ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ - ಅಧ್ಯಾಯ 10 : ಭಾಗ 30 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಈ ಸಂಬಂಧಕ್ಕೆ ಅರ್ಥವಿದೆಯೆ? ದಿನನಿತ್ಯದ ಜಂಜಡದಲ್ಲಿ ಮುಳುಗಿ ಏಳುತ್ತಾ ಬದುಕು ಸಾಗುವ ದಾರಿಯಲ್ಲಿ ಯಾವುದೇ ಅಪಾರ್ಥಗಳಿಗೆ ಎಡೆ ಕೊಡದೆ ಪಯಣಿಸುತ್ತಿರುವಾಗ ಮತ್ತೊಂದು ನವ್ಯ ಭಾವಗಳನ್ನು ತೆರೆದಿಟ್ಟ ನಿಖಿಲ್ನನ್ನು ಆ ದೃಷ್ಟಿಯಿಂದ ನೋಡಿರದ ಮನಸ್ವಿತಾಳಿಗೆ ಮಾನಸಿಕ ತಡೆಯೊಂದು ಗೋಚರಿಸಿತು.ಈ ರೀತಿ ಭಾವನೆಗಳನ್ನು ಕೊಡವಿಕೊಂಡ ಮೇಲೆ ಅವರ ಒಡನಾಟ ಮೊದಲಿನಂತೆ ಬಾಸ್ ಸಬಾರ್ಡಿನೇಟ್ ಆಗಿರಲು ಸಾಧ್ಯವೇ? ಯಾವತ್ತೂ ಆ ನಿಟ್ಟಿನಲ್ಲಿ ನಿಖಿಲ್ ಬಗ್ಗೆ ಯೋಚಿಸಿರದ ಅವಳ ಮೆದುಳು ಈಗಲೂ ಅದನ್ನು ತಳ್ಳಿ ಹಾಕುವಂತೆ ಇತ್ತು.

ಆತ ತನ್ನನ್ನೇನು ಒತ್ತಾಯಿಸಲಿಲ್ಲ. ತನ್ನ ನಿರ್ಧಾರ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾನೆ ಅಷ್ಟೆ. ಆ ಪ್ರಶ್ನೆಗೆ 'ಎಸ್' ಅಥವಾ 'ನೊ' ಅಷ್ಟೆ ತನ್ನ ಉತ್ತರ. ಆದರೆ ಆ ರೀತಿ ಕಡ್ಡಿ ಮುರಿದಂತೆ ಉತ್ತರ ಕೊಡಲು ತಾನು ಸಮರ್ಥಳೆ? ಅನುಬಂಧಗಳ ನಡುವೆ ಸಂಬಂಧಗಳು ಹಾಳಾಗುವುದನ್ನು ಇಚ್ಚಿಸದ ಹುಡುಗಿ ಅವಳು. ತನ್ನ ಉನ್ನತ ಪೊಸಿಷನ್ಗೆ ಆತ ಕಾರಣವಾಗಿರಬಹುದು. ಹಾಗಂತ ತನ್ನ ಮನಸ್ಸಿನ ವಿರುದ್ಧ ಹೋಗುವುದನ್ನು ನಿಯಂತ್ರಿಸಕೊಳ್ಳಬೇಕಿತು? ಅವನ ಕಣ್ಣುಗಳಲ್ಲಿ ಪ್ರೀತಿಯ ಅಹ್ವಾನವನ್ನು ಕಂಡ ಮೇಲೆ ಮೊದಲಿನಂತೆಯೆ ಅವನ ಜೊತೆಗೆ ಇರಬಲ್ಲೆನೆ? ತನ್ನ ನಿರಾಕರಣೆ ಅವನಿಂದ ಯಾವ ಪ್ರತಿಕ್ರಿಯೆ ಬರಬಹುದು. ತನ್ನನ್ನು ಕೆಲಸದಿಂದ ವಜಾಗೊಳಿಸಿದರೂ ಆಶ್ಚರ್ಯವಿಲ್ಲ. ಹಾಗಂತ ಮಾನಸಿಕ ತುಮುಲಗಳ ನಡುವೆ ರಾತ್ರಿಯನ್ನು ಕಳೆದ ಮನಸ್ವಿತಾ ಬೆಳಿಗ್ಗೆ ಹಾಸಿಗೆ ಬಿಡುವಾಗ ತಡವಾಯಿತು.
ಯಾಂತ್ರಿಕ ಬದುಕಲ್ಲದಿದ್ದರೂ ಅದನ್ನು ರುಟೀನ್ ಆಗಿ ಪರಿವರ್ತಿಸಿಕೊಂಡವಳು ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಹೊರಡುವಷ್ಟರಲ್ಲಿ ಆಫೀಸಿನ ಕಾರು ಬಂದಿರಬಹುದೆಂದು ಊಹಿಸಿದರೆ ನಿಖಿಲ್ನ ಕಾರೇ ನಿಂತಿತ್ತು!

ಅರಿವಿಲ್ಲದೆ ಹೃದಯ ಬಡಿತವನ್ನು ಏರು ಪೇರಾಗಿಸಿ ಎಂದೂ ಇಲ್ಲದ ಅಳುಕು ಅವಳನ್ನು ತಬ್ಬಿ ಹಿಡಿಯಿತು. ಹೊರಗೆ ಬಂದು ಚಪ್ಪಲಿಗಳನ್ನು ಹೊಂದಿಸಿಕೊಂದು ಮೆಟ್ಟಲಿಳಿಯುವಾಗ ಎಂದಿನಂತೆ ಡ್ರೈವರ್ ಇಳಿದು ಹಿಂದಿನ ಬಾಗಿಲು ತೆರೆಯುವುದು ವಾಡಿಕೆ. ಆದರೆ ಆ ದಿನ ಅವಳು ಕಾರಿನ ಬಳಿ ಬರುತ್ತಿರುವಂತೆ ಎದುರಿನ ಬಾಗಿಲು ತೆರೆಯಿತು. ಅನಿವಾರ್ಯ ಪರಿಸ್ಥಿತಿ. ಅವಳನ್ನು ಕಂಡೊಡನೆ, ಗುಡ್ ಮಾರ್ನಿಂಗ್ ಅಂದ ನಿಖಿಲ್.
ಗುಡ್ ಮಾರ್ನಿಂಗ್ ಎಂದು ಪ್ರತಿಕ್ರಿಯಿಸಿದ ಅವಳ ತುಟಿಗಳ ಕಂಪನ ಹೊರಸೂಸಿದ ಪದಗಳನ್ನು ತೊದಲಿಸಿತು.
ಕಾರು ಹತ್ತಿ ಕುಳಿತ ಮೇಲೆ ಕಂಫರ್ಟಬಲ್ ಅನಿಸಲಿಲ್ಲ. ಚಡಪಡಿಕೆಯಿಂದ ಕುಳಿತಂತೆ ಇತ್ತು. ಹಿಂದಿನ ದಿನದವರೆಗೂ ನಿಖಿಲ್ ಬಗ್ಗೆ ಇಂತಹ ಅಭಿಪ್ರಾಯವೇ ಇರಲಿಲ್ಲ.
ಆ ಹೊತ್ತು ಇಬ್ಬರಲ್ಲೂ ಮಾತಿರಲಿಲ್ಲ.
ನನ್ನ ಪ್ರಶ್ನೆಗೆ ನೀವು ಉತ್ತರಿಸಲೇ ಇಲ್ಲ. ನಿಮ್ಮಿಂದ ಉತ್ತರಿಸುವುದಕ್ಕೆ ಸಾಧ್ಯವಿಲ್ಲ ಅನ್ಸುತ್ತೆ ಕಪ್ಪು ಗಾಜುಗಳನ್ನು ತಲೆಯ ಮೇಲಿನವರೆಗು ಏರಿಸಿ ಕೇಳಿದ.
ಅವಳ ಚಲನೆ ಅಳುಕಿತು. ಪದಗಳಿಗಾಗಿ ತಡಕಾಡಿತು ಮೆದುಳು. ಏನಂದು ಉತ್ತರಿಸಲಿ. ಒಂದು ಕಂಪೆನಿಯ ಡೈರಕ್ಟರ್ಗಿಂತಲೂ ಉನ್ನತ ಹುದ್ದೆಯಲ್ಲಿರುವ ತಾನು, ತನ್ನನ್ನು ಪೋಷಿಸಿ ಬೆಳೆಸುತ್ತಿರುವ ಸಂಸ್ಥೆಯ ಜವಾಬ್ದಾರಿಯುತ ಮಾಲಿಕನಿಗೆ ಏನು ಉತ್ತರ ನೀಡಬಹುದು?
ನೆಗೆಟಿವ್ ಅಥವಾ ಪಾಸಿಟಿವ್! ಎರಡೆರಡರ ಪರಿಣಾಮವನ್ನು ತನ್ನ ಮೇಲೆ ಗಾಢವಾಗಿ ಬೀರಬಲ್ಲುದು. ಮೌನಕ್ಕೆ ಅರ್ಥವಿರುವುದಿಲ್ಲ. ಆದರೆ ಉತ್ತರ ಅಗತ್ಯವಾಗಿದೆ. ಆ ಕ್ಷಣ ಅವನು ಆತ್ಮೀಯನಾಗಿಯೆ ಕಂಡ. ಪದಗಳು ಯಾಂತ್ರಿಕವಾಗಿ ಅಲ್ಲದಿದ್ದರೂ ತುಟಿಗಳನ್ನು ಒತ್ತಿ ಹಿಡಿದು ಹೊರ ಬಂದವು.
ಸದ್ಯ, ಅಂತಹ ನಿರ್ಧಾರಗಳೇನು ಇಲ್ಲ. ನಿಮ್ಮ ಪ್ರಶ್ನೆಗೆ ಉತ್ತರಿಸೋದು ಸ್ವಲ್ಪ ಕಷ್ಟ. ಐ ಮೀನ್ ಸ್ವಲ್ಪ ಸಮಯ ತಗುಲುತ್ತೆ ಆತನ ಮುಖದಲ್ಲಿದ್ದ ಚೈತನ್ಯದ ಬುಗ್ಗೆ ಉಕ್ಕಿ ಹರಿಯುವುದು ನಿಲ್ಲಲಿಲ್ಲ. ಮುಗುಳ್ನಕ್ಕ. ಸ್ವಾರ್ಥದಿಂದ ಪ್ರಶ್ನಿಸಿದ್ದೆ ಅವಳಿಗೆ ಗೊಂದಲ ಸೃಷ್ಟಿಸಿತೇನೊ?
ಪರವಾಗಿಲ್ಲ. ಅದು ನೆಗೆಟಿವ್ ಆಗಿರಲಿ. ಪಾಸಿಟಿವ್ ಆಗಿರಲಿ. ನನ್ನ ನಿಮ್ಮ ಸಂಬಂಧ ಮೊದಲಿನಂತೆ ಮುಂದುವರಿಯುತ್ತೆ. ಕಂಪೆನಿಗೆ ನಿಮ್ಮಿಂದ ಇನ್ನು ಸಲಹೆ ಸಹಕಾರಗಳು ಬೇಕು. ನೀವು ನಾನು ಹೇಳಿರೋದನ್ನು ಮರ್ತು ಬಿಡಬಹುದು. ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ
ಕಾರು ಸಿಟಿಯ ದಾರಿಯನ್ನು ಹಿಡಿದು ಬಹಳಷ್ಟು ದೂರ ಬರುವವರೆಗೂ ಆತ ಮಾತನಾಡುತ್ತಲೇ ಇದ್ದ. ಮಾತಿಗೆ ಮಾತು ಬೆಳೆದು ಮತ್ತೆ ಅದು ಮೊದಲಿನ ಟ್ರಾಕ್ಗೆ ಬಂದರೆ ಅನ್ನುವ ಅಳುಕಿನಿಂದ ಸುಮ್ಮನೆ ಕುಳಿತ್ತಿದ್ದಳು.
ನಿಖಿಲ್ ಕೂಡ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಸರಿ, ಮನಸ್ವಿತಾ ಇಳಿದು ಬಿಡಿ. ನಾನು ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಂಡು ಬರುತ್ತೇನೆ ಅಂದ.


0 comments:

Post a Comment