ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ವಿಶೇಷ ವರದಿ:ಟಿ.ಶಿವಕುಮಾರ್
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಎದುರು ಸಾಲು ಸಾಲು ಮರಗಳನ್ನು ನೋಡಿ ವಿಚಾರಿಸಿದಾಗ 'ಇವೆಲ್ಲಾ ಗಸಗಸೆಮರಗಳು ಸಾರ್ ಮೈಸೂರಿನ ಕಲ್ಯಾಣಗಿರಿ ನಗರದಲ್ಲಿರುವ ಹೈದರ್ ಆಲಿಖಾನ್ ಎಂಬ ಒಬ್ಬ ಮೆಕಾನಿಕ್ ನ ಕೈಚಳಕ' ಎಂಬ ಮಾಹಿತಿ ಸಿಕ್ಕಿತು.

ನಂಜನಗೂಡು ಅಷ್ಟೇ ಅಲ್ಲ ಮೈಸೂರಿನ ಈದ್ಗಾ ಮೈದಾನ, ಆಟೋರಿಕ್ಷಾ ಸ್ಟ್ಯಾಂಡ್, ಸಿನಿಮಾ ಟಾಕೀಸು ಅವರಣ, ಹೋಟೆಲ್ ಮುಂಬಾಗ, ಕಾರ್ ಪಾರ್ಕಿಂಗ್, ಡಾಬಾಗಳು, ಶಾಲೆಯ ಅವರಣ, ಅಂಗಡಿಗಳ ಮುಂಭಾಗ ಕೆಲವು ಬಡಾವಣೆಗಳ ಮನೆಗಳ ಮುಂದೆ ಹೀಗೆ ಗಸಗಸೆ,ಅಶೋಕ, ಸಿಂಗಾಪುರ, ಚೆರ್ರಿ, ಹೊಂಗೆ ಮರದ ಹಸಿರು ಚಪ್ಪರದ ಚಿತ್ತಾರ ಎಲ್ಲರ ಗಮನ ಸೆಳೆಯುತ್ತದೆ.

ತನ್ನ ಹದಿಮೂರನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಸ್ಪಲ್ಪ ದಿನಗಳಲ್ಲಿ ತಾಯಿಯನ್ನು ಕಳೆಕೊಂಡ ಹೈದರ್, ಪಟ್ಟಣಗಳಲ್ಲಿ ಅಲೆಯುತ್ತಾ ಕೊಲ್ಲಾಪುರದ ವೇಸ್ಟಾಕಾರ್ಖಾನೆಯಲ್ಲಿ ಮೆಕಾನಿಕಲ್ ಕೆಲಸವನ್ನು ಕಲಿತು 'ಮೆಕಾನಿಕಲ್ ಹೈದರ್' ಅದರು. ಹೈದರ್ ಒಂದು ದಿನ ಬಿಸಿಲಿನಲ್ಲಿ ಸ್ಕೂಟರ್ ಮೇಲೆ ತನ್ನ ಲಗೇಜ್ ಕಟ್ಟಿಕೊಂಡು ಹೋಗುತ್ತಿದ್ದಾಗ ದಣಿವಾರಿಸಲೆಂದು ಒಂದು ಮರದ ಕೆಳಗೆ ಕುಳಿತುಕೊಂಡು ಆಯಾಸವನ್ನು ನಿವಾರಿಸಿಕೊಂಡರು. ಸುಸ್ತಾದ ಆ ಜೀವಕ್ಕೆ ಕಳಕೊಂಡ ತಾಯಿ ಮಡಿಲಿನ ಹಾಗೆ ಕಂಡಿತು. ಮನಸ್ಸಿಗೆ ಶಾಂತಿ ಸಿಕ್ಕಿತು. ಸುಸ್ತು ಹೋಗಿ ಮತ್ತೆ ಚೈತನ್ಯ ಬಂದ ಹಾಗಾಯಿತು.

ತಕ್ಷಣ ಹೈದರಖಾನ್ರಿಗೆ ಕಣ್ಣ ಮುಂದೆ ಬಂದದ್ದು ರಸ್ತೆಯಲ್ಲಿ ಅಂಥ ಬಿಸಿಲಿನಲ್ಲಿ ನಡೆದು ಹೋಗುವ ದೇಶದ ಬಡಕೂಲಿಗಳು ಮತ್ತು ಜನರಿಗೆ ನೆರಳನ್ನು ಸೃಷ್ಟಿಸಿಕೊಡಬೇಕು. ಅವರು ನಡೆದಾಗಲೆಲ್ಲಾ ನೆರಳಾಗಿರಬೇಕು. ಒಣಕೊಂಬೆಗಳು ಚಪ್ಪರವಾದರೆ ಇವತ್ತು ಇದ್ದು ನಾಳೆ ಬಿದ್ದು ಹೋಗುತ್ತವೆ. ಆದರೆ ಜೀವಂತ ಮರವೆ ಚಪ್ಪರವಾದರೆ...
ಈ ಕಲ್ಪನೆಯ ಬಗ್ಗೆ ಫಾರುಕಿಯ ದಂತ ವೈದ್ಯಕೀಯ ಕಾಲೇಜಿನ ಬಳಿ ಇರುವ ಈದ್ಗಾಸಮಿತಿ ಅಧ್ಯಕ್ಷ ತಾಜ್ ಮೊಹಮ್ಮದ್ ಖಾನ್ ಬಳಿ ಹೇಳಿಕೊಂಡಾಗ ಅವರು ಹಲವು ಬಾರಿ ಯೋಚಿಸಿ ಅವರು ಹೈದರ್ ಕನಸು ನನಸು ಮಾಡಲು ಅವಕಾಶ ನೀಡುವುದಾಗಿ ಶುಕ್ರವಾರ ಪ್ರಾರ್ಥನೆ ಸಂದರ್ಭದಲ್ಲಿ ಘೋಷಿಸಿದರು.


ಇದರಿಂದ ಉತೇಜಿತರಾದ ಹೈದರ್ ಈದ್ಗಾ ಮೈದಾನದಲ್ಲಿ ಒಂದು ಸಾವಿರ ಅಡಿ ಉದ್ದ 350 ಅಡಿ ಅಗಲ 'ಹಸಿರು ಚಪ್ಪರ 'ನಿರ್ಮಿಸಲು 312 ಹೊಂಗೆ ಸಸಿಗಳನ್ನು ನೆಟ್ಟು ನೀರೆರೆದು ಬೆಳೆಸಿದರು. ಬೆಳೆದ ಹೊಂಗೆ ಮರದ ಕೊಬೆಯನ್ನು ಇನ್ನೂಂದು ಮರದ ಕೊಂಬೆಗೆ ಹೆಣೆದುಕೂಳ್ಳುವ ಹಾಗೆ ನಿರ್ದೇಶಿಸುತ್ತಾ ಆ ಹೊಂಗೆ ಮರದ ಕೊಂಬೆಗಳನ್ನು ಒಂದೂಂದನ್ನು ಒಂದೂಂದು ಥರದ ಯೋಗಸಾನದ ಭಂಗಿಯಲ್ಲಿ ನಿಲ್ಲಿಸುತ್ತಾ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಿದರು. ಈಗ ಈದ್ಗಾ ಮೈದಾನದಲ್ಲಿ ಒಮ್ಮೆಗೆ ಹದಿನೈದು ಸಾವಿರ ಮಂದಿ ನೆರಳಿನಲ್ಲಿ ಕುಳಿತು ಪ್ರಾರ್ಥನೆ ಮಾಡುತ್ತಾರೆ.

ಯಾರೋ ಬೆಳೆಸಿದ ಸಸಿಗಳಿಂದ ಹಸಿರು ಚಪ್ಪರ ವಿನ್ಯಾಸಗೊಳಿಸುವುದು ಕಷ್ಟ ನಾನೇ 12...12 ಇಲ್ಲವೇ 14...14 ಚದರ ಅಡಿ ಅಳತೆಯಲ್ಲಿ ಸಸಿಗಳನ್ನು ಬಳಸಿ ಹೆಚ್ಚು ಬೆಳೆಯಲು ಬಿಡದೇ ಅದು ಅಗಲವಾಗಿ ಬೆಳೆಯಲು ಎಂಟು ಕಡೆ ವಿಸ್ತರಿಸುತ್ತೆನೆ. ನಂತರ ಅದನ್ನು ಮರದಿಂದ ಮರಕ್ಕೆ ಜೋಡಿಸುತ್ತೆನೆ.ಹೀಗೆ ನಮಗೆ ಬೇಕಾದಟ್ಟು ಉದ್ದ ಅಗಲಕ್ಕೆ ಹಸಿರು ಚಪ್ಪರವನ್ನು ನಿರ್ಮಿಸಬಹುದು ವರ್ಷಕ್ಕೊಮ್ಮೆ ಅವುಗಳನ್ನು ಟ್ರಿಮ್ ಮಾಡುತ್ತಾ ಬಂದರೆ ಈ ಮರಗಳು ನಿರಂತರವಾಗಿ ನೆರಳನ್ನೂ ಮತ್ತು ಆಮ್ಲಜನಕವನ್ನೂ ನೀಡುತ್ತದೆ. ಎನ್ನುತ್ತಾರೆ ಹೈದರ್.

ಈಗಾಗಲೇ ಶಕ್ತಿನಗರದ ಅಧ್ಯಯನ ಶಾಲೆಯಲ್ಲಿ 120ಉದ್ದ 60ಅಡಿ ಅಗಲದ ಚಪ್ಪರ ಬೆಳೆಸಿದ್ದು ಶಾಲಾ ವಾರ್ಷಿಕೋತ್ಸವ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಈ ಚಪ್ಪರದ ಅಡಿಯಲ್ಲಿಯೇ ನಡೆಯುತ್ತವೆ.
ಹಲವಾರು ದಿನಸಿ ಅಂಗಡಿ ಮೆಡಿಕಲ್ ಸ್ಟೋರ್ ಗಳ ಮುಂದೆಯೂ ಹೈದರ್ ಕೈಚಳಕದಲ್ಲಿ ಚಪ್ಪರಗಳು ಎದ್ದು ನಿಂತಿವೆ. ಇದನ್ನು ನೋಡುವುದೇ ಒಂದು ಚಂದ. ನಂಜನಗೂಡಿನ ದೇವಸ್ಥಾನದ ಕಮಿಟಿಯವರು ಇವರನ್ನು ಆಹ್ವಾನಿಸಿ ಕೆಲಸ ಮಾಡಿಸಿದೆ. ದೇವಸ್ಥಾನದ ಮುಂದಿನ ರಸ್ತೆಯಲ್ಲಿ 200 ಮರಗಳು ಭಕ್ತರ ಧಣಿವನ್ನು ನಿವಾರಿಸುವ ಚಪ್ಪರವಾಗಿವೆ.

ಮೈಸೂರಿನ ಹೆಬ್ಬಾಳ್ ನಲ್ಲಿರುವ ಶ್ರೀ ಲಕ್ಷ್ಮೀಕಾಂತ ದೇವಸ್ಥಾನದ ಮುಂಭಾಗ ಮತ್ತು ಹಿಂಭಾಗದ ಗೇಟ್ ನ್ನು ಮೈಸೂರಿನ ಆರಮನೆಯ ಮುಂದಿನ ಕಮಾನ್ ರೀತಿ ತಯಾರಿ ನಡೆಯುತ್ತಿದೆ. ಈಗಾಗಲೇ 72 ಗಿಡಗಳನ್ನು ನೆಟ್ಟಿದ್ದಾರೆ ಇದಕ್ಕೆ 'ಗ್ರೀನ್ ಕಮಾನ್' ಎಂದು ಹೆಸರಿಟ್ಟಿದ್ದಾರೆ.

ಹೈದರ್ ರವರಿಗೆ ಸಾಕಷ್ಟು ಕನಸುಗಳಿವೆ ಅವಕಾಶ ಸಿಕ್ಕರೆ ಸರಕಾರ ಬೆಂಬಲ ನೀಡಿದರೆ ಮೈಸೂರಿನಿಂದ ಬೆಂಗಳೂರಿನವರೆಗೆ ಹೆದ್ದಾರಿಯಲ್ಲಿ ಹಸಿರು ಚಪ್ಪರ ನಿರ್ಮಾಣಮಾಡಿ ಎಲ್ಲ ವಾಹನಗಳೂ ಚಪ್ಪರದ ಅಡಿಯಲ್ಲಿ ಸಾಗುವಂತೆ ಮಾಡುತ್ತೆನೆ ಎನ್ನುತ್ತಾರೆ ಹೈದರ್. ಸಸಿಗಳಿದಂಲೇ ಮೈಸೂರು ಅರಮನೆ, ಸಂಸತ್ ಭವನ, ಕ್ರೀಡಾಂಗಣಗಳಲ್ಲಿ ವೀಕ್ಷಕರ ಗ್ಯಾಲರಿಗಳನ್ನು ನಿರ್ಮಾಣ ಮಾಡಬಹುದು ಜೀವಂತ ಬೆತ್ತ ಹಾಗೂ ಬಿದಿರು ಮೆಳೆಗಳನ್ನು ಬೆಳೆಸಿ ವೀಕ್ಷಕರ ಗ್ಯಾಲರಿಗಳನ್ನು ನಿರ್ಮಿಸಿದರೆ ಅವು ಕನಿಷ್ಠ 80 ರಿಂದ 125 ವರ್ಷ ದವರೆಗೆ ಬಾಳಿಕೆ ಬರುತ್ತವೆ.

ಕೇವಲ ಎಂಟು ವರ್ಷಗಳಲ್ಲಿ ಇಂತಹ ಜೀವಂತ ಮರಗಳ ವೀಕ್ಷಕರ ಗ್ಯಾಲರಿ ನಿರ್ಮಿಸಬಹುದು ಎಂಬ ವಿಶ್ವಾಸ ಅವರಿಗಿದೆ. ಸತತ 12 ವರ್ಷದಿಂದ ಈ ಕಾಯಕ ಮಾಡುತ್ತಿರುವ ನನಗೆ ಸರ್ಕಾರ ಇನ್ನು ಗುರುತಿಸದಿರುವುದು ಬೇಸರ ತಂದಿದೆ ಎನ್ನುತ್ತಾರೆ.
ದಿನನಿತ್ಯ ಬಿಡುವಿಲ್ಲದೇ ಈ ಒಂದು 'ಹಸಿರು ಚಪ್ಪರ' ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಹೈದರ್ಗೆ ಮೈಸೂರಿನಲ್ಲಿರುವ ಮಂದಿರ ಮಸೀದಿ ಚರ್ಚ ಹಾಗೂ ಗುರುದ್ವಾರಕ್ಕೆ ಉಚಿತವಾಗಿ ಹಸಿರು ಚಪ್ಪರದ ಸೇವೆಯನ್ನು ಮಾಡಬೇಕು ಎನ್ನುವ ಆಶಯ ಇವರಿಗಿದೆ.
ಇವರನ್ನು ಸಂಪರ್ಕಿಸಬೇಕೆ 9845159067 ನಂಬರ್ ಗೆ ಕರೆಮಾಡಿ...

0 comments:

Post a Comment