ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಬಂಟ್ವಾಳ: ಅಲ್ಲಿ ಇರುವುದು ಸಣ್ಣ ಗುಡಿಸಲು. ತೀರಾ ಬಡತನದ ಕುಟುಂಬ.

ಇನ್ನೋಬ್ಬರ ಮನೆಯ ಚಾಕರಿ ಮಾಡಿ ಹೊಟ್ಟೆ ತುಂಬಿಸುವ ಆ ಮನೆಯ ಯಜಮಾನನಿಗೆ ಹೊರಲಾರದಷ್ಟು ಹೊರೆಯನ್ನು ಕರುಣೆಯಿಲ್ಲದ ದೇವರು ನೀಡಿದ್ದಾರೆ. ಮೌನವಾಗಿ ರೋಧಿಸುತ್ತಿದ್ದ ಪುಟ್ಟ ಬಾಲಕಿಯನ್ನು ನೋಡಿದವರಿಗೆ ಕರುಳು ಚುರುಕೆನ್ನದೆ ಇರದು. ಆಟವಾಡುವ ಪ್ರಾಯದ ಈ ಹುಡುಗಿ ನೋವಿನಿಂದ ನರಳುತ್ತಿದ್ದರೆ , ಮನೆಯವರು ಮಗಳ ಭವಿಷ್ಯದ ಚಿಂತನೆಯಲ್ಲಿದ್ದಾರೆ.


ಏನಾಯಿತು...
ಎಲ್ಲಾ ವಿದ್ಯಾ ರ್ಥಿಗಳಂತೆ ರಾತ್ರಿ ಮನೆಯಲ್ಲಿ ಪುಸ್ತಕ ಓದುತ್ತಿದ್ದ ವೇಳೆ ಆಕಸ್ಮಿಕವಾಗಿ ಚಿಮಿಣಿಯ ಬೆಂಕಿ ಮೈಗೆ ತಗುಲಿ ಸುಟ್ಟ ಗಾಯಗಳಿಂದ ಬಳಲುತ್ತಿರುವ 13 ವರ್ಷ ಪ್ರಾಯದ ಬಾಲಕಿಯೋರ್ವಳು ದಯಾನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಘಟನೆಯೊಂದು ತಾಲೂಕಿನ ಕುರಿಯಾಳ ಗ್ರಾಮದ ಬಳ್ಳಿ ಎಂಬಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಬಾಲಕೃಷ್ಣ ಮೂಲ್ಯ ಹಾಗೂ ಲಲಿತಾ ದಂಪತಿಯ ಮಗಳು ಮೀನಾಕ್ಷಿ ಎಂಬಾಕೆಗೆ ಬೆಂಕಿಯ ದುರ್ಘಟನೆಗೆ ಬಲಿಯಾಗಿ ಕಣ್ಣೀರಿನಲ್ಲಿ ಜೀವನ ಸಾಗಿಸುತ್ತಿರುವ ನತದೃಷ್ಟ ಬಾಲಕಿ. ಬೆಂಕಿಯ ಕೆನ್ನಾಲಿಗೆಗೆ ಮೈಮೇಲಿನ ಬಹುಭಾಗ ಬೆಂದು ಹೋಗಿ, ಕೈಬೆರಳುಗಳು ತಟಸ್ಥಗೊಂಡಿವೆ. . ಬಾಲಕೃಷ್ಣ ಮೂಲ್ಯರ ಕುಟುಂಬ ಮಗಳ ಈ ಪರಿಸ್ಥಿತಿಯನ್ನು ಕಂಡು ಮಮ್ಮಲ ಮರುಗುತ್ತಿದೆ.ಕುರಿಯಾಳದ ಪ್ರಸನ್ನ ಭಂಡಾರಿ ಎಂಬವರ ತೋಟದ ಕೂಲಿಯಾಳಾಗಿ ಕೆಲಸ ನಿರ್ವಹಿಸುತ್ತಿರುವ ಬಾಲಕೃಷ್ಣ ಮೂಲ್ಯರದ್ದು ಪುಟ್ಟ ಸಂಸಾರ. ತೋಟದ ಒಂದು ಮೂಲೆಯಲ್ಲಿ ಪುಟ್ಟ ಮನೆಯಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಇವರ ಬಡಕುಟುಂಬ ಜೀವನ ನಡೆಸುತ್ತದೆ. ದಿನವಿಡೀ ದುಡಿದ ಆದಾಯ ಹೊಟ್ಟೆಗೆ ಬಟ್ಟೆಗೆ ಸಾಲುತ್ತಿರಲಿಲ್ಲ ಆದರೂ ಮಕ್ಕಳು ವಿದ್ಯಾವಂತರಾಗಬೇಕೆಂಬುದು ದಂಪತಿಗಳ ಆಸೆ. ಈಗಲೋ ಆಗಲೋ ಕುಸಿಯುವ ಭೀತಿಯಲ್ಲಿರುವ ಮನೆಗೆ ಚಿಮಿಣಿ ದೀಪವೇ ಬೆಳಕಿನ ಆಸರೆ. ಇದೀಗ ಮನೆಗೆ ಬೆಳಕು ನೀಡುವ ಚಿಮಿಣಿ ದೀಪವೇ ಮಗಳ ಬದುಕಿನ ಬೆಳಕನ್ನು ಕಿತ್ತುಕೊಂಡಿದೆ.


ನಡೆದಿದ್ದೇನು?
ಅಂದು ಆಗಸ್ಟ್ 24.2012. ಮೀನಾಕ್ಷಿ ಎಂದಿನಂತೆ ಶಾಲೆಯಲ್ಲಿ ನೀಡಿದ ಮನೆಕೆಲಸವನ್ನು ಮುಗಿಸೋಣವೆಂದು ಚಿಮಿಣಿ ದೀಪದ ಮುಂದೆ ಕುಳಿತು ಪುಸ್ತಕ ಓದಲಾರಂಭಿಸಿದಳು. ದುರ್ದೈವವಶಾತ್ ಬೆಂಕಿ ಹಚ್ಚಿಟ್ಟಿದ್ದ ಚಿಮಿಣಿ ದೀಪ ಏಕಾಏಕಿ ಸ್ಫೋಟಗೊಂಡತ್ತಾಗಿ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಮೈಗಂಟಿಕೊಂಡಿತ್ತು. ಕ್ಷಣಮಾತ್ರದಲ್ಲಿ ಬೆಂಕಿ ದೇಹಪೂರ್ತಿ ವ್ಯಾಪಿಸಿ ಮೈಯನ್ನು ಸಂಪೂರ್ಣ ಸುಟ್ಟು ಹಾಕಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. 1 ತಿಂಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಐ ಸಿಯುವಿನ್ನಲ್ಲಿ ಚಿಕಿತ್ಸೆ ಪಡೆದರೆ, 4 ತಿಂಗಳ ಕಾಲ ವಾರ್ಡ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದಿದ್ದಾಳೆ. ಆದರೂ ಬೆಂಕಿಯ ದಾಹಕ್ಕೆ ಅಂದು ಬಾಗಿದ ಬೆರಳುಗಳು ಚಲನೆ ಕಳೆದುಕೊಂಡು ನಿರ್ಜೀವ ಸ್ಥಿತಿಯಲ್ಲಿದೆ. ಎದೆಯ ಭಾಗ ಬೆಂದ ಗೆಣಸಿನಂತೆ ಮುರುಟಿ ಹೋಗಿದೆ. ಕುತ್ತಿಗೆಯಲ್ಲಿ ಮಾಸದ ಗಾಯಗಳು ಪದೇ ಪದೇ ನೋವು ನೋಡುತ್ತಿವೆ. ಮುಖ ಮೂಲಸ್ವರೂಪವನ್ನೇ ಕಳೆದುಕೊಂಡಿದೆ. ಮಲಗಲು, ನಡೆದಾಡಲು ಕಷ್ಟಪಡುವುದರೊಂದಿಗೆ ಪ್ರತೀ ಕೆಲಸಕ್ಕೂ ತಾಯಿಯನ್ನೇ ಆಶ್ರಯಿಸಬೇಕಾಗಿದೆ.


ಬಾಲಕಿ ಸಂಪೂರ್ಣವಾಗಿ ಗುಣಮುಖವಾಗಬೇಕಾದರೆ ದಾನಿಗಳ ನೆರವು ಅಗತ್ಯವಾಗಿ ಬೇಕಾಗಿದೆ. ಸುಟ್ಟ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾದರೆ ಕನಿಷ್ಠ 2-3 ಲಕ್ಷವನ್ನಾದರೂ ಹೊಂದಿಸಬೇಕಾಗಿದೆ. ಬದುಕಿನ ಕನಸು ಕಾಣುತ್ತಿರುವ ಈ ಬಡ ಕುಟುಂಬಕ್ಕೆ ಸಮಾಜದ ಸಹೃದಯರ ಸಾಂತ್ವನ ಬೇಕಾಗಿದೆ.
ನೆರವಿಗಾಗಿ: ಮಮತಾ(ಮೀನಾಕ್ಷಿ ಸಹೋದರಿ) ವಿಜಯಾಬ್ಯಾಂಕಿನ ಕುಪ್ಪೆಪದವು ಶಾಖೆಯ ಖಾತೆ ಸಂಖ್ಯೆ 113101111001945 ಗೆ ಜಮಾ ಮಾಡುವಂತೆ ಕೋರಲಾಗಿದೆ.

ಕಿಶೋರ್ ಬಿ.ಸಿ.ರೋಡ್

0 comments:

Post a Comment