ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಎಲ್ಲೆಲ್ಲೂ ಹಸಿರು...ಎಲ್ಲೆಲ್ಲೂ ವೈವಿಧ್ಯಮಯ ಗಡ್ಡೆ ತರಕಾರಿಗಳು... ಮಣ್ಣಿನ ಹಸಿ ವಾಸನೆ...ಅಕ್ಷರಶಃ ಅದೊಂದು ತೋಟದೊಳಹೊಕ್ಕ ಅನುಭವ. ಶುಂಠಿ, ಕುಕ್ಕುಸುಂಠಿ, ಮುಂಡಿ, ಕೆಸುವು, ಗೆಣಸು, ಕೂವೆ, ಸುವರ್ಣಗಡ್ಡೆ, ಬಾಳೆಗಡ್ಡೆ, ತುಪ್ಪೆ ಗೆಣಸು, ಅರಶಿನ ಹೀಗೆ ಏನೆಲ್ಲಾ ಗಡ್ಡೆ ಗಳಿವೆಯೋ ಅವೆಲ್ಲವುಗಳ ದಿಗ್ ದರ್ಶನ. ಅಕ್ಷರಶಃ ಅದೊಂದು ಗಡ್ಡೆಗಳ ಖಣಜದೊಳಗಣ ನೋಟದಂತೆ...

gadde
ಬಿಡೋಣ ಅಸಡ್ಡೆ ತಿನ್ನೋಣ ಗಡ್ಡೆ...ಎಂಬ ವಿಶಿಷ್ಠ ಕಾರ್ಯಕ್ರಮದಲ್ಲಿ ಗಡ್ಡೆಗಳ ಅನಾವರಣ. ಬಂಟ್ವಾಳ ತಾಲೂಕಿನ ಕಜೆ ಮನೆಯಂಗಳ ಪೂರ್ತಿ ಗಡ್ಡೆಗಳಿಂದ ಶೃಂಗಾರ. ಸೋಗೆ ಮುಚ್ಚಿದ ಚಪ್ಪರದ ಒಳ ಹೊರಗೆಲ್ಲಾ ವೈವಿಧ್ಯಮಯ ಗಡ್ಡೆಗಳ ಅನಾವರಣ. ಇಷ್ಟೇ ಏಕೆ ಈ ಚಪ್ಪರದ ಅಂಚಂಚಿನಲ್ಲೂ ಅರಶಿನ, ಕೂವೆ, ಕುಕ್ಕುಸುಂಠಿ ಗಿಡಗಳಿಂದ ಆವರಣಗೋಡೆ! ಅಂತೂ ಕಜೆ ಮನೆಯಂಗಳ ಈ ಪರಿಯಲ್ಲಿ ಶೃಂಗಾರ... ಚಪ್ಪರದ ಮೇಲ್ಭಾಗದಲ್ಲೂ ವಿವಿಧಾಕಾರಗಳ ಗಡ್ಡೆಗಳ ತಳಿರು ತೋರಣ! ಭೂಮಿಯೊಳಗಣ ಗಡ್ಡೆಗಳ ತಿಜೋರಿಯೇ ಕಜೆ ಮನೆಯಂಗಳದಲ್ಲಿ ಒಪ್ಪ ಓರಣವಾಗಿ ಅನಾವರಣ.
gadde3
ಗಡ್ಡೆಗಳೆಂದರೆ ಅಸಡ್ಡೆ ಬೇಡ...ಅದು ಅದ್ಭುತ ಜೀವಶಕ್ತಿಯ ಗುಡ್ಡೆಗಳು ಎಂಬುದನ್ನು ಈ ಮೇಳ ಸಾಬೀತು ಪಡಿಸಿತು. ಕಜೆಮನೆಯಂಗಳ ಪ್ರವೇಶಿಸುತ್ತಲೇ ಆತ್ಮೀಯ ಸ್ವಾಗತ. ಕುಡಿಯಲು ಶುದ್ಧ ಶುಂಠಿ ರಸದ ಬಿಸಿನೀರಿನ ಶರಬತ್ತು. ಹುತ್ತರಿಗೆಣಸಿಗೆ ಅಕ್ಕಿ ಸೇರಿಸಿ ಮಾಡಿದ ವಿಶಿಷ್ಠ ಇಡ್ಲಿ, ನೆಚ್ಚಿಕೊಳ್ಳಲು ಕುಕ್ಕುಸುಂಠಿ ಚಟ್ನಿ.ಕೂವೆ ಅಂಬಲಿ. ಜೊತೆಗೆ ಕುಡಿಯಲು ಶರಬತ್ತು ಅಥವಾ ಕೂವೆ ಕಷಾಯ. ವ್ಹಾವ್... ಅದೊಂದು ಅದ್ಭುತ ರುಚಿ.
gadde10
9.30ರಿಂದ ಕಾರ್ಯಕ್ರಮ ಆರಂಭ.ಕೊಲ್ಲರ ಮಜಲು ಶಂಕರ ಭಟ್, ಶ್ರೀ ಪಡ್ರೆ, ಶಿವಕುಮಾರ್, ಅನಿಲ್ ಬಳೆಂಜ, ಚಂದ್ರಶೇಖರ್, ನಿರ್ಮಲಾ, ಕರಿಂಗಾನ ಕೆ.ಎಸ್. ಕಾಮತ್, ದೈತೋಟ ಕುಟುಂಬ, ರಾಮ್ ಕಿಶೋರ್, ಸಂಜೀವ ನಾಯ್ಕ , ಪಾಡಾರು ರಾಮಕೃಷ್ಣ ಶಾಸ್ತ್ರಿ, ನಾ.ಕಾರಂತ ಪೆರಾಜೆ ಇವರೆಲ್ಲರ ಅನುಭವದ ಮಾತುಗಳು.
gadde5
ಕಾಡು ಪ್ರಾಣಿಗಳ ಉಪಟಳ ಎಲ್ಲರ ನೋವು. ಮಂಗಗಳ ಕಾಟ ಪ್ರಮುಖ ಚರ್ಚೆ. ಅರ್ಧ ಗಂಟೆಗೊಮ್ಮೆ ಕರಿಮೆಣಸಿನೊಂದಿಗೆ ಬೇಯಿಸಿದ ಗೆಣಸು, ಮಸಾಲೆಯುಕ್ತ ಬೇಯಿಸಿದ ಕೂವೆ, ವೈವಿಧ್ಯಮಯ ಪಾನಕ,ಲಾವಂಚದ ಬಿಸಿನೀರು...ಗೆಣಸಿನ ಹಪ್ಪಳ, ಜೊತೆಗೆ ಮಸಾಲೆ ನಿಂಬೂ, ಶುಂಠಿ...ಇನ್ನೇನೇನೋ... ಹಾಳು ಮೂಳು ಬೇಕರಿ ತಿನಿಸು ತಿಂದು ತಿಂದು ಬೆಂದು ಹೋದ ನಾಲಿಗೆಗೆ ಹೊಸತೊಂದು ರುಚಿ. ಹೊಟ್ಟೆಗೆ ತಂಪು... ಅದ್ಭುತ ರುಚಿ... ಮತ್ತೆಂದೂ ಬಿಡದಂತೆ...
gadde6

gadde7

gadde9
ಇಷ್ಟೇ ಅಲ್ಲ ಊಟದಲ್ಲೂ ಹೆನ್ನೆರಡು ಬಗೆಯ ಗಡ್ಡೆ ಭಕ್ಷ್ಯಗಳು. ಅಲ್ಲೂ ವೈಶಿಷ್ಟ್ಯ. ಕೆಸುವಿನ ಪಿಳ್ಳೆ, ಮುಂಡಿ,ಕೇನೆ, ಕೂರಿಕೆ, ಮಾಂಗನ್ನಾರಿ, ಶುಂಠಿ, ಅರಶಿನ ಸೇರಿಸಿ ಮಾಡಿದ ಪುಲಾವ್, ತುರಿದ ಕೆಸುವಿನ ಸೊಪ್ಪು ಸೇರಿಸಿದ ಸಲಾಡ್, ಶುಂಠಿ, ಕೂರಿಕೆ ಗಡ್ಡೆಯ ಮೊಸರನ್ನ, ಮರಗೆಣಸಿನ ಪಲ್ಯ, ಅಡ್ಡತಾಳಿ ಒಡೆ, ಸುವರ್ಣಗೆಡ್ಡೆ ಪಾಯಸ, ಆರಾರೂಟು ಹಾಲು ಬಾಯಿ, ತೆಂಗಿನಗೆಡ್ಡೆ, ಬಾಳೇಗೆಡ್ಡೆ ಕೋಸಂಬರಿ...ಇಷ್ಟೇ ಅಲ್ಲ...ಸಾಯಂಕಾಲ ಮುಂಡಿಗಡ್ಡೆಯ ಪೋಡಿ, ಶತಾವರಿ ಕಷಾಯ,..
ಅರ್ಥವತ್ತಾದ ಕಾರ್ಯಕ್ರಮ... ಸೇರಿದ್ದ ಅಷ್ಟೂ ಜನದ ಮನದಲ್ಲಿ ಒಂದಷ್ಟು ಪರಿಣಾಮ ಬೀರಿದ್ದಂತೂ ಸತ್ಯ.
gadde12

ಹರೀಶ್ ಕೆ.ಆದೂರು.

1 comments:

Shree Padre said...

ಒಳ್ಳೆ ಕವರೇಜ್.ಅಂತರ್ಜಾಲ ಮಾಧ್ಯಮಗಳಾದರೂ ’ಮಾರ್ಕೆಟ್ ಓರಿಯೆಂಟೆಡ್’ ಸುದ್ದಿಗಳ ಬೆನ್ನು ಬಿಟ್ಟು ಇಂಥ ಸದುದ್ದೇಶದ ಬೆಳವಣಿಗೆಗಳಿಗೆ ಕನ್ನಡಿ ಹಿಡಿಯಬಹುದಾದರೆ ಅದು ಪತ್ರಿಕೋದ್ಯಮದ ಆರೋಗ್ಯಕ್ಕೂ ಜನ ಸಮುದಾಯಕ್ಕೂ ಒಳ್ಳೆಯದು.ನಿಮ್ಮ ಪ್ರಯತ್ನವನ್ನು ಅಭಿನಂದಿಸುತ್ತೇನೆ.

- ಶ್ರೀ ಪಡ್ರೆ

Post a Comment