುವುದೆಂದು ನಿರ್ಧರಿಸಿದಳು.

ಮರುದಿನ ಕಾರಿನ ಡ್ರೈವರ್ನನ್ನು ಕರೆದುಕೊಂಡು ನಿಖಿಲ್ನ ಮನೆಗೆ ಬರುವಾಗ ಸ್ವಾಗತಿಸಿದ್ದು ವಾಣಿಶ್ರೀ ಮತ್ತು ಇಂದ್ರಸೇನರು. ವಾಣಿಶ್ರೀಯವರು ಮನಸ್ವಿತಾಳ ಬಗ್ಗೆ ಕೇಳಿ ತಿಳಿದಿದ್ದರಿಂದ ಅವಳನ್ನು ಕಂಡ ಕೂಡಲೇ ಗೌರವ ಭಾವನೆ ಮೂಡಿತು. ಆತ್ಮೀಯತೆಯಿಂದ ಅವಳನ್ನು ಒಳಗೆ ಕರೆದರು. ಇಂದ್ರಸೇನರು ಅವಳ ಲವಲವಿಕೆ, ಚುರುಕುತನವನ್ನು ಕಂಡು ಮೆಚ್ಚುಗೆ ಸೂಚಿಸಿದರು. ಸ್ನೇಹ ಸಮಾಚಾರಗಳನ್ನು ವಿಚಾರಿಸಿದ ಬಳಿಕ ಬಂದ ಉದ್ದೇಶವನ್ನು ತಿಳಿಯುವ ಕುತೂಹಲದಿಂದ ಪ್ರಶ್ನಿಸಿದರೂ ವಾಣಿಶ್ರೀಯವರು. ಮನಸ್ವಿತಾ ತಾನು ಬಂದಿರುವ ಕಾರಣವನ್ನು ಹೇಳಿದ ಮೇಲೆ, ಆಫೀಸಿನ ವಿಷಯವನ್ನು ಮನೆಯವರೆಗೂ ಹೊತ್ತು ತರುವ ಅವಶ್ಯಕತೆಯಿಲ್ಲ ಎಂದು ಹೇಳಿದಾಗ ಭೂಮಿಗೆ ಇಳಿದಂತಾಯಿತು ಅವಳಿಗೆ.

ಯಾಕಾದರೂ ಬಂದೆನೋ ಅನಿಸಿದ್ದೆ, ಕ್ಷಮಿಸಿ, ಕೋಟಿ ವ್ಯವಹಾರಗಳ ವಿಷಯ. ಒಂದು ದಿನ ತಡಾವಾದರೂ ನಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕೆ ಬಂದೆ... ಅಂದಾಗ ಇಂದ್ರಸೇನರಿಗೆ ಹೆಮ್ಮೆಯೆನಿಸಿತು. ಮಗನ ವ್ಯವಹಾರಗಳಲ್ಲಿ ಸರಿಯಾದ ದಾರಿಯಲ್ಲಿ ನಡೆಯುವ ಸುಶಿಕ್ಷಿತ ಹೆಣ್ಣು ಅನಿಸಿ, ಅದರಲ್ಲೇನಾಯ್ತು, ನೀವು ಬಂದಿದ್ದು ಒಳ್ಳೆಯದೇ ಆಯ್ತು. ನಿಖಿಲ್ ಯಾವಾಗ್ಲೂ ನಿಮ್ಮ ವ್ಯವಹಾರ ಚತುರತೆಯ ಬಗ್ಗೆ ಹೇಳುತ್ತಿರುತ್ತಾನೆ. ನಾವುಗಳು ನಿಮ್ಮನ್ನು ನೋಡ್ತಾ ಇರೋದು ಇದೇ ಮೊದಲು. ಸಂತೋಷ. ಇನ್ನು ಮುಂದೆ ನೀವು ಹೊರಡುವ ಮೊದಲು ಅವನಿಗೊಂದು ಫೋನ್ ಮಾಡಿ ಬರುವುದು ಒಳ್ಳೆಯದು ಅಂದಾಗ ತಕ್ಷಣ ತುಟಿಗಳನ್ನು ಹಲ್ಲುಗಳಿಂದ ಒತ್ತಿ ಹಿಡಿದಳು. ಹೌದು ತನ್ನ ಬುದ್ಧಿಗೆ ಎಲ್ಲಿ ಮಂಕು ಬಡಿದಿತ್ತು? ಒಂದು ಫೋನ್ ಮಾಡಿ ವಿಚಾರಿಸುತ್ತಿದ್ದರೆ ನಿಖಿಲ್ ಮನೆಯಲ್ಲಿದ್ದನೇ ಇಲ್ಲವೆ ಅನ್ನೋದು ತಿಳಿಯುತ್ತಿತ್ತು ಅನಿಸದಿರಲಿಲ್ಲ.
...ಮುಂದುವರಿಯುವುದು....0 comments:

Post a Comment