ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿಂಗಪುರವಾಸಿಗಳಿಗೆ, ಅದರಲ್ಲೂ ಸಿಂಗನ್ನಡಿಗರಿಗೆ ೨೦೧೨ ಯಕ್ಷಗಾನದ ಹಬ್ಬ. ಫೆಬ್ರುವರಿ ೨೦೧೨ರಲ್ಲಿ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ, ಕೊಂಡದಕುಳಿ (ಕುಂಭಾಶಿ) ಅವರಿಂದ ಬಡಗುತಿಟ್ಟಿನ ಶೈಲಿಯ "ಕಾರ್ತವೀರ್ಯಾರ್ಜುನ ಕಾಳಗ" ಯಕ್ಷಗಾನವನ್ನು ಕನ್ನಡ ಸಂಘ (ಸಿಂಗಪುರ)ವು ಆಯೋಜಿಸಿತ್ತು.

ಅಕ್ಟೋಬರ್ 25ರಿಂದ 28ರವರೆಗೆ ಕನ್ನಡ ಸಂಘ (ಸಿಂಗಪುರ)ವು ಸಿಂಗಪುರದ ವಿವಿಧ ದೇವಸ್ಥಾನಗಳು ಹಾಗೂ Woodlands Community Club (IAEC)ಯ ಸಹಯೋಗದೊಂದಿಗೆ "ಯಕ್ಷಗಾನೋತ್ಸವ" ಕಾರ್ಯಕ್ರಮವನ್ನು ಆಯೋಜಿಸಿತ್ತು. ನವೆಂಬರ್ ೩೦, ಡಿಸೆಂಬರ್ ೧ ಮತ್ತು ೨ರಂದು ಎಸ್‌ಪ್ಲನೇಡ್‌ (ಸಿಂಗಪುರ)ವು "ಕಲಾ-ಉತ್ಸವ ೨೦೧೨"ದ ಪ್ರಯುಕ್ತ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಯರಿಂದ ಒಟ್ಟು ೮ ಯಕ್ಷಗಾನ ಕಿರುಪ್ರಸಂಗಗಳನ್ನು ಎಸ್‌ಪ್ಲನೇಡ್‌ನ ತೆರೆದ ಸಭಾಂಗಣದಲ್ಲಿ ಆಯೋಜಿಸಿತ್ತು.

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ೨೦೧೧ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಆಡಿದ ಯಕ್ಷಗಾನವನ್ನು ನೋಡಿ ಮೆಚ್ಚಿದ್ದ ಎಸ್‌ಪ್ಲನೇಡ್‌ನ ಅರವಿಂದ್ ಕುಮಾರಸ್ವಾಮಿ ಅವರು, ಈ ಯಕ್ಷಗಾನ ಮಂಡಳಿಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಸಂಪರ್ಕಿಸಿ, ಕಲಾ-ಉತ್ಸವ ೨೦೧೨ರಲ್ಲಿ ಕಾರ್ಯಕ್ರಮವನ್ನು ನೀಡಬೇಕೆಂದು ಕೋರಿಕೊಂಡಿದ್ದರು. ಈ ಅಹ್ವಾನದ ಮೇಲೆ ಸಿಂಗಪುರಕ್ಕೆ ಬಂದ ಕೆರೆಮನೆ ತಂಡದ ಕಲಾವಿದರು ಎಂದಿನಂತೆ ಭಾರತೀಯ ಪೌರಾಣಿಕ ಕಥಾನಕಗಳಲ್ಲೊಂದಾದ ರಾಮಾಯಣದ "ಪಂಚವಟಿ" ಮತ್ತು "ವಾಲಿ ಮೋಕ್ಷ" ಪ್ರಸಂಗಳನ್ನು ಆರಿಸಿಕೊಂಡಿದ್ದರು.

ನವೆಂಬರ್ ೩೦ ಮತ್ತು ಡಿಸೆಂಬರ್ ೨ರಂದು ಆಡಿತೋರಿಸಿದ "ವಾಲಿ ಮೋಕ್ಷ" ಪ್ರಸಂಗದಲ್ಲಿ ವಾಲಿ-ಸುಗ್ರೀವದ ಸಂಭಾಷಣೆ, ದ್ವೇಷ, ಭಯ, ಸೇಡು, ವಾಲಿಯ ಪಶ್ಚಾತ್ತಾಪ ಹಾಗೂ ಕೊನೆಯಲ್ಲಿ ಸೋದರರ ಆಲಿಂಗನದ ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬಂದವು. ಇದಲ್ಲದೇ ವಾಲಿ, ಸುಗ್ರೀವ, ಹನುಮಂತ ಮತ್ತು ವಾನರ ಸಹಚರರ ಹಾವ-ಭಾವ ಮತ್ತು ಮನೋಜ್ಞ ಅಭಿನಯ; ಸುಶ್ರಾವ್ಯವಾದ ಹಿಮ್ಮೇಳಗಳು ಪ್ರೇಕ್ಷಕರ ಮನ ಸೂರೆಗೊಂಡಿತು. ಡಿಸೆಂಬರ್ ೨ರಂದು ಆಡಿದ "ಪಂಚವಟಿ" ಪ್ರಸಂಗದಲ್ಲಿ ಶೂರ್ಪಣಖಿ ಹಾಗೂ ರಾವಣ ಪಾತ್ರಧಾರಿಗಳ ಉಡುಗೆ-ತೊಡುಗೆ, ರಾಮ-ಲಕ್ಷ್ಮಣರ ಗಾಂಭೀರ್ಯ ಮತ್ತು ಶೌರ್ಯ, ರಾಮನನ್ನು ಒಲಿಸಲು ಸುಂದರಿಯ ರೂಪ ತಾಳಿ ಬಂದ ಶೂರ್ಪಣಖಿಯ ಅಮೋಘ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಹೊರದೇಶದಲ್ಲಿ ಕಾರ್ಯಕ್ರಮಗಳನ್ನು ನೀಡುವಾಗ ಕಲಾವಿದರಿಗೆ ವಿವಿಧ ರೀತಿಯ ನಿಬಂಧನೆ, ಮಿತಿಗಳಿರುತ್ತವೆ. ಸಾಮಾನ್ಯವಾಗಿ ೧.೫ಯಿಂದ ೩ ಘಂಟೆಗಳ ಅವಧಿಯ ಯಕ್ಷಗಾನ ಕಾರ್ಯಕ್ರಮ ನೀಡುವ ಕೆರೆಮನೆ ತಂಡವು ಕಲಾ ಉತ್ಸವದಲ್ಲಿ ೪೫ ನಿಮಿಷಗಳ ಕಾರ್ಯಕ್ರಮವನ್ನು ನೀಡಬೇಕಿತ್ತು; ಅವರಿಗೆ ನೀಡಲಾದ ಸಮಯವನ್ನು ಸರಿಯಾಗಿ ಪಾಲಿಸಬೇಕಿತ್ತು. ಎಸ್‌ಪ್ಲನೇಡ್‌ನ ತೆರೆದ ಸಭಾಂಗಣದಲ್ಲಿ ಪರದೆ ಎಳೆಯುವ ಅಥವಾ ಸೈಡ್ ಸ್ಕ್ರೀನ್‌ನ ವ್ಯವಸ್ಥೆ ಸಾಧ್ಯವಿರಲಿಲ್ಲ. ಇದಲ್ಲದೇ ಹೊರದೇಶದ ಬಹುತೇಕ ಜನತೆಗೆ ನಮ್ಮ ಭಾಷೆ, ಭಾರತೀಯ ಪುರಾಣ-ಸಂಸ್ಕೃತಿ, ಈ ಕಲಾಪ್ರಾಕಾರ ಎಲ್ಲವೂ ಹೊಸದು. ಈ ಎಲ್ಲಾ ಇತಿಮಿತಿಗಳ ನಡುವೆಯೂ ಯೋಜನೆ ಮತ್ತು ಪೂರ್ವಸಿದ್ಧತೆಯೊಂದಿಗೆ ಉತ್ತಮ ಕಾರ್ಯಕ್ರಮ ನೀಡಿದರು. ತಾಂತ್ರಿಕ ತಂಡದ ಸಹಯೋಗದೊಂದಿಗೆ ಯಕ್ಷಗಾನ ನಡೆಯುತ್ತಿರುವಾಗ ಇದೇ ಮೊದಲ ಬಾರಿಗೆ ಪ್ರೊಜೆಕ್ಟರ್‌ ಬಳಸಿ, ಅದರ ಮುಖಾಂತರ ಕಥೆಯ ಸಾರವನ್ನು ಆಂಗ್ಲಭಾಷೆಯಲ್ಲಿ ಪ್ರದರ್ಶಿಸಿದ್ದು ವಿಶಿಷ್ಟವಾಗಿದ್ದು, ಕಥಾಸಾರಾಂಶವನ್ನು ಜನರಿಗೆ ತಲುಪಿಸುವಲ್ಲಿ ಮುಖ್ಯಪಾತ್ರ ವಹಿಸಿತ್ತು.

ಈ ಕರ್ನಾಟಕದ ವಿಶಿಷ್ಟ ಈ ಕಲಾಪ್ರಾಕಾರವನ್ನು ಹೊರದೇಶದ ಸಭಿಕರಿಗೆ, ಅದರಲ್ಲೂ ಕನ್ನಡೇತರರಿಗೆ ತಮಗೆ ದೊರೆತ ಕಾಲಾವಧಿಯಲ್ಲಿ ಪರಿಣಾಮಕಾರಿಯಾಗಿ ಪರಿಚಯಿಸಿ, ಹೊಸ ಅನುಭವ ನೀಡಿ, ಒಳ್ಳೆಯ ಅಭಿಪ್ರಾಯ ಮೂಡಿಸಿದ ಈ ಕಲಾವಿದರ ಶ್ರಮ ಪ್ರಶಂಸನೀಯ. ತಂತ್ರಜ್ಞಾನವನ್ನು ಪೂರಕವಾಗಿ ಬಳಸಿ, ಯಾವುದೇ ಕಥಾನಕವನ್ನಾದರೂ ಯಕ್ಷಗಾನದ ಸಂಪ್ರದಾಯವ ಚೌಕಟ್ಟಿನೊಳಗೆ, ಇಂದಿನ ಪೀಳಿಗೆ-ಸಮಾಜಕ್ಕೆ ಎಷ್ಟು ಪ್ರಸ್ತುತವಾಗುವಂತೆ ಪ್ರದರ್ಶಿಸುವ, ವಾಣಿಜ್ಯೀಕರಣದತ್ತ ಹೋಗದೇ ಸಂಪ್ರದಾಯವನ್ನು ಉಳಿಸುವ ಪ್ರಯತ್ನ ಮಾಡುತ್ತಿರುವ ಈ ತಂಡದ ಪ್ರಯತ್ನ ಹೀಗೇ ಮುಂದುವರೆಯಲಿ, ನಿರಂತರ ಜನಬೆಂಬಲ ದೊರೆಯಲಿ ಎಂದು ಆಶಿಸೋಣವೇ?

ವರದಿ: ಸುರೇಶ ಭಟ್ಟ (ಸಿಂಗಪುರ) ಛಾಯಾಚಿತ್ರ: ರಾಜೇಶ್ ಹೆಗಡೆ (ಸಿಂಗಪುರ)
0 comments:

Post a Comment