ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ : ಭಾಗ 29 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಇವತ್ತು ಸಾಧ್ಯವಿಲ್ಲ ಅನ್ಸುತ್ತೆ ಕ್ಷಮಿಸಿ. ಜವಾಹರ್ ನೆಹರು ಪ್ರದೇಶದಲ್ಲಿರೊ ಐದು ಮನೆಗಳನ್ನು ಖರೀದಿಸಿದ್ದೀವಲ್ಲಾ. ಅವುಗಳನ್ನು ಸ್ವಲ್ಪ ರಿಪೇರಿ ಮಾಡ್ಸಿ ನಮ್ಮ ಎಕ್ಸಿಕ್ಯೂಟ್ಗಳಿಗೆ ಹಂಚೋದಿದೆ. ಮನಸ್ವಿತಾಳ ಹೇಗೂ ಮನೆ ದೂರವಿದೆ. ನಿಖಿಲ್ ಎಂಟರ್ಪ್ರೈಸೆಸ್ನ ಬೆನ್ನೆಲುಬಾಗಿರೊ ಅವಳಿಗೂ ಒಂದು ಮನೆ ಕೊಡಬೇಕು. ವಯಸ್ಸಾದ ತಂದೆ ತಾಯಿಯರನ್ನು ಕರೆದುಕೊಂಡು ಬರಬಹುದು. ಹಾಗಾಗಿ ಈಗ ನಾನು ಅವಳನ್ನು ಕರೆದುಕೊಂಡು ಸೈಟ್ ಕಡೆಗೆ ಹೋಗೋದಿದೆ.

ಅವನ ಉದಯರಾಗ ವಾಣಿಶ್ರೀಯವರಿಗೆ ಸರಿ ಕಾಣಿಸಲಿಲ್ಲ. ಮನಸ್ವಿತಾ ಸೌಂದರ್ಯವತಿಯೆಂದು ಚೆನ್ನಾಗಿ ತಿಳಿದಿತ್ತು. ಮಗ ಅಂತಹ ರೂಪಸಿಯನ್ನು ಕರೆದು ಉನ್ನತ ಹುದ್ದೆ ನೀಡಿದಾಗಲೂ ಅವರ ಮನಸ್ಸು ಹೊಯ್ದಾಡಿತ್ತು. ಗಂಡನ ಮುಂದೆ ಆ ವಿಷಯ ಎತ್ತಿದರೆ ಏನಂದುಕೊಂಡಾರು ಅಂದು ಸುಮ್ಮನಾಗಿದ್ದರು.

ಅಂಗೈಯಲ್ಲಿ ಬೆಣ್ಣೆಣಿಯಿಟ್ಟುಕೊಂಡರೆ ಕೂಡಲೇ ಕರಗಿ ಹೋಗಬಹುದೆನ್ನುವ ವಿಚಾರ ಚೆನ್ನಾಗಿ ತಿಳಿದವರು. ಅವರಿಗೆ ಹಾಗಂತ ಮಗನ ಮೇಲೆ ವಿಶ್ವಾಸವಿಲ್ಲವೇನೆಂದಲ್ಲ. ಕೊನೆಗೆ ಏನೇನೊ ಆಗಿ ಎಲ್ಲವೂ ಕೆಡುಕಾದರೆ ಎಂದು ಅನಿಸಿದ್ದಿದೆ. ಆದರೆ ಅದು ಅವರ ಮನದ ಒಳಗಿನ ವಿಪ್ಲವ ಮಾತ್ರ.
ಸರಿ, ನೀನು ಮಳೆ ಕಡಿಮೆಯಾದ ಕೂಡ್ಲೆ ಹೊರಟರೆ ಸಾಕು. ಮನಸ್ವಿತಾಳಿಗೆ ಹೇಳಿ ಬಿಡು. ನೀನು ಬರೋವರ್ಗೂ ಕಾಯಲಿ ಡ್ಯಾಡ್ನ ಮಾತಿಗೆ ತಲೆದೂಗಿದ.
ಮಳೆ ಕಡಿಮೆಯಾಗುವ ಸೂಚನೆ ಕಾಣಿಸಲಿಲ್ಲ. ಹೊರಡುವುದು ತಡವಾದರೆ ಮನಸ್ವಿತಾಳಿಗೆ ತೊಂದರೆಯಾಗುವುದನ್ನು ಬಲ್ಲ. ಹಾಗಂತ ಮಮ್ಮಿ ಡ್ಯಾಡಿ ಹಾಕಿದ ರೇಖೆಯನ್ನು ದಾಟಲಾರ. ಹೊರಗೆ ಬಂದು ನಿಂತು ಧಾರಕಾರವಾಗಿ ಸುರಿಯುವ ಮಳೆಯನ್ನೇ ನೋಡುತ್ತಾ ನಿಂತಾಗ ಇಂದ್ರಸೇನ್ ಕೂಡ ಹೊರಗೆ ಬಂದು ನಿಂತರು.
ಮಳೆ ನಿಲ್ಲೋದಿಲ್ಲ, ಆ ಹುಡುಗಿಯನ್ನು ಕಾಯ್ಸೋದು ಬೇಡ. ನೀನು ಹೊರಡೋದು ಒಳ್ಳೆಯದು ಅನುಮತಿಗಾಗಿ ಕಾದಿದ್ದವನಂತೆ, ಸರಿ ಅಂದವನೇ ಮೆಟ್ಟಲುಗಳನ್ನು ಇಳಿದು ಕಾರಿನ ಬಾಗಿಲು ತೆರೆದು ಕುಳಿತ. ಕಾರು ಚಾಲನೆಗೆ ತಂದು ವೈಪರ್ಗಳನ್ನು ಹಚ್ಚಿದ. ನಿಧಾನವಾಗಿ ಪೋರ್ಟಿಕೊವನ್ನು ಬಿಟ್ಟಿತು ಕಾರು.
ಆಫೀಸಿಗೆ ಬರುವಷ್ಟರಲ್ಲಿ ಮನಸ್ವಿತಾ ಇನ್ನೂ ಕೆಲಸಗಳಲ್ಲಿ ಮುಳುಗಿರುವುದು ಕಾಣಿಸಿತು. ನೇರವಾಗಿ ಅವಳ ಕೋಣೆಗೆ ಬಂದು ಬಾಗಿಲು ಬಡಿದ. ತಟ್ಟನೆ ಎಚ್ಚರಗೊಂಡವಳು ಕಂಪ್ಯೂಟರ್ನ ಪರದೆಯನ್ನು ಮುಚ್ಚಿದಳು.
ಮಳೆ ಸುರಿತಾ ಇದೆ. ಮನೆ ನೋಡಿಕೊಂಡು ಬರೋದಿತ್ತು ಮಾತಿಗೆ ಎಳೆದಾಗ ಅವಳ ದೃಷ್ಟಿ ಕಿಟಕಿಯಿಂದ ಹೊರಗೆ ಇಣುಕಿತು. ಮಳೆ ಸುರಿಯುತ್ತಿದ್ದರೂ ಬಂದೋಬಸ್ತು ಇದ್ದ ಹವಾ ನಿಯಂತ್ರಿತ ಕೋಣೆಗೆ ಹೊರಗಿನ ಶಬ್ದವೇ ಕೇಳುತ್ತಿರಲಿಲ್ಲ.
ಸರಿ, ನಾಳೆ ಹೋದ್ರು ಪರವಾಗಿಲ್ಲ. ಹೇಗೂ ಶಿಪ್ಟ್ ಮಾಡುವುದಕ್ಕೆ 15 ದಿನಗಳಾದರು ಬೇಕಾಗಬಹುದು ತನ್ನ ಹೆತ್ತವರಿಂದ ಹಸಿರು ನಿಶಾನೆ ಸಿಗುವುದೆನ್ನುವ ಭರವಸೆಯೇನೂ ಉಳಿದಿರಲಿಲ್ಲ. ಆದರೂ ಅವರನ್ನು ಬಿಟ್ಟು ಬರುವ ನಿರ್ಧಾರವನ್ನು ತೆಗೆದುಕೊಂಡಾಗಿತ್ತು.
ಸರಿ, ಈಗ ನೀವು ಹೊರಡಬಹುದಲ್ವೆ? ಡ್ರೈವರ್ಗೆ ಹೇಳಿ ಬಿಡಿ ನಿಖಿಲ್ ತನ್ನ ಕ್ಯಾಬಿನ್ನತ್ತ ನಡೆದ. ಅವಳು ಕಂಪ್ಯೂಟರ್ನ ಪರದೆಯನ್ನು ತೆರೆದು ಅರ್ಧದಲ್ಲಿ ನಿಲ್ಲಿಸಿದ ಕೆಲಸವನ್ನು ಮುಂದುವರಿಸಿದಳು.
ಅರವಿಂದ್ನ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲೆ ಹಾಕಿದ್ದರೂ ಎಲ್ಲವೂ ಅಸ್ಪಷ್ಟವಾಗಿದ್ದವು. ಆಸ್ಪತ್ರೆ, ಸೈಬರ್ಗಳ ದ್ವಂದ್ವತೆ ಕಾಡಿತು. ಅಲ್ಲಿ ಆಶುತೋಶ್ ಮತ್ತು ನಿಖಿಲ್ನ ಮೇಲೂ ಸಂಶಯವಿಲ್ಲದಿರಲಿಲ್ಲ. ಅರವಿಂದ ಯಾರೇ ಆಗಲಿ ಇನ್ನೊಂದೆರಡು ತಿಂಗಳಲ್ಲಿ ಕಂಡು ಹುಡುಕಿಯೇ ತೀರಬೇಕೆನ್ನುವ ಹಠ ಮೂಡಿತು. ಕೊನೆಯದಾಗಿ ಒಂದು ಇ-ಮೇಲ್ ಕಳುಹಿಸಿ ಕಂಪ್ಯೂಟರ್ ಆಫ್ ಮಾಡಿ ಮನೆಗೆ ಹೊರಡುವ ಆತುರ ತೋರಿಸಿದಳು. ಡ್ರೈವರ್ ಅವಳಿಗಾಗಿ ಕಾಯುತ್ತಾ ನಿಂತ.
ಅಷ್ಟರಲ್ಲಿಯೇ ನಿಖಿಲ್ ಅವಳನ್ನು ಕರೆಸಿದ. ಅವಳು ನಿಖಿಲ್ನ ಕ್ಯಾಬಿನ್ಗೆ ಬರುವಾಗಲಷ್ಟೆ ಫೋನ್ನಲ್ಲಿ ಮಾತು ಮುಗಿಸಿ, ಅಂತು ನಿಮ್ಮ ಶ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ತು. ಆದಿತ್ಯ ಗ್ರೂಪ್ ನಮ್ಮ ಡ್ರೈಪ್ರುಟ್ಸ್ ಸ್ಯಾಂಪಲ್ಗಳನ್ನು ಒಪ್ಪಿಕೊಂಡಿದೆ. ಇನ್ನೇನು ಒಂದೆರಡು ದಿನಗಳಲ್ಲಿ ಆರ್ಡರ್ ಕೂಡ ಕಳುಹಿಸುವುದಾಗಿ ನವ್ಯ ಕುಮಾರ್ ಇ-ಮೇಲ್ ಕಳುಹಿಸಿದ್ದಾನೆ. ಈ ಎಲ್ಲಾ ಕ್ರೆಡಿಟ್ ನಿಮಗೆ ಸೇರ್ಬೇಕು. ನಿಮ್ಮ ಅವಿರತ ಶ್ರಮ ನಿಖಿಲ್ ಎಂಟರ್ಪ್ರೈಸೆಸ್ ಹಿಂದಿರುವುದು ನಮಗೆ ಹೆಮ್ಮೆಯ ವಿಷಯ.
ಅತೀಯಾದ ಭರವಸೆಯಿತ್ತು ಅವಳ ಮೇಲೆ. ನಿಖಿಲ್ ಎಂಟರ್ ಪ್ರೈಸೆಸ್ನ ಒಂದು ವರ್ಷದ ಅವಧಿಯಲ್ಲಿ ಸಾಧಿಸಿದ ಗುರಿಯಲ್ಲಿ ಮನಸ್ವಿತಾಳ ಎಫರ್ಟ್ ಎದ್ದು ಕಾಣುತ್ತಿತ್ತು. ಧನಲಕ್ಷ್ಮಿಯೇ ಒಳಗೆ ಕಾಲಿಟ್ಟಾಂತಾಗಿತ್ತು.
ನಿಖಿಲ್ಗೆ ಅವಳ ಮೇಲಿದ್ದ ಗೌರವ ಇಮ್ಮಡಿಸಿತು. ಮನದ ಮೂಲೆಯಲ್ಲಿ ಅಲ್ಲಿಯವರೆಗೂ ಮೊಗ್ಗಾಗಿದ್ದ ಹೂವೊಂದು ತನ್ನಿಂದ ತಾನೇ ಅರಳಿದಂತೆ ಅವನ ಬಯಕೆಯ ಕಾಮನೆಗಳು ಅರಳಿಕೊಂಡಿದ್ದವು.

ನಿಮ್ಮ ಅಭ್ಯಂತರವಿಲ್ಲದಿದ್ದರೆ ಇವತ್ತು ನಾನೇ ನಿಮ್ಮನ್ನು ಡ್ರಾಪ್ ಮಾಡ್ತೀನಿ ಅನಿರೀಕ್ಷಿತವಾಗಿತ್ತು ಅವನ ಮಾತುಗಳು. ಮನೆಗೆ ಓಡುವ ಧಾವಂತವೇನು ಇರಲಿಲ್ಲ. ಆದರೂ ಮನೆಯವರ ದೃಷ್ಟಿಯಲ್ಲಿ ಸಣ್ಣವಳಾಗುವುದು ಬೇಡವಾಗಿತ್ತು.
ನಿಮಗೆ ತೊಂದರೆ ಯಾಕೇಂತ? ಹೇಗೂ ಡ್ರೈವರ್ ಕಾಯ್ತಾ ಇದ್ದಾನೆ. ನಾನು ಹೊರಡ್ತೀನಿ...
ಅವಳ ಮಾತಿನಿಂದ ತನ್ನ ಮನದ ಕಾಮನೆಗಳಿಗೆ ತಣ್ಣೀರು ಎರಚಿದಂತಾಯಿತು. ಹೊರೆಗೆ ಸುರಿಯುವ ಮಳೆ, ತನ್ನ ಹೃದಯದಲ್ಲಿ ನೆಲೆ ನಿಂತ ಸೌಂದರ್ಯದ ಮತ್ತು ತನ್ನ ಭಾಗದ ಸಿರಿದೇವಿಯೇ ಎದುರಿರುವಾಗ ಅವಳ ಜೊತೆಗೆ ಸ್ವಲ್ಪ ಸಮಯ ಕಳೆಯುವ ಏಕಾಂತತೆ ಬೇಕೆನಿಸಿತು.
ಪರವಾಗಿಲ್ಲ ಡ್ರೈವರ್ಗೆ ಹೇಳಿ ಬಿಡಿ. ಕಾಯೋದು ಬೇಡ. ನಾನೇ ಇವತ್ತು ಡ್ರಾಪ್ ಮಾಡ್ತೀನಿ ಖಡಾಖಂಡಿತಾವಾಗಿ ಹೇಳಿದ ಬಳಿಕ ಎದುರಾಡುವಂತೆ ಇರಲಿಲ್ಲ. ಒಪ್ಪಿಗೆಯಿತ್ತವಳು ಹೊರಗೆ ಬಂದು ಡ್ರೈವರ್ಗೆ ಹೇಳಿ ಕಳುಹಿಸಿದಳು.

ನಿಖಿಲ್ ಒಂದರ್ಧ ಗಂಟೆಯಲ್ಲಿ ಹೊರಟು ನಿಂತಾಗ ತನ್ನ ಲ್ಯಾಪ್ ಟಾಪ್ ಹಿಡಿದುಕೊಂಡು ಅವನ ಜೊತೆಗೆ ಬಂದಳು. ಮಳೆ ಅಷ್ಟರೊಳಗೆ ತನ್ನ ತೀವ್ರತೆಯನ್ನು ಕಡಿಮೆ ಮಾಡಿತ್ತು. ಹೊರಗಿನ ಹವೆ ಎಸಿಯ ಹವೆಗಿಂತ ಹಿತವಾಗಿತ್ತು.
ಆತ ಕಾರು ತಂದು ನಿಲ್ಲಿಸಿದಾಗ ಹಿಂದೆ ಕುಳಿತುಕೊಳ್ಳಲು ಬಾಗಿಲು ತೆರೆಯಲಿದ್ದಾಗ ಎದುರಿನ ಬಾಗಿಲು ತೆರೆದುಕೊಂಡಿತು. ಅನಿವಾರ್ಯವಾಗಿ ಎದುರು ಕುಳಿತುಕೊಳ್ಳಲೇ ಬೇಕಾಯಿತು. ಬಾಗಿಲು ಮುಚ್ಚುತ್ತಲೇ ಕಾರು ನಿಧಾನವಾಗಿ ಮುಂದಕ್ಕೋಡಿತು.

ಮೊದಲ ಬಾರಿಗೆ ನಿಖಿಲ್ನ ಜೊತೆಗೆ ಪ್ರಯಾಣ ಮಾಡುತ್ತಿರುವುದನ್ನು ನೆನಪಿಸಿಕೊಂಡಾಗ ಆತ ಮಾತಿಗೆ ಆರಂಭಿಸಿದ.
ನಿಮ್ಮ ಜೊತೆಗೆ ತೀರಾ ಪರ್ಸನಲ್ ವಿಷಯ ಮಾತನಾಡಬಹುದಲ್ವೆ? ಅನುಮತಿ ಬೇಕಾಗಿರಲಿಲ್ಲ. ಮನಸಿನಲ್ಲಿರುವುದನ್ನು ಕೇಳಿಕೊಳ್ಳುವುದಕ್ಕೆ ಅವನಿಗೆ ಸರ್ವ ಅಧಿಕಾರವೂ ಇತ್ತು. ಮನಸ್ವಿತಾ ರೋಡ್ನ ಮೇಲೆ ನಿಗಾ ಇಟ್ಟಿದ್ದ ಅವನ ಮುಖವನ್ನು ನೋಡಿದಳು. ನೆರಳು ಬೆಳಕಿನ ಓಟದಲ್ಲಿ ಅವನ ಭಾವನೆಗಳು ತುಂಬಿದ ಮುಖ ಗೋಚರಿಸದಾಯಿತು.
ತೀರಾ ವೈಯಕ್ತಿಕ ವಿಷಯವೇನಿದೆ? ತನ್ನ ತಂದೆ ತಾಯಿಯರ ಬಗ್ಗೆ ಕೇಳಬಹುದು. ಅದಕ್ಕಿಂತಲೂ ವೈಯಕ್ತಿಕ ವಿಷಯ ಕೇಳುವುದಕ್ಕೇನಿದೆ? ಮನಸ್ಸು ಪರಾಮರ್ಶಿಸಿದಾಗ ಅನುಮತಿಯ ಅಗತ್ಯವಿದೆಯೆ! ದಯವಿಟ್ಟು ಕೇಳಿ ಆತ ತನ್ನ ಬಾಸ್ ಅನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿದಳು.
ತಟ್ಟನೆ ಕಾರಿಗೆ ಹದವಾಗಿ ಬ್ರೇಕ್ ಒತ್ತಿದ. ಕಾರು ರಸ್ತೆಯಂಚನ್ನು ಬಳಸಿ ಒಂದು ಕಡೆ ತಟಸ್ಥವಾಯಿತು. ಹೃದಯ ಮೆಲ್ಲಗೆ ಕುಟ್ಟುವುದನ್ನು ನಿಯಂತ್ರಿಸಿಕೊಂಡ.
ಅಪಾರ್ಥಕ್ಕೆ ದಾರಿಯಾಗಬಾರದು. ನೇರವಾಗಿ ನಿಮ್ಮ ನಿರ್ಧಾರವನ್ನು ತಿಳಿಸಿದರೆ ಸಾಕು ಪೀಠಿಕೆ ಅರ್ಥವಾಗಲಿಲ್ಲ. ಅವನ ಭಾವನೆಯನ್ನು ಯಾವತ್ತೂ ತಿಳಿದುಕೊಳ್ಳುವ ಪ್ರಯತ್ನ ಮಾಡಿರದ ಅವಳು ಏನೆಂದು ತಿಳಿದುಕೊಳ್ಳಬೇಕು?
ಏನಕ್ಕೆ ಅಪಾರ್ಥ. ನೇರವಾಗಿ ಹೇಳಿ. ನನ್ನ ನಿರ್ಧಾರ ನನಗೆ
ಯಾವತ್ತೂ ಮನಸ್ಸಿನಲ್ಲಿಯೇ ಉಳಿದುಕೊಂಡಿರುವ ಬಯಕೆ ಇದು. ನಿರ್ಧಾರ ನಿಮ್ಮದು ಅವನಲ್ಲಿ ಇನ್ನೂ ಸಂಕೋಚವಿರುವುದನ್ನು ತಿಳಿದುಕೊಂಡವಳು ಅವನನ್ನು ಮುಂದುವರಿಸಲು ಸುಮ್ಮನಾದಳು.
ಆತ ಕಾರಿನ ವಿಂಡೋಗಳನ್ನು ಇಳಿಸಿ ದೂರಕ್ಕೆ ದೃಷ್ಟಿಹಾಯಿಸಿ ಮನಸ್ವಿತಾ, ನನ್ನ ಮನಸ್ಸಿನಲ್ಲಿ ಉಳಿದುಹೋಗಿದ್ದೀರಿ... ಮುಂದಿನ ಮಾತುಗಳು ಅವಳನ್ನು ಗೊಂದಲಕ್ಕೆ ಕೆಡವಿದವು. ಕಾರು ನಿಧಾನವಾಗಿ ಮುಂದುರುಳಿತು. ಆತನ ದೃಷ್ಟಿ ರಸ್ತೆಯ ಕಡೆಗಿತ್ತು. ಮನಸ್ವಿತಾಳ ಹೃದಯದಲ್ಲಿ ಹೇಳಲಾರದ ಶೃತಿಯೊಂದು ಹಗುರವಾಗಿ ಮೀಟಿತು.

(ಪ್ರಿಯ ಓದುಗರೇ...ಮತ್ತೆ ಅನಿವಾರ್ಯ ಕಾರಣಗಳಿಂದ ಕಳೆದ ನಾಲ್ಕಾರು ದಿನಗಳಿಂದ ಈ ಧಾರಾವಾಹಿ ಪ್ರಕಟಗೊಂಡಿಲ್ಲ...ಇನ್ನು ನಿಮ್ಮನ್ನು ಕಾಯಿಸೋದಿಲ್ಲ.ಪ್ರತಿದಿನ ಪ್ರಕಟಗೊಳ್ಳೂತ್ತದೆ. ಪ್ರೀತಿಯಿರಲಿ... - ಸಂ.)

0 comments:

Post a Comment