ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಅಲೆಯೊಂದು ಅಪ್ಪಳಿಸುವ ಮುನ್ಸೂಚನೆ ಸ್ಪಷ್ಟವಾಗಿ ಗೋಚರಿಸುತ್ತಲಿದೆ. ನಾಟಕಕಾರ ಕೆ. ವೈ. ನಾರಾಯಣಸ್ವಾಮಿ ರಚಿಸಿರುವ "ಅನಭಿಜ್ಞ ಶಾಕುಂತಲ" ಎಂಬ ವಿನೂತನ ನಾಟಕ ಬಹು ಜನರಿಗೆ ಪ್ರಿಯವಾಗಿಬಿಟ್ಟಿದೆ. ಅಲ್ಪಸಮಯದಲ್ಲೇ ಈ ನಾಟಕ ದೇಶದಾದ್ಯಂತ ಹದಿನೆಂಟು ಹೌಸ್ಫುಲ್ ಪ್ರದರ್ಶನಗಳನ್ನು ಕಂಡಿರುವುದು ರಂಗಾಸಕ್ತರು ಸಂಭ್ರಮಿಸಲೇ ಬೇಕಾದ ವಿಚಾರ.


`ಮಲೆಗಳಲ್ಲಿ ಮದುಮಗಳು' ನಾಟಕದ ಮೂಲಕ ಸಂಚಲನ ಮೂಡಿಸಿದ ಕೆ.ವೈ.ಎಸ್. ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಹೊಸ ಅಲೋಚನೆಗಳನ್ನು ಹೊತ್ತು `ಪ್ರಸಂಗ' ರಂಗ ಸಂಘಟನೆ ಬೆಂಗಳೂರಿನಲ್ಲಿ ಜನ್ಮತಾಳಿದೆ. ತಂಡವೇ ಹೇಳಿಕೊಂಡಿರುವಂತೆ ನಾಟಕ ಸಾಹಿತ್ಯ ಸಂಗೀತ ಹಾಗೂ ಸಾಂಸ್ಕೃತಿಕ ಜಗತ್ತಿನ ವೈವಿಧ್ಯಮಯ ಪ್ರಸಂಗಗಳನ್ನು ಜನತೆಯ ಮುಂದೆ ಅನಾವರಣಗೊಳಿಸುವುದು ಇವರ ಮೂಲ ಉದ್ದೇಶ.

"ಅನಭಿಜ್ಞ ಶಾಕುಂತಲ" ನಾಟಕ ಜಗತ್ತಿನ ಶ್ರೇಷ್ಠ ಸಂಸ್ಕೃತ ನಾಟಕಕಾರ ಕಾಳಿದಾಸನ ಪ್ರೇಮಜೀವನದ ಸುತ್ತ ತಿರುಗುತ್ತದೆ. ಕಾಳಿದಾಸನ ನಾಟಕ "ಅಭಿಜ್ಞಾನ ಶಾಕುಂತಲ' ವಾದರೆ ನಾರಾಯಣ ಸ್ವಾಮಿಯವರ ನಾಟಕ "ಅನಭಿಜ್ಞ ಶಾಕುಂತಲ". ಏನು ಈ ಅನಭಿಜ್ಞ? ಎಂಬ ಕುತೂಹಲ ಎಲ್ಲರನ್ನು ಕಾಡುವುದು ಸಹಜ. ಅಭಿಜ್ಞಾನವೆಂದರೆ ಗುರುತು, ಅನಭಿಜ್ಞಾನ ವೆಂದರೆ ಗುರುತಿಲ್ಲದಿರುವುದು. ಎರಡರಲ್ಲೂ ಗುರುತಿನ ಉಂಗುರವೇ ಕೇಂದ್ರ ಬಿಂದು. ಕಾಳಿದಾಸನ ಜೀವನ ವೃತ್ತಾಂತದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಆತ ಹುಟ್ಟಿ ಬೆಳೆದದ್ದು ಕಾಶ್ಮೀರದಲ್ಲಿ.

ಅವನಿಗೆ ಅಕ್ಷರ ಕಲಿಸಿದ್ದು ಸಾಕ್ಷಾತ್ ಕಾಳಿಮಾತೆ. ಆಶ್ರಯ ಪಡೆದದ್ದು ಬೋಜರಾಜನ ಆಸ್ಥಾನದಲ್ಲಿ. ಹೀಗೆ ಕಾಳಿದಾಸನ ಜೀವನದ ಬಗ್ಗೆ ಅನೇಕ ಊಹಪೋಹಗಳ ಚರ್ಚೆಗಳು ನಡೆದಿದೆ.
ರಾಜಪ್ರತಿನಿಧಿಗಳು ತೆರಿಗೆ ಸಂಗ್ರಹಕ್ಕೆ ಬಂದಾಗ ಅವರ ಮನತಣಿಸಲು ಕಾಳಿದಾಸ ಕಟ್ಟಿದ ಹೊಸ ಕಾವ್ಯ `ಋತು ಸಂಹಾರ'ವಾಗಿದೆ. ಕಾಳಿದಾಸ ಮಲ್ಲಿಕಾಳ ನಡುವಿನ ಪ್ರೇಮ `ರಘುವಂಶ'ವಾಗಿದೆ.


ಗಂಧರ್ವಳು ಮತ್ತು ಕಾಳಿದಾಸನ ನಡುವಿನ ಸಂಬಂಧ `ಕುಮಾರಸಂಭವ'ವಾಗಿ, ಕಾಳಿದಾಸ ಮತ್ತು ಗಂದರ್ವಳ ವಿಪ್ರಲಂಬವೇ `ಮೇಘದೂತ'ವಾಗಿ, ಕಾಳಿದಾಸನನ್ನು ಅಗಲಿದ ಮಲ್ಲಿಕಾಳು ಶಾಕುಂತಲವಾಗಿ ಗಂಧರ್ವಳ ಮೂಲಕ `ವಿಕ್ರಮೋವಶಿಯ'ವಾಗಿ ಒಟ್ಟು ನಾಟಕದ ಬಂಧವು ಕವಿಕಾಳಿದಾಸನ ಜೀವನದೊಂದಿಗೆ ಅವನ ನಾಟಕಗಳನ್ನು ವರ್ತುಲವಾಗಿ ಬೆಸೆಯುವ ತಂತ್ರಗಾರಿಕೆಯನ್ನು ನಾಟಕಕಾರರು ದೇಸಿ ಜ್ಞಾನ ಪರಂಪರೆಗಳ ಚೌಕಟ್ಟಿನಲ್ಲಿ ಅತ್ಯುತ್ತಮವಾಗಿ ಮೂಡಿಸಿದ್ದಾರೆ.

ಈ ನಾಟಕದಲ್ಲಿ ಕಾಳಿದಾಸ ಸುತ್ತ ಒಂದಲ್ಲ, ಎರಡಲ್ಲ ಒಟ್ಟು ಮೂರು ಪ್ರೇಮ ಪ್ರಸಂಗಗಳು ಜರಗುತ್ತವೆ. ಇಲ್ಲಿ ಮಲ್ಲಿಕಾ ಕಾಳಿದಾಸನನ್ನು ಪ್ರೀತಿಸತೊಡಗುತ್ತಾಳೆ. ಆದರೆ ಕಾಳಿದಾಸನಿಗೆ ಗಂಧರ್ವ ಕನ್ಯೆಯೊಬ್ಬಳಲ್ಲಿ ಮೋಹ ಉಂಟಾಗುತ್ತದೆ. ಹಾಡಿ ನಾಯಕನ ಸೊಸೆಯೇ ಕಾಳಿದಾಸನ ಆಕರ್ಷಣೆಗೆ ಒಳಗಾಗಿ ಗಂಧರ್ವ ಕನ್ಯೆಯಂತೆ ಕಾಣಿಸಿಕೊಳ್ಳುತ್ತಾಳೆ. ಮುಂದೆ ಭೋಜರಾಜನ ಮಗಳ ಪ್ರೇಮವನ್ನು ನಿರಾಕರಿಸುವ ಕಾಳಿದಾಸ ಅವಳಿಂದಲೇ ಬಂಧನಕ್ಕೊಳಗಾಗಿ ಸೆರೆವಾಸ ಅನುಭವಿಸುತ್ತಾನೆ.

ಇದರಿಂದಾಗಿ ತನ್ನ ಮನಸ್ಸೆಲ್ಲಾ ಆವರಿಸಿಕೊಂಡಿದ್ದ ಗಂಧರ್ವ ಕನ್ಯೆಯನ್ನು ಆತ ಮತ್ತೆ ಸಂದಿಸಲು ಸಾಧ್ಯವೇ ಆಗುವುದಿಲ್ಲ. ಆಕೆಯು ಅವನ ಹಾದಿ ಕಾಯುತ್ತಾ ಆತನನ್ನು ಕೂಡಿಕೊಳ್ಳಲು ಹಪಹಪಿಸುತ್ತಾಳೆ. ಅಂತಿಮವಾಗಿ ತನ್ನ ಮಗನಿಂದಲೇ ಹತನಾಗಿ ಸಾಯುವ ಕೊನೆಯ ಕ್ಷಣದಲ್ಲಿ ಕಾಳಿದಾಸನನ್ನು ಆಕೆ ಸಂದಿಸುತ್ತಾಳೆ. ಕೊಲೆಗಾರ್ತಿಯ ಪಟ್ಟ ಕಟ್ಟಿಕೊಂಡು ಸೆರೆಮನೆ ಸೇರುವ ಈ ಗಂಧರ್ವ ಕನ್ಯೆಯೇ ಇಲ್ಲಿ `ಅನಭಿಜ್ಜ ಶಾಕುಂತಲಾ' ಎನಿಸಿಕೊಳ್ಳುತ್ತಾಳೆ.

ಈ ಕಥಾನಕ ರಂಗದಲ್ಲಿ ಅಚ್ಚುಕಟ್ಟಾದ ನಿರೂಪಣೆಯಿಂದ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ಸು ಪಡೆದಿದೆ. ಮಲ್ಲಿಕಾ, ಗಂಧರ್ವ ಕನ್ಯೆ, ಭೋಜರಾಜನ ಮಗಳು.. ಈ ಪಾತ್ರಗಳ ಮೂಲಕ ಹಲವಾರು ಫ್ಲಾಶ್ಬ್ಯಾಕ್ ತಂತ್ರಗಳ ನಡುವೆ ಬಿಚ್ಚಿಕೊಳ್ಳುವ ಕಥಾನಕದಲ್ಲಿ ಆ ಪಾತ್ರಗಳಿಗೆ ಇಬ್ಬಿಬ್ಬರು ಕಲಾವಿದರನ್ನು ಬಳಸಿದ್ದು ಹೆಚ್ಚು ಸಮಂಜಸವಾಗಿತ್ತು. ಪ್ರತಿಯೊಂದು ದೃಶ್ಯ ಸಂಯೋಜನೆಯೂ ಅದ್ಭುತವೆನಿಸುವಂತಿತ್ತು.

`ಪ್ರಸಂಗ' ತಂಡದ `ಅನಬಿಜ್ಜ ಶಾಕುಂತಲ'ವನ್ನು ನಿರ್ದೇಶಿಸಿರುವ ಪ್ರಕಾಶ್ ಶೆಟ್ಟಿಯವರು ರಂಗನಂಟಿಗೆ ಬಂದ ದಿನದಿಂದಲೂ ನಾಟಕದ ವಿವಿಧ ಆಯಾಮಗಳಲ್ಲಿ ತಮ್ಮನ್ನು ಒರೆಗೆ ಹಚ್ಚಿಕೊಂಡವರು. ವೃತ್ತಿ-ಪ್ರವೃತ್ತಿಗಳೆಂಬ ಪ್ರಭೇಧಗಳ ಹಂಗಿಲ್ಲದ ಇವರು ನಟ, ಗಾಯನ, ನೇಪಥ್ಯ ಕಲಾವಿದ. ಕಲಾನಿರ್ದೇಶಕ, ಸಂಘಟಕನಾಗಿ ರೂಪುಗೊಂಡ ಬಗೆ ಹಲವು ಅಚ್ಚರಿಗಳನ್ನು ಮೂಡಿಸಿದೆ. ಇವರ ನಿಷ್ಟೆ-ಬದ್ಧತೆ ಪ್ರಶ್ನಾತೀಥವಾದದ್ದು.

ಇತ್ತೀಚೆಗೆ ನೇಪಥ್ಯದ ಗೆಳೆಯರೊಡಗೂಡಿ ಕಟ್ಟಿದ `ರಂಗಮಂಟಪ' ಇಂದು ರಂಗಭೂಮಿಯಲ್ಲೊಂದು ಹೊಸ ಸಂಚಾರಕ್ಕೆ ಸಾಕ್ಷಿಯಾಗಿದೆ. `ಗಾಂಧಿ ಬಂದ' ನಾಟಕ ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡಿದೆ. ಸಹ ನಿದೇಶಕರಾಗಿ ಇವರ ಪತ್ನಿ ಚಂಪಾಶೆಟ್ಟಿ ಹಾಗೂ ಗೆಳೆಯ ವೇಣಿ ನೇಪೊಲಿಯನ್ ಜೊತೆ ಸಾಥ್ ನೀಡಿದ್ದಾರೆ.
ರಂಗದ ಮೇಲೆ ನಲವತ್ತಕ್ಕೂ ಹೆಚ್ಚು ಕಲಾವಿದರಿದ್ದು ರಂಗದ ಹಿಂದೆ ಸುಮಾರು ಇಪ್ಪತ್ತು ರಂಗಕರ್ಮಿಗಳು ಈ ಪ್ರಯೋಗಕ್ಕಾಗಿ ಶ್ರಮಿಸಿದ್ದಾರೆ. ಇದಕ್ಕೆ ಕಾರಣರಾದವರು ನಿರ್ಮಾಣ ಮತ್ತು ನಿರ್ವಹಣೆಯ ಹೊರೆಹೊತ್ತ ಕೃಷ್ಣ ರಾಯಚೂರು ಮತ್ತು ಜಿ.ಬಿ.ರಾಮಕೃಷ್ಣ. ನಾರಾಯಣ ರಾಯಚೂರು ಅವರ ಸಂಗೀತ, ರಾಮಚಂದ್ರ ಹಡಪದ ಮತ್ತು ಗೆಳೆಯರ ಸುಶ್ರಾವ್ಯಗಾಯನ, ನಂದಕಿಶೋರ ಅವರ ಬೆಳಕಿನ ವಿನ್ಯಾಸ, ಎನ್. ಮಂಗಳಾ ಅವರ ವಸ್ತ್ರವಿನ್ಯಾಸ, ಬಿ. ವಿಠಲ್ ಅವರ ರಂಗಸಜ್ಜಿಕೆ , ಪ್ರವೀಣ್ ಕುಮಾರ್ರವರ ನೃತ್ಯ ಸಂಯೋಜನೆ, ರಾಮಕೃಷ್ಣ ಬೆಳ್ತೂರರ ಪ್ರಸಾದನ ಹೀಗೆ ಪ್ರತಿಯೊಂದು ಉತ್ಕೃಷ್ಟಮಟ್ಟದ್ದಾಗಿದ್ದು ಒಟ್ಟಂದದಲ್ಲಿ ಪ್ರದರ್ಶನವನ್ನು ಉತ್ತುಂಗಕ್ಕೇರಿಸುವಲ್ಲಿ ಸಹಕಾರಿಯಾಗಿದೆ.

ರಂಗದ ಮೇಲಿನ ಎಲ್ಲಾ ಪಾತ್ರದಾರಿಗಳು ತಮ್ಮ ಪಾತ್ರಗಳಿಗೆ ಜೀವಂತಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಗಂದರ್ವ ಕನ್ಯೆಯಾಗಿ ಗೀತಾ ಸುರತ್ಕಲ್ ಅವರು ತಮ್ಮ ಅಭಿನಯ ಪ್ರೌಢಿಮೆಯನ್ನು ಅತ್ಯುತ್ತಮವಾಗಿ ಮೆರೆದಿದ್ದಾರೆ. ಪ್ರತಿದೃಶ್ಯವೂ ದೃಶ್ಯಕಾವ್ಯವಾಗಿ ಮೂಡಿಬಂದಿದೆ.
ವಿಮರ್ಶಕರಿಂದ, ಪತ್ರಿಕೆಗಳಿಂದ, ರಂಗಾಸಕ್ತರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡ ಈ ನಾಟಕ ತಂಡದವರು ಇದೇ ಜನವರಿ ತಿಂಗಳ 24ರಿಂದ 26ರವರೆಗೆ ಮುಂಬಯಿ ಪರಿಸರದ ಕಲ್ಯಾಣ್, ಮಾಟುಂಗ, ಒಸಾಯಿರೋಡ್ನಲ್ಲಿ ಮೂರು ಪ್ರದರ್ಶನಗಳನ್ನು ಪ್ರದರ್ಶಿಸಲು ಆಗಮಿಸಲಿದ್ದಾರೆ. ಅಂದು ನಿಜವಾಗಿಯೂ ಮುಂಬಯಿ ರಂಗಾಸಕ್ತರಿಗೆ ಬೆಳದಿಂಗಳೂಟ.

`ಹೊಸ ಚಿಗುರು ಹಳೆಬೇರು ಕೂಡಿದರೆ ಮರಸೊಗಸು' ಎಂಬಂತೆ ರಂಗಭೂಮಿಗೆ ಸಂಬಂಧಿಸಿದ ಎಲ್ಲಾ ಹಿರಿಯ - ಕಿರಿಯ ಕಲಾವಿದರು ಪ್ರೇಕ್ಷಕರು ಈ ಪ್ರಸಂಗ ತಂಡವನ್ನು ಮುಂಬಯಿಗೆ ಆದರದಿಂದ ಬರಮಾಡಿಕೊಂಡು ಈ ತಂಡದೊಂದಿಗೆ ಒಡಗೂಡಿಕೊಂಡು ಇವರಿಗೆ ಪ್ರೋತ್ಸಾಹಿಸಿ ಇವರ ಮೂರೂ ಪ್ರಯೋಗಗಳು ಯಶಸ್ವಿಯಾಗಿ ನಡೆಯುವಂತೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು.

- ಟಿ. ರವೀಂದ್ರ ಪೂಜಾರಿ
ಮನೋಹರ ಪರಿವಾರ


0 comments:

Post a Comment