ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಹಬ್ಬಗಳೆಂದರೆ ನಮ್ಮ ಸಂಸ್ಕೃತಿಯ ಪ್ರತೀಕಗಳು. ನಮ್ಮ ಧಾರ್ಮಿಕ ಆಚರಣೆಗಳ ಚಿಹ್ನೆಗಳು. ಪ್ರತಿ ಹಬ್ಬದ ಆಚರಣೆಗೂ ಒಂದು ಮಹತ್ವವಿರುತ್ತದೆ. ಹಬ್ಬಗಳ ದೇಶವೆಂದೇ ಖ್ಯಾತವಾದ ಭಾರತದಲ್ಲಿಯೂ ಈ ರೀತಿ ಮಹತ್ತನ್ನು ಹೊಂದಿರುವ ಸಾಕಷ್ಟು ಹಬ್ಬಗಳ ಸಂಭ್ರಮದ ಆಚರಣೆ ನಡೆಯುತ್ತವೆ. ಗಮನಿಸಬೇಕಾದ ಅಂಶವೆಂದರೆ ಕೆಲ ಹಬ್ಬಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಅಂತಹ ಆಚರಣೆಗಳಲ್ಲಿ ಮುಖ್ಯವಾದುದು ಎಳ್ಳಮವಾಸ್ಯೆಯ ಆಚರಣೆ.


ಎಳ್ಳಮವಾಸ್ಯೆ ಹೆಚ್ಚಾಗಿ ಉತ್ತರಕರ್ನಾಟಕದಲ್ಲಿ ಆಚರಿಸಲ್ಪಡುತ್ತದೆ. ಈ ಭಾಗದಲ್ಲಿ ಹೊಲ-ಉಳುಮೆ ಮಾಡುವವರ ಸಂಖ್ಯೆ ಹೆಚ್ಚು. ಆದ್ದರಿಂದ ಇದರ ಆಚರಣೆ ಹೊಲದಲ್ಲಿ ನಡೆಯುತ್ತದೆ. ಮಾರ್ಗಶಿರ ಮಾಸದ ಕೊನೆಗೆ ಸುಗ್ಗಿಗೆ ಪೂರ್ವಭಾವಿಯಾಗಿ ಆಚರಿಸಲ್ಪಡುವ ಎಳ್ಳಮವಾಸ್ಯೆ ಒಂದು ವಿಶಿಷ್ಟ ಹಬ್ಬ. ವರ್ಷವಿಡೀ ಬೆಳೆದ ಬೆಳೆಗಳನ್ನು ನೋಡಿ ಎಲ್ಲರೂ ಆನಂದಿಸುವ ಸಮಯ. ಮನೆಯವರೆಲ್ಲ ಸೇರಿ, ಬುತ್ತಿಕಟ್ಟಿಕೊಂಡು ಹೊಲಗಳಿಗೆ ಹೋಗಿ ಊಟ ಮಾಡುತ್ತಾರೆ. ಬೆಳೆ ಬೆಳೆಯಲು ಆಶೀರ್ವದಿಸಿದ ಭೂಮಿತಾಯಿಗೆ ಕೃತಜ್ಞತಾ ಸಮರ್ಪಣೆ ಮಾಡಲು ಬಹುಶ: ಇದನ್ನು ಜಾರಿಗೆ ತಂದಿರಬಹುದು ಅಲ್ಲದೇ ವರ್ಷವಿಡೀ ಮನೆಯಲ್ಲಿಯೇ ಹಬ್ಬಗಲನ್ನು ಆಚರಿಸುವುದಕ್ಕಿಂತ ಹೊರಗಡೆ ಬಂದು ಹಬ್ಬದ ಸವಿ ಸವಿಯುವ ನಿಟ್ಟಿನಲ್ಲಿ ವನಭೋಜನದ ಕಲ್ಪನೆನೀಡಿದ್ದಾರೆ.

ಮೊದಲೇ ಹೇಳಿದಂತೆ ಎಳ್ಳಮವಾಸ್ಯೆ ಉತ್ತರಕರ್ನಾಟಕದ ಜನಪ್ರಿಯ ಹಬ್ಬ. ಹೊಲ-ಮನೆ ಮಾಡುವವರಂತೂ ಅತೀವ ಸಂಭ್ರಮದಿಂದ ಆಚರಿಸುತ್ತಾರೆ. ಹಬ್ಬಕ್ಕೆ ತಯಾರಿ ಹದಿನೈದು ದಿನಗಳ ಮುಂಚೆಯೇ ಆರಂಭವಗುತ್ತದೆ. ಹೊಲವನ್ನು ಸ್ವಚ್ಛಗೊಳಿಸಿ ಜಾಗ ಗೊತ್ತುಪಡಿಸಿ ಆಚರಣೆಗೆ ಸಜ್ಜುಗೊಳಿಸುತ್ತಾರೆ. ರುಚಿಕಟ್ಟಾದ ತಿನಿಸುಗಳ ತಯಾರಿ ನಡೆಯುತ್ತದೆ. ಆ ದಿನದಂದು ಎತ್ತುಗಳಿಗೆ ಸ್ನಾನ ಮಾಡಿಸಿ ಸಿಂಗಾರ ಮಾಡುತ್ತಾರೆ. ಅದರ ಕೊಂಬುಗಳಿಗೆ ಬಣ್ಣ ಬಳಿಯುತ್ತಾರೆ. ಕೊರಳಿಗೆ ದೊಡ್ಡ ಘಂಟೆ ಮತ್ತಯ ಗೆಜ್ಜೆ ಕಟ್ಟುತ್ತಾರೆ. ಬಂಡಿಗಳಿಗೆ ಬಣ್ಣ ಹಚ್ಚುತ್ತಾರೆ. ಬಣ್ಣದ ರಿಬ್ಬನ್ ಮುಂತಾದವುಗಳಿಂದ ಅಲಂಕಾರ ಮಾಡುತ್ತಾರೆ. ಇನ್ನು ಮಹಿಳೆಯರಂತೂ ಇಳಕಲ್ ಸೀರೆಯಲ್ಲಿ ಕಂಗೊಳಿಸುತ್ತಾರೆ. ಬಂಧು-ಮಿತ್ರರು ಸೇರಿಕೊಂಡು ತಮ್ಮ ಹೊಲಗಳಿಗೆ ಹೋಗುತ್ತಾರೆ.
ಎಳ್ಳಮವಾಸ್ಯೆಯ ಊಟದ ಸವಿ ಬಹುಶ; ಮತ್ತಿನ್ಯಾವ ಹಬ್ಬಕ್ಕೂ ಇರಲಾರದು. ಇವುಗಳ ತಯಾರಿ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಆರೋಗ್ಯಕರ ಹಿನ್ನೆಲೆಯಿದೆ. ಎಳ್ಳಮವಾಸ್ಯೆಯ ಹೆಸರೇ ಸೂಚಿಸುವಂತೆ ಎಳ್ಳಿಗೆ ಮಹತ್ವ ನೀಡಲಾದ ಆಚರಣೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವ ಈ ಹಬ್ಬದಲ್ಲಿ ಎಳ್ಳು, ಶೇಂಗಾ, ಕೊಬ್ಬರಿ, ಬೆಲ್ಲಗಳಿಂದ ತಯಾರಿಸಿದ ಖಾದ್ಯಗಳಿಗೆ ಮಹತ್ವ ಜಾಸ್ತಿ. ಎಳ್ಳು ಉಷ್ಣವನ್ನು ಉತ್ಪತ್ತಿ ಮಾಡುವುದು, ಕೊಬ್ಬರಿ ಮತ್ತು ಶೇಂಗಾ ಕೊಬ್ಬಿನಾಂಶ ಹೊಂದಿರುವವು. ಈ ಒಂರ್ಥದಲ್ಲಿ ಇವು ಸುಲಭವಾಗಿ ಚಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ನೀಡುತ್ತವೆ. ಹೀಗಾಗಿ ಮನುಷ್ಯ ಚಳಿಗಾಲದಲ್ಲಿ ದೇಹವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ.

ಇನ್ನು ತಯಾರಿಸಲ್ಪಡುವ ಪದಾರ್ಥಗಳು- ಕರಿಗಡುಬು, ಎಳ್ಳುಹೋಳಿಗೆ, ಶೇಂಗಾ ಹೋಳಿಗೆ, ಚಪಾತಿ, ಸಜ್ಜೆರೊಟ್ಟಿ, ಗುರೆಳ್ಳು ಚಟ್ನಿ, ಶೇಂಗಾ ಚಟ್ನಿ; ಕೆಂಪು ಮೆಣಸಿನ ಚಟ್ನಿ, ಎಣ್ಣೆಬದನೆಕಾಯಿ ಪಲ್ಯ, ಚಿತ್ರಾನ್ನ, ಮೊಸರನ್ನ ಹೀಗೆ ವಿವಿಧ ಬಗೆಯ ಪದಾರ್ಥಗಳು ರುಚಿಯಲ್ಲಿ ಪೈಪೋಟಿ ನೀಡುತ್ತವೆ. ಈ ಪದಾರ್ಥಗಳನ್ನೇ ನೈವೇದ್ಯವಾಗಿಸಿ ಹೊಲದಲ್ಲಿ ಎಲ್ಲಾ ದಿಕ್ಕಿಗೂ ಎಡೆಯಿಡುತ್ತಾರೆ. ಹಾಗಿಡುವಾಗ 'ಹುಲ್ಲಲ್ಲ್ಯಗೋ ಚಳಂಬರಿಗೋ' ಎಂದು ಕೂಗುವ ವಿಶಿಷ್ಟ ಪದ್ಧತಿಯೂ ಚಾಲ್ತಿಯಲ್ಲಿದೆ. ಹೊಲದಲ್ಲಿರುವ ಬನ್ನಿ ಗಿಡದ ಕೆಳಗೆ ಕಲ್ಲುಗಳಿಂದ ಪಾಂಡವರನ್ನು ಮಾಡಿ ಅದನ್ನು ಪೂಜಿಸುತ್ತಾರೆ.

ಎಲ್ಲರೂ ಹೊಲದಲ್ಲಿ ಊಟ ಮಾಡಿ ಪ್ರಕೃತಿ ಭೋಜನದ ಸವಿ ಸವಿಯುತ್ತಾರೆ. ಆಬಾಲ ವೃದ್ಧರಾದಿಯಾಗಿ ಎಲ್ಲರೂ ಈ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಹಸಿರು ತುಂಬಿ ನಿಂತ ಬೆಳೆಗಳನ್ನು ನೋಡಿ ಖುಷಿಪಡುತ್ತಾರೆ. ತಮ್ಮ ಬೆಳೆಗಳಿಗೆ ಎಷ್ಟು ಬೆಲೆ ಬರಬಹುದು ಎಂದು ಅಂದಾಜು ಮಾಡುತ್ತಾರೆ. ಹೀಗೆ ವರ್ಷದ ಒಂದು ದಿನ ಮನುಷ್ಯ ಪ್ರಕೃತಿಯೊಡನೆ ಮೀಸಲಿಡುತ್ತಾನೆ.

ಆಧುನಿಕ ಭರಾಟೆಯ ಯಾಂತ್ರಿಕ ಯುಗದಲ್ಲಿ ಎಳ್ಳಮವಾಸ್ಯೆಯಂತಹ ಆಚರಣೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಇಂದು ಹೊಲಗಳನ್ನು ಹೊಂದಿರುವವರ ಸಮಖ್ಯೆಯೂ ಕಡಿಮೆಯಾಗುತ್ತಿದೆ. ಇದ್ದರೂ ಸಹ ಸಂತೋಷದಿಂದ ಆಚರಣೆ ಮಾಡುವ ಸ್ಥಿತಿಯಲ್ಲಿ ರೈತನಿಲ್ಲ. ಸಾಲದ ಹೊರೆ, ಬೆಳೆಹಾನಿ ಹೀಗೆ ಅನೇಕ ಹೊರೆಗಳಿಂದಾಗಿ ರೈತ ಆತ್ಮಹತ್ಯೆಯತ್ತ ಮುಖ ಮಾಡಿದ್ದಾನೆ. ಹೊಲದಲ್ಲಿ ಕಷ್ಟಪಟ್ಟು ದುಡಿಯುವ ರೈತನ ಮುಖದಲ್ಲಿ ನಗು ಕಾಣಬೇಕಾಗಿದೆ. ಭಾರತ ಕೃಷಿ ಪ್ರಧಾನ ದೇಶವಾದರೂ ನಮ್ಮವರು ಆಧುನಿಕತೆಯತ್ತ ಹೊರಳಿರುವುದರಿಂದ ರೈತನ ಬಾಳು ಸಂಕಷ್ಟಕ್ಕೀಡಾಗುವ ಸ್ಥಿತಿಯಲ್ಲಿದೆ. ಈ ರೈತ ಎಂಬ ನಮ್ಮ ದೇಶದ ಬೆನ್ನೆಲುಬು ಮುರಿದುಬಿದ್ದರೆ ನಮ್ಮ ಪರಿಸ್ಥಿತಿ ಏನಾಗಬಹುದು? ಹಾಗಾಗದಿರಲಿ, ಅನ್ನದಾತನ ಬಾಳು ಹಸನಾಗಬೇಕೆಂಬುದು ನಮ್ಮ ಆಶಯವಾಗಲಿ.

-ಶ್ರೀಗೌರಿ ಜೋಶಿ

0 comments:

Post a Comment