ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ:ಡಾ. ಎ. ಮೋಹನ ಕುಂಟಾರ್
ಬಹುಭಾಷಿಕ ಸಾಂಸ್ಕೃತಿಕ ಪರಿಸರವು ನಿರಂತರವಾಗಿ ಸಾಮಾಜಿಕ ಅನುವಾದಗಳಿಗೆ ಆಸ್ಪದ ವನ್ನು ಮಾಡಿಕೊಟ್ಟಿದೆ. ಕಾಸರಗೋಡಿನ ಸಾಮಾಜಿಕ ಪರಿಸರದಲ್ಲಿ ಕನ್ನಡ, ಮಲಯಾಳಂ, ತುಳು, ಕೊಂಕಣಿ, ಮರಾಠಿ ಭಾಷಿಕರು ದೈನಂದಿನ ವ್ಯವಹಾರಗಳಲ್ಲಿ ಅನುವಾದ ಪ್ರಕ್ರಿಯೆಯನ್ನು ಸ್ವಾಭಾವಿಕ ವಾಗಿಯೇ ರೂಢಿಸಿಕೊಂಡಿದ್ದಾರೆ. ಇಲ್ಲಿ ಅನುವಾದ ಪ್ರಕ್ರಿಯೆ ಎನ್ನುವುದೇ ಬದುಕು. ಅದು ಅಪ್ರಜ್ಞಾ ಪೂರ್ವಕವಾಗಿಯೇ ಬಹುಭಾಷಿಕ ಪ್ರದೇಶದ ಜನರ ಜೀವನಾಡಿಯಾಗಿದೆ.

ರಾಷ್ಟ್ರೀಯ ವಿಚಾರ ಧಾರೆಗಳಾಗಲಿ, ಪ್ರಾದೇಶಿಕ ಚಿಂತನೆಗಳಾಗಲಿ ಈ ಪ್ರದೇಶದ ಜನರಿಗೆ ಭಾಷಾಂತರದ ಮೂಲಕ ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿದೆ. ಪಾರಂಪರಿಕವಾದ ಅರಿವಿನ ಪ್ರಸಾರ ಮತ್ತು ಪ್ರಯೋಗಕ್ಕೆ ಭಾಷೆ ಇಲ್ಲಿ ತೊಡಕಾಗಿಲ್ಲ. ಅದು ಅಪ್ರಜ್ಞಾ ಪೂರ್ವಕವಾದ ಭಾಷಾಂತರ ಪ್ರಕ್ರಿಯೆಯ ಮೂಲಕ ಪರಿಹಾರವನ್ನು ಕಂಡುಕೊಂಡಿದೆ. ಈ ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ ಒಂದು ಭಾಷಾ ಸಮುದಾಯದ ಸಾಮಾಜಿಕ ಸಂದರ್ಭವು ಇನ್ನೊಂದು ಭಾಷೆಯ ಸಾಮಾಜಿಕ ಸಂದರ್ಭವನ್ನು ನಿರಂತರವಾಗಿ ಪ್ರಭಾವಿಸುತ್ತಾ ಬರುತ್ತದೆ.

ಇದು ಯಜಮಾನ ಸಂಸ್ಕೃತಿಯ ಭಾಗವಾಗಿ ಅಲ್ಲ, ಬದಲಾಗಿ ಸೌಹಾರ್ದಯುತ ಬದುಕಿನ ಭಾಗವಾಗಿಯೇ ಬಂದಿದೆ. ಈ ಸಂದರ್ಭಗಳಲ್ಲೆಲ್ಲ ಭಾಷೆಯ ತರತಮ ಭಾವಭೇದಗಳಿಲ್ಲದೆ ಸಾಂಸ್ಕೃತಿಕವಾದ ಅನೇಕ ವಿವರಗಳು ಒಂದು ಭಾಷೆಯ ಸಂದರ್ಭದಲ್ಲಿ ಇನ್ನೊಂದು ಭಾಷೆಯನ್ನು ಪ್ರಭಾವಿಸಿವೆ. ಈ ಪ್ರಕ್ರಿಯೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಸ್ತುತ ಮಲಯಾಳಂ ಸಾಮಾಜಿಕ ಸಂದರ್ಭವು ಕನ್ನಡವನ್ನು ಪ್ರಭಾವಿಸಿದ ಹಾಗೂ ಪ್ರವೇಶಿಸಿದ ಬಗೆಯನ್ನು ಪರಿಶೀಲಿಸಬಹುದು.

ಮಲಯಾಳಂ ಸಾಮಾಜಿಕ ಸಂದರ್ಭವು ಕನ್ನಡದಲ್ಲಿ ಮುಖ್ಯವಾಗಿ ಮೂರು ನೆಲೆಗಳಲ್ಲಿ ಅನಾವರಣಗೊಂಡಿದೆ. ಅವುಗಳನ್ನು 1. ಭಾಷಿಕ ಸಮುದಾಯಗಳ ಸಂದರ್ಭ 2. ರಾಜಕೀಯ ಸಂದರ್ಭ ಹಾಗೂ 3. ಸಾಹಿತ್ಯಕ ಸಂದರ್ಭ ಎಂದು ಮೂರು ವಿಭಾಗಗಳಲ್ಲಿ ಗುರುತಿಸಬಹುದು.
ಭಾಷಿಕ ಸಮುದಾಯಗಳ ಸಂದರ್ಭ
ಕಾಸರಗೋಡಿನ ಸಂದರ್ಭದಲ್ಲಿ ಮಲಯಾಳಂ ಮನೆಮಾತಿನ ಅನೇಕ ಜಾತಿ ಸಮುದಾಯಗಳಿವೆ. ಅವುಗಳಲ್ಲಿ ಮುಖ್ಯವಾದ ಸಮುದಾಯಗಳೆಂದರೆ ವಾಣಿಯ, ಬಿಲ್ಲವ, ಚಾಲ್ಯ, ಮಣಿಯಾಣಿ, ಮುಸಲ್ಮಾನ, ಅಗಸ, ಕ್ಷೌರಿಕ ಮೊದಲಾದವುಗಳು. ಈ ಜನಸಮುದಾಯದ ಜನರು ಕನ್ನಡ ಸಾಮಾಜಿಕ ಸಂದರ್ಭದಲ್ಲಿಯೇ ಬದುಕುತ್ತಿದ್ದಾರೆ. ಆ ಮೂಲಕ ಕನ್ನಡದ ಸಾಂಸ್ಕೃತಿಕ ವಲಯವನ್ನು ಪ್ರಭಾವಿಸಿದ್ದಾರೆ. ಈ ಜನಸಮುದಾಯವು ಕನ್ನಡದ ಭಾಷಿಕ ಲಯಗಳನ್ನು, ಪದಕೋಶಗಳನ್ನು ಸ್ವೀಕರಿಸಿದೆ. ಹಾಗೆಯೇ ನೀಡಿದೆ. ಕನ್ನಡ, ಮಲಯಾಳಂ ಭಾಷಾ ಸೌಹಾರ್ದದ ಕೊಂಡಿಯಾಗಿ ಈ ಸಮುದಾಯ ಗಳು ಬೆಸೆದುಕೊಂಡಿವೆ.

ಸಾಂಸ್ಕೃತಿಕ ಆಚರಣೆಯ ಸಂದರ್ಭಗಳಿರಬಹುದು, ವ್ಯವಹಾರಿಕ ಸಂದರ್ಭ ಗಳಿರಬಹುದು, ವೃತ್ತಿಪರ ನೆಲೆಗಳಿರಬಹುದು ಇಲ್ಲೆಲ್ಲ ಮಲಯಾಳಂ ಸಮಾಜವು ಕನ್ನಡದಲ್ಲಿ ಅನಾವರಣಗೊಳ್ಳುತ್ತಿದೆ.
ಮಲಯಾಳಂ ಸಂದರ್ಭದ ಅನೇಕ ತಿನಿಸುಗಳು ಕನ್ನಡದ ಸಂದರ್ಭದಲ್ಲಿ ಪ್ರಚಲಿತಗೊಂಡಿವೆ. ಉದಾ: ನೆಯ್ಚೋರು, ಉಂಡಕಾಯ್, ಪುಟ್ಬ್, ಕಲ್ತಪ್ಪ, ಕಟ್ಟಚ್ಚಾಯ ಇತ್ಯಾದಿ.
ಸಾಮಾಜಿಕವಾಗಿ ಮಲಯಾಳಂ ಭಾಷಾ ಸಮುದಾಯವು ಕನ್ನಡ ಭಾಷೆಯನ್ನು ಪ್ರಭಾವಿಸಿದುದರ ಕುರುಹಾಗಿ ಕನ್ನಡವು ಅನೇಕ ಪದಗಳನ್ನು ಮಲಯಾಳಂನಿಂದ ಸ್ವೀಕರಿಸಿದೆ. ಇಂತಹ ಅನೇಕ ಪದ ಗಳು ಇಂದಿಗೂ ಸಾಮಾಜಿಕ ವ್ಯವಹಾರಗಳ ಸಂದರ್ಭದಲ್ಲಿ ಕನ್ನಡ, ಮಲಯಾಳಂಗಳೆರಡರಲ್ಲೂ ಸಮಾನವಾಗಿ ಬಳಕೆಯಾಗುವ ಪದಗಳಾಗಿವೆ.
...ಮುಂದುವರಿಯುವುದು...


0 comments:

Post a Comment